ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧ, ತೊಂದರೆಗಳ ನಡುವೆ ಕೃಷಿ ಕಾಯಕ

ಗ್ಯಾರೇಜ್, ಕುಲುಮೆಗಳಿಲ್ಲ; ದುರಸ್ತಿಗೆ ಪರದಾಟ, ಪೊಲೀಸರ ಭಯ
Last Updated 30 ಮೇ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ರೈತರು ಮುಂಗಾರು ಹಂಗಾಮಿಗೆ ಅಗತ್ಯ ತಯಾರಿ ಮಾಡಿಕೊಳ್ಳುವುದಕ್ಕೆ ಕೋವಿಡ್ ಲಾಕ್‌ಡೌನ್‌ ತೊಡಕಾಗಿ ಪರಿಣಮಿಸಿದೆ.

ನಿರ್ಬಂಧ ಹಾಗೂ ತೊಂದರೆಗಳ ನಡುವೆ ಅಲ್ಲಲ್ಲಿ ಕೃಷಿ ಕಾಯಕದಲ್ಲಿ ಅನ್ನದಾತರು ತೊಡಗಿದ್ದಾರೆ. ಭೂಮಿ ಹದಗೊಳಿಸುವ ಚಟುವಟಿಕೆಗಳು ಕಂಡುಬರುತ್ತಿವೆ.

ಲಾಕ್‌ಡೌನ್‌ ಕಾರಣದಿಂದ ಕೃಷಿ ಪರಿಕರಗಳ ಅಂಗಡಿಗಳು ದಿನವಿಡೀ ಕಾರ್ಯನಿರ್ವಹಿಸುತ್ತಿಲ್ಲ. ಪಟ್ಟಣ ಅವಲಂಬಿತ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಆಗುತ್ತಿಲ್ಲ. ಗ್ಯಾರೇಜ್‌ಗಳು, ಕುಲುಮೆಗಳು ಬಂದ್ ಆಗಿವೆ. ಪರಿಣಾಮ, ದುರಸ್ತಿ ಸಾಧ್ಯವಾಗುತ್ತಿಲ್ಲ. ಟ್ರ್ಯಾಕ್ಟರ್, ಪಂಪ್‌ಸೆಟ್ ಮೊದಲಾದವುಗಳು ಕೆಟ್ಟರೆ ಪರದಾಡಬೇಕಾದ ಸ್ಥಿತಿ ಇದೆ. ವಾರಾಂತ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸುವುದು ಕೂಡ ಕೃಷಿ ಕೆಲಸಗಳಿಗೆ ಅಡ್ಡಿಯಾಗಿ ಪರಿಣಮಿಸಿದೆ. ಜಮೀನುಗಳಿಗೆ ಹೋಗುವಾಗಲೂ ಪೊಲೀಸರ ಭಯ ಕೃಷಿಕರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ಹೋದ ವರ್ಷ 6.68 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಬಾರಿ 7.16 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. 46ಸಾವಿರದಿಂದ 48ಸಾವಿರ ಕ್ವಿಂಟಲ್‌ ಬಿತ್ತನೆಬೀಜಗಳು ಮತ್ತು 2.05 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಬೆಳಿಗ್ಗೆ ಐದೂವರೆಗೆ ಬರಬೇಕು

ಚನ್ನಮ್ಮನ ಕಿತ್ತೂರು: ಉತ್ತಮ ಮಳೆ ಆಗುತ್ತಿರುವುದರಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಈ ಭಾಗದಲ್ಲಿ ಹೆಚ್ಚು ಬೇಡಿಕೆ ಬಂದಿದೆ. ಕೃಷಿ ಇಲಾಖೆಯಿಂದ ಸೋಯಾಅವರೆ, ಭತ್ತದ ಬೀಜಗಳನ್ನು ನೀಡಲಾಗುತ್ತಿದೆ. ಜೊತೆಗೆ ಡಿಎಪಿ ಗೊಬ್ಬರವೂ ಬೇಕು. ಸೊಸೈಟಿಗಳಲ್ಲಿ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ. ಖಾಸಗಿ ಕೃಷಿ ಕೇಂದ್ರಗಳನ್ನೇ ರೈತರು ಅವಲಂಬಿಸಿದ್ದಾರೆ. ಲೌಕ್‌ಡೌನ್ ಹಿನ್ನೆಲೆಯಲ್ಲಿ ರಸಗೊಬ್ಬರ ಅಂಗಡಿಗಳಿಗೆ ಮುಂಜಾನೆ 6ರಿಂದ 10ರವರೆಗೆ ಮಾತ್ರ ಅವಕಾಶವಿದೆ. ಗೊಬ್ಬರಕ್ಕಾಗಿ ಮುಂಜಾನೆ ಐದೂವರೆಗೆ ಸರತಿಯಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ.

ಪರದಾಡುವ ಸ್ಥಿತಿ

ಸವದತ್ತಿ: ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದಾರೆ. ಆದರೆ ಬಿತ್ತನೆ ಬೀಜ, ರಸಗೊಬ್ಬರ ವೇಳೆಗೆ ತಕ್ಕಂತೆ ಸಿಗುತ್ತಿಲ್ಲ. ಕೋವಿಡ್‍ ಕಾರಣದಿಂದ ಪರದಾಡುವ ಸ್ಥಿತಿ ಇದೆ. ಪಟ್ಟಣಗಳಿಗೆ ಬರಲು ಅವರಿಗೆ ಪೊಲೀಸರ ಭಯವೂ ಕಾಡುತ್ತಿದೆ. ರಸಗೊಬ್ಬರ ಅಂಗಡಿಗಳಲ್ಲಿ ವಿತರಣೆಗೆ ಹೆಚ್ಚು ಸಮಯ ಕೊಡಬೇಕು ಎನ್ನುವ ಆಗ್ರಹವಿದೆ.

ಪೊಲೀಸರಿಂದ ನಿರ್ಬಂಧ

ರಾಮದುರ್ಗ: ಲಾಕ್‌ಡೌನ್‌ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ಇರುತ್ತದೆ ಎಂದು ಸರ್ಕಾರ ತಿಳಿಸಿದೆ. ಆದರೆ, ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ ಎಂದು ಪೊಲೀಸರು ನಿರ್ಬಂಧ ವಿಧಿಸುವುದರಿಂದ ಸಮಸ್ಯೆ ಆಗುತ್ತಿದೆ. ಟ್ರ್ಯಾಕ್ಟರ್‌ ಮೊದಲಾದವು ಕೆಟ್ಟರೆ ದುರಸ್ತಿ ಮಾಡಲು ಗ್ಯಾರೇಜ್‌ ತೆರೆದಿಲ್ಲ. ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ.

ಕಂಗಾಲಾಗಿದ್ದಾರೆ

ಹಂದಿಗುಂದ: ಲಾಕ್‌ಡೌನ್‌ನಿಂದಾಗಿ ರಾಯಬಾಗ ತಾಲ್ಲೂಕಿನ ಗಡಿ ಹಳ್ಳಿಗಳಾದ ಹಂದಿಗುಂದ, ಕಪ್ಪಲಗುದ್ದಿ, ಸುಲ್ತಾನಪೂರ, ಮರಾಕುಡಿ ಹಾಗೂ ಪಾಲಭಾಂವಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಮೇಖಳಿ, ಬೆಂಡವಾಡ ಹಾಗೂ ಕುಡಚಿ ರೈತ ಸಂಪರ್ಕ ಕೇಂದ್ರದಿಂದ ಹಾರೂಗೇರಿ, ಅಳಗವಾಡಿ ಹಾಗೂ ಮುಗಳಖೋಡದಲ್ಲಿ ಬಿತ್ತನೆ ಬೀಜ ವಿತರಿಸಲು ಕೃಷಿ ಇಲಾಖೆಯಿಂದ ಸಿದ್ಧತೆ ನಡೆದಿದೆ. ಕೃಷಿ ಪರಿಕರಗಳ ಖರೀದಿಗೆ ಈಗ ನೀಡಿರುವ ಸಮಯ ಸಾಲುತ್ತಿಲ್ಲ. ಮಧ್ಯಾಹ್ನ 2ರವರೆಗೆ ಅವಧಿ ವಿಸ್ತರಿಸಬೇಕು ಎನ್ನುವ ಆಗ್ರಹವಿದೆ. ಟ್ರ್ಯಾಕ್ಟರ್‌, ವಿದ್ಯುತ್ ಪರಿಕರಗಳು, ಪಂಪ್‌ಸೆಟ್ ದುರಸ್ತಿಗೆ ರೈತರು ಪರದಾಡುತಿದ್ದಾರೆ.

‘ಈ ಭಾಗದಲ್ಲಿ ಕೋವಿಡ್ ಲಾಕ್‌ಡೌನ್‌ನಿಂದ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಹಿನ್ನೆಡೆಯಾಗಿದೆ. ಕೆಲಸಕ್ಕೆ ಬರುವುದಕ್ಕೆ ಕೃಷಿ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲಲ್ಲಿ ಮಳೆಯಾಗುತ್ತಿದ್ದು ಹೊಲದಲ್ಲಿ ಕಸ ತೆಗೆಸಲು ಜನರು ಸಿಗುತ್ತಿಲ್ಲ. ಕೃಷಿ ಪರಿಕರ ಖರೀದಿಗೆ ಹಾಗೂ ಬ್ಯಾಂಕ್ ಕೆಲಸಕ್ಕೆ ರೈತರು ಪಟ್ಟಣಕ್ಕೆ ಬರಲು ತೊಂದರೆ ಆಗುತ್ತಿದೆ’ ಎಂದು ಮುನವಳ್ಳಿಯ ನಿವಾಸಿ ಕಿರಣ ಯಲಿಗಾರ ಪ್ರತಿಕ್ರಿಯಿಸಿದರು.

ಹಿರೇಬಾಗೇವಾಡಿಯಲ್ಲೂ ಕೃಷಿಗೆ ಸಂಬಂಧಿಸಿದ ಯಂತಯ್ರೋಪಕರಣ ಅಂಗಡಿಗಳು ಬಂದ್ ಆಗಿವೆ. ದುರಸ್ತಿ ಅಥವಾ ಅಗತ್ಯ ಪರಿಕರಗಳ ಖರೀದಿ ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರನ್ನು ಜಮೀನುಗಳಿಗೆ ಕರೆತರುವುದು ಸೇರಿದಂತೆ ಅನೇಕ ತೊಂದರೆಗಳನ್ನು ಕೃಷಿಕರು ಎದುರಿಸುತ್ತಿದ್ದಾರೆ.

ಹದಗೊಳಿಸುತ್ತಿದ್ದಾರೆ

ಸಂಕೇಶ್ವರ: ಈ ಭಾಗದಲ್ಲಿ ರೈತರು ಭೂಮಿ ಹದಗೊಳಿಸುವಿಕೆ ಕಾರ್ಯದಲ್ಲಿ ತೊಡಗಿದ್ದಾರೆ. ಬಿತ್ತನೆಗೆ ತಯಾರಿ ನಡೆಸಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ಜೂನ್‌ 1ರಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಪ್ರಾರಂಭವಾಗಲಿದೆ. ಸದ್ಯ ಖಾಸಗಿ ಅಂಗಡಿಗಳಲ್ಲಿ ಬಿತ್ತನೆ ಬೀಜ ಮಾರಾಟಕ್ಕೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶವಿದೆ. ರಿಯಾಯಿತಿ ಬಯಸದವರು ಖಾಸಗಿಯವರಿಂದ ಬೀಜ ಖರೀದಿಸುತ್ತಿದ್ದಾರೆ. ಕೃಷಿ ಸಲಕರಣೆಗಳು ಮತ್ತು ಟ್ರ್ಯಾಕ್ಟರ್ ದುರಸ್ತಿ ಅಂಗಡಿಗಳು ಬಂದ್ ಇರುವುದರಿಂದ, ದುರಸ್ತಿಗೆ ತೊಡಕಾಗಿದೆ.

ಬೈಲಹೊಂಗಲದಲ್ಲಿ ಕೃಷಿ ಸಲಕರಣೆ ಸಿಗದೆ ರೈತರು ಪರದಾಡುತ್ತಿದ್ದಾರೆ. ಪೊಲೀಸರು ವಾಹನಗಳನ್ನು ಜಪ್ತಿ ಮಾಡುತ್ತಿರುವುದರಿಂದ ತೊಂದರೆಗೆ ಒಳಗಾಗಿದ್ದಾರೆ. ಗೋಕಾಕದಲ್ಲಿ ರೈತರು ಕೃಷಿ ಸಾಲ ಸಿಗದೆ ಅತಂತ್ರರಾಗಿದ್ದಾರೆ. ಕಳೆದ ವರ್ಷ ಪಡೆದ ಸಾಲ ಸಂಪೂರ್ಣವಾಗಿ ಮರುಪಾವತಿ ಮಾಡದೆ ಹೊಸ ಸಾಲದ ಸಿಗುತ್ತಿಲ್ಲ.

ಕಷ್ಟಗಳನ್ನು ನುಂಗಿಕೊಂಡು...

ಮೂಡಲಗಿ: ಲಾಕ್‌ಡೌನ್‌ದಿಂದ ರೈತರು ಹಲವು ಕಷ್ಟಗಳನ್ನು ನುಂಗಿ ಬಿತ್ತನೆಗೆ ತೊಡಗಿದ್ದಾರೆ. ಕೃಷಿ ಇಲಾಖೆಯು ಬೀಜಗಳನ್ನು ತಡವಾಗಿ ನೀಡಿದ್ದರಿಂದ ಕೆಲವೆಡೆ ಬಿತ್ತನೆಗೆ ಹಿನ್ನಡೆಯಾಗಿದೆ. ಸೋಯಾಅವರೆಯನ್ನು ಸ್ಥಳೀಯವಾಗಿ ಖರೀದಿಸಿದ್ದಾಗಿ ರೈತರು ತಿಳಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದ ಹಿಡಕಲ್‌ ಜಲಾಶಯದಿಂದ 7 ದಿನ ನೀರು ಬಿಡಿಸಿದ್ದರಿಂದ ಬಿತ್ತನೆಗೆ ಅಣಿಯಾಗುತ್ತಿದ್ದಾರೆ. ಬೆಳಿಗ್ಗೆ 10ರ ನಂತರ ರಸ್ತೆಗೆ ಬರಲು ಪೊಲೀಸರ ಭಯ ಕಾಡುತ್ತಿದೆ. ತೋಟಪಟ್ಟಿಗಳಿಗೆ ಹೋಗಲೂ ಹೆದರುವಂತಾಗಿದೆ.

‘ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿರುವುದರಿಂದ ಬಿತ್ತನೆ ಚಟುವಟಿಕೆಗಳು ಆರಂಭಗೊಂಡಿವೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆಬೀಜಗಳ ವಿತರಣೆ ನಡೆದಿದೆ. ಆಶಾದಾಯಕ ಮುಂಗಾರಿನ ನಿರೀಕ್ಷೆ ಇದ್ದು, ಕೃಷಿಕರು ಉತ್ಸಾಹದಿಂದ ಕೃಷಿಯಲ್ಲಿ ತೊಡಗಿದ್ದಾರೆ. ಸದ್ಯ ಸೋಯಾಅವರೆ, ಹೆಸರು ಹಾಗೂ ಉದ್ದುಗೆ ಹೆಚ್ಚಿನ ಬೇಡಿಕೆ ಇದ್ದು, ಪೂರೈಸಲಾಗುತ್ತಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

***

ಲಾಕ್‌ಡೌನ್‌ನಿಂದ ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರವು ಹೇಳಿದ್ದರೂ ಸ್ಥಳೀಯ ಅಧಿಕಾರಿಗಳ ಅಸಹಕಾರದಿಂದ ತೊಂದರೆ ಆಗುತ್ತಿದೆ
ಯಲ್ಲಪ್ಪ ದೊಡಮನಿ, ರೈತ ಮುಖಂಡ, ರಾಮದುರ್ಗ

***

ಎರಡು ವರ್ಷಗಳಿಂದ ಕೋವಿಡ್ ಹೊಡೆತಕ್ಕೆ ಸಿಲುಕಿ ರೈತ ಸಮುದಾಯ ಕಂಗಾಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು
ಶ್ರೀಮಂತ ಪೂಜೇರಿ, ರೈತ, ಹಂದಿಗುಂದ

***

ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಮತ್ತು ಬೆಲೆ ದೊರೆತರೆ ಮಾತ್ರ ರೈತನ ಮೊಗದಲ್ಲಿ ಮಂದಹಾಸ ಕಾಣಬಹುದು, ಇಲ್ಲದೇ ಹೋದರೆ ಶ್ರಮವೆಲ್ಲ ವ್ಯರ್ಥವಾಗುತ್ತದೆ
ಸುರೇಶ ಇಟಗಿ, ಪ್ರಗತಿಪರ ರೈತ, ಹಿರೇಬಾಗೇವಾಡಿ

***

ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ನೀಡಲಾಗುತ್ತಿದೆ. ರಸಗೊಬ್ಬರಗಳನ್ನು ನಿಗದಿತ ದರಕ್ಕೆ ಪಿ.ಒ.ಎಸ್. ಯಂತ್ರದ ಮೂಲಕ ಮಾರಬೇಕು. ಇಲ್ಲವಾದಲ್ಲಿ ಮಾರಾಟಗಾರರ ಪರವಾನಗಿ ರದ್ದುಪಡಿಸಲಾಗುವುದು
ಎಂ.ಎನ್. ಮಾರಡ್ಡಿ, ಕೃಷಿ ಸಹಾಯಕ ನಿರ್ದೇಶಕ, ಸವದತ್ತಿ

***

ಜಿಲ್ಲೆಯ 35 ರೈತ ಸಂಪರ್ಕ ಕೇಂದ್ರಗಳು ಮತ್ತು 95 ಪಿಕೆಪಿಎಸ್‌ಗಳ ಮೂಲಕ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಆರಂಭಿಸಲಾಗಿದೆ. ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು
ಶಿವನಗೌಡ ಪಾಟೀಲ, ಜಂಟಿ ಕೃಷಿ ನಿರ್ದೇಶಕ, ಬೆಳಗಾವಿ

***

ಲೇಥ್‌ ಮಷಿನ್‌ಗಳ ಸೇವೆಗೆ ಅವಕಾಶ ಇಲ್ಲದಿದ್ದರಿಂದ ಟ್ರ್ಯಾಕ್ಟರ್‌ ಮತ್ತು ಮೋಟಾರ್ ದುರಸ್ತಿಗೆ ತೊಂದರೆಯಾಗಿದೆ. ಪಿವಿಸಿ ಪೈಪ್‌ ಸೇರಿದಂತೆ ಕೃಷಿಗೆ ಪೂರಕವಾದ ವಸ್ತುಗಳು ದೊರೆಯುವ ಹಾರ್ಡ್‌ವೇರ್‌ ಶಾಪ್‌ಗಳು ತೆರೆಯಬೇಕು
ಚನ್ನಪ್ಪ ಅಥಣಿ, ಕೃಷಿಕ, ಮೂಡಲಗಿ

(‍ಪ್ರಜಾವಾಣಿ ತಂಡ: ಚನ್ನಪ್ಪ ಮಾದರ, ಪ್ರದೀಪ ಮೇಲಿನಮನಿ, ಪ್ರಸನ್ನ ಕುಲಕರ್ಣಿ, ರಾಮೇಶ್ವರ ಕಲ್ಯಾಣಶೆಟ್ಟಿ, ರವಿ ಎಂ. ಹುಲಕುಂದ, ಎಸ್. ಮಂಜರಗಿ, ಶಿವಕುಮಾರ ಪಾಟೀಲ, ಎಸ್.ಎಸ್. ಹಿರೇಮಠ, ಬಿ.ಎಂ. ಶಿರಸಂಗಿ, ಬಾಲಶೇಖರ ಬಂದಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT