ತೋಟಗಳಿಗೆ ಹೊಸ ಹಣ್ಣುಗಳ ಲಗ್ಗೆ; ರಾಂಬುಟನ್‌, ಲಿಚಿಗಳತ್ತ ರೈತರ ಚಿತ್ತ

7

ತೋಟಗಳಿಗೆ ಹೊಸ ಹಣ್ಣುಗಳ ಲಗ್ಗೆ; ರಾಂಬುಟನ್‌, ಲಿಚಿಗಳತ್ತ ರೈತರ ಚಿತ್ತ

Published:
Updated:
Deccan Herald

ನಾಪೋಕ್ಲು: ಜಿಲ್ಲೆಯ ಉತ್ತಮ ಹವಾಗುಣಕ್ಕೆ ಹೊಂದಿಕೊಂಡು ಕಾಫಿ ತೋಟಗಳಲ್ಲಿ, ಮನೆಯ ಅಂಗಳದಲ್ಲಿ ಬೆಳೆಯುವ ಹಣ್ಣುಗಳು ಹಲವು.

ಕಿತ್ತಳೆ, ಬಾಳೆ, ಅನಾನಸು, ಬೆಣ್ಣೆ ಹಣ್ಣು, ಹಲಸು, ಸಪೋಟ, ಪಪ್ಪಾಯಿ ಸೇರಿದಂತೆ ಹತ್ತು ಹಲವು ರುಚಿಕರ ಹಣ್ಣುಗಳು ಜಿಲ್ಲೆಯ ನೆಲದಲ್ಲಿ ಬೆಳೆಯುತ್ತಿವೆ.

ಉಪ ಬೆಳೆಯಾಗಿ ಬೆಳೆಯುವ ಕಿತ್ತಳೆ ಪ್ರಸಿದ್ಧಿ ಪಡೆದಿದ್ದರೆ, ಬಾಳೆಯ ಕೃಷಿಯೂ ಇತ್ತೀಚೆಗೆ ಜನಪ್ರಿಯಗೊಳ್ಳುತ್ತಿದೆ. ತೋಟಗಳಲ್ಲಿ ಬೆಣ್ಣೆಹಣ್ಣು, ಮನೆಯ ಹಿತ್ತಲಲ್ಲಿ ಅನಾನಸು ಬೆಳೆಯುತ್ತಿದೆ.

ಕಿತ್ತಳೆ ಜಿಲ್ಲೆಯ ಪ್ರಮುಖ ಕೃಷಿ ಉತ್ಪನ್ನ. ಎರಡು ಸಾರಿ ಹಣ್ಣಿನ ಹಂಗಾಮು ಕಂಡುಬರುತ್ತದೆ. ಇದೀಗ ಕಿತ್ತಳೆ ಕೊಡಗಿನ ಪ್ರಮುಖ ನಗರಗಳಲ್ಲಿ ಮಾರಾಟವಾಗುತ್ತಿದೆ. ನೆರೆಯ ಕೇರಳ ರಾಜ್ಯಕ್ಕೂ ರವಾನೆಯಾಗುತ್ತಿದೆ. ದಕ್ಷಿಣ ಕೊಡಗಿನಲ್ಲಿ ಬೆಳೆದ ಕಿತ್ತಳೆಯನ್ನು ಗೋಣಿಕೊಪ್ಪದ ಕಿತ್ತಳೆ ಬೆಳೆಗಾರರ ಸಂಘ ಖರೀದಿಸಿ ಕಿತ್ತಳೆ ಹಣ್ಣಿನ ಜ್ಯೂಸ್ ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದೆ. ರಸ್ತೆ ಬದಿಯಲ್ಲಿ ಕಿತ್ತಳೆ ವ್ಯಾಪಾರ ಬಿರುಸಿನಿಂದ ಸಾಗುತ್ತಿದೆ.

ಆದರೆ ಕಿತ್ತಳೆಗೆ ಗ್ರೇನಿಂಗ್ ಎಂಬ ಮಾರಕ ರೋಗ ತಗುಲಿ ಕಿತ್ತಳೆ ಬೆಳೆಯನ್ನು ನಾಶ ಮಾಡಿತು. ಆರೈಕೆ ಇಲ್ಲದ ಗಿಡ ಹಳದಿ ಎಲೆ ರೋಗಕ್ಕೆ ತುತ್ತಾಗುತ್ತಿದೆ. ಈಗ ಗ್ರೇನಿಂಗ್ ರೋಗ ಹತೋಟಿಗೆ ಬಂದಿದ್ದರೂ ಹಣ್ಣು ಬೆಳೆಯಲು ಬೆಳೆಗಾರರು ಆಸಕ್ತರಾಗಿಲ್ಲ. ನಾಗಪುರ ಕಿತ್ತಳೆಯೂ ಜಿಲ್ಲೆಯ ಕಿತ್ತಳೆಯೊಡನೆ ಬೆರೆತು ಗ್ರಾಹಕರನ್ನು ತಲುಪುತ್ತಿದೆ. ಇನ್ನು ಬೆಣ್ಣೆ ಹಣ್ಣಿನ ಮರದ ಬಾಳಿಕೆ ಕಡಿಮೆ.

ಇವುಗಳ ಹೊರತಾಗಿ ಇತ್ತೀಚೆಗೆ ಹಲವು ಅಪರೂಪದ ಹಣ್ಣುಗಳತ್ತ ರೈತರು ಚಿತ್ತ ಹರಿಸಿದ್ದಾರೆ. ಕಾಫಿಯ ತೋಟಗಳ ನಡುವೆ ಲಿಚಿ, ರಾಂಬುಟನ್ ಹಣ್ಣುಗಳನ್ನು ಬೆಳೆಯಲು ಆಸಕ್ತಿ ವಹಿಸುತ್ತಿದ್ದಾರೆ.

ಇಂಥ ಹಣ್ಣುಗಳಿಗೆ ಉತ್ತಮ ಮಾರುಕಟ್ಟೆಯೂ ಇದೆ. ಕೃಷಿಕರ ಆಸಕ್ತಿಯನ್ನು ಕಂಡು ಮಾರುಕಟ್ಟೆಗಳಲ್ಲಿ ರಾಂಬುಟನ್ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ. ಈಗ ಕಿತ್ತಳೆಗೆ ಬದಲಿಯಾಗಿ ರಾಂಬುಟನ್ ಕಾಣಿಸಿಕೊಳ್ಳುತ್ತಿವೆ.

ಬಾಯಲ್ಲಿ ನೀರೂರಿಸುವ ಲಿಚಿಹಣ್ಣು ಉತ್ತಮ ಬೇಡಿಕೆ ಪಡೆದುಕೊಂಡಿದೆ. ಕೆಲವೆಡೆ ಸಿಹಿಹುಳಿ ಮಿಶ್ರಿತ ವಿದೇಶಿ ಲಿಚಿ ಹಣ್ಣನ್ನು ರೈತರು ಬೆಳೆಯುತ್ತಿದಾರೆ. ಹೆಚ್ಚು ಪೌಷ್ಟಿಕಾಂಶ ಹೊಂದಿರುವ ಹಣ್ಣುಗಳಲ್ಲಿ ಲಿಚಿಹಣ್ಣು ಸಹ ಒಂದು.

ಕೊಡಗಿನ ವಾತಾವರಣ ಲಿಚಿ ಹಣ್ಣು ಬೆಳೆಯಲು ಉತ್ತಮವಾಗಿದೆ. ಲಿಚಿ ಕಡ್ಡಿಗಳಿಂದ ಕೃಷಿ ಮಾಡಿದ ಗಿಡಗಳನ್ನು ಬೆಳೆಸಿ 3–4 ವರ್ಷಗಳಲ್ಲಿ ಫಸಲು ಪಡೆಯಬಹುದು. ವಿದೇಶಗಳಲ್ಲಿ ವಾತಾವರಣಕ್ಕೆ ಅನುಗುಣವಾಗಿ ವರ್ಷದ ಬೇರೆ ಬೇರೆ ಅವಧಿಯಲ್ಲಿ ಲಿಚಿ ಹಣ್ಣು ಕೊಯ್ಲಿಗೆ ಬಂದರೆ, ಜಿಲ್ಲೆಯಲ್ಲಿ ಅಕ್ಟೋಬರ್‌–ನವೆಂಬರ್‌ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ.

ಹಣ್ಣು ಮಾಗಿದ ನಂತರ ಕೊಯ್ಲು ಮಾಡಿದ ಹಣ್ಣಿನ ಸಿಪ್ಪೆ ಬೆರ್ಪಡಿಸುವಾಗ ಬಿಳಿ ಬಣ್ಣದ ಒಳತಿರುಳು ತುಂಬಾ ರುಚಿ.

‘ಲಿಚಿ ಹಣ್ಣಿನ ಗಿಡವನ್ನು ಸುಲಭವಾಗಿ ಬೆಳೆಯಬಹುದು. ಆದರೆ ಹಣ್ಣನ್ನು ಪಕ್ಷಿಗಳಿಂದ ಹಾಗೂ ಬಾವಲಿಗಳಿಂದ ರಕ್ಷಿಸುವುದು ಕಷ್ಟ. ಮಾಗಿದ ಹಣ್ಣನ್ನು ಪಕ್ಷಿಗಳು ತಿಂದು ಹಾಳುಗೆಡವುತ್ತವೆ’ ಎನ್ನುತ್ತಾರೆ ಇಲ್ಲಿನ ಕಾಫಿ ಬೆಳೆಗಾರ ರವೀಂದ್ರ. ಬಲೆ ಅಳವಡಿಸಿ ಪಕ್ಷಿಗಳಿಂದ ಮಾಗಿದ ಹಣ್ಣುಗಳನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೂ ರೈತರು ಮುಂದಾಗಿದ್ದಾರೆ. ಲಿಚಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಲಿಚಿ ಹಣ್ಣಿಗೆ ₹ 200–300 ದರವಿದೆ.

ಕೊಡಗಿನ ಕೃಷಿಕರು ತಮ್ಮ ಕಾಫಿ ತೋಟಗಳಲ್ಲಿ ಲಿಚಿ ಹಣ್ಣನ್ನು ಬೆಳೆಯಲು ಉತ್ಸುಕರಾಗಿರುವುದು ಆಶಾದಾಯಕ ಬೆಳವಣಿಗೆ. ಜಿಲ್ಲೆಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಗಳಲ್ಲಿ ಲಿಚಿ ಹಣ್ಣಿನ ಗಿಡಗಳನ್ನು ವೈಜ್ಞಾನಿಕವಾಗಿ ಬೆಳೆಯಲಾಗುತ್ತಿದೆ.

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !