ಶುಕ್ರವಾರ, ಡಿಸೆಂಬರ್ 13, 2019
26 °C
ಎಚ್‌.ಡಿ.ದೇವೇಗೌಡ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಕಮಲಮ್ಮ

ಕೃಷಿ ಪ್ರಯೋಗಗಳ ಅಂಗಳ: ಕ್ಯಾಪ್ಸಿಕಂ ಕಮಲಮ್ಮ ಜಮೀನು

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ಮಾಯಗಾನಹಳ್ಳಿ ಕಮಲಮ್ಮ ಅವರ ಹತ್ತು ಎಕರೆ ಕೃಷಿ ಭೂಮಿಯಲ್ಲಿ ವೈವಿಧ್ಯಮಯ ಬೆಳೆಗಳ ಜತೆಗೆ, ರೇಷ್ಮೆಹುಳು ಸಾಕಣೆ, ಪಶು ಸಂಗೋಪನೆಯಂತಹ ಪೂರಕ ಚಟುವಟಿಕೆಗಳೂ ಇವೆ.

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ, ಬೆಂಗಳೂರಿನಿಂದ ರಾಮನಗರ ತಲುಪುವುದಕ್ಕೆ 8 ಕಿ.ಮೀಗೆ ಮುನ್ನ ಬಲಭಾಗದಲ್ಲಿರುವ ಊರು ಮಾಯಗಾನಹಳ್ಳಿ. ಮುಖ್ಯರಸ್ತೆಯಿಂದ ಅರ್ಧ ಕಿ.ಮೀ ಕ್ರಮಿಸಿದರೆ ಊರು ಒಳಕ್ಕೆ ಹೋಗುತ್ತೀರಿ. ಆ ಊರಿನ ಕಟ್ಟಕಡೆಯ ತುದಿಯಲ್ಲಿರುವುದೇ ಕಮಲಮ್ಮ ಅವರ ಹತ್ತು ಎಕರೆಯ ಹೊಲ.

ಹೊಲದ ಒಂದು ಭಾಗದಲ್ಲಿ 20 ಗುಂಟೆಯಲ್ಲಿ ಪಾಲಿಹೌಸ್‌ ಇದೆ. ಅದರಲ್ಲಿ ದಪ್ಪ ಮೆಣಸಿನಕಾಯಿ ಬೆಳೆಯುತ್ತಾರೆ. ಇನ್ನೊಂದು ಬದಿಯಲ್ಲಿ 160 ಮಾವಿನ ಮರಗಳಿವೆ. ಎಲ್ಲ ತಂದೆಯ ಕಾಲದ್ದು. ಜತೆಗೆ ಹಲಸು, ಹುಣಸೆ, ಸೀತಾಫಲ ಮರಗಳಿವೆ. ರೇಷ್ಮೆ ಕೃಷಿಗಾಗಿ ಹಿಪ್ಪುನೇರಳೆ ಬೆಳೆದಿದ್ದಾರೆ. 60 ತೆಂಗಿನ ಮರಗಳಿವೆ. ಉಳಿದ ಜಾಗದಲ್ಲಿ ಅಲಸಂದೆ, ತೊಗರಿ ಇದೆ. ಎರಡು ಎಕರೆಯಲ್ಲಿ ನವಣೆ, ಸಾಮೆ ಸಿರಿಧಾನ್ಯಗಳಿವೆ. ಫಸಲು ಕೊಯ್ಲಿಗೆ ಬಂದಿದೆ.

ಬೆಳೆಗಳ ಪರಾಗಸ್ಪರ್ಶಕ್ಕೆ ಅನುಕೂಲವಾಗುವಂತೆ ಜೇನುಪೆಟ್ಟಿಗೆಯನ್ನೂ ಇಟ್ಟಿದ್ದಾರೆ ಒಟ್ಟಾರೆ, 10 ಎಕರೆ ಹೊಲವನ್ನು ಬೆಳೆಗೆ ಅನುಗುಣವಾಗಿ ವಿಭಾಗಿಸಿದ್ದಾರೆ. ‘ಸೀತಾಫಲದ ಮಾರಾಟದಿಂದಲೇ ವರ್ಷಕ್ಕೆ ₹30 ಸಾವಿರದಿಂದ ₹50 ಸಾವಿರದವರೆಗೆ ಆದಾಯ ಸಿಗುತ್ತಿದೆ’ ಎಂದು ಲೆಕ್ಕಾಚಾರ ಕೊಡುತ್ತಾರೆ ಕಮಲಮ್ಮ.

ಸಾವಯವ ಪದ್ಧತಿ ಅಳವಡಿಕೆ

ಪಾಲಿಹೌಸ್‌ನಲ್ಲಿ ಬೆಳೆಯುವ ದಪ್ಪ ಮೆಣಸಿನ ಕಾಯಿ ಹೊರತುಪಡಿಸಿ, ಜಮೀನಿನ ಉಳಿದ ಭಾಗದಲ್ಲಿರುವ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ. ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ ಪೂರೈಕೆ. ಕೀಟಗಳ ನಿಯಂತ್ರಣಕ್ಕೆ ಬೇವಿನೆಣ್ಣೆಯ ಔಷದೋಪಚಾರ. ಹಾಲು ಮತ್ತು ಗೊಬ್ಬರಕ್ಕಾಗಿಯೇ ಮೂರ್ನಾಲ್ಕು ಹಸುಗಳನ್ನು ಸಾಕಿದ್ದಾರೆ. ಹೀಗಾಗಿ, ಹೊಲಕ್ಕೆ ಬೇಕಾಗುವಷ್ಟು ಗೊಬ್ಬರ ಇಲ್ಲಿಯೇ ಲಭ್ಯ.

ಕೃಷಿ ಮತ್ತು ನರೇಗಾ ಯೋಜನೆಯ ಅಡಿ ಎರೆ ಹುಳುವಿನ ಗೊಬ್ಬರದ ತೊಟ್ಟಿಗಳನ್ನು ಮಾಡಿಸಿದ್ದಾರೆ. ಜತೆಗೆ, ಜೀವಾಮೃತ ವನ್ನೂ ತಯಾರಿಸಿಕೊಳ್ಳುತ್ತಾರೆ. ಹೊಲದ ಒಂದು ಬದಿಯಲ್ಲಿರುವ ತೊಟ್ಟಿಯಲ್ಲಿ ಅಜೋಲಾ ಬೆಳೆಸುತ್ತಾರೆ. ಇದು ಜಾನುವಾರುಗಳಿಗೆ ಮೇವಾಗುತ್ತದೆ. ಜತೆಗೆ, ಕೋಳಿಗಳಿಗೂ ಆಹಾರವಾಗುತ್ತದೆ. ಈಚೆಗಷ್ಟೇ ಮದರ್‌ ಇಂಡಿಯಾ ಫಾರ್ಮ್‌ನಿಂದ ಸಾವಯವ ಕೃಷಿಯ ಧೃಢೀಕರಣ ಪ್ರಮಾಣಪತ್ರವೂ ದೊರೆತಿದೆ.

ರೇಷ್ಮೆಹುಳು, ಕೋಳಿ ಸಾಕಣೆ

ಇದೇ ಯೋಜನೆಯ ಅಡಿ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಿಸಿಕೊಂಡಿದ್ದಾರೆ. ಒಮ್ಮೆಗೆ 100 ಮೊಟ್ಟೆಯಂತೆ ಹುಳು ಸಾಕಣೆ ಮಾಡುತ್ತಾರೆ. ಮೂರ್ನಾಲ್ಕು ಎಕರೆಯಲ್ಲಿ ಹುಳು ಮೇಯಲು ಬೇಕಾದ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಿದ್ದಾರೆ. ಇದಕ್ಕೆ ತುಂತುರು ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ರೇಷ್ಮೆ ಇಲಾಖೆಯ ಕೆಲವು ಪ್ರಯೋಗಾತ್ಮಕ ತಳಿಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ. ಮರಗಡ್ಡಿ ತಳಿಯ ಗಿಡಗಳನ್ನು ನೆಡಲಾಗಿದೆ. ಜಿ–4 ತಳಿಯ ಮಂದ ಎಲೆಯ ತಳಿಗಳನ್ನೂ ಬೆಳೆಯುತ್ತಿದ್ದಾರೆ. ಹೆಚ್ಚು ಅಂತರಬಿಟ್ಟು ಗಿಡಗಳನ್ನು ಬೆಳೆಸುತ್ತಿರುವುದು ವಿಶೇಷ.

ಕೃಷಿಯಿಂದ ಸಾಕಷ್ಟು ಆದಾಯ ಇದ್ದರೂ ಉಪ ಕಸುಬುಗಳನ್ನು ಕಮಲಮ್ಮ ನಿರ್ಲಕ್ಷ್ಯ ಮಾಡಿಲ್ಲ. ಹೀಗಾಗಿ, ಹೊಲದಲ್ಲಿ ಬೆಳೆ, ಹಸು, ಎತ್ತುಗಳ ಜತೆಗೆ ನಾಟಿ ಕೋಳಿಗಳೂ ಇವೆ. ಹೆಸರುಘಟ್ಟದ ಕುಕ್ಕುಟ ಅಭಿವೃದ್ಧಿ ಕೇಂದ್ರದಿಂದ ನಾಲ್ಕು ತಿಂಗಳ ಹಿಂದೆ ನಾಟಿ ಕೋಳಿ ಮರಿಗಳನ್ನು ತಂದು ಸಾಕಿದ್ದರು. ಈಗಾಗಲೇ ಅರ್ಧದಷ್ಟು ಮಾರಾಟವಾಗಿವೆ. ಹುಂಜ 2 ಕೆ.ಜಿ.ಯಷ್ಟು ತೂಗಿದರೆ, ಕೋಳಿ ಒಂದೂವರೆ ಕೆ.ಜಿ.ಯಷ್ಟು ತೂಗುತ್ತದೆ. ಪ್ರತಿ ಕೆ.ಜಿ.ಗೆ ₹300ರಂತೆ ಮಾರಾಟ ಮಾಡುತ್ತಿದ್ದಾರೆ. ಮನೆ ಬಾಗಿಲಿಗೆ ಬಂದು ಕೊಂಡೊಯ್ಯುತ್ತಿದ್ದಾರೆ.

ಮಿತ ನೀರು ಬಳಕೆಗೆ ಆದ್ಯತೆ

ಪ್ರತಿ ಬೆಳೆಗೂ ಅಗತ್ಯಕ್ಕೆ ತಕ್ಕಷ್ಟೇ ನೀರು ಪೂರೈಕೆ. ನೀರಾವರಿಗಾಗಿ ಮೂರು ಕೊಳವೆಬಾವಿಗಳಿವೆ. ಎಲ್ಲವುದರಲ್ಲೂ ನೀರಿದೆ. ಆದರೆ, ಕೃಷಿಗಾಗಿ ಒಂದು ಕೊಳವೆಬಾವಿ ನೀರನ್ನು ಬಳಸುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಮಾಡಿಸಿದ್ದರು. ಅದು ಪಾಲಿಹೌಸ್ ಸಮೀಪದಲ್ಲೇ ಇದೆ. ಪಾಲಿಹೌಸ್‌ ಮೇಲೆ ಸುರಿದ ಮಳೆ ನೀರು ಪೈಪ್‌ಗಳ ಮೂಲಕ ಈ ಹೊಂಡ ಸೇರುವಂತೆ ಮಾಡಿದ್ದಾರೆ. ಹೀಗಾಗಿ ವರ್ಷದಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಹೊಂಡ ಭರ್ತಿಯಾಗಿರುತ್ತದೆ. ಇದೇ ನೀರನ್ನು ಪಾಲಿಹೌಸ್‌ನಲ್ಲಿರುವ ಕ್ಯಾಪ್ಸಿಕಂ ಬೆಳೆಸಲು ಬಳಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಹೊಂಡದ ನೀರಿನಲ್ಲಿ ಮೀನು ಸಾಕಣೆ ಮಾಡುತ್ತಾರೆ. ‘ಎಲ್ಲ ಬೆಳೆಗೂ ಡ್ರಿಪ್‌, ತುಂತುರು ನೀರಾವರಿ ಅಳವಡಿಸಿದ್ದೇವೆ. ಅಗತ್ಯವಿದ್ದಾಗಷ್ಟೇ ಸ್ಪ್ರಿಂಕ್ಲರ್‌ ಬಳಕೆ ಮಾಡುತ್ತೇವೆ’ ಎನ್ನುತ್ತಾರೆ ಕಮಲಮ್ಮ.

‌ಅನಿವಾರ್ಯಕ್ಕೆ ಕಾರ್ಮಿಕರ ಬಳಕೆ

ನಾಗರಾಜಯ್ಯ, ಕಮಲಮ್ಮ, ಜಯಲಕ್ಷ್ಮಿ ದಂಪತಿಗೆ ನಾಲ್ವರು ಮಕ್ಕಳು. ಅವರಲ್ಲಿ ಮೂವರು ಎಂಜಿನಿಯರ್‌ಗಳು. ಅವರೂ ಆಗಾಗ್ಗೆ ತೋಟಕ್ಕೆ ಬಂದು, ಕೃಷಿ ಚಟುವಟಿಕೆಗಳಲ್ಲಿ ನೆರವಾಗುತ್ತಿದ್ದಾರೆ. ಹೀಗೆ ಕುಟುಂಬದವರೆಲ್ಲರ ಭಾಗವಹಿಸುವಿಕೆಯಿಂದಾಗಿ ಕಾರ್ಮಿಕರಿಗೆ ನೀಡಬೇಕಾದ ಬಹುಪಾಲು ಕೂಲಿ ಉಳಿಯುತ್ತಿದೆ. ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಹೊರಗಿನಿಂದ ಕಾರ್ಮಿಕರನ್ನು ಕರೆತರುತ್ತಾರೆ. ಬ್ಯಾಂಕ್‌ ಸಾಲದ ಮೂಲಕ ಟ್ರ್ಯಾಕ್ಟರ್‌, ಟಿಲ್ಲರ್‌ ಮೊದಲಾದ ವಾಹನಗಳನ್ನು ಖರೀದಿ ಮಾಡಿ ಬಳಸುತ್ತಿದ್ದಾರೆ.

ಇಂಥ ವೈವಿಧ್ಯಮಯ ಕೃಷಿ ತಾಕಿನಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಾಕಷ್ಟು ಪ್ರಾಯೋಗಿಕ ತಳಿಗಳು ಇಲ್ಲಿ ಬೆಳೆಯುತ್ತಿವೆ. ಹೀಗಾಗಿ, ಈ ಹೊಲ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಪಾಲಿಗೆ ಪ್ರಾತ್ಯಕ್ಷಿಕೆಯ ಕ್ಷೇತ್ರವಾಗಿದೆ.

ಕಮಲಮ್ಮ ಅವರ ಕೃಷಿ ಚಟುವಟಿಕೆಗಳ ಕುರಿತ ಮಾಹಿತಿಗಾಗಿ ಸಂಪರ್ಕ ಸಂಖ್ಯೆ 9686044629.

ಪ್ರಧಾನಿಯೊಂದಿಗೆ ಮಾತಾಡಿದವರು..

ಕಮಲಮ್ಮ ಕಳೆದ ವರ್ಷ ಕೃಷಿ ವಿಜ್ಞಾನ ಕೇಂದ್ರದ ಕ್ಯಾಂಪಸ್‌ನಲ್ಲಿ ನಡೆದ ವಿಡಿಯೊ ಕಾನ್ಫರನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಟ್ಟಿಗೆ ಕನ್ನಡದಲ್ಲಿ ಮಾತನಾಡಿ ಸುದ್ದಿಯಾಗಿದ್ದರು. ಎಸ್‌ಎಸ್‌ಎಲ್‌ಸಿವರೆಗೆ ಓದಿರುವ ಅವರೀಗ ಹಲವು ಕೃಷಿ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ಯಿಯಾಗಿದ್ದಾರೆ.

ಕ್ಯಾಪ್ಸಿಕಂ ಕಮಲಮ್ಮ

ಕಮಲಮ್ಮ ಅವರು ನಾಲ್ಕು ವರ್ಷಗಳ ಹಿಂದೆ ಪಾಲಿಹೌಸ್‌ ಮಾಡಿಕೊಂಡು, ಅದರೊಳಗೆ ಕ್ಯಾಪ್ಸಿಕಂ ಬೆಳೆಸಿದರು. ಆರಂಭದಿಂದಲೂ ಖಾಸಗಿ ಕಂಪನಿ ಜತೆ ಒಪ್ಪಂದ ಮಾಡಿಕೊಂಡು ಫಸಲು ಬೆಳೆದು, ಅದೇ ಕಂಪನಿಗೆ ಮಾರುತ್ತಿದ್ದರು. ಇದು ಅಷ್ಟು ಲಾಭದಾಯಕವಲ್ಲ ಎನ್ನಿಸಿದ ಕಾರಣಕ್ಕೆ ಕಮಲಮ್ಮ ಕಳೆದ ವರ್ಷದಿಂದ ಇಸ್ರೇಲ್‌ನಿಂದ ಬೀಜ ತರಿಸಿ ಸಸಿಮಡಿ ಮಾಡಿ, ಸಕಾಲಕ್ಕೆ ನಾಟಿ ಮಾಡಿ ಬೆಳೆ ತೆಗೆಯುತ್ತಿದ್ದಾರೆ. ಈಗ ತಮಗೆ ಬೇಕಾದವರಿಗೆ ಯೋಗ್ಯ ಬೆಲೆಯಲ್ಲಿ ಫಸಲನ್ನು ಮಾರಾಟ ಮಾಡಲು ಸಾಧ್ಯವಾಗಿದೆ. ಕಳೆದ ವರ್ಷ ಇವರ ಹೊಲದ ತರಕಾರಿ ಇಸ್ರೇಲ್‌, ಮಾಲ್ದೀವ್ಸ್‌ ಮತ್ತಿತರರ ದೇಶಗಳನ್ನು ಸುತ್ತಾಡಿದೆ. ಹೀಗಾಗಿ, ಇವರಿಗೆ ‘ಕ್ಯಾಪ್ಸಿಕಂ ಕಮಲಮ್ಮ’ ಎಂದೇ ಕರೆಯುತ್ತಾರೆ ಜನ.

ಇದನ್ನೂ ಓದಿ: ಮಿಶ್ರ ಬೆಳೆ ಪದ್ಧತಿ: ಕೃಷಿಯಲ್ಲಿ ಸಂತೃಪ್ತಿ ಕಂಡುಕೊಂಡ ವೈದ್ಯ

ಪ್ರತಿ ವರ್ಷ ನವೆಂಬರ್‌ ಆರಂಭದಲ್ಲಿ ಮೆಣಸಿಕಾಯಿ ಸಸಿ ನಾಟಿ ಮಾಡುತ್ತಾರೆ. ಮೂರು ತಿಂಗಳಿಗೆ ಕಾಯಿ ಶುರುವಾಗುತ್ತದೆ. ಮುಂದೆ ಆರು ತಿಂಗಳವರೆಗೂ ನಿರಂತರ ಫಸಲು ಸಿಗುತ್ತದೆ. ವಾರಕ್ಕೆ ಸುಮಾರು 1 ಟನ್‌ನಷ್ಟು ಕಾಯಿ ಬಿಡುತ್ತದೆ. ಹಸಿರು, ಕೆಂಪು ಹಾಗೂ ಹಳದಿ ಬಣ್ಣದ ದಪ್ಪ ಮೆಣಸಿನಕಾಯಿ ಬೆಳೆಯತ್ತಾರೆ. ಪ್ರತಿ ಕೆ.ಜಿ.ಗೆ ಸರಾಸರಿ ₹ 100 ರಿಂದ ₹120ರವರೆಗೂ ಬೆಲೆ ಸಿಗುತ್ತಿದೆ. ‘ಪಾಲಿಹೌಸ್ ನಿರ್ಮಾಣಕ್ಕೆ ಸಹಾಯಧನದ ಜತೆಗೆ ಬ್ಯಾಂಕಿನಿಂದ ಸುಮಾರು ₹ 18 ಲಕ್ಷ ಸಾಲ ಪಡೆದಿದ್ದೆ. ಅದನ್ನು ಮೊದಲ ವರ್ಷದ ಬೆಳೆಯಲ್ಲಿಯೇ ತೀರಿಸಿದೆವು’ ಎನ್ನುವ ಕಮಲಮ್ಮ, ’ಸಮರ್ಪಕ ನಿರ್ವಹಣೆಯಿಂದ ಉತ್ತಮ ಲಾಭ ಪಡೆಯಬಹುದು’ ಎಂದು ಅಭಿಪ್ರಾಯಪಡುತ್ತಾರೆ.

ಪ್ರತಿಕ್ರಿಯಿಸಿ (+)