ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕೃಷಿ ಮೇಲೆ ಕೊರೊನಾ ಕರಿನೆರಳು

ಕೂಲಿ ಕಾರ್ಮಿಕರ ಅಭಾವ: ಕಂಗಾಲಾದ ರೈತ ಸಮೂಹ
Last Updated 12 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಶಿಗ್ಗಾವಿ: ಫಸಲಿಗೆ ಬಂದಿರುವ ಹತ್ತಿ ಬೆಳೆಯ ಕಾಯಿಗಳು ಸಂಪೂರ್ಣ ಒಡೆದು ನೆಲಕ್ಕೆ ಬಿದ್ದು, ಹತ್ತಿ ಮಣ್ಣು ಪಾಲಾಗುತ್ತಿದೆ. ಕೃಷಿ ಕೂಲಿಕಾರರ ಅಭಾವದಿಂದ ಕೃಷಿ ನಂಬಿ ಬದುಕುತ್ತಿರುವ ರೈತ ಸಮೂಹ ಸಂಕಷ್ಟಕ್ಕೆ ಸಿಲುಕಿದೆ.

ತಾಲ್ಲೂಕಿನಲ್ಲಿ ಒಟ್ಟು 37.5 ಸಾವಿರ ಹೆಕ್ಟೇರ್ ಭೂಪ್ರದೇಶ ಸಾಗುವಳಿ ಕ್ಷೇತ್ರವಾಗಿದ್ದು, ಅದರಲ್ಲಿ 2.5 ಸಾವಿರ ಹೆಕ್ಟೇರ್ ಭೂಪ್ರದೇಶ ನೀರಾವರಿ, ಇನ್ನುಳಿದ 35 ಸಾವಿರ ಹೆಕ್ಟೇರ್ ಭೂಪ್ರದೇಶ ಸಂಪೂರ್ಣ ಒಣ ಬೇಸಾಯ (ಮಳೆಯಾಶ್ರಿತ) ಒಳಗೊಂಡಿದೆ. ಹೀಗಾಗಿ ಮಳೆಯಾಶ್ರಿತ ಭೂಪ್ರದೇಶ ಹೊಂದಿರುವ ರೈತರ ಸಂಖ್ಯೆ ಹೆಚ್ಚಾಗಿದೆ.

ಪ್ರಸಕ್ತ ವರ್ಷದಲ್ಲಿ 5,300 ಹೆಕ್ಟೇರ್ ಭೂಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಬಿತ್ತನೆ ಸಂದರ್ಭದಲ್ಲಿ ಮಳೆ ವಿಳಂಬವಾಗಿ ಜುಲೈ ಎರಡನೇ ವಾರದಲ್ಲಿ ಬಿತ್ತನೆ ಮಾಡಲಾಯಿತು. ನಂತರ ಅಗಸ್ಟ್ ತಿಂಗಳಲ್ಲಿ ಅತಿವೃಷ್ಟಿಯಿಂದ ಇಡೀ ಬಿತ್ತನೆ ಭೂಮಿ ಜಲಾವೃತಗೊಂಡು ಶೇ 80ರಷ್ಟು ಹತ್ತಿ ಬೆಳೆ ನಾಶವಾಯಿತು. ಹೀಗಾಗಿ ಉಳಿದ ಶೇ 20ರಷ್ಟು ಬೆಳೆ ಉಳಿಸಿಕೊಳ್ಳಲು ಸಾಕಷ್ಟು ಗೊಬ್ಬರ ಹಾಕುವ ಜತೆಗೆ ಹರಸಾಹಸ ಮಾಡಬೇಕಾಯಿತು.

ಈಗ ಅಲ್ಪಸ್ವಲ್ಪ ಬಂದಿರುವ ಹತ್ತಿ ಬಿಡಿಸಿಕೊಳ್ಳಲು ಕೃಷಿ ಕೂಲಿಕಾರರು ಸಿಗದಂತಾಗಿದೆ. ಹತ್ತಿ ಬಿಡಿಸುವವರಿಗೆ ಕೆ.ಜಿ.ಗೆ ₹5ರಿಂದ ₹6 ನೀಡಲಾಗಿದೆ. ಈಗ ಕೆ.ಜಿ.ಗಟ್ಟಲೆ ಬಿಡಿಸಲು ಹಿಂಜರಿಯುತ್ತಿದ್ದು, ದಿನಕ್ಕೆ ₹200 ಕೂಲಿ ಬೇಡಿಕೆ ಇಡುತ್ತಿದ್ದಾರೆ. ಅದರಿಂದಾಗಿ ಜಮೀನಿನ ಮಾಲೀಕನಿಗೆ ಯಾವುದೇ ಲಾಭ ಬಾರದಂತಾಗಿದೆ ಎಂಬುದು ಹತ್ತಿ ಬೆಳೆಗಾರರ ಅಳಲು.

‘ಒಂದು ಕ್ವಿಂಟಲ್‌ಗೆ ಒಂದು ತಿಂಗಳ ಹಿಂದೆ ₹6 ಸಾವಿರ ದರವಿತ್ತು. ಈಗ ₹4 ಸಾವಿರ ರೂಪಾಯಿ ದರವಾಗಿದೆ. ಒಂದೇ ತಿಂಗಳಲ್ಲಿ ₹2 ಸಾವಿರದಷ್ಟು ದಿಢೀರ್‌ ಇಳಿಕೆಯಾಗಿದೆ. ಬಿತ್ತನೆ ಬೀಜ, ಗೊಬ್ಬರ, ಕೂಲಿಗಾಗಿ ಮಾಡಿರುವ ಖರ್ಚಿನ ಲೆಕ್ಕಾಚಾರ ಮಾಡಿದರೆ, ಹತ್ತಿ ಬೆಳೆಯಿಂದ ನಯಾಪೈಸೆ ಲಾಭ ಬರಲಿಲ್ಲ. ಹೀಗಾಗಿ ಮೂರು ವರ್ಷಗಳಿಂದ ಅತಿವೃಷ್ಟಿ, ಅನಾವೃಷಿಗೆ ಸಿಲುಕಿಕೊಂಡು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಸಾಲ ತೀರಿಸೋದು ಹೇಗೆ?’ ಎಂದು ಬಂಕಾಪುರದ ರೈತ ಸತೀಶ ವನಹಳ್ಳಿ ಸಮಸ್ಯೆ ತೋಡಿಕೊಂಡರು.

ತಾಲ್ಲೂಕಿನಲ್ಲಿ ಪ್ರಮುಖ ಬೆಳೆಗಳಾದ ಸೋಯಾಬಿನ್, ಶೇಂಗಾ, ಭತ್ತ, ಗೋವಿನ ಜೋಳ, ಮೆಕ್ಕೆಜೋಳ, ಹತ್ತಿ ಹಾಗೂ ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮಲೆನಾಡ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ಅಂದಲಗಿ, ತಡಸ, ದುಂಢಸಿ ಅರಟಾಳ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಹೆಚ್ಚಾಗಿ ಭತ್ತ ಬಿತ್ತನೆ ಮಾಡಲಾಗುತ್ತಿದೆ.

ನಾಲ್ಕು ವರ್ಷಗಳಿಂದ ಅಲ್ಪ ಮಳೆಗೆ ಭತ್ತದ ಬೆಳೆ ಸರಿಯಾಗಿ ಬರುವುದಿಲ್ಲ ಎಂಬ ಕಾರಣದಿಂದ ಭತ್ತದ ಬಿತ್ತನೆ ಕಡಿಮೆ ಮಾಡಲಾಗಿತ್ತು. ಆದರೆ ಪ್ರಸಕ್ತ ವರ್ಷದ ಅಗಸ್ಟ್ ಮತ್ತು ಸಪ್ಟೆಂಬರ್‌ನಲ್ಲಿ ಸುರಿದ ಅತಿವೃಷ್ಟಿಯಿಂದ ಬಿತ್ತನೆ ಮಾಡಿರುವ ಎಲ್ಲ ಬೆಳೆಗಳು ನಾಶವಾಗಿ ಹೋಗಿವೆ. ಅದರಿಂದ ರೈತನ ಆರ್ಥಿಕ ಪರಿಸ್ಥಿತಿ ಕುಗ್ಗುವಂತಾಗಿದೆ ಎಂದು ಅರಟಾಳದ ಶಿವಪುತ್ರಪ್ಪಣ್ಣ ಸಣ್ಣಗೌಡ್ರ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT