ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಬ್ಬರದ ಚೀಲ, ಒಣ ಮೀನು... ಬೆಳೆ ರಕ್ಷಣೆಗೆ ರೈತರ ಹೊಸ ತಂತ್ರ!

ಮಲೆನಾಡು ಭಾಗದಲ್ಲಿ ನಿಲ್ಲದ ಕಾಡು ಪ್ರಾಣಿಗಳ ಹಾವಳಿ
Last Updated 3 ಜನವರಿ 2021, 19:30 IST
ಅಕ್ಷರ ಗಾತ್ರ

ಹಾಸನ: ಖಾಲಿ ಗೊಬ್ಬರದ ಚೀಲ ಮತ್ತು ಒಣ ಮೀನು ಬಳಸುವ ಮೂಲಕ ಮಲೆನಾಡು ಭಾಗದ ರೈತರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಹೊಸ ಉಪಾಯ ಕಂಡುಕೊಂಡಿದ್ದಾರೆ.

ಸಕಲೇಶಪುರ ತಾಲ್ಲೂಕು ಜಾನೆಕೆರೆ ಗ್ರಾಮದ ರೈತ ಧರ್ಮಯ್ಯ ತಮ್ಮ ಮೂರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಕಾಡಾನೆ, ಕಾಡು ಹಂದಿ ಹಾಗೂ ಮಂಗಗಳ ಹಾವಳಿ ತಡೆಗೆಈ ದಾರಿ ಕಂಡುಕೊಂಡಿದ್ದಾರೆ. ಗದ್ದೆಯ ನಡುವೆ ಅಲ್ಲಲ್ಲಿ ಹಾಗೂ ಬದುವಿನ ಸುತ್ತಲೂ ಕೋಲುಗಳನ್ನು ನೆಟ್ಟು, ಅವುಗಳಿಗೆ ಖಾಲಿ ಗೊಬ್ಬರದ ಚೀಲಗಳನ್ನು ಕಂಬಕ್ಕೆ ಕಟ್ಟಿದ್ದಾರೆ.

ಈ ರೀತಿ ಮಾಡುವುದರಿಂದ ಗದ್ದೆಯಲ್ಲಿ ಯಾರೋ ನಿಂತಿರುವಂತೆ ಕಾಣಿಸುವುದರಿಂದ ಗದ್ದೆಗಳಿಗೆ ಕಾಡು ಪ್ರಾಣಿಗಳು ಬರುವುದಿಲ್ಲ. ಬಟ್ಟೆಯಲ್ಲಿ ಒಣ ಮೀನನ್ನು ಸುತ್ತಿ ಕಂಬಗಳಿಗೆ ಕಟ್ಟಿರುವುದರಿಂದಮಂಗಗಳು ಬರುವುದಿಲ್ಲ ಎಂಬುದು ಧರ್ಮಯ್ಯ ಅವರ ನಂಬಿಕೆ. ಇದರಲ್ಲಿ ಅವರು ಯಶಸ್ಸು ಕಂಡುಕೊಂಡಿದ್ದಾರೆ.

‘ಪ್ರತಿ ವರ್ಷ ಬೆಳೆಗಳನ್ನು ಕಾಡಾನೆಗಳು ತಿನ್ನುವ ಜತೆಗೆ ತುಳಿದು ನಾಶ ಮಾಡುತ್ತಿದ್ದವು. ಅಲ್ಲದೇ ಮಂಗಗಳು ಭತ್ತದ ತೆನೆಗಳನ್ನು ನಾಶ ಮಾಡುತ್ತಿದ್ದವು. ಜೊತೆಗೆ ಕಾಡು ಹಂದಿಗಳ ಕಾಟವೂ ಹೆಚ್ಚಿದ್ದು, ಗದ್ದೆಯಲ್ಲಿ ಓಡಾಡಿ ಬೆಳೆ ಹಾಳು ಮಾಡುತ್ತಿದ್ದವು. ಆದ್ದರಿಂದ ಈ ರೀತಿಯ ಉಪಾಯ ಮಾಡಿದ್ದೇನೆ’ ಎಂದು ಧರ್ಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಕಲೇಶಪುರ ಭಾಗದ ಬಹುತೇಕ ಕಡೆ ಜಮೀನುಗಳನ್ನು ಗುತ್ತಿಗೆ ನೀಡಿರುತ್ತಾರೆ. ಗುತ್ತಿಗೆ ಪಡೆದವರು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳುವುದೇ ಸವಾಲು. ಒಂದು ವೇಳೆ ಕಾಡು ಪ್ರಾಣಿಗಳಿಂದ ಬೆಳೆ ಹಾನಿ ಉಂಟಾದರೆ ಪರಿಹಾರ ಮಾಲೀಕರಿಗೆ ಹೋಗುತ್ತದೆ. ಗುತ್ತಿಗೆ ಆಧಾರದಲ್ಲಿ ಗದ್ದೆ ಪಡೆದವರಿಗೆ ಪ್ರಯೋಜನ ಆಗುವುದಿಲ್ಲ. ಅಲ್ಲದೇ ಅರಣ್ಯ ಇಲಾಖೆಯಿಂದಲೂ ನ್ಯಾಯಯುತ ಪರಿಹಾರ ಸಿಗುವುದಿಲ್ಲ. ಹಾಗಾಗಿ ಬಹುತೇಕರು ಬೆಳೆ ಹಾನಿಯಾದರೂ ಸುಮ್ಮನಾಗುತ್ತಾರೆ’ ಎಂದು ಬೇಡರಜಗಲಿ ಗ್ರಾಮದ ಮೋಹನ್‌ ತಿಳಿಸಿದರು.

‘ಈ ಬಾರಿ ಸುತ್ತಮುತ್ತಲಿನ ಗದ್ದೆ ಬಯಲುಗಳು ಒಂದೇ ಬಾರಿ ಕೊಯ್ಲು ಬಂದಿದ್ದವು. ಕಾಡಾನೆಗಳು ಮಳಲಿ, ಸತ್ತಿಗಾಲ್‌, ಇಬ್ಬಡಿ, ಕುದರಂಗಿ, ದೊಡ್ಡ ಸತ್ತಿಗಾಲ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿವೆ. ಹಾಗಾಗಿ ಬೇಗ ಭತ್ತದ ಕೊಯ್ಲು ನಡೆಯುತ್ತಿದೆ. ಕಳೆದ ವರ್ಷದಂತೆಯೇ ಈ ಬಾರಿಯೂ ರೈತರು ಕಾಡಾನೆಗಳಿಂದ ಬೆಳೆ ಕಾಯುವ ಕೆಲಸ ಮಾಡುತ್ತಿದ್ದಾರೆ. ಭತ್ತವನ್ನು ಮನೆಗೆ ತರುವಷ್ಟರಲ್ಲಿ ಸಾಕಾಗಿ ಹೋಯಿತು’ ಎಂದು ಕೊಣ್ಣೂರು ಗ್ರಾಮದ ರೈತ ಕೃಷ್ಣಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT