ಶನಿವಾರ, ಅಕ್ಟೋಬರ್ 16, 2021
22 °C
ಮಲೆನಾಡು,ಕರಾವಳಿ: ಹವಾಮಾನ ವೈಪರೀತ್ಯದ ಪ್ರಭಾವ, ಬೆಳೆಗಾರರು ಕಂಗಾಲು

ಹವಾಮಾನ ವೈಪರೀತ್ಯದ ಪ್ರಭಾವ: ಅಡಿಕೆಗೆ ಎಲೆಚುಕ್ಕಿ ರೋಗ, ಬೆಳೆಗಾರರು ಕಂಗಾಲು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮಲೆನಾಡು, ಕರಾವಳಿ ಭಾಗದ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ವೇಗವಾಗಿ ಹರಡುತ್ತಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಅಡಿಕೆ ಸಸಿಗಳು, ಸಸಿ ತೋಟಗಳಲ್ಲೇ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಗಾಳಿಯಲ್ಲಿ ವೇಗವಾಗಿ ಮರದಿಂದ ಮರಕ್ಕೆ ಹಬ್ಬುತ್ತಿದೆ. ಪರಿಣಾಮ ಅಡಿಕೆ ಮರದ ಹೆಡೆಗಳಲ್ಲಿ ಚುಕ್ಕಿ ಕಾಣಿಸಿಕೊಂಡು
ನಂತರ ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿವೆ. ಹೆಡೆಗಳು ನೆಲಕ್ಕೆ ಬೀಳುವ ಜತೆಗೆ ಅಡಿಕೆ ಕಾಯಿಗಳೂ ಉದುರುತ್ತಿವೆ. ಕೆಲವು ಭಾಗಗಳಲ್ಲಿ ಮರಗಳಿಗೂ ಹಾನಿಯಾಗಿದೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಸಾವಿರ, ದಕ್ಷಿಣ ಕನ್ನಡದಲ್ಲಿ 9 ಸಾವಿರ, ಚಿಕ್ಕಮಗಳೂರಿನಲ್ಲಿ 300 ಹೆಕ್ಟೇರ್‌ ಪ್ರದೇಶದಲ್ಲಿ ರೋಗ ಹಬ್ಬಿದೆ. ಸುಮಾರು 7 ಲಕ್ಷ ಮರಗಳಿಗೆ ಹಾನಿಯಾಗಿದೆ ಎನ್ನುತ್ತಾರೆ ತೀರ್ಥಹಳ್ಳಿ ತಾಲ್ಲೂಕು ಗುಡ್ಡೆಕೇರಿ ಅಡಿಕೆ ಬೆಳೆಗಾರ
ಶಶಾಂಕ್ ಹೆಗ್ಡೆ, ಮ್ಯಾಮ್ಕೋಸ್ ನಿರ್ದೇಶಕರಾದ ಸಿ.ಬಿ.ಈಶ್ವರ್, ನರೇಂದ್ರ ಬೇಳೆಗದ್ದೆ.

‘ಹವಾಮಾನ ವೈಪರೀತ್ಯಗಳ ಸಮಯದಲ್ಲಿ ಹಿಂದೆಯೂ ಈ ರೋಗ ಕಾಣಿಸಿಕೊಳ್ಳುತ್ತಿತ್ತು. ಇದೇ ಮೊದಲ ಬಾರಿ ಇಷ್ಟೊಂದು
ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ನಿತ್ಯವೂ ರೋಗ ಹರಡುವಿಕೆಯ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಒಂದು ಲೀಟರ್‌ ನೀರಿಗೆ ಎರಡು ಗ್ರಾಂನಷ್ಟು
ಕಾರ್ಬನ್‌ ಡೈಸಿಮ್‌ ಮತ್ತು ಮ್ಯಾಂಗೊಜಬ್‌ ಮಿಶ್ರಣ ಮಾಡಿ ಸಿಂಪಡಣೆ ಮಾಡಿದರೆ ರೋಗ ಹತೋಟಿಗೆ ಬರುತ್ತದೆ. ಹೊಸನಗರ, ತೀರ್ಥಹಳ್ಳಿ ತಾಲ್ಲೂಕಿನ ಕೆಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಔಷಧ ಸಿಂಪಡಿಸಲು ಆಗದೆ ಹತೋಟಿ ಸಾಧ್ಯವಾಗಿಲ್ಲ. ಹಲವು ತೋಟಗಳಿಗೆ ಭೇಟಿ ನೀಡಿ ಬೆಳೆಗಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ನಾಗರಾಜ ಅಡಿವಪ್ಪರ್ ಮಾಹಿತಿ ನೀಡಿದರು.

ಎಲೆಚುಕ್ಕಿ ರೋಗವನ್ನು ತುಂಡೆ ರೋಗ, ಶಿಲೀಂಧ್ರ ರೋಗವೆಂದೂ ಕರೆಯುತ್ತಾರೆ. ಕೊಲಟೊಸ್ಟೈಕಮ್ ಶಿಲೀಂಧ್ರದಿಂದ ಈ ರೋಗ
ಬರುತ್ತದೆ. ಅರಣ್ಯಗಳ ಬಳಿ ಇರುವ ತೋಟಗಳಲ್ಲೇ ಹೆಚ್ಚು ಕಾಣಿಸಿಕೊಂಡಿದೆ. ರೋಗ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಹೊಸನಗರ ತಾಲ್ಲೂಕು ನಿಟ್ಟೂರು ಸುತ್ತಲ ತೋಟಗಳಿಗೆ ಕೇರಳದ ಸೆಂಟ್ರಲ್‌ ಪ್ಲಾಂಟೇಷನ್‌ ಕ್ರಾಪ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ (ಸಿಪಿಸಿಆರ್‌ಐ) ವಿಜ್ಞಾನಿಗಳ ತಂಡ ಭೇಟಿ ಪರಿಶೀಲನೆ ನಡೆಸಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 96 ಸಾವಿರ ಹೆಕ್ಟೇರ್‌ ಅಡಿಕೆ ತೋಟವಿದ್ದು, ಶೇ 10ರಷ್ಟು ತೋಟಗಳಲ್ಲಿ ಕಾಣಿಸಿಕೊಂಡಿದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಯ ತೋಟಗಳು ಎಲೆಚುಕ್ಕೆ ರೋಗದಿಂದ ಮುಕ್ತವಾಗಿವೆ.

‘ಎಲೆ ಚುಕ್ಕಿ ರೋಗವು ತಕ್ಷಣಕ್ಕೆ ಫಸಲಿನ ಮೇಲೆ ಪ್ರಭಾವ ಬೀರುವುದಿಲ್ಲ. ಆದರೆ, ಅಡಿಕೆ ಎಲೆಗಳು (ಸೋಗೆ) ಬೇಗನೆ ಹಣ್ಣಾಗಿ ಉದುರಲು ಆರಂಭಿಸುತ್ತವೆ. ಗಿಡದ ಬೆಳವಣಿಗೆ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ. ಆರಂಭದಲ್ಲೇ ನಿಯಂತ್ರಿಸಬೇಕು’ ಎನ್ನುತ್ತಾರೆ ಕೃಷಿಕ ಉಪ್ಪಿನಂಗಡಿಯ ರಾಮ್‌ಪ್ರಸಾದ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು