ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ನಲ್ಲೂ ಅಡಿಕೆಗೆ ಕೊಳೆರೋಗ

ಮಲೆನಾಡಿನಲ್ಲಿ ಕಾಣದ ಅಡಿಕೆ ಕೊಯ್ಲಿನ ಸಂಭ್ರಮ
Last Updated 12 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕಳಸ: ಸಾಮಾನ್ಯವಾಗಿ ವಿಜಯದಶಮಿಯ ನಂತರ ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಮತ್ತು ಕೆಂಪಡಿಕೆಯ ಸಂಸ್ಕರಣೆ ನಡೆಯುತ್ತದೆ. ಆದರೆ, ಈ ಬಾರಿ ಮಳೆಯು ನವೆಂಬರ್ ತಿಂಗಳಲ್ಲೂ ಮುಂದುವರಿದಿದ್ದು ಅಡಿಕೆಗೆ ಕೊಳೆ ರೋಗದ ಬಾಧೆ ಮುಂದುವರಿದಿದೆ. ಅಡಿಕೆ ಕೊಯ್ಲಿನ ಸಂಭ್ರಮ ಕಾಣದಾಗಿದೆ.

ತಾಲ್ಲೂಕಿನ ಕಳಸ, ಕಳಕೋಡು, ಎಸ್.ಕೆ.ಮೇಗಲ್, ಸಂಸೆ, ನೆಲ್ಲಿಬೀಡು, ಮರಸಣಿಗೆ, ಹಿರೇಬೈಲು ಗ್ರಾಮಗಳಲ್ಲಿ ಈಗಲೂ ಕೊಳೆ ರೋಗದ ಬಾಧೆ ವ್ಯಾಪಕವಾಗಿದೆ. ಇದರಿಂದಾಗಿ ಗೊನೆ ತೆಗೆಯುವ ಈ ಅವಧಿಯಲ್ಲೂ ರೈತರು ಅಡಿಕೆಗೆ ಬೋರ್ಡೊ ಔಷಧಿ ಸಿಂಪಡಿಸುವ ಅನಿವಾಯತೆಗೆ ಸಿಲುಕಿದ್ದಾರೆ.

ಮಲೆನಾಡಿನಲ್ಲ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಕೊಳೆ ರೋಗ ಅ. 15ರ ನಂತರ ಕಂಡು ಬಂದಿದೆ. ‘ನಾವು ಜೂನ್ ತಿಂಗಳ ಕೊನೆ ಭಾಗ ಮತ್ತು ಸೆಪ್ಟೆಂಬರ್ ತಿಂಗಳ ಮೊದಲ ಭಾಗದಲ್ಲಿ ಎರಡು ಬಾರಿ ಅಡಿಕೆಗೆ ಔಷಧಿ ಹೊಡೆಯುವುದು ಮಾಮೂಲಿ ಅಭ್ಯಾಸ. ಆದರೆ, ಈ ವರ್ಷ ಮಳೆ ಒಂದು ತಿಂಗಳು ಮುಂದೂಡಿಕೆ ಆಗಿದ್ದರಿಂದ ಗೊನೆ ತೆಗೆಯುವ ವೇಳೆಗೆ ಕೊಳೆ ರೋಗ ಕಂಡು ಬಂದಿದೆ. ಕೆಲ ತೋಟಗಳಲ್ಲಿ ಶೇ 30-70ರ ವರೆಗೂ ಫಸಲು ನಾಶ ಆಗಿದೆ’ ಎಂದು ಹೆಬ್ಳೂರಿನ ಕೃಷಿಕ ಧರಣೇಂದ್ರ ಹೇಳುತ್ತಾರೆ.

ಕೆಲವು ತೋಟಗಳಲ್ಲಿ ಒಂದು ಕೊಯ್ಲಿನ ಅಡಿಕೆ ತೆಗೆದ ನಂತರ ನವೆಂಬರ್ ಮೊದಲ ವಾರದಲ್ಲಿ ಕೊಳೆ ಕಾಣಿಸಿಕೊಂಡಿದ್ದು, ಆ ಕೃಷಿಕರು ಎರಡನೇ ಕೊಯ್ಲಿಗೂ ಮುನ್ನ ಮತ್ತೆ ಔಷಧಿ ಸಿಂಪಡಿಸಿದ್ದಾರೆ. ಇದರಿಂದಾಗಿ ಈ ವರ್ಷ 4 ಬಾರಿ ಔಷಧಿ ಸಿಂಪಡಿಸಿದ್ದು, ಅಡಿಕೆ ಫಸಲಿನ ಕಾಲು ಭಾಗ ಔಷಧಿ ಸಿಂಪಡಿಸುವುದಕ್ಕೆ ಖರ್ಚಾಗಿದೆ.

ಅಡಿಕೆ ಮರಗಳ ಕೆಳಗೆ ಉದುರಿ ಬಿದ್ದಿರುವ ದೊಡ್ಡ ಗಾತ್ರದ ಕಾಯಿಗಳು ಫಸಲಿನ ನಷ್ಟದ ಸಾಕ್ಷಿ ಹೇಳುತ್ತಿವೆ. ಆಗಸ್ಟ್‌ನಲ್ಲಿ ನಾವು ಬೆಳೆ ನಷ್ಟ ಆಗದಿದ್ದರಿಂದ ಪರಿಹಾರಕ್ಕೆ ಅರ್ಜಿ ಹಾಕಿರಲಿಲ್ಲ. ಈಗ ಅಡಿಕೆ ಉದುರುತ್ತಿದೆ. ಆದರೆ, ಬೆಳೆ ನಷ್ಟ ಪರಿಹಾರ ಆಗ ಅರ್ಜಿ ಹಾಕಿದವರಿಗೆ ಮಾತ್ರ ಸಿಗುತ್ತಿದೆ ಎಂದು ಬೆಳೆಗಾರರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

‘ನವೆಂಬರ್ ತಿಂಗಳಲ್ಲಿ ಅಡಿಕೆಗೆ ತಗುಲಿರುವ ಕೊಳೆರೋಗವು ಮುಂದಿನ ಸಾಲಿನ ಹಿಂಗಾರಕ್ಕೂ ವ್ಯಾಪಿಸಿದೆ. ಇದರಿಂದ ಬೇಸಿಗೆಯಲ್ಲಿ ಹಿಂಗಾರಕ್ಕೆ ಶಿಲೀಂಧ್ರ ನಾಶಕದ ಇನ್ನೊಂದು ಹೆಚ್ಚುವರಿ ಸಿಂಪಡಣೆ ಕೊಡಬೇಕಾಗುತ್ತದೆ' ಎಂದು ಯುವ ಕೃಷಿಕ ನೋಟದ ವಿಶಾಲ್ ಹೇಳುತ್ತಾರೆ.

ಕಳಸ ತಾಲ್ಲೂಕಿನಲ್ಲಿ 5 ತಿಂಗಳಿನಿಂದ ಸುರಿಯುತ್ತಲೇ ಇರುವ ಮಳೆಯು ಕಾಫಿ ಮತ್ತು ಅಡಿಕೆ ಫಸಲಿನ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮದ ಫಲವಾಗಿ ಕಳಸ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನೆಲಕಚ್ಚಿದೆ. ವ್ಯಾಪಾರಿ ಸಮುದಾಯವೂ ಕೃಷಿಕರ ಜೊತೆಗೆ ಕಂಗಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT