ಶುಕ್ರವಾರ, ಡಿಸೆಂಬರ್ 13, 2019
26 °C

ಭತ್ತ ಲೋಕದ ಕೃಷ್ಣವರ್ಣೆಯರು: ಎಲ್ಲಾ ತಳಿಯಲ್ಲೂ ಔಷಧೀಯ ಗುಣ

ಜಿ.ಕೃಷ್ಣ ಪ್ರಸಾದ್ Updated:

ಅಕ್ಷರ ಗಾತ್ರ : | |

ದೇಶದ ಬೇರೆ ಬೇರೆ ರಾಜ್ಯಗಳಲ್ಲಿದ್ದ ಕಪ್ಪು ಭತ್ತ ಮತ್ತು ಕಪ್ಪು ಅಕ್ಕಿ ತಳಿಗಳು ಕರ್ನಾಟಕಕ್ಕೆ ಕಾಲಿಟ್ಟು ಬಹಳ ವರ್ಷಗಳಾಯಿತು. ಮೊದಲು ಆಯ್ದ ರೈತರ ತಾಕುಗಳಲ್ಲಿ ಕಾಣಿಸುತ್ತಿದ್ದ ಈ ತಳಿಗಳು ಈಗ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರ ಅಂಗಳದಲ್ಲೂ ಸ್ಥಾನ ಪಡೆದಿವೆ.

ಹಸಿರು ಉಕ್ಕುತ್ತಿದ್ದ ಭತ್ತದ ಗದ್ದೆಯ ನಡುವೆ ಬೈತಲೆ ತೆಗೆದಂತೆ ಕಪ್ಪು ಭತ್ತದ ಆ ತಳಿ ನಳನಳಿಸುತ್ತಿತ್ತು.
ಸಾವಯವ ಕೃಷಿ ಸಂಶೋಧನಾ ಕೇಂದ್ರದ ಡಾ.ಉಲ್ಲಾಸ್ ಎಂ. ವೈ. ಪೈರುಗಳನ್ನು ನಮ್ಮತ್ತ ಬಗ್ಗಿಸಿ ‘ಇದು ಕಲಾಭತಿ; ಒರಿಸ್ಸಾದ ಕಪ್ಪಕ್ಕಿ ತಳಿ. ಪ್ರತಿ ವಾರ ಇದರ ಪೈರಿನ ಬಣ್ಣ ಬದಲಾಗುತ್ತಾ ಹೋಗುವುದು ವಿಶೇಷ’ ಎಂದರು. ಕೆಂಪು ಮಿಶ್ರಿತ ಕಪ್ಪು ಬಣ್ಣದ ಪೈರಿನ ನಡುವೆ ಹಸಿರು ತೆನೆಗಳು! ಕತ್ತಲಲ್ಲಿ ಕಪ್ಪು ಬಣ್ಣದ ಬೆಕ್ಕಿನ ಕಣ್ಣು ಕಂಡಂತೆ ತೋರಿತು. ನಮ್ಮ ಕುತೂಹಲ ಗಮನಿಸಿದ ಉಲ್ಲಾಸ್ ಇನ್ನಷ್ಟು ಕಪ್ಪು ಭತ್ತಗಳ ತಳಿಗಳನ್ನು ತೋರಿಸಿ ಅಚ್ಚರಿಸಿಗೊಳಿಸಿದರು.

ಸಾಮಾನ್ಯವಾಗಿ ಭತ್ತದ ಪೈರು ಮತ್ತು ತೆನೆಯ ಬಣ್ಣ ಹಸಿರು. ನಿಸರ್ಗ ಕೆಲವು ತಳಿಗಳಿಗೆ ಕಪ್ಪು ಬಣ್ಣ ತೊಡಿಸಿ ವಿಶೇಷ ತಳಿಗಳನ್ನು ರೂಪಿಸಿದೆ. ಕರಿ ಮುಂಡುಗ, ಕರಿನೆಲ್ಲು, ಕರಿ ಜೆಡ್ಡು, ನವರದಂತ ದಪ್ಪ ಕಾಳಿನ ತಳಿಗಳ ಕಾಳಿನ ಬಣ್ಣ ಕಪ್ಪು, ಅಕ್ಕಿ ಕೆಂಪು. ಕರಿ ಗಜವಲಿ, ಕಾಗಿಸಾಲೆ, ಕಾಲಜೀರದಂತ ಸುವಾಸನೆ ತಳಿಗಳ ಕಾಳು ಅಪ್ಪಟ ಕಪ್ಪು, ಅಕ್ಕಿ ಬಿಳುಪು. ಬೆಳಗಾವಿಯ ಅಂಬೆಮೊಹರ್ ಭತ್ತದ ಕಾಳಿನ ತುದಿಯೂ ಕಪ್ಪು. ಕೆಲವು ತಳಿಗಳ ಪೈರೆಲ್ಲಾ ಕಪ್ಪಾದರೆ, ಇನ್ನಷ್ಟು ತಳಿಗಳ ಅಕ್ಕಿಯೇ ಕಪ್ಪು.

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಕೇಂದ್ರ ಈ ಬಾರಿ 248 ದೇಸಿ ಭತ್ತದ ತಳಿಗಳ ಪ್ರಾತ್ಯಕ್ಷಿಕೆ ಮಾಡಿದೆ. ಇಪ್ಪತ್ತು ವಿವಿಧ ಬಗೆಯ ಕಪ್ಪು ಭತ್ತಗಳು ಗದ್ದೆಗೆ ಚಿತ್ತಾರ ಬರೆದಿವೆ.

ಇಡೀ ಹೊಲವೇ ಬೆಂಕಿ ಹಚ್ಚಿದಂತೆ ಕಾಣುವ ಕಪ್ಪು ಎಲೆಗಳ ತಳಿಗಳು ಗಮನಸೆಳೆಯುತ್ತಿವೆ. ಮೊಳಕೆಯಿಂದ ಕೊಯ್ಲಿನವರೆಗೆ ಕಪ್ಪು ಬಣ್ಣದಿಂದ ಕಂಗೊಳಿಸುವುದು ಈ ತಳಿಗಳ ವಿಶೇಷ. ಮಹಾರಾಷ್ಟ್ರ ಮೂಲದ ನಜರಾಬಾದ್‌ನ ಎಲೆಗಳು ಅಗಲವಾಗಿದ್ದು, ನೇರಳೆ ಬಣ್ಣಕ್ಕಿರುತ್ತವೆ. ಕಾಳುಗಳು ಬಂಗಾರದ ಬಣ್ಣ ಹೋಲುತ್ತವೆ. ಬೆಳಗಾವಿಯ ಡಂಬರಸಾಲಿಯ ಎಲೆಗಳು ಚೂಪಾಗಿದ್ದು ಕಪ್ಪಾಗಿರುತ್ತವೆ. ಎತ್ತರ ಬೆಳೆವ ತಳಿ ಇದು.

ಭತ್ತದ ಪೈರನ್ನೇ ಹೋಲುವ ‘ಗಂಡು ಭತ್ತ’ ಅವಾಂತರಕಾರಿ ಕಳೆ. ಭತ್ತ ತೆನೆ ಹಂತಕ್ಕೆ ಬರುವವರೆಗೆ ಇದರ ಇರುವು ರೈತರಿಗೆ ಗೊತ್ತಾಗುವುದೇ ಇಲ್ಲ. ಸೊರಬ, ಸಾಗರದ ರೈತರು ಗಂಡು ಭತ್ತದ ಹಾವಳಿ ಇರುವ ಗದ್ದೆಗಳಲ್ಲಿ ‘ನ್ಯಾರೆಮಿಂಡ’ ಎಂಬ ಕಪ್ಪು ಭತ್ತದ ತಳಿ ಬೆಳೆಸುತ್ತಾರೆ. ಕಪ್ಪು ಪೈರಿನ ನಡುವೆ ಎದ್ದು ಕಾಣುವ ಹಸಿರು ಪೈರಿನ ಗಂಡು ಭತ್ತವನ್ನು ಕಿತ್ತು, ಕಳೆಯ ಸಮಸ್ಯೆ ನಿವಾರಿಸಿಕೊಳ್ಳುತ್ತಾರೆ. ರೈತರ ಜಾಣ್ಮೆಗೆ ಇದೊಂದು ನಿದರ್ಶನ.

ಕಪ್ಪು ಬತ್ತದ ತಳಿಗಳಿಂದ ಗದ್ದೆಯಲ್ಲಿ ಚಿತ್ರ ಬಿಡಿಸುವ ಕಲೆ ಜಪಾನ್ನಲ್ಲಿ ಬಹು ಜನಪ್ರಿಯ. ಹರಿಹರದ ಕುಂಬಳೂರಿನ ಆಂಜನೇಯ ಈ ಕಲೆಯಲ್ಲಿ ಪರಿಣಿತರು. ಹಸಿರು ಗದ್ದೆಯ ನಡುವೆ ಕಲೆಯಾಗಿ ತಲೆ ಎತ್ತುವ ಕಪ್ಪು ಭತ್ತದ ತಳಿಗಳ ನೋಡುವುದೇ ಒಂದು ಸೊಗಸು.

ಕಪ್ಪಕ್ಕಿ ತಳಿಗಳು, ಕಪ್ಪು ಭತ್ತದ ವೈವಿಧ್ಯದ ಹೆಗ್ಗಳಿಕೆ. ಭತ್ತದ ಪೈರು, ಕಾಂಡ, ಕಾಳು ಮತ್ತು ಅಕ್ಕಿಯೆಲ್ಲಾ ಕಪ್ಪಾಗಿರುವುದು ಈ ತಳಿಗಳ ವಿಶೇಷ. ಮಣಿಪುರದ 'ಚಕೋವ್', ತಮಿಳುನಾಡಿನ 'ಕರಪು ಕವನಿ', ಮಹಾರಾಷ್ಟ್ರದ ಕಾಲಾಭಾತ್, ಒರಿಸ್ಸಾದ ಕಲಾಭತಿ, ಈಶಾನ್ಯ ರಾಜ್ಯಗಳ ಬರ್ಮಾ ಬ್ಲಾಕ್ ಕಪ್ಪು ಅಕ್ಕಿಯ ತಳಿಗಳು. ಇವುಗಳೆಲ್ಲಾ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಪ್ರಾತ್ಯಕ್ಷಿಕೆ ತಾಕಿನಲ್ಲೇ ನೋಡ ಸಿಗುತ್ತವೆ.

ಇದನ್ನೂ ಓದಿ: ಒಂದೇ ಎಕರೆಯಲ್ಲಿ 120 ತಳಿ ಭತ್ತ!

ಒರಿಸ್ಸಾ ಮೂಲದ 'ಕಲಾಭತಿ' ಭತ್ತ ದ ತೆನೆ ನೇರಳೆ ಬಣ್ಣ. ಕಾಳು ಕಪ್ಪು; ಅಕ್ಕಿಯೂ ಕಪ್ಪು.‌ ಇದನ್ನು ನೋಡುತ್ತಿದ್ದರೆ ಹೂಕುಡುಕ ಕೆನ್ನೀಲಿ ಸೂರಕ್ಕಿಯ ನೆನಪಾಗುತ್ತದೆ. ಮಣಿಪುರದ ಚಕೋವ್ ತಳಿಯ ಎಲೆ ಮತ್ತು ಕಾಳು ತಿಳಿ ಕಪ್ಪು ,ಆದರೆ ಅಕ್ಕಿ ಅಪ್ಪಟ ಕಪ್ಪು. ಬರ್ಮಾ ಬ್ಲಾಕ್ ತಳಿಯ ಪೈರು ಹಸಿರಾಗಿದ್ದು, ಕಾಳು ಮತ್ತು ಅಕ್ಕಿ ಕಪ್ಪು ಇರುವುದು ವಿಶೇಷ. ಜಿಗಟು ಗುಣದ ಅಕ್ಕಿಯಿದು. ಇದರ ಕಪ್ಪಕ್ಕಿಯಿಂದ ಮಾಡಿದ ಪಾಯಸದ ರುಚಿ ಅಪಾರ. ಪಾಯಸಕ್ಕೆ ಏಲಕ್ಕಿ ಬಳಸಲೇ ಬೇಕಿಲ್ಲ. ಅಕ್ಕಿಗೆ ಸುವಾಸನೆ ಗುಣವಿದೆ.

ಪಶ್ಚಿಮ ಬಂಗಾಳದ ರೈತರು ಬೆಳೆಸುವ ಕಾಲಾಬಾತ್ ಕಪ್ಪಕ್ಕಿ ಬೆಂಗಳೂರಿನ ಸಾವಯವ ಮಳಿಗೆಗಳಲ್ಲಿ ಕೆಜಿಗೆ ಎರಡು ನೂರು ರೂಪಾಯಿಗಳಂತೆ ಮಾರಾಟವಾಗುತ್ತಿದೆ. ‘ಕರ್ನಾಟಕದ ರೈತರೇ ಕಪ್ಪಕ್ಕಿ ತಳಿಗಳನ್ನು ಬೆಳೆಸುವಂತಾದರೆ, ಭತ್ತದ ಕೃಷಿಯನ್ನು ಇನ್ನಷ್ಟು ಲಾಭದಾಯಕ ಮಾಡಿಕೊಳ್ಳಬಹುದು’ ಸಹಜ ಆರ್ಗಾನಿಕ್ಸ್‌ನ ಮುಖ್ಯ ನಿರ್ವಹಣಾಧಿಕಾರಿ ಸೋಮೇಶ್ ಹೇಳುತ್ತಾರೆ.

ಔಷಧೀಯ ಖಜಾನೆ

ಕಪ್ಪು ಬತ್ತದ ತಳಿಗಳು ( ಬ್ಲಾಕ್ ರೈಸ್) ಔಷಧೀಯ ಗುಣಗಳಿಂದ ಸಮೃದ್ಧ. ಅಂಥೊಸಿಯಾನಿನ್ ಎಂಬ ರಾಸಾಯನಿಕದಿಂದಾಗಿ ಅಕ್ಕಿಗೆ ಕಪ್ಪು ಬಣ್ಣ ಬಂದಿದೆ.

ಚೀನಾ ದೇಶದಲ್ಲಿ ರಾಜ ಮನೆತನ ಮಾತ್ರ ಕಪ್ಪಕ್ಕಿ ಬಳಸಬೇಕೆಂಬ ಆದೇಶ ಇತ್ತು. ಜನಸಾಮಾನ್ಯರಿಗೆ ಇದರ ಬಳಕೆ ನಿಷಿದ್ದವಾಗಿತ್ತು.

ಬಾಲಕಿಯು ಋತುಮತಿಯಾದಾಗ ಕಪ್ಪಕ್ಕಿಯ ‘ಪುಟ್ಟು’ ಕೊಡುವ ಸಂಪ್ರದಾಯ ಚಟ್ಟಿನಾಡು ಸಮುದಾಯ ದಲ್ಲಿದೆ. ರಕ್ತದಲ್ಲಿನ ಕಬ್ಬಿಣದ ಅಂಶ ಮತ್ತು ತೂಕ ಹೆಚ್ಚಲು ಕಪ್ಪಕ್ಕಿ ನೆರವಾಗುತ್ತದೆ.

ಕಪ್ಪಕ್ಕಿ ಪೋಷಕ ನಾರು, ಪ್ರೋಟೀನ್, ಕಬ್ಬಿಣ, ವಿಟಮಿನ್ ‘ಇ’ , ಕ್ಯಾಲ್ಸಿಯಂ, ಮೆಗ್ನೇಷಿಯಂನಿಂದ ಸಮೃದ್ದವಾಗಿದೆ. ಮೃದುತ್ವ ಮತ್ತು ಪರಿಮಳದ ಗುಣದಿಂದಾಗಿ ಇವು ಸಿಹಿ ಪಾದಾರ್ಥಕ್ಕೆ ಸೂಕ್ತ. ಕಪ್ಪಕ್ಕಿ ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ದವಾಗಿರುವುದರಿಂದ ಕ್ಯಾನ್ಸರನ್ನು ದೂರವಿಡಬಹುದು. ಔಷಧೀಯ ಗುಣಗಳ ಕಾರಣದಿಂದ ಮಾರುಕಟ್ಟೆ ಬೇಡಿಕೆಯೂ ಉತ್ತಮವಾಗಿದೆ. ಹಾಗಾಗಿ ನಾವು ಕಪ್ಪು ಭತ್ತದ ತಳಿಗಳ ಬಗ್ಗೆ ವಿಶೇಷವಾಗಿ ಕೆಲಸ ಮಾಡುತ್ತಿದ್ದೇವೆ ' ಸಾವಯವ ಸಂಶೋದನಾ ಕೇಂದ್ರದ ಮುಖ್ಯಸ್ಥರಾದ ಡಾ.ಪ್ರದೀಪ್ ಎಸ್‌. ಹೇಳುತ್ತಾರೆ.

ಕಪ್ಪಕ್ಕಿ ಆಹಾರ ಸುಲಭವಾಗಿ ಪಚನವಾಗುವುದರಿಂದ, ಮಲಬದ್ಧತೆ ದೂರವಿಡುವುದರಿಂದ, ಮಧುಮೇಹ ನಿಯಂತ್ರಿಸುವ ಗುಣವಿರುವುದರಿಂದ ಕಪ್ಪಕ್ಕಿ ಔಷಧೀಯ ಭತ್ತ ಎಂದೇ ಗುರುತಿಸಲಾಗುತ್ತಿದೆ. ‘ಕಪ್ಪು ಭತ್ತದ ಕೃಷಿಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಸಂಶೋದನಾ ಕೇಂದ್ರ ಆಸಕ್ತರಿಗೆ ಬಿತ್ತನೆ ಬೀಜದ ಸ್ಯಾಂಪಲ್ ನೀಡುತ್ತಿದೆ’ ಬೀಜ ಶುದ್ದೀಕರಣದ ಜವಾಬ್ದಾರಿ ಹೊತ್ತ ಕೀರ್ತನ್ ಹೇಳುತ್ತಾರೆ.

ಆರೋಗ್ಯ ಕಾಳಜಿ ಗ್ರಾಹಕರಿಗೆ ಮುಖ್ಯವಾಗುತ್ತಿರುವ ಇಂದಿನ ದಿನಗಳಲ್ಲಿ ಕಪ್ಪಕ್ಕಿಗೆ ಮಾರುಕಟ್ಟೆ ಸೃಷ್ಟಿಯಾಗಿದೆ. ಸಣ್ಣ ಪ್ರಮಾಣದಲ್ಲಿ ಕಪ್ಪಕ್ಕಿ ತಳಿಗಳ ಕೃಷಿ ಮಾಡಿ, ಸೋಲುತ್ತಿರುವ ಭತ್ತದ ಕೃಷಿಯನ್ನು ಒಂದಿಷ್ಟು ಲಾಭದಾಯಕ ಮಾಡಿಕೊಳ್ಳುವ ಅವಕಾಶ ರೈತರ ಮುಂದಿದೆ. ಕಪ್ಪು ಬಂಗಾರ ನಮ್ಮ ಹೊಲದಲ್ಲಿ ಬಿತ್ತೋಣ.

16ಕ್ಕೆ ದೇಸಿ ಭತ್ತದ ಕ್ಷೇತ್ರೋತ್ಸವ

ಸಾವಯವ ಕೃಷಿ ಸಂಶೋಧನಾ ಕೇಂದ್ರ ತನ್ನ ಪ್ರಾತ್ಯಕ್ಷಿಕ ತಾಕಿನಲ್ಲಿ ಬೆಳೆದಿರುವ ದೇಸಿ ಭತ್ತದ ತಳಿಗಳನ್ನು ರೈತರಿಗೆ ಪರಿಚಯಿಸುವ ಉದ್ದೇಶದಿಂದ ನವೆಂಬರ್ 16, ಶನಿವಾರದಂದು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಆವರಣದಲ್ಲಿ ‘ದೇಸಿ ಭತ್ತದ ಕ್ಷೇತ್ರೋತ್ಸವ’ವನ್ನು ಏರ್ಪಡಿಸಿದೆ. ಸಹಜ ಸಮೃದ್ದ ಮತ್ತು ಸ್ಮೆಕ್ ಸಂಸ್ಥೆ ಸಹಯೋಗದಲ್ಲಿ ನಡೆಯಲಿರುವ ಒಂದು ದಿನದ ಈ ಕಾರ್ಯಕ್ರಮದಲ್ಲಿ, ರೈತರು ತಮಗೆ ಆಸಕ್ತಿ ಎನಿಸಿದ ದೇಸಿ ಭತ್ತದ ತಳಿ ಆಯ್ಕೆ ಮಾಡಿಕೊಳ್ಳಲು, ಸಾವಯವ ಬೀಜೋತ್ಪಾದನೆಯ ಕೌಶಲ್ಯ ಮತ್ತು ವಿಷಮುಕ್ತ ಭತ್ತದ ಕೃಷಿ ಕಲಿಯಲು ಅವಕಾಶವಿದೆ. ಆಸಕ್ತರು ಡಾ.ಉಲ್ಲಾಸ್ ಅವರನ್ನು 6361 596 337 ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ಚಿತ್ರಗಳು: ಲೇಖಕರವು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು