ಬರದಲ್ಲೂ ಚಾಟ್ನಿಗೆ ಮುಂದಾದ ಬೆಳೆಗಾರ..! ದ್ರಾಕ್ಷಿ ಬೆಳೆಯಲು ಹುಮ್ಮಸ್ಸು

7
ಹಸಿ ದ್ರಾಕ್ಷಿ, ಒಣ ದ್ರಾಕ್ಷಿಗೆ ಚಲೋ ಧಾರಣೆ ಸಿಗುವ ನಿರೀಕ್ಷೆ

ಬರದಲ್ಲೂ ಚಾಟ್ನಿಗೆ ಮುಂದಾದ ಬೆಳೆಗಾರ..! ದ್ರಾಕ್ಷಿ ಬೆಳೆಯಲು ಹುಮ್ಮಸ್ಸು

Published:
Updated:

ವಿಜಯಪುರ: ಮುಂಗಾರು ವೈಫಲ್ಯ, ಬರದ ಭೀಕರತೆಯನ್ನು ಲೆಕ್ಕಿಸದ ಜಿಲ್ಲೆಯ ದ್ರಾಕ್ಷಿ ಬೆಳೆಗಾರ ಚಾಟ್ನಿಗೆ ಮುಂದಾಗಿರುವ ದೃಶ್ಯಾವಳಿ ಇದೀಗ ಎಲ್ಲೆಡೆ ಗೋಚರಿಸುತ್ತಿದೆ.

ಮಳೆಯ ಅಭಾವ ಬೆಳೆಗಾರರನ್ನು ಬೆಂಬಿಡದೆ ಕಾಡುತ್ತಿದೆ. ಆದರೂ ಹಿಂಗಾರು ಹಂಗಾಮಿನ ಕೊನೆಯ ಮಳೆಗಳು ತಮ್ಮ ಮೇಲೆ ಕೃಪೆ ತೋರಬಹುದು, ಬೋರ್‌ವೆಲ್‌ಗಳ ಅಂತರ್ಜಲ ಹೆಚ್ಚಬಹುದು ಎಂಬ ನಿರೀಕ್ಷೆಯಿಂದ ದ್ರಾಕ್ಷಿ ಚಾಟ್ನಿಗೆ ಮುಂದಾಗಿರುವ ಬೆಳೆಗಾರರೇ ಹೆಚ್ಚಿದ್ದಾರೆ.

ಜಿಲ್ಲೆಯ ತಿಕೋಟಾ ತಾಲ್ಲೂಕು ದ್ರಾಕ್ಷಿ ಬೆಳೆಗೆ ಹೆಸರುವಾಸಿ. ಶೇ 50ರಷ್ಟು ಆಸುಪಾಸಿನ ಬೆಳೆ ಇಲ್ಲಿದೆ. ಉಳಿದಂತೆ ಬಬಲೇಶ್ವರ, ಇಂಡಿ, ಚಡಚಣ, ಈಚೆಗಿನ ವರ್ಷಗಳಲ್ಲಿ ದೇವರ ಹಿಪ್ಪರಗಿ, ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲ್ಲೂಕಿನ ವಿವಿಧೆಡೆಯೂ ದ್ರಾಕ್ಷಿ ಬೆಳೆ ವ್ಯಾಪಕವಾಗಿ ವಿಸ್ತರಣೆಗೊಂಡಿದೆ.

ಸೆ.15ರಿಂದ ಚಾಟ್ನಿಗೆ ಬೆಳೆಗಾರ ಮುಂದಾಗುವುದು ವಾಡಿಕೆ. ಅ.1ರಿಂದ ನವೆಂಬರ್ ಮೊದಲ ವಾರದವರೆಗೂ ಜಿಲ್ಲೆಯಾದ್ಯಂತವಿರುವ ದ್ರಾಕ್ಷಿ ಪಡಗಳಲ್ಲಿ ಚಾಟ್ನಿ ಕೆಲಸ ನಡೆಯಲಿದೆ. ಚಾಟ್ನಿಯ ಹಿಂದೆಯೇ ದ್ರಾವಣದ ಪೇಸ್ಟ್‌ ಕೆಲಸವೂ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಇನಾಂದಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಚಾಟ್ನಿಯಾದ ಹತ್ತು ದಿನದೊಳಗೆ ದ್ರಾಕ್ಷಿ ಗಿಡಗಳಲ್ಲಿ ಹೊಸ ಚಿಗುರು ಬರಲಿದೆ. ಇದರ ಜತೆಗೆ ಗೊಂಚಲುಗಳು ಕಾಣಿಸಿಕೊಳ್ಳುತ್ತವೆ. 15 ದಿನದ ಬಳಿಕ ಚಿಗುರನ್ನು ಕಿತ್ತು ಗೊಂಚಲು ಉಳಿಸಿಕೊಳ್ಳುತ್ತೇವೆ. 25ರಿಂದ 30ನೇ ದಿನದಲ್ಲಿ ಗೊಂಚಲು ಹಿಗ್ಗಿಸುವಿಕೆಗೆ ರಾಸಾಯನಿಕದಲ್ಲಿ ಮುಳುಗಿಸುವ ಪ್ರಕ್ರಿಯೆ ನಡೆಸಲಿದ್ದೇವೆ’ ಎಂದು ಬಬಲೇಶ್ವರ ತಾಲ್ಲೂಕಿನ ಉಪ್ಪಲದಿನ್ನಿಯ ದ್ರಾಕ್ಷಿ ಬೆಳೆಗಾರ ಸಂಗಪ್ಪ ಗದಿಗೆಪ್ಪ ಮೆಂಡೆಗಾರ ತಿಳಿಸಿದರು.

‘ಚಾಟ್ನಿ ನಡೆದ 125 ದಿನದೊಳಗೆ ಹಸಿ ದ್ರಾಕ್ಷಿ ಗಿಡದಲ್ಲಿ ಲಭ್ಯ. ಇದನ್ನು ಕಿತ್ತು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಒಣ ದ್ರಾಕ್ಷಿ ಮಾಡಲಿಚ್ಚಿಸುವವರು 130ರಿಂದ 135 ದಿನದವರೆಗೂ ದ್ರಾಕ್ಷಿ ಹಣ್ಣನ್ನು ಪಡದಲ್ಲೇ ಬಿಟ್ಟು ನಂತರ ಕಿತ್ತು, ಶೆಡ್‌ನಲ್ಲಿ ಒಣಗಿಸುತ್ತಾರೆ.

ಹಿಂದಿನ ವರ್ಷ ಹಸಿ ದ್ರಾಕ್ಷಿ ಒಂದು ಕೆ.ಜಿ.ಗೆ ₹ 30ರಿಂದ 38ರ ಧಾರಣೆಯಂತೆ ಪಡದಲ್ಲೇ ಮಾರಾಟವಾಯ್ತು. ಪ್ರಸ್ತುತ ಒಣದ್ರಾಕ್ಷಿ ದರವೂ ಚಲೋ ಸಿಕ್ಕಿದೆ. ಒಂದು ಕೆ.ಜಿ.ಗೆ ₹ 200 ರಿಂದ ₹ 250 ಧಾರಣೆ ಸಿಗ್ತಿದೆ. ನೆರೆಯ ಮಹಾರಾಷ್ಟ್ರದ ನಾಸಿಕ್‌ ಭಾಗದ ಉತ್ಪನ್ನ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಾರದಿರುವುದು, ಮಳೆಯ ಕೊರತೆ ನಮಗೆ ವರವಾಗಿ ಪರಿಣಮಿಸಿತ್ತು. ಇದರ ಆಧಾರದಲ್ಲೇ ಈ ಬಾರಿ ಸಂಕಷ್ಟದೊಳಗಿದ್ದರೂ; ದ್ರಾಕ್ಷಿ ಬೆಳೆಯುವುದು ತೀವ್ರ ಕಷ್ಟಕರ ಎನಿಸಿದರೂ, ಬಹುತೇಕರು ಚಾಟ್ನಿ ನಡೆಸಲು ಮುಗಿ ಬೀಳುತ್ತಿದ್ದಾರೆ’ ಎಂದು ಯುವ ರೈತ ಎಸ್‌.ಎಸ್‌.ಬಿರಾದಾರ ಹೇಳಿದರು.

‘ಒಂದು ಎಕರೆ ದ್ರಾಕ್ಷಿ ಪಡದಲ್ಲಿ ಚಾಟ್ನಿ ನಡೆಸಲು ಕನಿಷ್ಠ ಐವರು ನುರಿತ ಕೂಲಿ ಕಾರ್ಮಿಕರು ಬೇಕು. ಬೆಳಿಗ್ಗೆ 9ರಿಂದ ಸಂಜೆ 5ರವರೆಗೂ ಕೆಲಸ ಮಾಡುತ್ತಾರೆ. ಒಬ್ಬರಿಗೆ ₹ 600 ದಿನಗೂಲಿ. ಇದೀಗ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದೆ. ನಮಗೆ ಅನಿವಾರ್ಯವಿದೆ. ಸೂಕ್ತ ಸಂದರ್ಭದಲ್ಲಿ ಚಾಟ್ನಿ ನಡೆಸಿದರೆ ಚಲೋ ಇಳುವರಿ ಸಿಗಲಿದೆ ಎಂಬ ಆಶಾಭಾವನೆಯಿಂದ ಹಂತ ಹಂತವಾಗಿ ಪಡಗಳಲ್ಲಿ ಚಾಟ್ನಿ ನಡೆಸಿದ್ದೇವೆ’ ಎಂದು ನಿಜಪ್ಪ ಪೂಜಾರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !