ಸೋಮವಾರ, ಮಾರ್ಚ್ 8, 2021
27 °C

ಆರ್ಥಿಕ ಭದ್ರತೆಯ ಹಂಬಲ: ಅಡಿಕೆಯತ್ತ ರೈತನ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆಕ್ಕೆಜೋಳ, ಭತ್ತ, ಅಡಿಕೆ ಪಾರಮ್ಯ: ಜೋಳ, ರಾಗಿ, ಕಬ್ಬು ವರ್ಷ ವರ್ಷವೂ ಕುಸಿತ
-ಸ್ಮಿತಾ ಶಿರೂರ

ದಾವಣಗೆರೆ: ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಈಗ ಅಡಿಕೆ, ಮೆಕ್ಕೆಜೋಳ ಹಾಗೂ ಭತ್ತದ್ದೇ ಪಾರಮ್ಯ. ರಾಗಿ ಹಾಗೂ ಜೋಳದ ಬೆಳೆ ಕ್ಷೇತ್ರಗಳ ಗಣನೀಯ ಕುಸಿತ ಕಾಣುತ್ತಿದೆ. ರಾಶಿ ಅಡಿಕೆ ಕ್ವಿಂಟಲ್‌ಗೆ ಸರಾಸರಿ 40,000ದಷ್ಟು ಧಾರಣೆ ಸ್ಥಿರವಾಗಿರುವ ಕಾರಣ ಇದರತ್ತ ಬಹುತೇಕ ರೈತರು ಆಕರ್ಷಿತರಾಗಿದ್ದಾರೆ. ಬರಗಾಲ ಪೀಡಿತ ಎಂಬ ಹಣೆಪಟ್ಟಿಯಿರುವ ಜಗಳೂರಿನಲ್ಲೂ ಅಡಿಕೆ ಕ್ಷೇತ್ರ ಹೆಚ್ಚಳವಾಗುತ್ತಿರುವುದು ಜಿಲ್ಲೆಯ ಕೃಷಿ ಕ್ಷೇತ್ರದ ಬದಲಾವಣೆಯ ದಿಕ್ಸೂಚಿಯಾಗಿದೆ.

ಜಿಲ್ಲೆಯ ಒಟ್ಟು ಭೂಪ್ರದೇಶ 4,54,573 ಹೆಕ್ಟೇರ್‌ಗಳಾಗಿದ್ದು, 2,92,492 ಹೆಕ್ಟೇರ್‌ಗಳಲ್ಲಿ ಕೃಷಿ ಕಾರ್ಯ ನಡೆಯುತ್ತಿದೆ. ಆಹಾರಧಾನ್ಯದಲ್ಲೂ ಜನತೆ ಭತ್ತಕ್ಕಿಂತಲೂ ಮೆಕ್ಕೆಜೋಳಕ್ಕೆ ಆದ್ಯತೆ ನೀಡುವುದು ಮುಂದುವರಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 13,000 ಹೆಕ್ಟೇರ್‌ಗಳಷ್ಟು ಮೆಕ್ಕೆಜೋಳ ಕ್ಷೇತ್ರ ಹೆಚ್ಚಳ ಕಂಡುಬಂದಿದೆ. ಉತ್ತಮ ಮಳೆಯಿಂದಾಗಿ ಈ ಸಾಲಿನಲ್ಲಿ ಮೆಕ್ಕೆಜೋಳಕ್ಕೆ ಹೆಚ್ಚಿನ ಇಳುವರಿಯೂ ಇದೆ. ಆದರೆ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಬೆಲೆ ಖರೀದಿ ಕೇಂದ್ರ ಆರಂಭವಾಗದ ಕಾರಣ ರೈತರು ಹಾಗೂ ಸರ್ಕಾರದ ನಡುವೆ ಜಟಾಪಟಿ ಮುಂದುವರಿದಿದೆ.

‘ದಾವಣಗೆರೆ ಜಿಲ್ಲೆಯ ಒಟ್ಟು ತೋಟಗಾರಿಕಾ ಪ್ರದೇಶ 90,614 ಹೆಕ್ಟೇರ್‌ ಇದ್ದರೆ, 65,279 ಹೆಕ್ಟೇರ್‌ಗಳಷ್ಟು ಅಡಿಕೆ ಬೆಳೆಯಲಾಗಿದೆ. ನಂತರದ ಸ್ಥಾನ 9,305 ಹೆಕ್ಟೇರ್‌ಗಳಲ್ಲಿರುವ ತೆಂಗಿನದ್ದು. ಪ್ರತಿವರ್ಷ ಅಡಿಕೆ ಕ್ಷೇತ್ರ ಹೆಚ್ಚಳವಾಗುತ್ತಿದೆ ಬಿಟ್ಟರೆ ಬೇರಾವ ಬೆಳೆ ಬಗ್ಗೆಯೂ ರೈತ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಈ ವರ್ಷ ಮಾವಿನ ಬೆಳೆ ಕ್ಷೇತ್ರವೂ ಕುಸಿತವಾಗಿದೆ’ ಎಂದು  ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೋಮ್ಮನ್ನರ ವಿವರಿಸಿದರು.

ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕುಗಳು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಗೆ ಬರುವುದರಿಂದ ತೋಟಗಾರಿಕೆ ಇಲಾಖೆಯಿಂದ ಅಡಿಕೆ ಬೆಳೆಗೆ ಪ್ರೋತ್ಸಾಹ ಹಾಗೂ ಸೌಲಭ್ಯ ದೊರಕಿದೆ. ಅಲ್ಲಿ 6 ತಿಂಗಳ ಅವಧಿಯಲ್ಲೇ 3,000 ಎಕರೆಗಳಷ್ಟು ಅಡಿಕೆ ಕ್ಷೇತ್ರ ಹೆಚ್ಚಳವಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಅಡಿಯೂ ಅಡಿಕೆ ತೋಟ ಮಾಡಲಾಗಿದೆ. ಉಳಿದೆಡೆ ಇಲಾಖೆ ಸೌಲಭ್ಯ ಇಲ್ಲದಿದ್ದರೂ ರೈತರು ಗದ್ದೆ ಕಿತ್ತು ಅಡಿಕೆ ತೋಟ ಮಾಡಲು ಮುಂದಾಗಿರುವುದು ಕಂಡು ಬಂದಿದೆ. ಕಳೆದ 3 ವರ್ಷಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ 15,000 ಹೆಕ್ಟೇರ್‌ಗಳಷ್ಟು ತೋಟಗಾರಿಕಾ ಬೆಳೆಗಳ ಕ್ಷೇತ್ರ ವಿಸ್ತರಣೆಯಾಗಿದ್ದು, ಅದರಲ್ಲಿ ಅಡಿಕೆಯೇ ಹೆಚ್ಚಿನ ಭಾಗ ಆವರಿಸಿದೆ.

***

ಸ್ಥಿರ, ಉತ್ತಮ ಧಾರಣೆಯೇ ಮುಖ್ಯ
-ಎಚ್‌.ವಿ. ನಟರಾಜ್‌
ಚನ್ನಗಿರಿ: ‘ಅಡಿಕೆ ನಾಡೆಂದು’ ಪ್ರಸಿದ್ಧಿ ಪಡೆದಿರುವ ಚನ್ನಗಿರಿ ತಾಲ್ಲೂಕಿನಲ್ಲಿ ಸದ್ಯ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಇದೆ. ರೈತರು ಇದಕ್ಕೆ ನೀಡಿದ ಪ್ರಾಮುಖ್ಯ ಬೇರೆ ಯಾವುದಕ್ಕೂ ನೀಡುತ್ತಿಲ್ಲ. ಕಾರಣ ಸ್ಥಿರ ಹಾಗೂ ಉತ್ತಮ ಧಾರಣೆ.

ಪ್ರತಿ ವರ್ಷ ತಾಲ್ಲೂಕಿನಲ್ಲಿ 4 ಸಾವಿರದಿಂದ 5 ಸಾವಿರ ಎಕರೆ ಪ್ರದೇಶದಲ್ಲಿ ಹೊಸದಾಗಿ ಅಡಿಕೆ ತೋಟಗಳನ್ನು ಮಾಡಲಾಗುತ್ತಿದೆ. 15 ವರ್ಷಗಳ ಹಿಂದೆ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಇದ್ದರೆ ಈಗ 32 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆಯಾಗಿದೆ.

ಎರಡನೇ ಪ್ರಮುಖ ಬೆಳೆ ಮೆಕ್ಕೆಜೋಳ. ಈ ಬಾರಿ ಮುಂಗಾರು ಹಂಗಾಮಿನಲ್ಲಿ 25,629 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಭತ್ತವನ್ನು 12,000 ಹೆಕ್ಟೇರ್, ಮಾವನ್ನು 2,700 ಹೆಕ್ಟೇರ್‌ಗಳಲ್ಲಿ ಬೆಳೆಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಆಹಾರ ಬೆಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿರುವುದು ಕಳವಳಕಾರಿ ಸಂಗತಿ. ಇದಕ್ಕೆ ಸಾಕ್ಷಿ ರಾಗಿ. ಪ್ರತಿ ವರ್ಷ 500 ಹೆಕ್ಟೇರ್‌ಗಳಷ್ಟು ಇದ್ದ ರಾಗಿ ಬೆಳೆ ಪ್ರದೇಶ ಈ ವರ್ಷ 50 ಹೆಕ್ಟೇರ್‌ಗೆ ಕುಸಿದಿದೆ.

‘ವರ್ಷ–ವರ್ಷವೂ ರಾಗಿ ಬೆಳೆಯಲು ಖರ್ಚು–ವೆಚ್ಚ ಹೆಚ್ಚಾಗುತ್ತಿರುವುದರಿಂದ ಯಾವ ರೈತರೂ ಇದನ್ನು ಬೆಳೆಯಲು ಮುಂದಾಗುತ್ತಿಲ್ಲ. ಅಡಿಕೆ ಬೆಳೆಗೆ ವರ್ಷಕ್ಕೊಮ್ಮೆ ಮಣ್ಣು, ಗೊಬ್ಬರ, ನೀರು ಹಾಕಿ ನಿರ್ವಹಣೆ ಮಾಡಿದರೆ ಸಾಕು. ಹೀಗಾಗಿ ಈ ಬಗ್ಗೆ ರೈತರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ’ ಎಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ಮಲ್ಲಾಡದ ಹಾಗೂ ತೋಟಗಾರಿಕೆ ಇಲಾಖೆಯ ಲೋಹಿತ್ ಕುಮಾರ್ ತಿಳಿಸಿದರು.

***

ಮೆಕ್ಕೆಜೋಳದ ಕಣಜವಾದ ಹರಪನಹಳ್ಳಿ
-ಡಿ. ವಿಶ್ವನಾಥ್‌

ಹರಪನಹಳ್ಳಿ: ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಹೊಂದಿರುವ ತಾಲ್ಲೂಕಿನಲ್ಲಿ ಮೆಕ್ಕೆಜೋಳದ ಬೆಳೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಶೇ 80ರಷ್ಟು ಭೂ ಪ್ರದೇಶ ಆವರಿಸುವ ಮೂಲಕ ‘ಬಳ್ಳಾರಿ ಜಿಲ್ಲೆಯ ಮೆಕ್ಕೆಜೋಳದ ಕಣಜ’ ಎಂಬ ಹೆಸರು ಗಳಿಸಲು ತಾಲ್ಲೂಕು ದಾಪುಗಾಲಿಟ್ಟಿದೆ.

ಬಿತ್ತನೆ ಗುರಿ 84 ಸಾವಿರ ಹೆಕ್ಟೇರ್‌ ಹೊಂದಿರುವ ತಾಲ್ಲೂಕಿನಲ್ಲಿ 64 ಸಾವಿರ ಹೆಕ್ಟೇರ್‌ ಜಮೀನಿನಲ್ಲಿ ವಾಣಿಜ್ಯ ಬೆಳೆಯಾಗಿ ಮೆಕ್ಕೆಜೋಳವನ್ನೇ ಬೆಳೆದಿದ್ದಾರೆ. 2017ರಲ್ಲಿ 58,668 ಹೆಕ್ಟೇರ್‌ ಬಿತ್ತನೆಯಾಗಿದ್ದ ಮೆಕ್ಕೆಜೋಳ 2020ಕ್ಕೆ 66,580 ಹೆಕ್ಟೇರ್‌ಗೆ ವಿಸ್ತರಣೆ ಆಗಿದೆ. ಕಳೆದ ಸಲಕ್ಕಿಂತ ಈ ಬಾರಿ ಮುಂಗಾರು ಆರಂಭದಲ್ಲಿ ಕ್ವಿಂಟಲ್‍ಗೆ ₹ 900 ಇದ್ದ ಮೆಕ್ಕೆಜೋಳದ ಬೆಲೆ ಹಿಂಗಾರಿಯಲ್ಲಿ ₹ 1,400ರ ಗಡಿ ದಾಟಿಲ್ಲ. ಹೆಚ್ಚಿನ ರೈತರು ತಮ್ಮ ಹೊಲ, ಕಣಗಳಲ್ಲಿ ಮೆಕ್ಕೆಜೋಳ ದಾಸ್ತಾನು ಮಾಡಿಕೊಂಡು, ಬೆಲೆ ಹೆಚ್ಚಳದತ್ತ ದೃಷ್ಟಿ ನೆಟ್ಟಿದ್ದಾರೆ.

ತಾಲ್ಲೂಕಿನ ತುಂಗಭದ್ರಾ ನದಿ ತೀರದಲ್ಲಿ ಭತ್ತದ ಬೆಳೆಗೆ ಒತ್ತು ಕೊಡಲಾಗಿದೆ. ಅರಸೀಕೆರೆ, ತೆಲಿಗಿ ಮತ್ತು ಕಸಬಾ ವ್ಯಾಪ್ತಿಯಲ್ಲಿ ಯಥೇಚ್ಛವಾಗಿ ಮೆಕ್ಕೆಜೋಳಕ್ಕೆ ಒತ್ತು ಕೊಡಲಾಗಿದೆ. ಕೂಲಿ ಕಾರ್ಮಿಕರ ಕೊರತೆ, ಹೆಚ್ಚಿನ ಕಾಳಜಿಯ ಕೊರತೆಯಿಂದಾಗಿ 40 ವರ್ಷಗಳ ಹಿಂದೆ ಎರೆ ಮಣ್ಣಿನಲ್ಲಿ ಬೆಳೆಯುತ್ತಿದ್ದ ಹತ್ತಿ, ತಂಬಾಕು ಸಂಪೂರ್ಣ ಕಣ್ಮರೆಯಾಗಿವೆ.

ಈರುಳ್ಳಿಗೆ ಈ ಬಾರಿ ಇಳುವರಿ ಇಲ್ಲದೇ ತಾಲ್ಲೂಕಿನ ಚಿಗಟೇರಿ ಹೋಬಳಿಯ ಬಹುತೇಕ ರೈತರು ನಷ್ಟ ಅನುಭವಿಸಿದ್ದಾರೆ. ಬೆರಳೆಣಿಕೆಯ ರೈತರು ಹೊಸ ಬೆಳೆಗೆ ಮಾರು ಹೋಗುತ್ತಿದ್ದಾರೆ. ದ್ರಾಕ್ಷಿ, ಅಂಜೂರ, ಡ್ರ್ಯಾಗನ್‍ಫ್ರುಟ್, ಕದಂಬ ವೃಕ್ಷದಂತಹ ಬೆಳೆಗಳು ಅಲ್ಲಲ್ಲಿ ಕಂಡು ಬರುತ್ತಿವೆ.

‘ಭೂಮಿಗೆ ಕಳೆ ನಾಶಕ ಸಿಂಪಡಿಸಿ, ಮಣ್ಣು ಹದಗೊಳಿಸಿ ಬಿತ್ತನೆ ಮಾಡಿದರೆ ಕಡಿಮೆ ಖರ್ಚಿನಲ್ಲಿ ಮೆಕ್ಕೆಜೋಳ ಬೆಳೆಯುತ್ತದೆ. ಇದರಿಂದ ಹೆಚ್ಚಿನ ರೈತರು ಮೆಕ್ಕೆಜೋಳಕ್ಕೆ ಮಾರು ಹೋಗುತ್ತಿದ್ದಾರೆ. ಹಳ್ಳಿ–ಹಳ್ಳಿಗಳಲ್ಲಿ ಸಂಚರಿಸಿ ಬಹು ಬೆಳೆ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸಿದರೂ ರೈತರು ಮಾತ್ರ ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಗೊಂದಿ ಮಂಜುನಾಥ್ ತಿಳಿಸಿದರು.

***

ಈರುಳ್ಳಿಯತ್ತ ನಿರಾಸಕ್ತಿ
-ಡಿ. ಶ್ರೀನಿವಾಸ್

ಜಗಳೂರು: ಜಿಲ್ಲೆಯಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ ಕಳೆದ ಮುಂಗಾರಿನಲ್ಲಿ ತಾಲ್ಲೂಕಿನಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಈರುಳ್ಳಿಗೆ ಕೊಳೆ ರೋಗ ಹರಡಿದ್ದರಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿತ್ತು. ಹೀಗಾಗಿ ಈಗ ಪರ್ಯಾಯ ಬೆಳೆಗಳತ್ತ ಮುಖ ಮಾಡಿದ್ದಾರೆ.

‘ಪ್ರತಿ ವರ್ಷ ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ ತೀವ್ರ ರೋಗ ಬಾಧೆಯಿಂದ ಸಾಕಷ್ಟು ನಷ್ಟ ಅನುಭವಿಸಿದ ರೈತರು ಎಲೆಕೋಸು, ಟೊಮೆಟೊ ಬೆಳೆಗಳತ್ತ ಆಸಕ್ತಿ ವಹಿಸಿದ್ದಾರೆ. ಪ್ರಸ್ತುತ ಹಿಂಗಾರಿನಲ್ಲಿ 500 ಹೆಕ್ಟೇರ್ ಎಲೆಕೋಸು ಹಾಗೂ 500 ಹೆಕ್ಟೇರ್ ಟೊಮೆಟೊ, ಮೆಣಸಿನಕಾಯಿ ಬೆಳೆಯಲಾಗಿದೆ. ಅಲ್ಲದೆ 100 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಅಡಿಕೆ ಹಾಕಲಾಗಿದೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷ ಈರುಳ್ಳಿ ಬೆಳೆಯುತ್ತಿದ್ದೆವು. ಆದರೆ ಈ ಬಾರಿ ಈರುಳ್ಳಿ ಬೆಳೆ ನಷ್ಟದಿಂದ ಬೇಸತ್ತು ಎಲೆಕೋಸು ಬೆಳೆದಿದ್ದೇವೆ. ಇದೂ ಅಷ್ಟಕ್ಕಷ್ಟೇ. ಯಾವ ಬೆಳೆಯೂ ಕೈ ಹಿಡಿಯುತ್ತಿಲ್ಲ’ ಎಂದು ತಾಲ್ಲೂಕಿನ ಸೂರಡ್ಡಿಹಳ್ಳಿ ಗ್ರಾಮದ ರೈತ ಜಯಪ್ಪ ನೊಂದು ನುಡಿದರು.

***

ಎಲ್ಲ ಬೆಳೆಗಳಿಗೂ ವೈಜ್ಞಾನಿಕ ಬೆಲೆ ಲಭಿಸಲಿ
-ಗಿರೀಶ್ ಎಂ. ನಾಡಿಗ್

ಸಾಸ್ವೆಹಳ್ಳಿ: ‘ವರ್ಷಕ್ಕೆ ಎರಡು ಸಲ ಭತ್ತ ಬೆಳೆಯುತ್ತೇವೆ. ಒಂದು ಎಕರೆ ಬೆಳೆಗೆ ಏನಿಲ್ಲ ಎಂದರೂ ಔಷಧ, ಕಳೆ ನಾಶಕ, ಬೀಜ, ಗೊಬ್ಬರ, ಹೊಲ ಸ್ವಚ್ಛಗೊಳಿಸಲು, ಎರಡು ಸಲ ಕಳೆ ತೆಗೆಯುವುದು, ಕಟಾವು ಸೇರಿ ₹ 10,000 ದಿಂದ ₹ 15,000 ಖರ್ಚು ಬರುತ್ತದೆ. ಸರಾಸರಿ 25 ಕ್ವಿಂಟಲ್ ಇಳುವರಿ ಸಿಗುತ್ತದೆ. ಈಗ ಭತ್ತದ ಬೆಲೆ ₹ 1,500 ಇದೆ. ಎಂದರೆ ₹ 37,500 ದೊರೆಯುತ್ತದೆ. ಖರ್ಚು ತೆಗೆದು ಬೆಳೆಗೆ ₹ 20 ಸಾವಿರ ಉಳಿಸಿದರೆ ಹೆಚ್ಚು. ವಾರ್ಷಿಕ ₹ 40 ಸಾವಿರ ಆದಾಯ ಗಳಿಸಬಹುದು. ಆದರೆ ಅಡಿಕೆ ಬೆಳೆಯಲ್ಲಿ ವಾರ್ಷಿಕ ₹ 2 ಲಕ್ಷಕ್ಕೂ ಹೆಚ್ಚು ಲಾಭ ಸಿಗುತ್ತದೆ’ ಎನ್ನುತ್ತಾರೆ ಹೊಸದಾಗಿ ಅಡಿಕೆ ನಾಟಿ ಮಾಡಲು ಸಿದ್ಧತೆ ಮಾಡಿಕೊಂಡಿರುವ ಹನುಮನಹಳ್ಳಿಯ ರೈತ ಬಸವರಾಜಪ್ಪ.

‘ಒಂದು ಎಕರೆ ಅಡಿಕೆ ತೋಟದಲ್ಲಿ 6 ರಿಂದ 10 ಕ್ವಿಂಟಲ್‌ವರೆಗೆ ಅಡಿಕೆ ಫಸಲು ಸಿಗುತ್ತದೆ. ವಾರ್ಷಿಕ ಅಡಿಕೆಗೆ ಒಂದು ಬಾರಿ ದನದ ಗೊಬ್ಬರ, ಎರಡು ಬಾರಿ ರಾಸಾಯನಿಕ ಗೊಬ್ಬರ, ಕಳೆ ನಾಶಕ ಸಿಂಪರಣೆ, ಹೊಲದ ಸ್ವಚ್ಛತೆಗೆ ಸರಾಸರಿ ₹ 20,000 ದಿಂದ ₹ 30,000 ಖರ್ಚು ಮಾಡುತ್ತೇವೆ. ಕಡಿಮೆ ಎಂದರೆ 6 ಕ್ವಿಂಟಲ್‌ ಅಡಿಕೆ ಸಿಕ್ಕರೂ ಈಗಿನ ಧಾರಣೆಯಂತೆ ₹ 2.5 ಲಕ್ಷ ಹಣ ಸಿಗುತ್ತದೆ. ಕೆಲಸ ಮತ್ತು ಖರ್ಚು ಕಡಿಮೆ. ಆದಾಯ ಹೆಚ್ಚು. ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುತ್ತದೆ’ ಎನ್ನುತ್ತಾರೆ ಅಡಿಕೆ ಬೆಳೆಗಾರ ಕ್ಯಾಸಿನಕೆರೆಯ ಹಾಲೇಶಾಚಾರ್.

‘ಅಡಿಕೆಗೆ ಸಿಗುವಂತೆ ಭತ್ತ, ಮೆಕ್ಕೆಜೋಳ, ಜೋಳ, ಹತ್ತಿ, ಶೇಂಗಾ, ಸೂರ್ಯಕಾಂತಿ, ರಾಗಿ ಹಾಗೂ ಇನ್ನಿತರ ಬೆಳೆಗಳಿಗೂ ವೈಜ್ಞಾನಿಕ ಬೆಲೆಯನ್ನು ಸರ್ಕಾರ ನಿಗದಿಗೊಳಿಸಿ, ಆಯಾ ಭಾಗಗಳಿಗೆ ಒಗ್ಗುವ ಬೆಳೆ ಬೆಳೆಯುವಂತೆ ಪ್ರೋತ್ಸಾಹ ನೀಡಿದರೆ ಬೆಳೆ ಅಸಮತೋಲನ ನೀಗಿಸಬಹುದು’ ಎನ್ನುತ್ತಾರೆ ಸಾಸ್ವೆಹಳ್ಳಿಯ ಸಾಹಿತಿ ಕೆ.ಪಿ. ದೇವೇಂದ್ರಯ್ಯ.

****

ಕಾರ್ಮಿಕರ ಕೊರತೆಯೇ ಕಾರಣ
‘ಮೆಕ್ಕೆಜೋಳ ಸುಲಭವಾಗಿ ಬೆಳೆಯುವ ಬೆಳೆ. ಅದಕ್ಕೆ ಯಂತ್ರೋಪಕರಣ ಲಭ್ಯತೆಯೂ ಇದೆ. ಕಾರ್ಮಿಕರೂ ಕಡಿಮೆ ಸಾಕು. ಹೀಗಾಗಿ ಸದ್ಯ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಇಲ್ಲದಿದ್ದರೂ ಭವಿಷ್ಯದಲ್ಲೂ ಆ ಬೆಳೆ ಕ್ಷೇತ್ರ ಕಡಿಮೆಯಾಗುವ ಸಾಧ್ಯತೆ ಇಲ್ಲ. ಕಾರ್ಮಿಕರ ಕೊರತೆಯಿಂದಾಗಿ ರಾಗಿ, ಜೋಳ ಬೆಳೆಯ ಕ್ಷೇತ್ರ ಕಡಿಮೆಯಾಗುತ್ತಿದೆ. ಕಾಳು ಬಿಡಿಸಲು ಹೆಚ್ಚಿನ ಯಂತ್ರೋಪಕರಣಗಳೂ ಲಭ್ಯವಿಲ್ಲ. ಅದು ಹೆಚ್ಚು ಶ್ರಮ ಬೇಡುವ ಬೆಳೆಯಾಗಿರುವುದರಿಂದ 2,500ರಿಂದ 3,000ದವರೆಗೂ ಬೆಂಬಲ ಬೆಲೆ ಇದ್ದರೂ, ಬೆಳೆಯಲು ರೈತರು ಮುಂದಾಗುತ್ತಿಲ್ಲ.
–ಶ್ರೀನಿವಾಸ ಚಿಂತಾಲ್‌, ಜಂಟಿ ನಿರ್ದೇಶಕ, ಕೃಷಿ ಇಲಾಖೆ

*

‘ಆಹಾರ ಭದ್ರತೆ’ಗೆ ಅಪಾಯ
ಯಾವುದೇ ಬೆಳೆಯ ಬೆಲೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾದಾಗ ಸಹಜವಾಗಿ ರೈತರು ಅದರತ್ತ ಆಕರ್ಷಿತರಾಗುತ್ತಾರೆ. ಉದ್ಯೋಗ ಖಾತ್ರಿ ಅಡಿಯೂ ಸರ್ಕಾರವೇ ಅಡಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ ಅಡಿಕೆ ಕ್ಷೇತ್ರ ಅಸಹಜ ರೀತಿಯಲ್ಲಿ ಬೆಳೆಯುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ದಾವಣಗೆರೆ ಜಿಲ್ಲೆಯ ‘ಆಹಾರ ಭದ್ರತೆ’ಗೆ ಈಗ ಅಪಾಯ ಒದಗಿದೆ.

ಹಿಂದೆ ಭತ್ತದ ಬೆಲೆ ಹೆಚ್ಚಳವಾದಾಗ ತೆಂಗಿನ ತೋಟ ತೆಗೆದು ಭತ್ತ ಹಾಕಿದ್ದನ್ನು ಕಂಡಿದ್ದೇವೆ. ಹೀಗಾಗಿ ಸರ್ಕಾರ ಈ ಬಗ್ಗೆ ಆಲೋಚನೆ ಮಾಡಬೇಕು. ಎಲ್ಲ ಬೆಳೆಗಳಿಗೂ ಯೋಗ್ಯ ಬೆಲೆ ದೊರಕಿಸಲು ಕ್ರಮ ಕೈಗೊಳ್ಳಬೇಕು. ಇಲ್ಲಿಯ ಮಣ್ಣು, ನೀರಿನ ಲಭ್ಯತೆ ಹಾಗೂ ಹವಾಮಾನ ಆಧಾರವಾಗಿರಿಸಿಕೊಂಡು ‘ಬೆಳೆ ಯೋಜನೆ (ಕ್ರಾಪ್‌ ಪ್ರಾಜೆಕ್ಟ್‌) ರೂಪಿಸಬೇಕು. ಕೃಷಿ ಕ್ಷೇತ್ರಕ್ಕೂ ಕ್ರಿಯಾ ಯೋಜನೆ ಬರಬೇಕು. ರೈತ ಬೆಳೆದ ಪ್ರತಿ ಬೆಳೆಗೆ ಖರೀದಿ ಖಾತ್ರಿ ಒದಗಿಸಬೇಕು. ಆಗ ಪರ್ಯಾಯ ಬೆಳೆಯತ್ತ ರೈತ ಹೋಗುವುದಿಲ್ಲ.
–ತೇಜಸ್ವಿ ಪಟೇಲ್‌, ರೈತ ಮುಖಂಡರು, ಜಿಲ್ಲಾ ಪಂಚಾಯಿತಿ ಸದಸ್ಯ

*

‘ಬೆಳೆ ನೀತಿ’, ‘ಬೆಲೆ ನೀತಿ’, ‘ಆರ್ಥಿಕ ನೀತಿ’ ಬೇಕು
1975ರಿಂದ 90ರವರೆಗೆ ದಾವಣಗೆರೆ ಜಿಲ್ಲೆಯಲ್ಲಿ ಶೇ 35ರಷ್ಟು ಹತ್ತಿ ಬೆಳೆ ಇತ್ತು. ಈಗ ಅದು ನಾಮಾವಶೇಷವಾಗಿದೆ. ನಂತರ ಮೆಕ್ಕೆಜೋಳ, ಕಬ್ಬು ಬಂದವು. ಮೆಕ್ಕೆಜೋಳ ಹಚ್ಚಳವಾದರೆ ಸಮಸ್ಯೆ ಇಲ್ಲ. ಅದರೊಂದಿಗೆ ತೊಗರಿಯನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಅದರ ಉಪ ಉತ್ಪನ್ನಗಳು ಹಲವು ಇವೆ. ಆದರೆ ಜನ ಅಡಿಕೆಯತ್ತ ಜಾರುತ್ತಿದ್ದಾರೆ. ಅದು ಅಹಾರಧಾನ್ಯ ಅಲ್ಲ. ಈಗ ಯಾರು ಬೇಕಾದರೂ ಭೂಮಿ ಕೊಳ್ಳಬಹುದು ಎಂಬ ಕಾಯ್ದೆ ಬಂದಿರುವುದರಿಂದ ಶ್ರೀಮಂತರು ಕೂಡ ಅಡಿಕೆಯ ಮೇಲೆ ಬಂಡವಾಳ ಹೂಡುವ ಸಾಧ್ಯತೆಗಳಿವೆ.

ಅಡಿಕೆಗೆ ನೀರು ಹೆಚ್ಚು ಬೇಕಾದ ಕಾರಣ ಇದರ ಕ್ಷೇತ್ರ ಹೆಚ್ಚಳವಾದಂತೆ ಬೋರ್‌ ಕೊರೆಸುವಿಕೆ, ನಾಲೆಗಳಿಂದ ನೀರಿನ ಕಳವು ಮುಂತಾದ ಜಲ ಮಾಫಿಯಾ ಶುರುವಾಗುತ್ತದೆ. ಸರ್ಕಾರ ಸೂಕ್ತ ಬೆಳೆ ನೀತಿ, ಬೆಲೆ ನೀತಿ ಹಾಗೂ ಆರ್ಥಿಕ ನೀತಿ ರೂಪಿಸಬೇಕು. ರೈತರಿಗೆ ಆರ್ಥಿಕ ಭದ್ರತೆ ಒದಗಿಸಬೇಕು. ಈ ಮಣ್ಣಿನಲ್ಲಿ ಇದೇ ಬೆಳೆ ಬೆಳೆಯಿರಿ ಎಂದು ತಜ್ಞರಿಂದ ಮಾರ್ಗದರ್ಶನ ಕೊಡಿಸಬೇಕು.
– ಬಲ್ಲೂರು ರವಿಕುಮಾರ್‌, ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು