ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಸಂಡೆ ಪ್ರಿಯರೇ ‘ಚಲೋ ತ್ರಿಶೂರ್’!

Last Updated 3 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಅಲಸಂಡೆ (ಅಲಸಂದೆ) ಬಗ್ಗೆ ಗೊತ್ತಿಲ್ಲದ ರೈತರೇ ಇಲ್ಲ. ಆದರೂ, ಆಸಕ್ತ ಕೃಷಿಕರು ಪ್ರತಿ ವರ್ಷ ಹೊಸ ತಳಿಗಾಗಿ ಹುಡುಕಾಡುತ್ತಿರುತ್ತಾರೆ. ದೂರದೂರುಗಳಿಗೆ ಹೋಗಿಬರುವವರೂ ಇದ್ದಾರೆ. ಇಂಥ ರೈತರಿಗೆ ನೂರೈವತ್ತು ವಿವಿಧ ಅಲಸಂಡೆ ತಳಿಗಳು ಒಂದೇ ಕಡೆ ಸಿಗುವಂತಾದರೆ, ‘ಅಷ್ಟೂ ತಳಿಗಳನ್ನು ಬೆಳೆದಿರುವ ಹೊಲಕ್ಕೆ ಕರೆದೊಯ್ದು, ನಿಮಗೆ ಯಾವ ತಳಿ ಬೇಕೋ ಅದನ್ನು ಆಯ್ದು ಕೊಳ್ಳಿ’ ಎಂದು ಹೇಳುವಂತಹ ಸಂದರ್ಭ ಬಂದರೆ ?

ಅಂಥ ಸುವರ್ಣಾವಕಾಶವನ್ನು ಕೇರಳದ ತ್ರಿಶೂರಿನಲ್ಲಿರುವ ನ್ಯಾಷನಲ್‌ ಬ್ಯೂರೊ ಆಫ್ ಪ್ಲಾಂಡ್ ಜೆನೆಟಿಕ್ ರಿಸೋರ್ಸಸ್‌ (ಎನ್‌ಬಿಪಿಜಿಆರ್) ರೈತರಿಗೆ ಒದಗಿಸಿಕೊಡುತ್ತಿದೆ(ಮುಖ್ಯ ಕೇಂದ್ರ ದೆಹಲಿಯಲ್ಲಿದೆ. ದೇಶದಲ್ಲಿ ಒಂಬತ್ತು ಕಡೆ ಇದರ ಉಪಕೇಂದ್ರಗಳಿವೆ). ಭವಿಷ್ಯದ ಅಗತ್ಯಕ್ಕಾಗಿ ಸಸ್ಯವೈವಿಧ್ಯವನ್ನು ಸಂಗ್ರಹಿಸಿ, ಕಾಪಿಡುವ ಈ ಸಂಸ್ಥೆ ಇದೇ ಡಿಸೆಂಬರ್ 7ರಿಂದ 150 ಬಗೆಯ ಅಲಸಂಡೆ ತಳಿಗಳ ಕ್ಷೇತ್ರೋತ್ಸವ ಆಯೋಜಿಸುತ್ತಿದೆ. ತ್ರಿಶೂರ್‌ ರೈಲು ನಿಲ್ದಾಣದಿಂದ 13 ಕಿ.ಮೀ ದೂರದ ವೆಳ್ಳಾನಿಕ್ಕರ್ ಕೇರಳ ಕೃಷಿ ವಿಶ್ವವಿದ್ಯಾಲಯದ ಕೇಂದ್ರದ ಪಕ್ಕದಲ್ಲಿರುವ ಎನ್‌ಬಿಪಿಜಿಆರ್ ಸಂಸ್ಥೆಯ ಆವರಣದಲ್ಲಿ ಈ ಅಲಸಂಡೆ ಕ್ಷೇತ್ರೋತ್ಸವ ನಡೆಯುತ್ತಿದೆ.

ಪಾಲ್ಗೊಳ್ಳಲು ಇಷ್ಟವಿರುವವರು ಮೊದಲೇ ದೂರವಾಣಿ / ಮಿಂಚಂಚೆ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಡಿಸೆಂಬರ್ 7 ರಂದು ಹತ್ತು ಗಂಟೆಗೆ ಅಲ್ಲಿರಬೇಕು. ಸಂಸ್ಥೆಯವರು ಮೊದಲು ನೋಂದಾಯಿತ ರೈತರೊಂದಿಗೆ ಚಿಕ್ಕ ಸಭೆ ನಡೆಸಿ ವಿವರ ತಿಳಿಸಿ, ಹೊಲಕ್ಕೆ ಕಳಿಸುತ್ತಾರೆ. ಹೊಲವನ್ನು ಸುತ್ತಾಡಿ ಬೇಕೆನಿಸಿದ ಅಲಸಂಡೆ ತಳಿಯ ಹೆಸರು ಬರೆದು ಕೊಟ್ಟರಾಯಿತು. ಮಧ್ಯಾಹ್ನದ ಹೊತ್ತಿಗೆ ಕೆಲಸ ಮುಗಿಯುತ್ತದೆ.

ನಂತರ ರೈತರು ಗುರುತಿಸಿದ ತಳಿಯ ಅವಧಿ ಮುಗಿದ ಮೇಲೆ ಕೇಂದ್ರ, ಅದರಿಂದ ಅಲಸಂಡೆ ಕೋಡುಗಳ ಬೀಜ ಸಂಗ್ರಹಿಸುತ್ತದೆ. ಇದರಲ್ಲಿ ನಿಗದಿತ ಸಂಖ್ಯೆಯ ಬೀಜಗಳನ್ನು ಸಂಸ್ಥೆಯವರೇ ಇಟ್ಟುಕೊಳ್ಳುತ್ತಾರೆ. ಒಂದಷ್ಟು ಬೀಜಗಳನ್ನು ಕಾಪಿಟ್ಟು, ಉಳಿದವನ್ನು ದೆಹಲಿಯ ಮುಖ್ಯ ಕಚೇರಿಗೆ ಕಳಿಸುತ್ತಾರೆ. ಉಳಿದವುಗಳಲ್ಲಿ ಆಸಕ್ತರ ಆದೇಶಕ್ಕನುಸಾರ ಬೀಜಗಳನ್ನು ಹಂಚಿಕೆ ಮಾಡಿ ಸಂದೇಶ ಕಳಿಸುತ್ತಾರೆ. ಆಗ ಮೊದಲು ತಳಿ ಗುರುತಿಸಿದ ರೈತರು ಕೇಂದ್ರಕ್ಕೆ ಹೋಗಿ ಬೀಜ ಪಡೆಯಬಹುದು. ಬೀಜಕ್ಕೆ ರೈತರು ಹಣ ಕೊಡಬೇಕಿಲ್ಲ. ಆದರೆ ಒಂದು ನಿಬಂಧನೆಯಿದೆ. ಈ ಬೀಜ ವ್ಯಾಪಾರ ಮಾಡುವವರಿಗೆ ಅಥವಾ ವಿದೇಶೀಯರಿಗೆ ಕೊಡುವಂತಿಲ್ಲ. ಹಾಗೆಯೇ ರೈತರು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆದು ಮಾರಾಟ ಮಾಡುವುದಕ್ಕೆ ಯಾವುದೇ ಅಡ್ಡಿಯಿಲ್ಲ.

ಈ ಬಾರಿ ‘ಅಲಸಂಡೆ ದಿನ’ದಂದು ಆಯ್ಕೆಗೆ ಸಿಗುವ ತಳಿಗಳು ಒಟ್ಟು 154. ಇದರಲ್ಲಿ ಅಡುಗೆಗೆ ತಾಜಾ / ಒಣ ಬೀಜ ಬಳಸುವ ತಳಿಗಳೂ ಇವೆ. ಆದರೆ ಸಿಂಹಪಾಲು ‘ಯಾರ್ಡ್ ಲಾಂಗ್ ಬೀನ್’ ತಳಿ. ಇದು ಅಡುಗೆಗೆ ಬಳಸುವ ತಳಿ.

ಈ ಕೇಂದ್ರದ ವಿಜ್ಞಾನಿ ತಂಡ ದೇಶದ ವಿವಿಧ ಭಾಗಗಳ ಹಳ್ಳಿಗಳಲ್ಲಿ ಸಂಚರಿಸಿ ತಳಿವೈವಿಧ್ಯವನ್ನು ಸಂಗ್ರಹಿಸುತ್ತಿರುತ್ತದೆ. ಇವರಲ್ಲಿರುವ ತಳಿ ಸಂಪತ್ತಿನಲ್ಲಿ ಬಹುಪಾಲು ಕೇಂದ್ರದ ಮುಖ್ಯಸ್ಥ ಡಾ.ಜೋಸೆಫ್ ಜಾನ್ ಸಂಗ್ರಹಿಸಿದಂಥವು. ನಾಲ್ಕು ವರ್ಷಗಳಲ್ಲಿ ಬೇರೆಬೇರೆ ಸಂದರ್ಭಗಳಲ್ಲಿ ಈಶಾನ್ಯ ಭಾರತ ಮತ್ತು ಪಶ್ಚಿಮ ಘಟ್ಟಗಳಿಂದ ಆಯ್ದು ತಂದಿದ್ದಾರೆ.

ಕ್ಷೇತ್ರೋತ್ಸವದಲ್ಲಿ ಕೃಷಿಕರಿಗೆ ಆಯ್ದುಕೊಳ್ಳಲು ಸಿಗುವ ತಳಿಗಳಲ್ಲಿ ಈಗಾಗಲೇ ಬೇರೆಬೇರೆ ಸಂಶೋಧನಾ ಕೇಂದ್ರಗಳಿಂದ ಬಿಡುಗಡೆಯಾದ ತಳಿಗಳಾದ ಅರ್ಕಾ ಮಂಗಳ, ಗೀತಿಕಾ, ಭಾಗ್ಯಲಕ್ಶ್ಮಿ, ಮಿತ್ರ, ಕೈರಳಿ, ಲೋಲಾ, ಕಾಶಿ ಕೋಮಲ್, ಪಂತ್ ನಗರ್ – 18 ಇರುತ್ತವೆ. ಸಂಗ್ರಹಿಸಿ ತಂದ ಹೆಚ್ಚಿನ ತಳಿಗಳಿಗೆ ಹೆಸರು ಇರಲಾರದು. ಬರೀ ನಂಬರಿನ ಬೋರ್ಡ್ ಹತ್ತಿರದಲ್ಲಿ ಇರುತ್ತದೆ. ಕೇಂದ್ರ ಸಂಗ್ರಹಿಸಿ ತಂದ ಅಲಸಂಡೆ ತಳಿಗಳಲ್ಲಿ ಶೇ 90ರಷ್ಟು ಮಿಜೋರಾಂ, ತ್ರಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮೂಲದವು.

ವೇಲಂತಾವಳಂ ಇವರ ಸಂಗ್ರಹದಲ್ಲಿರುವ ಒಂದು ವಿಶಿಷ್ಟ ತಳಿ. 30 ರಿಂದ 40 ಸೆಂಟಿಮೀಟರ್ ಉದ್ದ ಇರುವ ಕೋಡು. ಒಳ್ಳೆಯ ರುಚಿ. ಬೇಯಿಸಿದಾಗಲೂ ಕುಗ್ಗದ ಗುಣ.ಮೂಲ ತಳಿಯನ್ನು ವೇಲಂತಾವಳಂ ಊರಿನಿಂದ ತಂದಿದ್ದಾರೆ. ಅದಕ್ಕೆ ಅದೇ ಹೆಸರು ಇಟ್ಟಿದ್ದಾರೆ.

ಆಕರ್ಷಕ ‘ಮೆಜೆಂಟಾ’ ಬಣ್ಣದ, ನಾರು ರಹಿತ ಮೋಹಿನಿ ಎಂಬ ಗುಜರಾತಿನ ತಳಿ ಉತ್ತಮ ಇಳುವರಿ ಕೊಡುತ್ತದೆ. ಐಐಎಚ್ಆರ್‌ನ ‘ಅರ್ಕಾ ಮಂಗಳ’ ಒಂದೂವರೆ ಮೀಟರ್ ಉದ್ದ ಇದೆ. ಆದರೆ ರುಚಿ ಸಾಲದು ಎನ್ನುವ ಕಾರಣಕ್ಕಾಗಿ ಕೇರಳದ ವಾಣಿಜ್ಯ ಕೃಷಿಕರನ್ನು ಆಕರ್ಷಿಸಿಲ್ಲ. ಕೇರಳದ ‘18 ಮಣಿ’ ಅಥವಾ ‘ಕಂಜಿಕ್ಕುಳಿ ಪಯರ್’ ಎಂಬ ಅಲಸಂಡೆ ತಳಿ ಅಲೆಪ್ಪಿ ಜಿಲ್ಲೆಯ ಕಂಜಿಕ್ಕುಳಿಯದ್ದು. ಅದು ಊರಿಗೇ ಹೆಸರು ತಂದು ಕೊಟ್ಟಿದೆ. ಮಳೆಗಾಲ ಹೊರತುಪಡಿಸಿ ಉಳಿದೆಲ್ಲಾ ಕಾಲದಲ್ಲಿ ರಾಜ್ಯದ ಉದ್ದಗಲಗಳಲ್ಲಿ ಇದನ್ನು ಬೆಳೆಯುತ್ತಾರೆ.

‘ಹೆಸರು ಇಡದ ಎಲ್ಲೋ ಮೊಸಾಯಿಕ್ ವೈರಸ್ ಕಾಯಿಲೆ ಸಹಿಷ್ಣುತೆ ಗುಣವಿರುವ ಕೆಲವು ತಳಿಗಳೂ ನಮ್ಮಲ್ಲಿವೆ’ ಎನ್ನುತ್ತಾರೆ ಕೇಂದ್ರ ಪ್ರಧಾನ ವಿಜ್ಞಾನಿ ಡಾ.ಲತಾ. ಹಾಗೆಂದು ಇಲ್ಲಿನ ಈ ಅಗಾಧ ಸಂಗ್ರಹದ ಪ್ರತಿಯೊಂದು ಅಲಸಂಡೆ ತಳಿಯ ರುಚಿ, ಗುಣಾವಗುಣ ಇತ್ಯಾದಿಗಳು ಈ ವಿಜ್ಞಾನಿಗಳಿಗೆ ಗೊತ್ತಿರಲಾರದು. ಕೃಷಿಕರು ತಂದು ನೆಟ್ಟು ಒಂದೆರಡು ವರ್ಷಗಳಲ್ಲಿ ಒಳ್ಳೆಯ ಮೌಲ್ಯಮಾಪನ ಮಾಡಬಹುದು.

ಈ ಹಿಂದೆ ಆದೇಶ ಕೊಟ್ಟ ಸರ್ಕಾರಿ ಸಂಸ್ಥೆಗಳಿಗಷ್ಟೇ ಈ ಅಲಸಂಡೆ ತಳಿಗಳನ್ನು ವಿತರಿಸುತ್ತಿದ್ದರು. ಆದರೆ ಹೈಬ್ರಿಡ್ ಬೀಜಗಳ ಭರಾಟೆಯಲ್ಲಿ ಅಪೂರ್ವ ತರಕಾರಿ ತಳಿ ಉಳಿಸಬೇಕಾದರೆ ಕೃಷಿಕರಿಗೆ ಬೀಜ ಕೊಡುವುದೇ ಫಲಿತಾಂಶ ನಿರ್ದೇಶಿತ ದಾರಿ ಎಂದು ತ್ರಿಶೂರ್‌ ಉಪಕೇಂದ್ರದ ವಿಜ್ಞಾನಿಗಳಿಗೆ ಅನಿಸಿತು. ಕೃಷಿಕ ಸ್ನೇಹಿಯಾಗಿರುವ ಡಾ. ಜೋಸೆಫ್ ಜಾನ್ ಮತ್ತು ಸಹೋದ್ಯೋಗಿಗಳು ಈ ನಿಟ್ಟಿನಲ್ಲಿ ನೀತಿಯಲ್ಲಿ ಬದಲಾವಣೆ ತರುವುದರಲ್ಲಿ ಯಶಸ್ಸು ಪಡೆದರು.

ಇಲ್ಲೂ ಒಂದು ತೊಡಕಿದೆ. ಬೀಜಗಳು ಸಿದ್ಧವಾದಾಗ ಕೇಂದ್ರ ಆದೇಶ ಕೊಟ್ಟ ರೈತರಿಗೆ ಮಾಹಿತಿ ಕೊಡುತ್ತದೆ. ಆದರೆ ಬೀಜ ಪಡೆಯಲು ಅವರು ಪುನಃ ಕೇಂದ್ರಕ್ಕೆ ಹೋಗಬೇಕು. ದೂರದವರಿಗೆ ಇದು ಕಷ್ಟ. ‘ಕಳಿಸಿಕೊಡುವ ಸೌಲಭ್ಯ ನಮ್ಮಲ್ಲಿಲ್ಲ. ಆದರೆ ಆಯಾ ರೈತರು ಯಾರನ್ನಾದರೂ ತಮ್ಮ ಪ್ರತಿನಿಧಿಯಾಗಿ ಕಳಿಸಿದರೆ ನಾವು ಅವರಿಗೆ ಬೀಜ ಕೊಡುತ್ತೇವೆ’ ಎನ್ನುತ್ತಾರೆ ಡಾ. ಜೋಸೆಫ್ ಜಾನ್.

ಸಂಪರ್ಕ : 0487 – 2370499 / 094478 89787 / 094006 73271, email: nbgr.thrissur@icar.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT