ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ ಭೂಮಿ’ಯ ಪರಿಸ್ಥಿತಿ ಗಂಭೀರ: ಮಣ್ಣಿನ ಫಲವತ್ತತೆಗೆ ಕುತ್ತು

ಜಲಾನಯನ ಪ್ರದೇಶ
Last Updated 3 ಜನವರಿ 2019, 5:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 11 ಜಿಲ್ಲೆಗಳ ಜಲಾನಯನ ಪ್ರದೇಶಗಳಲ್ಲಿ ಅತಿಯಾದ ನೀರಿನ ಬಳಕೆ, ಹವಾಮಾನ ಬದಲಾವಣೆಯಿಂದ ಭೂಮಿಯ ಫಲವತ್ತತೆ ಮತ್ತು ಮಣ್ಣಿನ ‘ಆರೋಗ್ಯ’ ನಾಶವಾಗಿದ್ದು, ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಕೃಷಿಕರ ಪರಿಸ್ಥಿತಿ ಗಂಭೀರವಾಗಲಿದೆ.

ಹನ್ನೊಂದು ಜಿಲ್ಲೆಗಳಲ್ಲದೇ, ಉಳಿದಜಿಲ್ಲೆಗಳಲ್ಲೂ ಭೂಮಿ ಮತ್ತು ಮಣ್ಣಿನ ಆರೋಗ್ಯ ಹದಗೆಟ್ಟಿದೆ. ಸೂಕ್ತ ‘ಚಿಕಿತ್ಸೆ’ ನೀಡದಿದ್ದರೆ, ಒಂದೋ ಬರಡಾಗುತ್ತದೆ ಇಲ್ಲವೇ ನಾಲ್ಕರಿಂದ ಐದು ಜಿಲ್ಲೆಗಳು ಕ್ರಮೇಣ ಮರುಳುಗಾಡು ಆಗುತ್ತವೆ ಎಂಬುದಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಣ್ಣು ಸರ್ವೇಕ್ಷಣಾ ಮತ್ತು ಭೂಬಳಕೆ ನಿಯೋಜನೆ ಸಂಸ್ಥೆ(ಎನ್‌ಬಿಎಸ್‌ಎಸ್‌) ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಭೂಮಿಯ ಜೀವಂತಿಕೆ, ಫಲವತ್ತತೆ ಬಗ್ಗೆ ಸಂಶೋಧನೆ ನಡೆಸಿರುವ ‘ರಾಷ್ಟ್ರೀಯ ಮಣ್ಣು ಸರ್ವೇಕ್ಷಣಾ ಮತ್ತು ಭೂಬಳಕೆ ನಿಯೋಜನೆ ಸಂಸ್ಥೆ’ಯ ವರದಿಯ ಪ್ರಕಾರ ರಾಜ್ಯದ 11 ಜಿಲ್ಲೆಗಳ ಜಲಾನಯನ ಪ್ರದೇಶಗಳಲ್ಲಿ ಭೂಮಿಯ ಆರೋಗ್ಯ ಹದಗೆಟ್ಟಿದೆ. ಇಂತಹದ್ದೊಂದು ಅಧ್ಯಯನ ವಿಶ್ವದಲ್ಲೇ ಪ್ರಥಮ ಎಂದು ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ರಾಜೇಂದ್ರ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರವಾಹದ ರೀತಿ ನೀರನ್ನು ಹರಿಸಿ ಕಬ್ಬು ಇಲ್ಲವೇ ಭತ್ತವನ್ನು ಬೆಳೆಸುವ ಜಲಾನಯನ ಪ್ರದೇಶಗಳ ಮಣ್ಣಿನಲ್ಲಿ ಲವ
ಣಾಂಶ ಹೆಚ್ಚಾಗುತ್ತಿದೆ. ಭೂಮಿಯ ತಳದಲ್ಲಿರುವ ಅಷ್ಟೂ ಲವಣಾಂಶ ಮೇಲಕ್ಕೆ ಬಂದು ನಿಲ್ಲುತ್ತಿದೆ. ಇದರಿಂದಾಗಿ ಮುಂದೆ ಭತ್ತ, ಕಬ್ಬು ಮಾತ್ರವಲ್ಲ, ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ ಎಂದೂ ಎಚ್ಚರಿಕೆ ನೀಡಿದರು.

ಮಣ್ಣಿನ ಆರೋಗ್ಯ ಹದಗೆಡುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ತುತ್ತಾಗುವುದನ್ನು ತಪ್ಪಿಸಲು ಭಾರತೀಯ ಕೃಷಿ ಸಂಶೋಧನೆ ಮಂಡಳಿಯ ಅಧೀನ ಸಂಸ್ಥೆಯಾಗಿರುವ ಎನ್‌ಬಿಎಸ್‌ಎಸ್‌ 9 ಲಕ್ಷ ರೈತರಿಗೆ ‘ಭೂಸಂಪನ್ಮೂಲ ಕಾರ್ಡ್‌’ಗಳನ್ನು ವಿತರಿಸಲು ಮುಂದಾಗಿದೆ. ಈ ಕಾರ್ಡ್‌ ಬಳಸಿ ಶ್ರದ್ಧೆಯಿಂದ ಮಣ್ಣಿನ ಆರೈಕೆ ಮಾಡಿದರೆ, ಅವರ ‘ಭಾಗ್ಯ’ವೇ ಬದಲಾಗಲಿದೆ.

ಇಸ್ರೇಲ್‌ ಪದ್ಧತಿಗಿಂತಲೂ ಉತ್ತಮ

‘11 ಜಿಲ್ಲೆಗಳಲ್ಲಿ ಇಂಚಿಂಚೂ ಬಿಡದಂತೆ ಕೃಷಿ ಭೂಮಿಯ ಮಣ್ಣಿನ ಆರೋಗ್ಯದ ಪರೀಕ್ಷೆ ಮಾಡಿದ್ದೇವೆ. ಪ್ರತಿಯೊಬ್ಬ ರೈತನ ಹೊಲದ ಭೂಮೇಲ್ಮೈ ಲಕ್ಷಣ, ಮಣ್ಣಿನ ಗುಣಧರ್ಮ, ಅದರಲ್ಲಿ ಮಣ್ಣಿನ ಆಳ, ಮಣ್ಣಿನ ಕಣಗಾತ್ರ, ಗರಸಿನ ಪ್ರಮಾಣ, ಇಳಿಜಾರು, ಸವಕಳಿ, ಭೂಸಾಮರ್ಥ್ಯ, ಲಭ್ಯ ನೀರಿನ ಸಾಮರ್ಥ್ಯ ವಿವರಗಳನ್ನು ಸಂಗ್ರಹಿಸಿ ಮಾಹಿತಿ ಬ್ಯಾಂಕ್‌ ರಚಿಸಲಾಗಿದೆ’ ಎಂದು ಡಾ.ರಾಜೇಂದ್ರ ಹೆಗಡೆ ತಿಳಿಸಿದರು.

‘ನಿರ್ದಿಷ್ಟ ಹೊಲದಲ್ಲಿ ಭೂಮಿಯ ರಸಸಾರ, ವಿದ್ಯುತ್‌ ವಾಹಕತೆ, ಇಂಗಾಲ, ರಂಜಕ, ಪೋಟಾಷ್‌, ಗಂಧಕ, ಸತು, ಬೋರಾನ್‌, ಕಬ್ಬಿಣ, ಮ್ಯಾಂಗನೀಸ್‌, ತಾಮ್ರದ ಪ್ರಮಾಣ ಎಷ್ಟಿದೆ. ಕೊರತೆ ಇದೆಯೋ ಇಲ್ಲ ಅಧಿಕವಾಗಿದೆಯೋ ಎಂಬ ಸಿದ್ಧ ಮಾಹಿತಿ ಲಭ್ಯವಿದೆ. ಇಂತಹ ಹೊಲಗಳಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ ಎಂಬುದರ ಸೂಚನೆ ನೀಡಲಾಗಿದೆ. ಸಮಸ್ಯೆಯಿಂದ ಕೂಡಿದ ಮಣ್ಣಿನ ಆರೋಗ್ಯ ಸರಿಪಡಿಸಲು ಯಾವ ಆರೈಕೆ ಮಾಡಬೇಕು’ ಎಂಬ ವಿವರವನ್ನೂ ನೀಡಿದ್ದೇವೆ.

ರಾಜ್ಯ ಸರ್ಕಾರ ‘ಭೂಸಂಪನ್ಮೂಲ ಕಾರ್ಡ್‌’ ಮಾಹಿತಿಗೆ ಅನುಗುಣವಾಗಿ ಕ್ರಮ ತೆಗೆದುಕೊಂಡರೆ, ಇಸ್ರೇಲ್‌ ಕೃಷಿ ಪದ್ಧತಿ ಅನುಸರಿಸುವ ಅಗತ್ಯವಿಲ್ಲ. ಅಲ್ಲಿಗಿಂತಲೂ ಉತ್ತಮ ಕೃಷಿಯನ್ನು ಕೈಗೊಳ್ಳಬಹುದು ಎನ್ನುತ್ತಾರೆ ರಾಜೇಂದ್ರ.

ಜಲಾನಯನ ಪ್ರದೇಶದ ಸಮಸ್ಯೆಗಳು:

* ಕಿರು ಜಲಾನಯನ ಪ್ರದೇಶಗಳಲ್ಲಿನ ಮಣ್ಣು ಗರಸು (gravel) ಸ್ವರೂಪದ್ದಾಗಿದೆ. ಇದರಿಂದಾಗಿ ಕೃಷಿಕರು ಬಿತ್ತನೆ ಬೀಜ ಹಾಕಿದರೆ ಅದು ಮೊಳಕೆಯೊಡೆಯಲು ಪ್ರಶಸ್ತವಾಗಿರುವುದಿಲ್ಲ.
ಇದರಲ್ಲಿ ತೇವಾಂಶವೂ ಕಡಿಮೆ ಮತ್ತು ಪೋಷಕಾಂಶಗಳ ಕೊರತೆ ಇರುತ್ತದೆ.

* ಈ ಪ್ರದೇಶದ ಬಹುಪಾಲು ಮಣ್ಣು ನೀರಿನಂಶ ಒಳಗೊಂಡಿರುವ ಪ್ರಮಾಣ ತೀರಾ ಕಡಿಮೆ. ಇಲ್ಲಿ ಅಲ್ಪಾವಧಿ ಬೆಳೆಗಳನ್ನು ಬೆಳೆಯಬಹುದಾದರೂ ಬೆಳೆ ವೈಫಲ್ಯದ ಸಾಧ್ಯತೆಯೇ ಹೆಚ್ಚು.

* ಕಿರು ಜಲಾನಯನಗಳಲ್ಲಿ ಶೇ 50 ರಷ್ಟು ಪ್ರದೇಶವು ವಿವಿಧ ರೀತಿಯ ಭೂಸವಕಳಿಗೆ ಒಳಗಾಗಿದೆ. ಇದನ್ನು ತಡೆಯಲು ಆದ್ಯತೆಯ ಮೇರೆಗೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಹಾಗೂ ಇತರ ಭೂ ನಿರ್ವಹಣಾ ಪದ್ಧತಿಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು.

* 11 ಜಿಲ್ಲೆಗಳಲ್ಲಿ ತುಮಕೂರು ಬಿಟ್ಟು ಉಳಿದ ಜಿಲ್ಲೆಗಳ ಕಿರು ಜಲಾನಯನ ಪ್ರದೇಶದಲ್ಲಿ ಮಣ್ಣು ಬಹುತೇಕ ಕ್ಷಾರೀಯವಾಗಿದೆ. ತುಮಕೂರು ಜಿಲ್ಲೆಯಲ್ಲಿ ಮಾತ್ರ ಮಣ್ಣಿನಲ್ಲಿ ಆಮ್ಲೀಯತೆ ಪ್ರಮಾಣ ಅಧಿಕವಾಗಿದೆ.

* ಅರಣ್ಯ ಮತ್ತು ಸಸ್ಯ ನಾಶದಿಂದಾಗಿ ಭೂಮಿ ಬಂಜರಾಗುತ್ತಿದೆ. ಹೆಚ್ಚು ಪ್ರಮಾಣದಲ್ಲಿ ಅರಣ್ಯೀಕರಣದ ಅಗತ್ಯವಿದೆ.

ಎಲ್ಲೆಲ್ಲಿ ಅಧ್ಯಯನ

* ಜಿಲ್ಲೆಗಳು: 11

* ವ್ಯಾಪ್ತಿ: 9.66 ಲಕ್ಷ ಹೆಕ್ಟೇರ್‌

* ಕಿರು ಜಲಾನಯನ: 1931

* ಪ್ರಯೋಜನ: 6.22 ಲಕ್ಷ ರೈತ ಕುಟುಂಬಗಳು

* ಭೂ ಸಂಪನ್ಮೂಲ ಕಾರ್ಡ್‌: 9 ಲಕ್ಷ ರೈತ ಕುಟುಂಬಗಳಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT