ಮಿಶ್ರ ಬೆಳೆ ಪದ್ಧತಿ: ಕೃಷಿಯಲ್ಲಿ ಸಂತೃಪ್ತಿ ಕಂಡುಕೊಂಡ ವೈದ್ಯ

7
ಹಲವು ಪ್ರಯೋಗಗಳ ಕರ್ಮಭೂಮಿಯಿದು

ಮಿಶ್ರ ಬೆಳೆ ಪದ್ಧತಿ: ಕೃಷಿಯಲ್ಲಿ ಸಂತೃಪ್ತಿ ಕಂಡುಕೊಂಡ ವೈದ್ಯ

Published:
Updated:
Prajavani

ಬಸವನಬಾಗೇವಾಡಿ: ವೃತ್ತಿಯಲ್ಲಿ ವೈದ್ಯ. ಕೃಷಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿರುವವರು ಡಾ.ಕರುಣಾಕರ ವಿ.ಚೌಧರಿ. ತಮ್ಮ ತೋಟದಲ್ಲಿ ವಿವಿಧ ಬೆಳೆ ಬೆಳೆಯುವ ಮೂಲಕ ಕೃಷಿಯಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.

ಚೌಧರಿ ತೋಟದಲ್ಲಿ ದ್ರಾಕ್ಷಿ, ಗೋದಿ, ಮೆಕ್ಕೆಜೋಳ, ತೊಗರಿ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳಿವೆ. ಇವುಗಳಿಂದ ಉತ್ತಮ ಲಾಭವನ್ನು ಪಡೆದಿದ್ದಾರೆ.

ಇದೀಗ ಈ ಬೆಳೆಗಳ ಜತೆಗೆ ಪ್ರಾಯೋಗಿಕವಾಗಿ ಅಂಜೂರ, ದ್ರಾಕ್ಷಿ ಬೆಳೆಯಲ್ಲೇ ಡ್ರ್ಯಾಗನ್ ಪ್ರೂಟ್ಸ್‌ ಬೆಳೆಯಲು ಮುಂದಾಗಿದ್ದಾರೆ. ಇದರಲ್ಲಿ ಯಶಸ್ಸು ಸಿಕ್ಕಿದರೆ, ಮತ್ತಷ್ಟು ವಿವಿಧ ಹಣ್ಣಿನ ಗಿಡ ಬೆಳೆಯುವ ಉತ್ಸಾಹ ವೈದ್ಯರದ್ದಾಗಿದೆ.

ಕಳೆದ ವರ್ಷ ತಮ್ಮ 3.5 ಎಕರೆ ತೋಟದಲ್ಲಿನ ದ್ರಾಕ್ಷಿ ಮಾಗುವ ಹಂತದಲ್ಲೇ, ಅಕಾಲಿಕ ಮಳೆಯಿಂದಾಗಿ ಹಾನಿಗೀಡಾಗಿತ್ತು. ಅಷ್ಟಾಗಿಯೂ ಮಣುಕು (ಒಣ ದ್ರಾಕ್ಷಿ) ಮಾರಾಟದಿಂದ ₹ 2 ಲಕ್ಷ ಲಾಭ ಪಡೆದಿದ್ದರು.

ಪ್ರಸಕ್ತ ವರ್ಷ ಅಂತರ್ಜಲ ಮಟ್ಟ ಕುಸಿತದಿಂದಾಗಿ ಕೊಳವೆಬಾವಿ ನೀರು ಬತ್ತಿದಾಗ, ಇನ್ನೊಂದು ಕೊಳವೆ ಬಾವಿ ಕೊರೆಸಿಕೊಂಡು ದ್ರಾಕ್ಷಿ ಬೆಳೆ ರಕ್ಷಿಸಿಕೊಂಡಿದ್ದಾರೆ. ಸದ್ಯ ಸಾಲು ಸಾಲು ದ್ರಾಕ್ಷಿ ಗೊನೆಗಳು, ಇವರ ಕೃಷಿ ಕಾಳಜಿಗೆ ಸಾಕ್ಷಿಯಾಗಿವೆ.

ತಮ್ಮ ತೋಟದಲ್ಲೇ ಮಣುಕು ತಯಾರಿಕೆಗೆ ಅಗತ್ಯವಿರುವ ಶೆಡ್ ಅನ್ನು ₹ 4.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿಕೊಂಡಿದ್ದಾರೆ. ತಾವು ಬೆಳೆದ ದ್ರಾಕ್ಷಿಯಿಂದ ಮಣುಕು ತಯಾರಿಸುವುದರೊಂದಿಗೆ ಇತರೆ ದ್ರಾಕ್ಷಿ ಬೆಳೆಗಾರರು ಮಣುಕು ತಯಾರಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ.

ತಮ್ಮ ತೋಟದಲ್ಲಿ ಗೋದಿ, ಈರುಳ್ಳಿ, ಮೆಕ್ಕೆಜೋಳ, ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಯುವ ಮೂಲಕ ವರ್ಷಕ್ಕೆ ಲಕ್ಷ, ಲಕ್ಷ ರೂಪಾಯಿ ಲಾಭ ಪಡೆಯುತ್ತಿದ್ದಾರೆ. ಇದು ಇವರ ಕೃಷಿ ಯಶಸ್ಸಿನ ಗುಟ್ಟುಗಳಲ್ಲೊಂದಾಗಿದೆ. ಒಂದೇ ಬೆಳೆಗೆ ಜೋತು ಬೀಳದೆ ತರಹೇವಾರಿ ಬೆಳೆ ಬೆಳೆಯುವುದು ಇವರ ಕೃಷಿ ಪದ್ಧತಿಯಲ್ಲೊಂದಾಗಿದೆ.

ಇವರ ಕೃಷಿ ಕಾರ್ಯಕ್ಕೆ ಅಣ್ಣಪ್ಪ ಜಾಧವ (ಲಮಾಣಿ), ಮಲ್ಲೇಶಿ ಜಾಧವ ಕುಟುಂಬದ ಸದಸ್ಯರು ತೋಟದಲ್ಲೇ ವಸ್ತಿಯಿದ್ದು, ಸಾಥ್‌ ನೀಡುತ್ತಿದ್ದಾರೆ. ಎಲ್ಲ ಬೆಳೆಗಳಿಗೆ ಕಾಲ ಕಾಲಕ್ಕೆ ಅಗತ್ಯವಿರುವ ನೀರು, ಗೊಬ್ಬರ ನೀಡುವುದರೊಂದಿಗೆ ಉತ್ತಮ ಬೆಳೆಯನ್ನು ಬೆಳೆಯಲು ಶ್ರಮಿಸುತ್ತಿದ್ದಾರೆ.

ದ್ರಾಕ್ಷಿ ಬೆಳೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವ ಚೌಧರಿ, ಇತರೆ ಬೆಳೆಗಳಿಗೂ ಹನಿ ನೀರಾವರಿ ಪದ್ಧತಿ ಅನುಸರಿಸಿ, ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಪಡೆಯುವ ಯತ್ನ ನಡೆಸಿದ್ದಾರೆ.

ನಿತ್ಯ ಬೆಳಿಗ್ಗೆ 6ರಿಂದ 9ರವರೆಗೆ ಹಾಗೂ ವೃತ್ತಿಯ ಮಧ್ಯೆ ಬಿಡುವು ಮಾಡಿಕೊಂಡು, ತೋಟಕ್ಕೆ ತೆರಳುವ ಡಾ.ಕರುಣಾಕರ ಚೌಧರಿ ದ್ರಾಕ್ಷಿ ಬೆಳೆಗೆ ನೀರು, ಔಷಧೋಪಚಾರ ಸೇರಿದಂತೆ ಅಂದಿನ ಕೃಷಿ ಕಾರ್ಯಗಳ ಕುರಿತು ಅಣ್ಣಪ್ಪ ಹಾಗೂ ಮಲ್ಲೇಶಿಯೊಂದಿಗೆ ಚರ್ಚಿಸುವುದು ತಪ್ಪದ ಕಾಯಕ. ಅಗತ್ಯ ಎನಿಸಿದರೆ ಹೆಚ್ಚುವರಿ ಕಾರ್ಮಿಕರ ಸಹಾಯದಿಂದ ಬೆಳೆಗಳ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

‘ನಾವು ಮಾಡುವ ವೃತ್ತಿಯಿಂದ ಸಾಕಷ್ಟು ಹಣ ಗಳಿಕೆ ಮಾಡಬಹುದು. ದಿನಕ್ಕೊಮ್ಮೆಯಾದರೂ ತೋಟಕ್ಕೆ ಹೋದಾಗ ನನಗೆ ಸಂತೃಪ್ತಿ ಎನಿಸುತ್ತದೆ. ತೋಟದಲ್ಲಿನ ಬೆಳೆಗಳನ್ನು ನೋಡಿದಾಗ ಸಿಗುವಷ್ಟು ಆನಂದ ಇನ್ನೊಂದೆಡೆ ಸಿಗಲಾರದು. ವೃತ್ತಿಯೊಂದಿಗೆ ಬಿಡುವು ಮಾಡಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿಕೊಂಡರೆ ಇತರೆ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬಹುದು’ ಎನ್ನುತ್ತಾರೆ ಡಾ.ಕರುಣಾಕರ ಚೌಧರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !