ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು 25 ವರ್ಷದ ಕೂಳೆ ಕಬ್ಬು!

Last Updated 25 ನವೆಂಬರ್ 2019, 19:30 IST
ಅಕ್ಷರ ಗಾತ್ರ

ದೇವಂಗಿಯ ಪ್ರಫುಲ್ಲಚಂದ್ರ ಅವರು ಒಂದೇ ಕಬ್ಬಿನ ಕೂಳೆಯಿಂದ ಸುಮಾರು 42 ವರ್ಷಗಳ ಕಾಲ ಬೆಳೆ ತೆಗೆದು ದಾಖಲೆ ನಿರ್ಮಿಸಿದ್ದರು. ಈಗ ಶ್ರೀರಂಗಪ್ಪಟ್ಟಣ ತಾಲ್ಲೂಕಿನ ಕೂಡಲಕುಪ್ಪೆಯ ಶಂಕರನಾರಾಯಣ ಅವರು ಸಹ 25 ವರ್ಷಗಳ ಕಾಲ ಒಂದೇ ಕೂಳೆ ಕಬ್ಬಿನಿಂದ ಫಸಲು ತೆಗೆಯುತ್ತಿದ್ದಾರೆ.

ಒಮ್ಮೆ ಕಬ್ಬು ನಾಟಿ ಮಾಡಿದವರು, ಅಬ್ಬಬ್ಬಾ ಅಂದ್ರೆ ಎರಡು ಅಥವಾ ಮೂರು ಕೂಳೆ ಬೆಳೆಯುತ್ತಾರೆ. ಐದಾರು ಕೂಳೆ ಬೆಳೆದ ರೈತರೂ ಇದ್ದಾರೆ. ಆದರೆ 25 ವರ್ಷಗಳ ಹಿಂದೆ ನಾಟಿ ಮಾಡಿದ ಕಬ್ಬಿನ ಕೂಳೆಯಿಂದ ಸತತವಾಗಿ ಕಬ್ಬು ಬೆಳೆ ತೆಗೆಯುತ್ತಿದ್ದಾರೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ರೈತ ಶಂಕರನಾರಾಯಣ.

ಅವರು 1994ರಲ್ಲಿ ನಾಟಿ ಮಾಡಿದ ಕಬ್ಬಿನ ಕಂದನ್ನು ಹಾಗೇ ಉಳಿಸಿಕೊಂಡು ಅದರಿಂದ ಬೆಳೆ ತೆಗೆಯುತ್ತಿದ್ದಾರೆ. ಕೂಳೆ ಕಬ್ಬಿನಿಂದ ಪ್ರತಿ ಫಸಲಿಗೆ, ಎಕರೆಗೆ 45ರಿಂದ 50 ಟನ್‌ವರೆಗೆ ಕಬ್ಬು ಇಳುವರಿ ಪಡೆಯುತ್ತಿದ್ದಾರೆ.

ಇವರದ್ದು ಎಂ–1 ತಳಿಯ ಕಬ್ಬು.‘ಮಲೇಶಿಯಾ ಕಬ್ಬು’ ಎಂಬುದು ಇದರ ಇನ್ನೊಂದು ಹೆಸರು. ಎಂ–1 ತಳಿಯ ಕಬ್ಬನ್ನು ಈ ಭಾಗಕ್ಕೆ ಮೊದಲು ಪರಿಚಯಿಸಿದ ಕೀರ್ತಿ ಶಂಕರನಾರಾಯಣ ಅವರದ್ದು. ಇಪ್ಪತ್ತೈದು ವರ್ಷಗಳ ಹಿಂದೆ ತಮಿಳುನಾಡಿನ ಹೊಸೂರಿನ ನಿವೃತ್ತ ಕೃಷಿ ಅಧಿಕಾರಿಯೊಬ್ಬರ ಬಳಿಯಿಂದ ಈ ಕಬ್ಬಿನ ತಳಿ ತಂದು ನಾಟಿ ಮಾಡಿದ್ದರು. ಅಂದು ಎರಡೂವರೆ ಎಕರೆಯಲ್ಲಿ ನಾಟಿ ಮಾಡಿದ ಕಬ್ಬಿನ ಬೇರು ತೆಗೆಯದೆ ಅದರಿಂದ ಈವರೆಗೆ 25 ಬೆಳೆ ತೆಗೆದಿದ್ದಾರೆ.

ಜಮಿನಿನ ಗಡಿಭಾಗದಲ್ಲಿ ತರಕಾರಿ ಬೆಳೆ
ಜಮಿನಿನ ಗಡಿಭಾಗದಲ್ಲಿ ತರಕಾರಿ ಬೆಳೆ

ಮುಂದೆ ಎಂ–1 ತಳಿಯ ಕಬ್ಬನ್ನು 6 ಎಕರೆಗೆ ವಿಸ್ತರಿಸಿಕೊಂಡು, ನಾಲ್ಕು ಬ್ಯಾಚ್‌ ಮಾಡಿಕೊಂಡು ಬೆಳೆಯುತ್ತಿದ್ದಾರೆ. ಒಂದೊಂದು ಬ್ಯಾಚ್ ಮೂರು ತಿಂಗಳಿಗೊಮ್ಮೆ ಕಟಾವಿಗೆ ಬರುತ್ತದೆ. ಹೀಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಕಬ್ಬು ಮಾರಾಟ ಮಾಡುತ್ತಾರೆ.

ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರಬಿಟ್ಟು ಕಬ್ಬು ನಾಟಿ ಮಾಡಿದ್ದಾರೆ. ತರಗೆಲೆಯ ಮುಚ್ಚಿಗೆ ಮತ್ತು ಪರಿಣಾಮಕಾರಿಯಾಗಿ ಪೋಷಕಾಂಶಗಳ ನಿರ್ವಹಣೆಯಿಂದಾಗಿ ಇಲ್ಲಿವರೆಗೂ ಕಬ್ಬಿನ ಇಳುವರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸವಾಗಿಲ್ಲ ಎನ್ನುತ್ತಾರೆ ಶಂಕರನಾರಾಯಣ.

ಕೂಳೆ ಕಬ್ಬಿನ ಪ್ರಯೋಜನ

ಕಬ್ಬು ಬೆಳೆ ಕಟಾವಿನ ನಂತರ ಅದರ ಕೂಳೆಯನ್ನು ಉಳಿಸಿಕೊಂಡು ಆರೈಕೆ ಮಾಡುವುದರಿಂದ ‘ತನಿ’(ಮೊದಲ ಬೆಳೆ) ಕಬ್ಬಿನಷ್ಟೇ ಇಳುವರಿ ಪಡೆಯಬಹುದು. ಕೂಳೆ ಕಬ್ಬು ಬೇಸಾಯದಿಂದ ಹೊಸದಾಗಿ ನಾಟಿ ಮಾಡಲು ತಗಲುವ ಬಿತ್ತನೆ ಕಬ್ಬು, ಉಳುಮೆ, ಕೂಲಿ, ಗೊಬ್ಬರದ ಖರ್ಚು ಉಳಿಯುತ್ತದೆ. ‘ಒಂದು ಎಕರೆ ಬೇಸಾಯಕ್ಕೆ ₹20 ಸಾವಿರ ಸಾಕಾಗುತ್ತದೆ. ಕಟಾವಿನ ನಂತರ ಬೇರಿನಿಂದ ದಸಿಗಳು(ಕವಲುಗಳು) ಶೀಘ್ರ ಚಿಗುರೊಡೆಯುತ್ತವೆ. ಇದರಿಂದ ಕಬ್ಬು ಒಂದು ತಿಂಗಳು ಬೇಗನೆ ಕಟಾವಿಗೆ ಬರುತ್ತದೆ’ ಎಂಬುದು ಶಂಕರನಾರಾಯಣ ಅವರ ಅನುಭವದ ಮಾತು.

ತರಕಾರಿ ಬೆಳೆಯೊಂದಿಗೆ ಪತ್ನಿ ಮಂಜಮ್ಮ
ತರಕಾರಿ ಬೆಳೆಯೊಂದಿಗೆ ಪತ್ನಿ ಮಂಜಮ್ಮ

ತರಗು ನಿರ್ವಹಣೆ

65 ವರ್ಷದ ಶಂಕರನಾರಾಯಣ ತಾವು ಬೇಸಾಯ ಆರಂಭಿಸಿದ ದಿನದಿಂದ ಈವರೆಗೆ ಕಬ್ಬಿನ ತರಗಿಗೆ ಬೆಂಕಿ ಹಾಕಿ ಸುಟ್ಟಿಲ್ಲ. ಕಬ್ಬು ಕಟಾವು ಮಾಡಿದ ಬಳಿಕ ಉಳಿಯುವ ತರಗನ್ನು ಎರಡು ಸಾಲುಗಳ ಮಧ್ಯೆ ಹುದುಗಿಸಿ ಮಣ್ಣು ಮುಚ್ಚುತ್ತಾರೆ. ಅದು ಕೆಲವೇ ತಿಂಗಳುಗಳಲ್ಲಿ ಗೊಬ್ಬರವಾಗಿ ಮಣ್ಣಿನ ಸಾವಯವ ಅಂಶ ವೃದ್ಧಿಸುತ್ತದೆ. ಶೇ 80ರಷ್ಟು ಕಳೆ ನಿಯಂತ್ರಣಕ್ಕೆ ಬರುತ್ತದೆ. ಹೆಚ್ಚು ಗೊಬ್ಬರ, ನೀರು ಕೇಳುವುದಿಲ್ಲ.

‘ತರಗಿಗೆ ಬೆಂಕಿ ಹಚ್ಚಿದರೆ ಎರೆಹುಳುಗಳು ಸಾಯುತ್ತವೆ. ಮಣ್ಣಿನ ಫಲವತ್ತತೆ ನಾಶವಾಗುತ್ತದೆ. ಕಬ್ಬು ಬೆಳೆಯುವ ಜಮೀನಿನ ಬದುಗಳ ಮೇಲೆ ಬೆಳೆದಿರುವ ಮರಗಳಿಗಳಿಗೂ ಹಾನಿಯಾಗುತ್ತದೆ. ಕೂಳೆ ಕಬ್ಬು ಉಳಿಸಿಕೊಳ್ಳುವವರು ಎಂ–1 ತಳಿಯ ಕಬ್ಬು ಬೆಳೆಯುವುದು ಸೂಕ್ತ. ಇದು 18 ತಿಂಗಳವರೆಗೆ ರಸ ಬಿಟ್ಟುಕೊಡದೆ ಉಳಿಯುತ್ತದೆ. ಹಾಗಾಗಿ ರೈತರಿಗೆ ಈ ತಳಿ ವರದಾನ’ ಎನ್ನುವುದು ಅವರ ಅಭಿಪ್ರಾಯ.

ಬೆಳೆಗಳ ಡಾಕ್ಟರ್‌

ವಕೀಲಿ ವೃತ್ತಿ ಬಿಟ್ಟು ಕೃಷಿಯನ್ನೇ ಪ್ರಧಾನ ಕಸುಬು ಮಾಡಿಕೊಂಡ ಶಂಕರನಾರಾಯಣ ಅವರಿಗೆ ಯಾವ ಬೆಳೆಯನ್ನು ಹೇಗೆ, ಯಾವ ಕ್ರಮದಲ್ಲಿ ಬೆಳೆಯಬೇಕು ಎಂಬುದು ಕರತಲಾಮಲಕವಾಗಿದೆ. ಕಬ್ಬು, ಭತ್ತ, ರಾಗಿ, ತರಕಾರಿ, ಹಣ್ಣು ಹಾಗೂ ಪುಷ್ಪ ಕೃಷಿಯ ಮಾಹಿತಿ ಕಣಜ ಅವರು. ಬೆಳೆಗಳಿಗೆ ತಗಲುವ ರೋಗಗಳು, ಅವುಗಳ ಲಕ್ಷಣಗಳು ಮತ್ತು ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಬಗ್ಗೆ ಚೆನ್ನಾಗಿ ಗೊತ್ತು. ಮಣ್ಣಿನ ಗುಣ, ಗೊಬ್ಬರ ಬಳಕೆ ಪ್ರಮಾಣ ಎಲ್ಲವನ್ನೂ ಅನುಭವದಿಂದ ಅರಿತಿದ್ದಾರೆ.

ಮೈಸೂರು, ಹಾಸನ, ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳ 20ಕ್ಕೂ ಹೆಚ್ಚು ರೈತರಿಗೆ ಎಂ–1 ತಳಿಯ ಕಬ್ಬಿನ ಬಿತ್ತನೆ ಕೊಟ್ಟು, ತರಗು ನಿರ್ವಹಣೆ ಮಾದರಿಯಲ್ಲಿ ಬೆಳೆಯುವಂತೆ ಪ್ರೋತ್ಸಾಹಿಸಿದ್ದಾರೆ. ಆಲೆಮನೆ ನಡೆಸಿದ, ಮೀನು ಸಾಕಣೆ ಮಾಡಿದ, ಎರೆಹುಳು ಗೊಬ್ಬರ ತಯಾರಿಸಿದ ಅನುಭವವೂ ಇವರಿಗುಂಟು. ಹಾಗಾಗಿ ಆಸುಪಾಸಿನ ಗ್ರಾಮಗಳ ರೈತರ ದೃಷ್ಟಿಯಲ್ಲಿ ಇವರು ಕೃಷಿ ವಿಜ್ಞಾನಿ!

ಬದುಗಳಲ್ಲಿ ಕಾಯಿ ಪಲ್ಯೆ

ಕೂಳೆ ಕಬ್ಬಿನ ಬೆಳೆಯ ಜತೆ ಜತೆಗೆ ಶಂಕರನಾರಾಯಣ ಜಮೀನಿನ ಬದುಗಳಲ್ಲಿ ಹೀರೆ, ಸೋರೆ, ಹಾಗಲ, ಬದನೆ, ಹಸಿಮೆಣಸು, ಅರಿಸಿನ, ಬೀನ್ಸ್‌, ಕೋಸು, ಅಲಸಂದೆ, ಹೆಬ್ಬಾಳು ಅವರೆ ಬೆಳೆಯುತ್ತಾರೆ. ಆರು ಎಕರೆಯ ಅಷ್ಟೂ ಜಮೀನಿನ ಬದುಗಳ ಮೇಲೆ 200 ತೆಂಗು, 300 ಅಡಿಕೆ, 200 ಬಾಳೆ, 200 ಸಿಲ್ವರ್‌ ಓಕ್‌, 200 ತೇಗ, 100 ಹೆಬ್ಬೇವು, ನೇರಳೆ, ಹಲಸು, ಮಾವು, ಕರಿಬೇವು ಮರಗಳಿವೆ. ಅಡಿಕೆ ಮರಗಳಿಗೆ ಕಾಳುಮೆಣಸು ಹಬ್ಬಿವೆ. ತೆಂಗಿನಕಾಯಿ ಮಾರಾಟದಿಂದ ತಿಂಗಳಿಗೆ ಸುಮಾರು ₹12 ಸಾವಿರ ಸಿಗುತ್ತಿದೆ. ತರಕಾರಿ ಗಿಡಗಳು ವಾರಕ್ಕೊಮ್ಮೆ ಹಣ ತಂದುಕೊಡುತ್ತಿವೆ. ನಾಟಿ ಕೋಳಿ ಸಾಕಣೆ ಮಾಡುತ್ತಿದ್ದು, ಕೋಳಿ ಮತ್ತು ಮೊಟ್ಟೆ ಮಾರಾಟದಿಂದಲೂ ಇವರಿಗೆ ಹಣ ಸಿಗುತ್ತಿದೆ.

‘ಇವತ್ತಿನ ದಿನ ಕಾರ್ಮಿಕರು ಸಿಗುವುದು ದುಸ್ತರವಾಗಿದ್ದು, ಕೃಷಿ ಮಾಡುವುದು ಕಷ್ಟ. ನನ್ನ ಕೆಲಸಕ್ಕೆ ಪತ್ನಿ ಮಂಜಮ್ಮ ಹೆಗಲು ಕೊಡುತ್ತಾರೆ. ಬೆಂಗಳೂರಿನಲ್ಲಿ ಎಂಜಿನಿಯರ್‌ ಆಗಿರುವ ಮಗ ಶ್ರೇಯಸ್‌ ವಾರದಲ್ಲಿ ಎರಡು ದಿನ ಊರಿಗೆ ಬಂದು ನನ್ನ ಜತೆ ದುಡಿಯುತ್ತಾರೆ. ಕೂಳೆ ಕಬ್ಬನ್ನು ಉಳಿಸಿಕೊಡಿರುವುದರಿಂದ ಶ್ರಮ ಮತ್ತು ಖರ್ಚಿನ ಹೊರೆ ತಗ್ಗಿದೆ’ ಎಂದು ಸಂತಸದಿಂದ ಹೇಳುತ್ತಾರೆ ಶಂಕರನಾರಾಯಣ. ಕೂಳೆ ಕಬ್ಬಿನ ಕುರಿತ ಮಾಹಿತಿಗಾಗಿ ಶಂಕರನಾರಾಯಣ ಅವರ ಸಂಪರ್ಕಕ್ಕೆ ಮೊ:9141025394.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT