ಬಸವ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್‌..!

ಶನಿವಾರ, ಏಪ್ರಿಲ್ 20, 2019
29 °C
ಕಡಿಮೆ ನೀರಿನಲ್ಲಿ ಸಮೃದ್ಧ ಫಸಲು ಬೆಳೆಯುವ ಪ್ರಯೋಗ

ಬಸವ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್‌..!

Published:
Updated:
Prajavani

ಬಸವನಬಾಗೇವಾಡಿ: ಕಡಿಮೆ ನೀರಿನಲ್ಲಿ ವಿವಿಧ ಬೆಳೆಗಳನ್ನು ಬೆಳೆದು, ಉತ್ತಮ ಲಾಭ ಪಡೆಯುವ ಕೃಷಿ ಪದ್ಧತಿ ಅರಿತಿರುವ ವೆಂಕಟೇಶ ಬಸವರಾಜ ಚಿಕ್ಕೊಂಡ, ಇದೀಗ ಹೈನುಗಾರಿಕೆಯತ್ತಲೂ ಒಲವು ತೋರಿದ್ದಾರೆ.

ದಶಕದ ಅವಧಿಯಲ್ಲಿ 15 ಕೊಳವೆಬಾವಿ ಕೊರೆಸಿದ್ದಾರೆ. ಸದ್ಯ ಎರಡರಲ್ಲಿ ಮಾತ್ರ ಕೊಂಚ ನೀರು ಲಭ್ಯವಿದ್ದು; ತಮ್ಮ 10 ಎಕರೆ ತೋಟದಲ್ಲಿನ ಬೆಳೆ ಉಳಿಸಿಕೊಳ್ಳಲಿಕ್ಕಾಗಿ; ನೆರೆಯ ತೋಟದ ಮಲಾರಿ ಶಿವಪ್ಪ ನಿಕ್ಕಂ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ, ತಮ್ಮ ಭೂಮಿಗೆ ನೀರುಣಿಸುತ್ತಿದ್ದಾರೆ.

ರೇಷ್ಮೆ ಹುಳುಗಳ ಆಹಾರಕ್ಕಾಗಿ 4 ಎಕರೆ ತೋಟದಲ್ಲಿ ಹಿಪ್ಪುನೇರಳೆ ಬೆಳೆಯುತ್ತಿದ್ದರು. ನೀರು ಕಡಿಮೆಯಾಗಿದ್ದರಿಂದ ಎರಡು ಎಕರೆಯಷ್ಟು ಮಾತ್ರ ಬೆಳೆ ಉಳಿಸಿಕೊಂಡಿದ್ದಾರೆ.

ಕಡಿಮೆ ನೀರಿನಲ್ಲಿ ಲಾಭದಾಯಕ ಕೃಷಿ ಮಾಡಬೇಕೆಂಬ ಹಂಬಲ ವೆಂಕಟೇಶರದ್ದು. ಇದಕ್ಕಾಗಿ ಒಮ್ಮೆ ಮಹಾರಾಷ್ಟ್ರಕ್ಕೆ ಹೋದಾಗ ರಸ್ತೆ ಪಕ್ಕದ ತೋಟಗಳಲ್ಲಿನ ಡ್ರ್ಯಾಗನ್ ಫ್ರೂಟ್‌ ಬೆಳೆ ಗಮನಿಸಿ, ತೋಟದ ಮಾಲೀಕರಿಂದ ಮಾಹಿತಿ ಪಡೆದು, ತಮ್ಮಲ್ಲೂ ಬೆಳೆದಿದ್ದಾರೆ.

ಒಂದು ಎಕರೆ ಜಮೀನಿನಲ್ಲಿ 2100 ಡ್ರ್ಯಾಗನ್ ಫ್ರೂಟ್‌ ಸಸಿಗಳನ್ನು, ಸಾಲಿನಿಂದ ಸಾಲಿಗೆ 12 ಅಡಿ, ಸಸಿಯಿಂದ ಸಸಿಗೆ 8 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಈ ಬೆಳೆಗೆ ಹೆಚ್ಚು ನೀರಿನ ಅಗತ್ಯತೆ ಇರುವುದಿಲ್ಲ. ಹೀಗಾಗಿ ಮಳೆ ನೀರು ಮತ್ತು ಬೆಳೆಗೆ ಬಿಟ್ಟ ನೀರು ನಿಲ್ಲದಂತೆ ಸಾಲಿನಿಂದ ಸಾಲಿಗೆ 4 ಅಡಿ ಎತ್ತರದ ಬದು ಮಾಡಿ, ಆ ಬದುವಿನ ಮೇಲೆ ಸಸಿಗಳನ್ನು ನಾಟಿ ಮಾಡಿದ್ದಾರೆ. 15 ದಿನಕ್ಕೊಮ್ಮೆ ಹನಿ ನೀರಾವರಿ ವ್ಯವಸ್ಥೆ ಮೂಲಕ ಅರ್ಧ ಗಂಟೆ ನೀರು ಹಾಯಿಸುತ್ತಿದ್ದಾರೆ.

ಆರಂಭದಲ್ಲಿ ₹ 2.50 ಲಕ್ಷ ಖರ್ಚು ಮಾಡಿದ್ದಾರೆ ವೆಂಕಟೇಶ. ನಾಟಿ ಮಾಡಿದ ಒಂದು ವರ್ಷದ ನಂತರ ಫಸಲು ಬರಲು ಆರಂಭವಾಗುತ್ತದೆ. ಕನಿಷ್ಠ 3ರಿಂದ 6 ಟನ್ ಇಳುವರಿ ಸಿಗಲಿದೆ. ಈ ಬೆಳೆ 30 ವರ್ಷದವರೆಗೆ ನಿರಂತರ ಲಾಭ ಕೊಡುತ್ತದೆ ಎನ್ನುತ್ತಾರೆ ಅವರು.

ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಡ್ರ್ಯಾಗನ್ ಫ್ರೂಟ್‌ಗೆ ಪ್ರಸ್ತುತ ₹ 120ರಿಂದ ₹ 200ರ ಧಾರಣೆಯಿದೆ. ಆರಂಭದಲ್ಲಿ ಒಂದಷ್ಟು ಹಣ ಖರ್ಚು ಮಾಡಿದರೆ, ನಂತರ ಉತ್ತಮ ಲಾಭ ಸಿಗಲಿದೆ ಎನ್ನುತ್ತಾರೆ ಚಿಕ್ಕೊಂಡ.

ರೇಷ್ಮೆ ಗೂಡು ತಯಾರಿಕೆಗಾಗಿ, ಹುಳುಗಳ ಸಾಕಣೆಯಲ್ಲಿ ತೊಡಗಿರುವ ವೆಂಕಟೇಶ ಶೆಡ್‌ಗಾಗಿ ₹ 2.80 ಲಕ್ಷ ವೆಚ್ಚ ಮಾಡಿದ್ದಾರೆ. ಬೇಸಿಗೆಯಲ್ಲಿ ಶೆಡ್ ಒಳಭಾಗದಲ್ಲಿ ತಾಪ ಕಡಿಮೆ ಮಾಡುವ ನಿಟ್ಟಿನಲ್ಲಿ, ಹನಿ ನಿರಾವರಿ ಪೈಪ್ ಬಳಸಿ, ಸದಾ ತಂಪು ವಾತಾವರಣ ಇರುವಂತೆ ನೋಡಿಕೊಂಡಿದ್ದಾರೆ.

ಎರಡು ಎಕರೆ ಜಮೀನಿನಲ್ಲಿ ದ್ರಾಕ್ಷಿ ನಾಟಿ ಮಾಡಿರುವ ಇವರು, ದೇಶಿ ಆಕಳು, ಎಮ್ಮೆ ಸಾಕಣೆ ಮೂಲಕ, ಅವುಗಳ ಸೆಗಣಿ, ಮೂತ್ರವನ್ನು ಗೊಬ್ಬರವಾಗಿ ಬಳಸಿಕೊಳ್ಳುತ್ತಿದ್ದಾರೆ.

80X80 ಅಡಿ ಉದ್ದಗಲದ, 10 ಅಡಿ ಆಳದ ನೀರಿನ ಹೊಂಡ ನಿರ್ಮಿಸಿರುವ ವೆಂಕಟೇಶ, ಪ್ಲಾಸ್ಟಿಕ್ ಹೊದಿಕೆ ಬಳಸಿ ನೀರು ಇಂಗದಂತೆ ನೋಡಿಕೊಂಡಿದ್ದಾರೆ. ಕೊಳವೆ ಬಾವಿಯ ನೀರು ಸಂಗ್ರಹಿಸಿ ಬೆಳೆಗಳಿಗೆ ಹಾಯಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !