ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಪ್ಪತ್ತು ಎಕರೆಯಲ್ಲಿ ತರಹೇವಾರಿ ಬೆಳೆ

Last Updated 17 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಆಹಾರಕ್ಕೆ ಭತ್ತ, ರಾಗಿ, ಜೋಳದಂತಹ ಧಾನ್ಯದ ಬೆಳೆ, ಹಣಕ್ಕಾಗಿ ತೆಂಗು, ಮಾವು, ಕಾಫಿ, ಕಾಳುಮೆಣಸು, ಶುಂಠಿ... ಮನೆ ಬಳಕೆ, ನಿತ್ಯದ ವಾಣಿಜ್ಯ ವಹಿವಾಟಿಗಾಗಿ ತರಕಾರಿ, ಹಣ್ಣಿನ ಬೆಳೆ, ತೋಟದ ರಕ್ಷಣೆಗೆ ಬೇಲಿಯಾಗಿ ಕಾಡು ಮರಗಳು, ಉಪ ಆದಾಯಕ್ಕೆ ಹೈನುಗಾರಿಕೆ...

ಇದು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿ ಅಂಚೆಪಾಳ್ಯದ ರೈತ ರಮೇಶ್‌ ಜಿ. ಅವರ ದೊಡ್ಡ ಹಿಡುವಳಿಯ ಸಮಗ್ರ ಕೃಷಿಯ ಜಮೀನಿನ ನೋಟ. ಬಿ.ಎಸ್ಸಿ. ರೇಷ್ಮೆ ಕೃಷಿ ಓದಿದ ರಮೇಶ್, ಜೀವನಕ್ಕಾಗಿ ಪೂರ್ವಿಕರು ಅನುಸರಿಸುತ್ತಿದ್ದ ಕೃಷಿ ಬದುಕನ್ನೇ ಆಯ್ಕೆ ಮಾಡಿಕೊಂಡರು. ಒಟ್ಟು 20 ಎಕರೆ ಹಿಡುವಳಿಯ ಭೂಮಿಯಲ್ಲಿ ಒಂದಿಂಚೂ ನೆಲವನ್ನು ವ್ಯರ್ಥ ಮಾಡದೇ, ವೈವಿಧ್ಯಮಯ ಬೆಳೆ ಬೆಳೆದಿದ್ದಾರೆ. ಇವರ ಸಾಧನೆ ಗುರುತಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಡಾ. ದ್ವಾರಕೀನಾಥ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಅವರ ಕೃಷಿ ಚಟುವಟಿಕೆಗೆ ಬಗ್ಗೆ ಮಾಹಿತಿ ಪಡೆದು, ತೋಟಕ್ಕೆ ಭೇಟಿ ನೀಡಿದಾಗ, ಪಡೆದುಕೊಂಡ ಮಾಹಿತಿಯಲ್ಲಿ ಯಾವುದೇ ಉತ್ಪ್ರೇಕ್ಷೆ ಇರಲಿಲ್ಲ ಎನ್ನಿಸಿತು.

ತೋಟ ಸುತ್ತಾಡುತ್ತಾ ಕಂಡಿದ್ದು...

ಉತ್ತರದಿಕ್ಕಿನಿಂದ ಜಮೀನನ್ನು ಪ್ರವೇಶಿಸುತ್ತಿದ್ದಂತೆ ಕಾಯಿಗಳು ತುಂಬಿ ತೊನೆದಾಡುವ 400 ಪಪ್ಪಾಯಿ ಗಿಡಗಳು ಸ್ವಾಗತಿಸಿದವು. ಇನ್ನೊಂದು ಬದಿಯಲ್ಲಿ ಎಂಟನೂರು ಗಿಡಗಳ ಮಾವಿನ ತೋಪು, ಪಕ್ಕದಲ್ಲೇ 250 ತಿಪಟೂರು ಟಾಲ್ ತೆಂಗಿನ ಮರಗಳು ಜತೆಗೆ ಶ್ರೀಲಂಕಾದಿಂದ ತರಿಸಿದ ಕುಬ್ಚ (ಹೈಬ್ರಿಡ್) ತೆಂಗಿನಮರಗಳಲ್ಲಿ ಜೋತಾಡುವ ಕೆಂದನೆಯ ಬಣ್ಣದ ಕಾಯಿಗಳು ಒಮ್ಮೆ ಸ್ಪರ್ಶಿಸಿ ನೋಡುವಷ್ಟು ಆಕರ್ಷವೆನಿಸಿದವು.

ಪಕ್ಕದಲ್ಲೇ ಮುಕ್ಕಾಲು ಎಕರೆಯಲ್ಲಿ ಬೆಳೆದಿದ್ದ ಬಿಳಿ ಹಾಗಲ, ಆಗಷ್ಟೇ ಕಾಯಿ ಬಿಡಲು ಆರಂಭವಾಗಿದ್ದ ಅಲಹಬಾದ್, ಸಫೇದಾ ಎಂಬ ಎರಡು ತಳಿಯ 350 ಸೀಬೆಹಣ್ಣಿನ ಮರಗಳು, ಕಟಾವಿಗೆ ಸಿದ್ಧವಾಗಿದ್ದ ಕ್ರಿಕೆಟ್ ಬಾಲ್, ಕಾಲಿಪತ್ತಿ ಎರಡೂ ವೆರೈಟಿಯ 300 ಸಪೋಟಾ ಮರಗಳು ತೋಟಗಾರಿಕೆಯ ವಿನ್ಯಾಸವನ್ನು ಪರಿಚಯಿಸಿದವು.

ಅಷ್ಟು ದೊಡ್ಡ ಜಮೀನಾದರೂ, ಎಲ್ಲೂ ಕೂಡ ಒಂದೇ ತರಹದ ಬೆಲೆಗಳು ಕಾಣಿಸಲಿಲ್ಲ. ಇನ್ನೇನು ದೊಡ್ಡ ದೊಡ್ಡ ಪ್ಲಾಟ್‌ಗಳನ್ನು ನೋಡಿದ್ದಾಯಿತು, ಎನ್ನುವಷ್ಟರಲ್ಲಿ ನಿಂಬೆಗಿಡಗಳ ಸಾಲು, ಕಿತ್ತಲೆ, ಮೋಸಂಬಿ. ಬಟರ್‌ ಪ್ರೂಟ್‌(ಬೆಣ್ಣೆಹಣ್ಣು) ಗಿಡಗಳ ಸಂಸಾರವೂ ಕಂಡಿತು. ಇವನ್ನೆಲ್ಲ ನೋಡುತ್ತಾ ಮುಂದಕ್ಕೆ ಹೆಜ್ಜೆ ಹಾಕುತ್ತಿದ್ದಾಗ, ತೆಂಗಿನ ನಡುವೆ 150 ಕಾಫಿ ಗಿಡಗಳು ದರ್ಶನ ಕೊಟ್ಟು ಅಚ್ಚರಿ ಮೂಡಿಸಿದವು. ಅಡಿಕೆ ಮರಗಳನ್ನು ತಬ್ಬಿ ಬೆಳೆದ 150 ಮೆಣಸಿನ ಗಿಡಗಳು, ಜತೆಗೆ ಹಾಸನ ತಳಿಯ ಶುಂಠಿಯ ತಾಕು, ಇನ್ನೊಂದು ಎಕರೆಯಲ್ಲಿ 300 ಗುಲಾಬಿ ಗಿಡಗಳಿವೆ. ಅದೂ ತರಹೇವಾರಿ ವೆರೈಟಿಯ ಹೂವುಗಳು.. ಈ ತೋಟದಲ್ಲಿ ಇನ್ನೆಷ್ಟು ಬೆಳೆಗಳಿವೆಯಪ್ಪಾ ಎಂದು ಅಚ್ಚರಿ ಹುಟ್ಟಿಸಿತು.

ಹೂವಿನ ತೋಟದಲ್ಲಿ ದುಂಬಿಗಳ ಝೇಕಾಂರ ಕೇಳುತ್ತಲೇ ಪಕ್ಕಕ್ಕೆ ತಿರುಗಿದರೆ ಬೆಟ್ಟದ ನೆಲ್ಲಿ ಗಿಡಗಳಲ್ಲಿ ಗಜನಿಂಬೆ ಹಣ್ಣಿನ ಗಾತ್ರದ ಕಾಯಿಗಳು ಜೋತಾಡುತ್ತಿರುವುದು ಕಂಡಿತು. ದೊಡ್ಡಬಳ್ಳಾಪುರ ವೆರೈಟಿಯ ಹತ್ತು ಹಲಸಿನ ಮರಗಳು, ಬೇಲಿಯಲ್ಲಿ ತೋಟಕ್ಕೆ ರಕ್ಷಕರಂತೆ ನಿಂತಿದ್ದ ಐನೂರು ತೇಗ, ಐನೂರು ಸಿಲ್ವರ್ ಮರಗಳು.. ಓ.. ಇಲ್ಲಿ ಅರಣ್ಯ ಕೃಷಿಯೂ ಇದೆಯಪ್ಪಾ ಎಂದು ಸಮರ್ಥನೆ ನೀಡಿದವು.

ತೋಟಗಾರಿಕೆಯೇನೋ ಸರಿ, ಈ ಊಟಕ್ಕೆ ಏನು ಬೆಳೆಯುತ್ತಾರೆ ಎನ್ನುವಾಗ, ಪಕ್ಕದಲ್ಲಿದ್ದ ರಮೇಶ್, ರಾಗಿ, ಭತ್ತ, ಜೋಳ, ಅವರೆಕಾಯಿ, ಅಲಸಂದೆ, ಬಟಾಣಿ, ಟೊಮೆಟೊ, ಸೌತೆಕಾಯಿ, ಚೆಂಡು ಹೂವು, ವೀಳ್ಯೆದೆಲೆ ಕೂಡ ಬೆಳೆಯುವ ಜಾಗ ತೋರಿಸಿ, ಕೃಷಿ ಬಗ್ಗೆ ವಿವರ ನೀಡಿದರು.

ಮಳೆ ನೀರು ಸಂಗ್ರಹ

ತೋಟ ಸುತ್ತಾಡುತ್ತಾ, ‘ಇಷ್ಟೆಲ್ಲ ಬೆಳೆ ವೈವಿಧ್ಯಕ್ಕೆ ನೀರು ಎಲ್ಲಿಂದ ಹೊಂದಿಸುತ್ತಾರೆ’ ಎಂದು ಮನಸ್ಸಿನಲ್ಲಿ ಪ್ರಶ್ನೆ ಹಾಕಿಕೊಳ್ಳುವ ಹೊತ್ತಿಗೆ, ರಮೇಶ್, ಜಮೀನಿನ ತುದಿಯಲ್ಲಿರುವ ಎರಡು ಚೆಕ್ ಡ್ಯಾಮ್‌ಗಳನ್ನು ತೋರಿಸಿದರು.

ಎರಡು ಬೆಟ್ಟಗಳ ಮೇಲೆ ಸುರಿಯುವ ಮಳೆ ನೀರು, ಇಲ್ಲಿ ಹರಿದು, ಮುಂದೆ ನಾರಸಂದ್ರ ಕೆರೆ ಸೇರುತ್ತದೆ. ನೀರಿನ ಹರಿವು ಇರುವ ಜಾಗದಲ್ಲಿ ಚೆಕ್ ಡ್ಯಾಮ್ ಕಟ್ಟಲಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೂ, ಈ ಡ್ಯಾಮ್‌ಗಳಲ್ಲಿ ಬೃಹತ್ ಪ್ರಮಾಣದಲ್ಲಿ ನೀರು ನಿಲ್ಲುತ್ತದೆ. ಹೀಗಾಗಿ ಜಮೀನಿನಲ್ಲಿರುವ ಒಂದು ತೆರೆದ ಬಾವಿ, ಮೂರು ಕೊಳವೆಬಾವಿಗಳಲ್ಲಿ ಅಂತರ್ಜಲ ಸುಸ್ಥಿರವಾಗಿರುತ್ತದೆ ಎಂಬ ಮಾಹಿತಿ ಅವರಿಂದ ಸಿಕ್ಕಿತು.

‘ಮಳೆ ನೀರು ಇಂಗಿಸಿ, ಆ ಇಂಗಿಸಿದ ಮಳೆ ನೀರನ್ನು ಮಿತವಾಗಿ ಬಳಸಿದರೆ, ಕೃಷಿಯಲ್ಲಿ ಪರಿಣಾಮಕಾರಿಯಾಗಿ ನೀರಿನ ನಿರ್ವಹಣೆ ಮಾಡಬಹುದು. ಈಗ ನೋಡಿ, ನಮ್ಮ ಬಾವಿಯಲ್ಲಿ 180 ಅಡಿ ನೀರು ಸಿಗುತ್ತಿದೆ. ಮಳೆ ನೀರು ಇಂಗುವುದು, ಒಂದು ರೀತಿ ಬ್ಯಾಂಕಿನಲ್ಲಿ ಹಣ ಡೆಪಾಸಿಟ್‌ ಮಾಡಿದಂತೆ. ಅದನ್ನು ಬೇಕಾದಾಗ ಬಳಸಿಕೊಳ್ಳಬಹುದು’ ಎನ್ನುತ್ತಾರೆ ರಮೇಶ್. ಅಂದ ಹಾಗೆ, ಈ ಚೆಕ್ ಡ್ಯಾಮ್ ನೀರು, ತೋಟಕ್ಕಷ್ಟೇ ಅಲ್ಲ, ಸುತ್ತಲಿನ ಪ್ರಾಣಿ, ಪಕ್ಷಿಗಳಿಗೆ ನೀರಾಸರೆಯ ತಾಣವಾಗಿದೆ.

ಇಸ್ರೇಲ್ ಟೆಕ್ನಾಲಜಿ ಬಳಕೆ

ತೋಟದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನೀರಿನ ಸೌಲಭ್ಯವಿದ್ದರೂ, ಅದನ್ನು ಬಳಸುವಾಗ ಎಚ್ಚರವಹಿಸುತ್ತಾರೆ ರಮೇಶ್. ಇದಕ್ಕಾಗಿ ಮೈಕ್ರೋ ಲೇಸರ್ ಇಸ್ರೇಲ್ ಟೆಕ್ನಾಲಜಿ ಬಳಕೆ ಮಾಡಿದ್ದಾರೆ. ಈ ಮೂಲಕ ಹನಿ ಹನಿ ನೀರನ್ನು ಸರಿಯಾಗಿ ಆಯಾ ಬೆಳೆಗೆ ತಲುಪಿಸುತ್ತಾರೆ.

ಎಲ್ಲ ಬೆಳೆಗಳಿಗೂ ಬೇವಿನ ಮತ್ತು ಹಿಪ್ಪೆ ಹಿಂಡಿಯ ಜತೆಗೆ ಕೊಟ್ಟಿಗೆ ಗೊಬ್ಬರ ಪೂರೈಸುತ್ತಾರೆ. ತೆಂಗಿನಮರಗಳ ತ್ಯಾಜ್ಯವನ್ನು ತೋಟದಲ್ಲೇ ಕರಗಿಸಿ, ಅದರಿಂದ ಗೊಬ್ಬರ ಉತ್ಪಾದಿಸಿ ಬೆಳೆಗಳಿಗೆ ಬಳಸುತ್ತಿದ್ದಾರೆ. ‘ರಸಾವರಿ (ದ್ರವರೂಪಿ ಗೊಬ್ಬರ)ಯನ್ನು ಡ್ರಿಪ್‌ ಮೂಲಕ ಬೆಳೆಗೆ ಪೂರೈಸುತ್ತಾರೆ. ಬೇವಿನ ಎಣ್ಣೆಯನ್ನು ಗೊಬ್ಬರದ ಜೊತೆಗೆ ಬೆರೆಸಿ ಬೆಳೆಗಳಿಗೆ ಕೊಡುತ್ತಿದ್ದೇವೆ. ಹೀಗಾಗಿ ನಮ್ಮ ಜಮೀನು ಹಸಿರಾಗಿದೆ’ ಎನ್ನುತ್ತಾರೆ ರಮೇಶ್. ಕೃಷಿ ತ್ಯಾಜ್ಯವನ್ನೇ ಗೊಬ್ಬರವಾಗಿಸುತ್ತಿದ್ದು, ಮಣ್ಣಿನಲ್ಲಿ ಫಲವತ್ತತೆ ಹೆಚ್ಚಲು ಕಾರಣವಾಗಿದೆ. ಇದರಿಂದ ಮಣ್ಣಿನಲ್ಲಿ ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿದೆ ಎಂಬುದು ಅವರ ಅಭಿಪ್ರಾಯ.

ಪಶುಸಂಗೋಪನೆಗೂ ಜಾಗ

ತೋಟಗಾರಿಕೆ, ಆಹಾರ ಧಾನ್ಯ ಬೆಳೆಯುವ ಜತೆಗೆ, ಪಶು ಸಂಗೋಪನೆಗೂ ರಮೇಶ್ ಆದ್ಯತೆ ನೀಡಿದ್ದಾರೆ. ರಾಜಸ್ಥಾನದಿಂದ ಶಿರೋಹಿ ತಳಿಯ ಹೋತಗಳನ್ನು ತಂದಿದ್ದಾರೆ. ನಮ್ಮದೇ ರಾಜ್ಯದ ಬಂಡೂರು ಕುರಿಗಳಿವೆ. ಆಕಳುಗಳಿವೆ. ಎಮ್ಮೆಗಳೂ ಇವೆ. ಇವೆಲ್ಲದರ ಗೊಬ್ಬರವನ್ನು ಕೃಷಿಗೆ ಬಳಸುತ್ತಾರೆ. ಜಮೀನಿನ ಒಂದು ಭಾಗದಲ್ಲಿ ಜಾನುವಾರುಗಳಿಗೆ ಅಗತ್ಯವಾದ ಮೇವು ಬೆಳೆಸಿದ್ದಾರೆ.

ಕೃಷಿ, ಅರಣ್ಯ, ತೋಟಗಾರಿಕೆ, ಹೈನುಗಾರಿಕೆ... ಹೀಗೆ ಕೃಷಿಯ ಎಲ್ಲ ಚಟುವಟಿಕೆಗಳೂ ಒಳಗೊಂಡಿರುವ ಸಮಗ್ರ ಕೃಷಿಯ ಜಮೀನು ಮಾಡಲು ಮಾರ್ಗದರ್ಶನ ನೀಡಿದ ಕುದೂರು ರೈತ ಸಂಪರ್ಕ ಕೇಂದ್ರ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತಜ್ಞ ವರ್ಗವನ್ನು ಸ್ಮರಿಸುತ್ತಾರೆ ರಮೇಶ್. ಈ ತೋಟ ವೀಕ್ಷಣೆಗಾಗಿ ನಿತ್ಯ ರಾಜ್ಯದ ಬೇರೆ ಬೇರೆ ಭಾಗಗಳಿಂದ ರೈತರು, ವಿಜ್ಞಾನಿಗಳು ಭೇಟಿ ನೀಡುತ್ತಿದ್ದಾರೆ.

ಕೃಷಿ ಬಗೆಗಿನ ಪ್ರೀತಿ...

‘ಪೂರ್ವಿಕರು ಕೃಷಿ ಮಾಡಿಕೊಂಡೇ ಬದುಕಿದ್ದರು. ನಮಗೇಕೆ ಸಾಧ್ಯವಾಗುವುದಿಲ್ಲ’ ಎಂದು ತೀರ್ಮಾನಿಸಿಯೇ ರಮೇಶ್, ಇಂಥದ್ದೊಂದು ದೊಡ್ಡ ಹಿಡುವಳಿಯಲ್ಲಿ ಒಪ್ಪ ಓರಣದ ಕೃಷಿ ಮಾಡಿ ತೋರಿಸಿದ್ದಾರೆ. ಕೃಷಿ ಪ್ರೀತಿ ಮುಂದಿನ ಪೀಳಿಗೆಗೂ ಮುಂದುವರಿಸುವುದಕ್ಕಾಗಿಯೇ, ತನ್ನ ಮಗನನ್ನು ತೋಟಗಾರಿಕಾ ಪದವಿ ಓದಿಸುತ್ತಿದ್ದಾರೆ. ರಮೇಶ್ ಕೃಷಿ ಸಾಧನೆಗೆ ಹಲವು ಪ್ರಶಸ್ತಿಗಳು ಬಂದಿವೆ.

‘ಅನ್ನವೇ ಬ್ರಹ್ಮ, ಕೆಲಸವೇ ದೇವರು’ ಎಂದು ನನ್ನಪ್ಪ ಹೇಳುತ್ತಿದ್ದರು. ಹಾಗೆಯೇ, ನಮಗೆ ಹೊಲ-ಮನೆಯೇ ದೇವರು, ‘ಮಳೆರಾಯನ ಕರುಣೆಯೇ ರೈತರಿಗೆ ಸಂಪತ್ತು’ ಎಂದು ರಮೇಶ್ ಕೃಷಿ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ರಮೇಶ್ ಅವರೊಂದಿಗೆ ಕೃಷಿ, ತೋಟಗಾರಿಕೆ, ಅರಣ್ಯ ಕೃಷಿ ಕುರಿತ ಮಾಹಿತಿ ಪಡೆಯುವುದಕ್ಕಾಗಿ ಸಂಪರ್ಕ ಸಂಖ್ಯೆ: 9844163848.

ಚಿತ್ರಗಳು: ಲೇಖಕರವು

**

ತರಬೇತಿ, ಉದ್ಯೋಗ..

ಇಷ್ಟು ದೊಡ್ಡ ಜಮೀನಿ ಮಾಡಲು ಕಾರ್ಮಿಕರ ಸಮಸ್ಯೆ ಎದುರಾಗಲಿಲ್ಲವೇ ಎಂಬ ಪ್ರಶ್ನೆ ಕಾಡಿದ್ದು ಹೌದು. ಅದಕ್ಕೆ ರಮೇಶ, ‘ನಮ್ಮ ಜಮೀನಿನಲ್ಲಿ ನಿತ್ಯ 10 ಕಾರ್ಮಿಕರು ಕೆಲಸ ಮಾಡುತ್ತಾರೆ. ನಮ್ಮ ಭೂಮಿ ಅಷ್ಟು ಮಂದಿಗೆ ಕೆಲಸ ಕೊಟ್ಟಿದೆ ಎಂಬ ಸಂತೋಷವಿದೆ’ ಎನ್ನುತ್ತಾರೆ. ಕಾರ್ಮಿಕರಿಗೆ ಉದ್ಯೋಗ ಒದಗಿಸಿರುವ ಜಮೀನು, ಹಲವು ಯುವ ರೈತರಿಗೆ, ಕೃಷಿ ಚಟುವಟಿಕೆಗಳ ತರಬೇತಿ ಕೇಂದ್ರವೂ ಆಗಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT