ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರೆಯ ಸಂಭ್ರಮಕ್ಕೆ ಚೆಂಡು ಹೂ..! ಬರದ ಸಂಕಷ್ಟದಲ್ಲೂ ಹೂವು ಬೆಳೆದ ರೈತ

ಲಾಭದ ನಿರೀಕ್ಷೆಯಲ್ಲಿ...
Last Updated 15 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ವಿಜಯಪುರ:ಮುಂಗಾರು–ಹಿಂಗಾರು ಮಳೆಗಳು ಕೈಕೊಟ್ಟರೂ; ಛಲ ಬಿಡದ ತ್ರಿವಿಕ್ರಮನಂತೆ ದಸರೆಗಾಗಿ ಹಲವು ಸಂಕಷ್ಟಗಳ ನಡುವೆಯೂ ಚೆಂಡು ಹೂ ಬೆಳೆದಿರುವ ಕೆಲ ಬೆಳೆಗಾರರ ಮೊಗದಲ್ಲಿ ಮಂದಹಾಸವಿದೆ.

ಮಹಾನವಮಿ–ವಿಜಯದಶಮಿಯಂದು ಮಾರುಕಟ್ಟೆಯಲ್ಲಿ ಕೊಂಚ ಚಲೋ ಧಾರಣೆ ಸಿಕ್ಕರೂ ಬೆಳೆಗಾರ ಹಸನ್ಮುಖಿ. ಇಲ್ಲದಿದ್ದರೇ ಎರಡು ತಿಂಗಳ ಶ್ರಮ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಲಿದೆ. ಮತ್ತದೇ ಯಥಾಪ್ರಕಾರ ತಪ್ಪದ ನಷ್ಟ.

ವಿಜಯಪುರ ನಗರದ ಸುತ್ತಮುತ್ತಲ ಕೆಲ ಗ್ರಾಮಗಳಲ್ಲಿ ಮಹಾನವಮಿ ಹಾಗೂ ದೀಪಾವಳಿ ಹಬ್ಬಕ್ಕೆ ಸರಿಯಾಗಿ ಹೂವು ಬರುವಂತೆ ಚೆಂಡು ಹೂವಿನ ಕೃಷಿ ಕೈಗೊಳ್ಳುವುದು ಹಲ ವರ್ಷಗಳಿಂದ ನಡೆದಿದೆ. ಅಪಾರ ಸಂಖ್ಯೆಯ ರೈತರು ಹಬ್ಬದಲ್ಲಿನ ಬೇಡಿಕೆ ಪೂರೈಸಲು ಪುಷ್ಪ ಕೃಷಿ ನಡೆಸುತ್ತಾರೆ.

ಪ್ರಸಕ್ತ ವರ್ಷ ಮಳೆಯ ತೀವ್ರ ಕೊರತೆಯಿಂದ ನಾಟಿ ಮಾಡಿದ ಚೆಂಡು ಹೂವಿನ ಗಿಡಗಳು ಬೆಳೆಯಲಿಲ್ಲ. ಹೂವು ಅರಳಿಸಲಿಲ್ಲ. ತೀವ್ರ ಸಂಕಷ್ಟಗಳ ನಡುವೆಯೂ ಅಲ್ಲಲ್ಲೇ ಕೊಳವೆಬಾವಿ ನೀರಾವರಿ, ಟ್ಯಾಂಕರ್‌ ಮೂಲಕ ನೀರು ಹಾಯಿಸಿ ಸಮೃದ್ಧ ಫಸಲು ತೆಗೆದಿರುವ ರೈತರಲ್ಲಿ ಈ ಬಾರಿ ಚಲೋ ಧಾರಣೆ ಸಿಕ್ಕಿ, ಹೆಚ್ಚಿನ ಲಾಭ ಸಿಗುವ ನಿರೀಕ್ಷೆ ದುಪ್ಪಟ್ಟುಗೊಂಡಿದೆ.

ಮಹಾನವಮಿ, ಆಯುಧ ಪೂಜೆಗೆ ಒಂದು ದಿನವಷ್ಟೇ ಬಾಕಿಯಿದೆ. ರೈತರ ಹೊಲಕ್ಕೆ ಲಗ್ಗೆಯಿಟ್ಟಿರುವ ವ್ಯಾಪಾರಿಗಳು ಚೌಕಾಶಿ ನಡೆಸಿದ್ದಾರೆ. ವ್ಯವಹಾರ ಕುದುರಿದರೆ, ಮುಂಗಡ ಕೊಟ್ಟು, ಬುಧವಾರ ನಸುಕಿನಲ್ಲೇ ಹೂವು, ಗಿಡ ಕಿತ್ತುಕೊಂಡು ಬರುವ ಮಾತುಕತೆ ನಡೆಸಿದ್ದಾರೆ.

ಇನ್ನೂ ಕೆಲ ರೈತರು ವ್ಯಾಪಾರಿಗಳು ಕೇಳಿದ್ದಷ್ಟಕ್ಕೆ ಕೊಡಲು ಹಿಂದೇಟು ಹಾಕಿ, ತಾವೇ ವಿಜಯಪುರದ ಮಾರುಕಟ್ಟೆಗೆ ಹೊತ್ತೊಯ್ದು ಮಾರಾಟ ಮಾಡಿ, ದುಪ್ಪಟ್ಟು ಲಾಭ ಗಳಿಸುವ ಆಲೋಚನೆ ಹೊಂದಿದ್ದಾರೆ.

ಟ್ಯಾಂಕರ್‌ ನೀರು:

‘ಹತ್ತು ವರ್ಷದಿಂದ ಮಹಾನವಮಿ ಹಬ್ಬಕ್ಕೆಂದೇ ಚೆಂಡು ಹೂವು ಬೆಳೆಯುತ್ತಿರುವೆ. ನೂಲ ಹುಣ್ಣಿಮೆ ನಂತರ ಒಂದು ಎಕರೆ ಭೂಮಿಯಲ್ಲಿ ಗಿಡ ನಾಟಿ ಮಾಡಿದೆ. ಆದರೆ ಸಕಾಲಕ್ಕೆ ಮಳೆ ಸುರಿಯಲಿಲ್ಲ. ಎಷ್ಟೇ ಕಷ್ಟವಾದ್ರೂ ಚಿಂತಿಯಿಲ್ಲ, ಹೂವು ಬೆಳೆಯಲೇಬೇಕು ಎಂದು ಗಟ್ಟಿ ನಿರ್ಧಾರ ಮಾಡಿಕೊಂಡು ಟ್ಯಾಂಕರ್‌ ನೀರು ಹಾಕಿಸಿಕೊಂಡೆ.

ವಾರಕ್ಕೊಮ್ಮೆ ಎರಡ್ಮೂರು ಟ್ಯಾಂಕರ್ ನೀರನ್ನು ತೆರೆದ ಬಾವಿಗೆ ಹಾಕಿಸಿಕೊಂಡು, ಅದರಿಂದ ಡ್ರಿಪ್‌ ಮೂಲಕ ಆಗಾಗ್ಗೆ ಗಿಡಗಳಿಗೆ ನೀರುಣಿಸಿದೆ. ಆರಂಭದಲ್ಲಿ ಒಂದು ಟ್ಯಾಂಕರ್‌ಗೆ ₹ 500 ಇತ್ತು. ವಾರಗಳು ಉರುಳಿದಂತೆ, ಬೆಳೆ ಚಲೋ ಬರಲಾರಂಭಿಸಿದಂತೆ, ಟ್ಯಾಂಕರ್‌ ನೀರಿನ ಧಾರಣೆಯೂ ಹೆಚ್ಚಿತು. ಇದೀಗ ₹ 700, ₹ 800 ಕೊಟ್ಟು ನೀರು ಹಾಕಿಸಿಕೊಂಡೆ’ ಎಂದು ವಿಜಯಪುರ ತಾಲ್ಲೂಕಿನ ಅರಕೇರಿ–ಸಿದ್ದಾಪುರದ ಹೂವಿನ ಬೆಳೆಗಾರ ರಾಮು ಲೋಕಂಡೆ ತಿಳಿಸಿದರು.

‘ಇಲ್ಲಿಯವರೆಗೂ ಕನಿಷ್ಠ 20ಕ್ಕೂ ಹೆಚ್ಚು ಟ್ಯಾಂಕರ್‌ ನೀರನ್ನು ಹೂವಿನ ಬೆಳೆಗಾಗಿ ಪಡೆದಿರುವೆ. ನಾಟಿ, ನೀರು, ಗೊಬ್ಬರ, ಔಷಧಿ... ಸೇರಿದಂತೆ ಕನಿಷ್ಠ ₹ 30000ಕ್ಕೂ ಹೆಚ್ಚು ಖರ್ಚಾಗಿದೆ. ಬರದ ಭೀಕರತೆಗೆ ಈ ಬಾರಿ ಎಲ್ಲಿಯೂ ಸಮೃದ್ಧ ಫಸಲು ಕಾಣಿಸುತ್ತಿಲ್ಲ. ಇದ್ದುದರಲ್ಲಿ ನೀರಾವರಿ ಆಶ್ರಿತ ಬೆಳೆಯೇ ಮಾರುಕಟ್ಟೆಗೆ ಬರಲಿದೆ.

ಹೊರ ಭಾಗದಿಂದ ಹೂವು ಯಥೇಚ್ಛ ಪ್ರಮಾಣದಲ್ಲಿ ಆವಕವಾಗದಿದ್ದರೇ; ಹಬ್ಬದ ದಿನ ಧಾರಣೆ ಕೊಂಚ ಹೆಚ್ಚಿಗೆ ಸಿಗಲಿದೆ. ಒಂದು ಕೆ.ಜಿ. ಹೂವಿಗೆ ₹ 300 ಸಿಕ್ಕರೆ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಧಾರಣೆ ಹೆಚ್ಚಿದಂತೆ ಲಾಭವೂ ಹೆಚ್ಚಲಿದೆ. ಕಡಿಮೆಯಾದರೆ ನಷ್ಟದ ಹೊರೆ ತಪ್ಪದು’ ಎಂದು ರಾಮು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT