ಮುಂಗಾರು ಹಂಗಾಮಿಗೆ ಬೀಜ, ಗೊಬ್ಬರ ಸಿದ್ಧ

ಕಲಬುರಗಿ: ಪ್ರಸಕ್ತ ಮುಂಗಾರು ವಾಡಿಕೆಗಿಂತ ಮುಂಚಿತವಾಗಿಯೇ ಬರಲಿರುವ ಕಾರಣ, ಕೃಷಿ ಇಲಾಖೆ ತುಸು ಮುಂಚಿತವಾಗಿಯೇ ಹಂಗಾಮು ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ ರೈತರಿಗೆ ಬೇಕಾಗುವಷ್ಟು ಬಿತ್ತನೆಬೀಜ ಹಾಗೂ ರಸಗೊಬ್ಬರ ಸಂಗ್ರಹಿಸಿದ್ದು, ಶೇ 40ರಷ್ಟು ಮಾಲು ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಗೆ ರವಾನೆಯಾಗಿದೆ.
ಪ್ರತಿಬಾರಿ ಜೂನ್ 7ಕ್ಕೆ ಮುಂಗಾರು ಪ್ರವೇಶ ಮಾಡುತ್ತದೆ. ಆದರೆ, ಈ ಬಾರಿ ಜೂನ್ 3ರಂದೇ ಮೃಗಶಿರ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ, ಪೂರ್ವ ಮುಂಗಾರಿನಲ್ಲಿ ಕೂಡ 40 ಮಿ.ಮೀ ಮಳೆ ಬಿದ್ದಿದೆ. ಇದರಿಂದ ಹೊಲದಲ್ಲಿ ಮಣ್ಣಿನ ಹೆಂಟೆಗಳ ಹಸಿಯಾಗಿದ್ದು, ಗಳೆ ಹೂಡಲು ರೈತರು ಸನ್ನದ್ಧರಾಗಿದ್ದಾರೆ. ಸುಮಾರು 80ರಿಂದ 100 ಮಿ.ಮೀ ಮಳೆ ಬಿದ್ದರೆ ನೆಲ ಹದವಾಗುತ್ತದೆ. ಆಗ ಬಿತ್ತನೆ ಶುರು ಮಾಡಬಹುದು. ರೈತರಿಗೆ ಯಾವುದೇ ಕೊರತೆ ಆಗದಂತೆ ಮುಂಚೆಯೇ ಎಲ್ಲ ಅಗತ್ಯಗಳನ್ನು ಪೂರೈಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗೂರ ‘ಪ್ರಜಾವಾಣಿ’ಗೆ ಮಾಹಿತಿ
ನೀಡಿದರು.
ಒಟ್ಟು ಬಿತ್ತನೆ ಗುರಿ: ಈ ಬಾರಿ 7.85 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 5.30 ಲಕ್ಷ ಹೆಕ್ಟೇರ್ ತೊಗರಿಗೆ ಬಿತ್ತನೆಯಾಗುವ ಸಾಧ್ಯತೆ ಇದ್ದರೆ, ಉಳಿದ ಪ್ರದೇಶದಲ್ಲಿ ಸೋಯಾಬಿನ್, ತೊಗರಿ, ಉದ್ದು, ಕಡಲೆ ಬೆಳೆಯಲಾಗುವುದು.
ಇಲ್ಲಿನ ಜೇವರ್ಗಿ ಹೆದ್ದಾರಿಗೆ ಹೊಂದಿಕೊಂಡಿರುವ ಕರ್ನಾಟಕ ರಾಜ್ಯ ಬೀಜ ನಿಗಮದ ಉಗ್ರಾಣದಲ್ಲಿ ಈಗ ಭರದ ಕೆಲಸ ನಡೆದಿವೆ. ತೊಗರಿ, ಹೆಸರು, ಉದ್ದು, ಕಡಲೆ, ಸೋಯಾಬಿನ್ ಸೇರಿದಂತೆ ಮುಂಗಾರು ಬಿತ್ತನೆಗೆ ಬೇಕಾದ ಬೀಜಗಳನ್ನು ಸಿದ್ಧಪಡಿಸಲಾಗುತ್ತಿದೆ. ಕಚ್ಚಾ ಕಾಳುಗಳನ್ನು ಯಂತ್ರದ ಮೂಲಕ ಸಂಸ್ಕರಿಸುವುದು, ಪ್ರತಿ ಕೈಚೀಲದಲ್ಲಿ ಬೀಜ ತುಂಬುವುದು, ಯಂತ್ರದ ಮೂಲಕವೇ ಅದನ್ನು ಸೀಲ್ ಮಾಡುವುದು, ಬ್ರ್ಯಾಂಡ್ ಲೇಬಲ್ ಅಂಟಿಸುವುದು, ಹುಳಗಳು ಬೀಳದಂತೆ ಮಾತ್ರೆಗಳನ್ನು ಹಾಕುವುದು... ಹೀಗೆ ಎಲ್ಲ ಕೆಲಸಗಳು
ನಿರಂತರನಡೆದಿವೆ.
ಈಗಾಗಲೇ 6000 ಕ್ವಿಂಟಲ್ ತೊಗರಿ ಬೀಜ, 170 ಕ್ವಿಂಟಲ್ ಹೆಸರು, 120 ಕ್ವಿಂಟಲ್ ಉದ್ದು, ಅಷ್ಟೇ ಪ್ರಮಾಣದ ಕಡಲೆ ಬೀಜಗಳು ಸಿದ್ಧಗೊಂಡಿವೆ. ಈ ಎಲ್ಲ ಬೀಜಗಳನ್ನು ಕಲಬುರಗಿ ಕೃಷಿ ಇಲಾಖೆಯಿಂದಲೇ ಸಿದ್ಧಪಡಿಸಲಾಗುತ್ತಿದೆ.
ಹೆಚ್ಚುವರಿ ಬೇಡಿಕೆ ಬಂದರೆ ಹೊರಗಡೆಯಿಂದ ತರಿಸಿ, ನೇರವಾಗಿ ರೈತ ಸಂಪರ್ಕ ಕೇಂದ್ರಗಳಿಗೇ ರವಾನಿಸಲಾಗುವುದು ಎಂದೂ ಕೃಷಿ ಅಧಿಕಾರಿ ತಿಳಿಸಿದ್ದಾರೆ.
*
ಸೋಯಾಬಿನ್, ಹತ್ತಿ ಬಿತ್ತನೆ ಹೆಚ್ಚುವ ಸಂಭವ
ಮಾರುಕಟ್ಟೆಯಲ್ಲಿ ಈಗ ಸೋಯಾಬಿನ್ ಪ್ರತಿ ಕ್ವಿಂಟಲ್ಗೆ ₹ 7500 ದರ ಬಂದಿದೆ. ಈ ಹಿಂದೆ ₹ 6000 ದಾಟಿರಲಿಲ್ಲ. ದರ ಹೆಚ್ಚಳವಾದ ಕಾರಣ ಈ ಬಾರಿ ಹೆಚ್ಚಿನ ರೈತರು ಸೋಯಾ ಬಿತ್ತಲು ಮುಂದಾಗಿದ್ದಾರೆ. ಹೀಗಾಗಿ, 30 ಸಾವಿರ ಹೆಕ್ಟೇರ್ಗೂ ಹೆಚ್ಚು ಬಿತ್ತನೆ ಆಗುವ ಸಾಧ್ಯತೆ ಇದೆ.
ಅದೇ ರೀತಿ ಹತ್ತಿಗೂ ಪ್ರತಿ ಕ್ವಿಂಟಲ್ಗೆ ₹ 9000 ದರ ಬಂದಿದೆ. ಇಷ್ಟೊಂದು ಲಾಭ ಹಿಂದೆ ಸಿಕ್ಕಿರಲಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ ಹತ್ತಿ ಬೆಳೆಯುವ ಪ್ರದೇಶವೂ ಹೆಚ್ಚಲಿದೆ. ಕಳೆದ ವರ್ಷ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಲಾಗಿತ್ತು. ಈ ಬಾರಿ ಇನ್ನೂ 40 ಸಾವಿರ ಹೆಕ್ಟೇರ್ ಹೆಚ್ಚುವ ಸಾಧ್ಯತೆ ಇದೆ ಎಂಬುದು ಕೃಷಿ ಅಧಿಕಾರಿಗಳ ಲೆಕ್ಕಾಚಾರ.
ಮೇಲಾಗಿ, ಎರಡು ವರ್ಷಗಳ ಹಿಂದೆ ಕೇವಲ 20 ಸಾವಿರ ಹೆಕ್ಟೇರ್ನಲ್ಲಿ ಕಬ್ಬು ಬಿತ್ತಲಾಗುತ್ತಿತ್ತು. ಈ ವರ್ಷ ಮತ್ತೂ ಹೆಚ್ಚು ರೈತರು ಆಸಕ್ತಿ ವಹಿಸಿದ್ದು, ಹಳೆಯ ಬೆಳೆ– ಹೊಸ ಬೆಳೆ ಸೇರಿ 50 ಸಾವಿರ ಹೆಕ್ಟೇರ್ ನಾಟಿ ಮಾಡುವ ಸಾಧ್ಯತೆ ಇದೆ ಎಂದೂ ಅವರು ತಿಳಿಸಿದ್ದಾರೆ.
ಈ ಎಲ್ಲ ಕಾರಣಗಳಿಂದಾಗಿ ತೊಗರಿ ಬಿತ್ತನೆ ಪ್ರದೇಶ ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಆಗಲಿದೆ.
*
ಯಾವ ತಳಿ ಬಳಸಬೇಕು?
ಕೃಷಿ ಇಲಾಖೆಯಿಂದ ಸೂಚಿತ ತಳಿಗಳ ಬೀಜಗಳನ್ನೇ ರೈತರು ಖರೀದಿಸಬೇಕು. ರೈತರ ಅನುಕೂಲಕ್ಕಾಗಿ ಪ್ರತಿ ಚೀಲದ ಮೇಲೂ ತಳಿಯ ಹೆಸರನ್ನು ಕಡ್ಡಾಯವಾಗಿ ನಮೂದಿಸಲಾಗುತ್ತಿದೆ. ಈ ವಿಚಾರದಲ್ಲಿ ರೈತರು ಯಾರದೋ ಮಾತು ಕೇಳಿ ಮೋಸ ಹೋಗಬಾರದು ಎಂದು ರತೇಂದ್ರನಾಥ ತಿಳಿಸಿದ್ದಾರೆ.
‘GRG–881’ ಹಾಗೂ ‘TS–3R’ ತಳಿಗಳ ಲೇಬಲ್ಗಳನ್ನು ಬೀಜದ ಚೀಲಗಳ ಮೇಲೆ ಪರಿಶೀಲಿಸಿ ತೆಗೆದುಕೊಳ್ಳಬೇಕು. ಪ್ರತಿ ಕೆ.ಜಿ.ಗೆ ಸಾಮಾನ್ಯ ವರ್ಗದ ರೈತರಿಗೆ ₹ 25 ಹಾಗೂ ಪರಿಶಿಷ್ಟ ರೈತರಿಗೆ ₹ 37.5 ರಿಯಾಯಿತಿ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.