ಮಂಗಳವಾರ, ನವೆಂಬರ್ 19, 2019
29 °C

ದೊಣ್ಣೆ ಮೆಣಸಿನ ಮೋಹಕ ಬೆಡಗು

Published:
Updated:

ಶಿರಸಿಯ ತೋಟಗಾರಿಕಾ ಕಾಲೇಜಿನ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಾಯೋಗಿಕ ಕಲಿಕೆಗೆ ಆಯ್ದುಕೊಂಡಿದ್ದು ಬಣ್ಣದ ದೊಣ್ಣೆ ಮೆಣಸಿನ ಕೃಷಿ.

ಹಸಿರು ಮನೆಯಲ್ಲಿ ವಿದ್ಯಾರ್ಥಿಗಳು ಬೆಳೆಸಿರುವ ದೊಣ್ಣೆ ಮೆಣಸಿನ ಬಳ್ಳಿಗಳು, ಮೈತುಂಬ ಕೆಂಪು, ಹಳದಿ ಕಾಯಿ ಹೊತ್ತುಕೊಂಡಿವೆ. ತರಕಾರಿ ಕಟಾವಿಗೆ ಹೋಗುವ ವಿದ್ಯಾರ್ಥಿಗಳಿಗೆ, ಎಣ್ಣೆ ಮೆತ್ತಿದಂತೆ ಹೊಳೆಯುವ ಈ ಬಣ್ಣದ ಬೆಡಗಿಯರ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸುವುದೇ ಏನೋ ಸಂಭ್ರಮ.

ತೋಟಗಾರಿಕಾ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ಆರು ತಿಂಗಳು ಮಣ್ಣಿನ ಒಡನಾಟ ಕಡ್ಡಾಯ. ಗರಿಗರಿಯಾದ ಸಮವಸ್ತ್ರ ತೊಟ್ಟು ಕಾಲೇಜಿಗೆ ಬರುವ ವಿದ್ಯಾರ್ಥಿಗಳು, ಮಣ್ಣಿನ ಮಕ್ಕಳಾಗಿ ದುಡಿದ ನಂತರವೇ ಪದವಿ ಪ್ರಮಾಣಪತ್ರ ಪಡೆಯಬೇಕು. ಹೀಗಾಗಿ ಪ್ರಯೋಗಶೀಲತೆಗೆ ಒಗ್ಗಿಕೊಳ್ಳುವ ಮಕ್ಕಳು, ತಮ್ಮೊಳಗೇ ಸೌಹಾರ್ದ ಸ್ಪರ್ಧೆಗೆ ಅಣಿಯಾಗುತ್ತಾರೆ. ಉತ್ತಮ ಕೃಷಿಕರಾಗಿ, ಪ್ರಾಧ್ಯಾಪಕರಿಂದ ಭೇಷ್ ಎನಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಈ ಬಾರಿಯ ವಿದ್ಯಾರ್ಥಿಗಳ ತಂಡ ದೊಣ್ಣೆ ಮೆಣಸು ಕೃಷಿಗೆ ಒಲವು ತೋರಿದೆ. ಪಾಲಿಹೌಸ್ ಒಳಗಿನ ಐದು ಗುಂಟೆ ಜಾಗದಲ್ಲಿ ಬಳ್ಳಿಯಂತೆ ಹಬ್ಬುವ ಸುಮಾರು 1300 ದೊಣ್ಣೆ ಮೆಣಸಿನ ಗಿಡಗಳನ್ನು ಬೆಳೆಸಿದೆ. ವಿದ್ಯಾರ್ಥಿಗಳ ಆರೈಕೆಯಲ್ಲಿ ಬೆಳೆದಿರುವ ಹತ್ತಡಿ ಎತ್ತರದ ಗಿಡಗಳಲ್ಲಿ ನಕ್ಷತ್ರದಂತೆ ಮಿಂಚುತ್ತಿವೆ ಕೆಂಪು–ಹಳದಿ ಕಾಯಿಗಳು.

‘ಬಣ್ಣದ ದೊಣ್ಣೆ ಮೆಣಸಿಗೆ ಮಹಾನಗರಗಳು, ಪಂಚತಾರಾ ಹೋಟೆಲ್‌ಗಳಲ್ಲಿ ಬೇಡಿಕೆ ಹೆಚ್ಚು. ವಿಟಮಿನ್ ‘ಸಿ’, ‘ಎ’ ಹೇರಳವಾಗಿರುವ ಇದನ್ನು ಪಿಝ್ಜಾ, ಬರ್ಗರ್‌ ಮೊದಲಾದ ಯುವಜನರ ನೆಚ್ಚಿನ ತಿನಿಸುಗಳ ಟಾಪಿಂಗ್‌ಗೆ ಬಳಸುತ್ತಾರೆ. ಟೊಮೆಟೊ, ಬೀನ್ಸ್, ಸೊಪ್ಪು ಇನ್ನಾವುದೋ ತರಕಾರಿಯ ದರ ಕುಸಿಯಬಹುದು. ಆದರೆ, ಬಣ್ಣದ ದೊಣ್ಣೆ ಮೆಣಸಿನ ಡಿಮ್ಯಾಂಡ್ ತಗ್ಗುವುದಿಲ್ಲ. ಹೀಗಾಗಿಯೇ ನಾವು ಇದನ್ನು ಬೆಳೆಯುವ ಪ್ರಯೋಗಕ್ಕೆ ಮುಂದಾದೆವು’ ಎನ್ನುತ್ತಾರೆ ವಿದ್ಯಾರ್ಥಿ ಬಸವರಾಜ್, ಯೋಗಿತಾ.

ಈ ಯುವ ಕೃಷಿಕರಿಗೆ ಮಾರ್ಗದರ್ಶಕರು ತರಕಾರಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಹೊಂಗಲ್. ಅವರ ಪ್ರಕಾರ, ಬಣ್ಣದ ದೊಣ್ಣೆ ಮೆಣಸು ಸಂರಕ್ಷಿತ ಬೇಸಾಯಕ್ಕೆ ಹೇಳಿ ಮಾಡಿಸಿದ ಬೆಳೆ. ‘ಬಯಲಿನಲ್ಲಿ ಬೆಳೆದರೆ, ಒಂದು ಕಾಯಿಯ ತೂಕ 100 ಗ್ರಾಂ ದಾಟದು. ಅದೇ ಪಾಲಿಹೌಸ್‌ನಲ್ಲಿ ಬೆಳೆದರೆ ಪ್ರತಿ ಕಾಯಿ ಸರಾಸರಿ 300 ಗ್ರಾಂ ಭಾರವಿರುತ್ತದೆ. ವಿದೇಶಕ್ಕೆ ರಫ್ತು ಮಾಡುವ ಗುಣಮಟ್ಟದ ಉತ್ಪನ್ನಗಳು ಕೈಗೆ ಸಿಗುತ್ತವೆ. ಸಂರಕ್ಷಿತ ಬೇಸಾಯದಲ್ಲಿ ಐದಾರು ಪಟ್ಟು ಹೆಚ್ಚು ಇಳುವರಿ ಪಡೆಯಬಹುದು. ಹವಾಮಾನ ವೈಪರೀತ್ಯದಿಂದ ಬೆಳೆ ರಕ್ಷಿಸಿಕೊಳ್ಳಲು ಇದು ಸುಲಭ ಮಾದರಿ’ ಎಂಬುದು ಅವರ ಅನುಭವ.

‘ಒಂದು ಮೀಟರ್ ಅಗಲ ಹಾಗೂ ಒಂದು ಮೀಟರ್ ಎತ್ತರದ ಮಣ್ಣಿನ ಏರು ಮಾಡಿಕೊಳ್ಳಬೇಕು. ಮಡಿಗಳಿಗೆ ಕಳಿತ ಗೊಬ್ಬರ, ಬೇವಿನ ಹಿಂಡಿ, ಟ್ರೈಕೋಡರ್ಮಾ, ಜೈವಿಕ ಪೀಡೆನಾಶಕ ಮಿಶ್ರಣವನ್ನು ಸೇರಿಸಬೇಕು. ಪ್ರತಿ ಮಡಿಯಲ್ಲಿ ಒಂದೂವರೆ ಅಡಿ ಅಂತರದಲ್ಲಿ ಎರಡು ಸಾಲು ಸಸಿ ನಾಟಿ ಮಾಡಬೇಕು. ಸಮಾನಾಂತರವಾಗಿ ಕೂಡ ಒಂದು ಸಸಿಯಿಂದ ಇನ್ನೊಂದು ಸಸಿಗೆ ಒಂದೂವರೆ ಅಡಿ ಅಂತರವಿದ್ದರೆ ಉತ್ತಮ. ಒಂದು ಮಡಿಯಿಂದ ಇನ್ನೊಂದು ಮಡಿ ನಡುವೆ ಒಂದು ಅಡಿ ಜಾಗ ಬಿಟ್ಟರೆ, ಓಡಾಟಕ್ಕೆ, ಔಷಧ ಸಿಂಪರಣೆಗೆ ಅನುಕೂಲ’ ಇದು ವಿದ್ಯಾರ್ಥಿಗಳು ನೀಡುವ ವಿವರಣೆ.

‘ನಾನೊಬ್ಬ ರೈತನ ಮಗ. ನಮಗೆ ಬಯಲು ಬೇಸಾಯವಷ್ಟೇ ಗೊತ್ತಿತ್ತು. ಹೊರಗಿನ ವಾತಾವರಣದಲ್ಲಿ ಬೆಳೆ ಬೆಳೆದು, ಕೆಲವೊಮ್ಮೆ ಗಾಳಿ–ಮಳೆ, ಇನ್ನು ಕೆಲವೊಮ್ಮೆ ಬರದಿಂದ ಬೆಳೆ ಕಳೆದುಕೊಳ್ಳುವ ಅನುಭವ ನಮಗೆ ಹೊಸತೇನಲ್ಲ. ಆದರೆ, ಸಂರಕ್ಷಿತ ಬೇಸಾಯ ಹಾಗಲ್ಲ. ನಿರ್ದಿಷ್ಟ ಹವಾಮಾನ ಸೃಷ್ಟಿಸಿಕೊಂಡು ವರ್ಷಪೂರ್ತಿ ಬೆಳೆ ತೆಗೆಯಬಹುದು. ನಿರ್ವಹಣೆಯೂ ಸುಲಭ. ಈ ಮಾದರಿಯನ್ನು ನಮ್ಮೂರಿನ ರೈತರಿಗೂ ಪರಿಚಯಿಸಬೇಕೆಂದುಕೊಂಡಿದ್ದೇನೆ. ಕಲಿಕೆಯ ನಂತರ ಸ್ವ ಉದ್ಯೋಗಕ್ಕೂ ಈ ಪದ್ಧತಿ ಸಹಕಾರಿ’ ಎನ್ನುತ್ತಾರೆ ವಿದ್ಯಾರ್ಥಿ ರೋಹಿತ್ ಗೌಡ.

ನಾಟಿ ಮತ್ತು ತಗಲುವ ವೆಚ್ಚ

‘ಸಸಿ ನಾಟಿ ಮಾಡಿ ಸುಮಾರು 50 ದಿನಗಳಿಗೆ ಹಸಿರು ಕಾಯಿ ಕಟಾವು ಮಾಡಬಹುದು. ಹಸಿರು ಕಾಯಿ ಬಣ್ಣಕ್ಕೆ ತಿರುಗಬೇಕೆಂದರೆ 80 ದಿನಗಳವರೆಗೆ ಗಿಡದಲ್ಲಿ ಬಿಡಬೇಕು. ಬೆಳೆ ಬಂದ ಮೇಲೆ ಐದಾರು ತಿಂಗಳವರೆಗೆ ಪ್ರತಿ ಮೂರು ದಿನಗಳಿಗೊಮ್ಮೆ ಕೊಯ್ಲು ಮಾಡಬಹುದು. ಒಂದು ಗಿಡದಿಂದ ಸರಾಸರಿ 5–6 ಕೆ.ಜಿ ಬೆಳೆ ಸಿಗುತ್ತದೆ.

ಕಡಿಮೆ ನೀರು ಸಾಕು. ಹನಿ ನೀರಾವರಿ ಮೂಲಕವೇ ಗಿಡಗಳ ಬೆಳವಣಿಗೆಗೆ ಪೂರಕವಾಗುವ ಕ್ಯಾಲ್ಸಿಯಂ ನೈಟ್ರೇಟ್, ಪೊಟಾಷಿಯಂ ನೈಟ್ರೇಟ್, ಪೊಟಾಷ್ ಸಲ್ಫೇಟ್, ಆಲ್ 19, ಸಮೃದ್ಧಿಯಂತಹ ಮೈಕ್ರೊನ್ಯೂಟ್ರಿಯಂಟ್‌ ನೀಡಬಹುದು.

ಒಂದು ಎಕರೆಯಲ್ಲಿ 13ಸಾವಿರ ಸಸಿ ಬೆಳೆಸಬಹುದು. ಬಣ್ಣದ ದೊಣ್ಣೆ ಮೆಣಸು ಕೆ.ಜಿ.ಯೊಂದಕ್ಕೆ ₹ 40ರಿಂದ 100ರವರೆಗೆ ಮಾರಾಟವಾಗುತ್ತದೆ. ಕನಿಷ್ಠ ದರ ಸಿಕ್ಕರೂ ₹ 16–20 ಲಕ್ಷ ಆದಾಯ ಪಡೆಯಬಹುದು. ಒಂದು ಎಕರೆಯಲ್ಲಿ ಪಾಲಿಹೌಸ್ ನಿರ್ಮಿಸಲು ತಗಲುವ ವೆಚ್ಚ ಸುಮಾರು ₹ 32 ಲಕ್ಷ ವೆಚ್ಚ. ತೋಟಗಾರಿಕಾ ಇಲಾಖೆಯಲ್ಲಿ ಸಾಮಾನ್ಯ ರೈತರಿಗೆ ಶೇ 50, ಪರಿಶಿಷ್ಟರಿಗೆ ಶೇ 90ರ ಸಹಾಯಧನ ಸಿಗುತ್ತದೆ. ಎರಡು ಬೆಳೆಯಲ್ಲಿ ಪಾಲಿಹೌಸ್ ನಿರ್ಮಾಣದ ಸಾಲ ತೀರಿಸಿಕೊಂಡರೆ, ನಂತರದ ಬೆಳೆಗಳು ಲಾಭದಾಯಕವೇ. ಪಾಲಿಹೌಸ್ ಒಮ್ಮೆ ನಿರ್ಮಿಸಿಕೊಂಡರೆ ಶಾಶ್ವತ. ನಾಲ್ಕೈದು ವರ್ಷಗಳಿಗೊಮ್ಮೆ ಮೇಲಿನ ಶೀಟ್ ಬದಲಾಯಿಸಿದರೆ ಸಾಕು.

ಇದನ್ನೂ ಓದಿ: ಕೃಷಿ ಹೊಂಡ ತುಂಬಿಸಿದ ಪಾಲಿಹೌಸ್‌!

ಬಣ್ಣದ ದೊಣ್ಣೆ ಮೆಣಸಿಗೆ ಸ್ಥಳೀಯ ಮಾರುಕಟ್ಟೆ ಕಡಿಮೆ. ಬೆಳಗಾವಿ, ಪುಣೆ, ಹೈದ್ರಾಬಾದ್, ಗೋವಾಕ್ಕೆ ಕಳುಹಿಸಬೇಕು. ನಾವು 12 ಕೆ.ಜಿ ಬಾಕ್ಸ್‌ ತುಂಬಿಸಿ, ಸಾರಿಗೆ ಸಂಸ್ಥೆ ಬಸ್‌ನಲ್ಲಿ ಕಳುಹಿಸುತ್ತೇವೆ. ಇದಕ್ಕೇನು ಹೆಚ್ಚು ಖರ್ಚಿಲ್ಲ. ದೊಡ್ಡ ಪ್ರಮಾಣದಲ್ಲಿ ಬೆಳೆದರೆ ವಿದೇಶಕ್ಕೆ ರಫ್ತು ಮಾಡಬಹುದು. ಆಗ ಇದರ ನಾಲ್ಕು ಪಟ್ಟು ಹೆಚ್ಚು ದರ ಸಿಗುತ್ತದೆ’ ಎಂದು ವಿವರಿಸಿದ ಶಿವಾನಂದ ಹೊಂಗಲ್, ಆದರೆ ಇವೆಲ್ಲ ಸಾಧ್ಯವಾಗುವುದು ಸಂರಕ್ಷಿತ ಬೇಸಾಯ ಪದ್ಧತಿಯಿಂದ ಮಾತ್ರ ಎನ್ನಲು ಮರೆಯಲಿಲ್ಲ. ಅವರ ಸಂಪರ್ಕ ಸಂಖ್ಯೆ: 8147572913.  

ಚಿತ್ರಗಳು: ಲೇಖಕರವು

ಪ್ರತಿಕ್ರಿಯಿಸಿ (+)