ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇರು ಕೃಷಿಗೆ ಮನಸ್ಸು ಮಾಡದ ರೈತರು

ಕಡಿಮೆ ಖರ್ಚಿನಲ್ಲಿ, ಕಡಿಮೆ ನೀರಿನಲ್ಲಿ ಬೆಳೆಯುವ ಬರ ನಿರೋಧಕ ಬೆಳೆ
Last Updated 7 ಜುಲೈ 2019, 20:01 IST
ಅಕ್ಷರ ಗಾತ್ರ

ದಾವಣಗೆರೆ: ಮಳೆ ಕಡಿಮೆ ಬೀಳುವ ಪ್ರದೇಶಕ್ಕೆ ಹೇಳಿ ಮಾಡಿಸಿದಂತಿರುವ ಗೇರು ಕೃಷಿಗೆ ಜಿಲ್ಲೆಯಲ್ಲಿ ಕೃಷಿಕರಿಂದ ಸ್ಪಂದನೆಯೇ ದೊರೆತಿಲ್ಲ. ಹಾಗಾಗಿ ಸರ್ಕಾರ ಎಷ್ಟೇ ಪ್ರೋತ್ಸಾಹ ನೀಡಲು ಯತ್ನಿಸಿದರೂ ಇನ್ನೂ ಗೇರು ಕೃಷಿ ಪ್ರದೇಶ 100 ಹೆಕ್ಟೇರ್‌ ದಾಟಿಲ್ಲ.

ವರ್ಷಕ್ಕೆ ಒಂದೆರಡು ಮಳೆ ಬಿದ್ದರೂ ಬೆಳೆಯಬಲ್ಲ ಗೇರು ಕೃಷಿಗೆ ಖರ್ಚೂ ಕಡಿಮೆ. ನಾಟಿ ಮಾಡುವ ವರ್ಷ ಎಕರೆಗೆ ₹ 22,400, ಹೆಕ್ಟೇರ್‌ಗೆ ₹ 56,000 ವೆಚ್ಚವಾಗುತ್ತದೆ. ಅದರ ಮುಂದಿನ ವರ್ಷದಿಂದ ವೆಚ್ಚ ಅದರ ಅರ್ಧಕ್ಕೆ ಇಳಿಯುತ್ತದೆ. ಮೂರು ವರ್ಷಕ್ಕೆ ಇಳುವರಿ ಆರಂಭಗೊಳ್ಳುತ್ತದೆ. ಪ್ರತಿ ಗಿಡದಲ್ಲಿ ಕನಿಷ್ಠ 15 ಕೆ.ಜಿ. ಗೇರುಬೀಜ ದೊರೆಯುತ್ತದೆ.

ಗಿಡ ನೆಡಲು ಮತ್ತು ಇಳುವರಿ ಬರುವವರೆಗೆ ನಿರ್ವಹಣೆ ಮಾಡಲು ತೋಟಗಾರಿಕೆ ಇಲಾಖೆಯ ಮೂಲಕ ಸರ್ಕಾರ ಪ್ರೋತ್ಸಾಹಧನ ನೀಡುತ್ತದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಮೊದಲ ವರ್ಷ ವೆಚ್ಚದ ಶೇ 90ನ್ನು ಸರ್ಕಾರವೇ ಭರಿಸುತ್ತದೆ. ಇತರರಿಗೆ ಶೇ 50ರಷ್ಟು ನೀಡುತ್ತದೆ. ಅಂದರೆ ಒಂದು ಹೆಕ್ಟೇರ್‌ ಗೇರು ಬೆಳೆಸುವ ಪರಿಶಿಷ್ಟ ಜಾತಿ, ಪಂಗಡದವರು ₹ 53,000 ಪ್ರೋತ್ಸಾಹಧನ ಹಾಗೂ ಇತರರು ₹ 28,000 ಪ್ರೋತ್ಸಾಹ ಧನ ಪಡೆಯುತ್ತಾರೆ. ಮುಂದಿನ ಎರಡು ವರ್ಷಗಳಲ್ಲಿ ನಿರ್ವಹಣೆಗೆ ವರ್ಷಕ್ಕೆ ಎಸ್‌ಸಿ,ಎಸ್‌ಟಿಗೆ ₹ 28,000 ಹಾಗೂ ಇತರರಿಗೆ ₹ 16,600 ನೀಡಲಾಗುತ್ತದೆ.

ಇಷ್ಟೆಲ್ಲ ಪ್ರೋತ್ಸಾಹ ನೀಡುತ್ತಿದ್ದರೂ ರೈತರು ಗೇರು ಕೃಷಿಗೆ ಮುಂದಾಗುತ್ತಿಲ್ಲ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನರ್ ನೋವು.

ಹೆಕ್ಟೇರ್‌ಗೆ 200 ಗಿಡಗಳನ್ನು ಬೆಳೆಸಲು ಅವಕಾಶ ಇದೆ. ಗಿಡಗಳ ಮಧ್ಯೆ ಬೇರೆ ಉಪಬೆಳೆಯನ್ನು ಮಾಡಲೂ ಅವಕಾಶ ಇದೆ. ಎಸ್‌ಸಿ, ಎಸ್‌ಟಿ ಸಮುದಾಯದವರು ಹೆಕ್ಟೇರ್‌ಗೆ ₹ 3,000 ಖರ್ಚು ಮಾಡಿದರೆ ವರ್ಷಕ್ಕೆ ₹ 3 ಲಕ್ಷಕ್ಕೂ ಅಧಿಕ ಆದಾಯ ಪಡೆಯಲು ಸಾಧ್ಯವಿದೆ. ಉಳಿದವರು ಮೂರು ವರ್ಷದಲ್ಲಿ ಒಟ್ಟು ₹ 56 ಸಾವಿರ ವೆಚ್ಚ ಮಾಡಿದರೆ ಅಷ್ಟು ಆದಾಯ ಗಳಿಸಬಹುದು. ನಿರ್ವಹಣೆ ಸರಿ ಇದ್ದರೆ ಒಂದು ಗಿಡ ಕನಿಷ್ಠ 10 ವರ್ಷ ಇಳುವರಿ ಕೊಡುತ್ತದೆ ಎನ್ನುತ್ತಾರೆ ಅವರು.

‘ಗಿಡ ನೆಟ್ಟಾದ ಮೇಲೆ ಎರಡು ವರ್ಷ ನಿರ್ವಹಣೆ ಮಾಡಿದರೆ ಸಾಕು. ಆನಂತರ ಅದರ ಎಲೆಗಳೇ ಬಿದ್ದು ಗೊಬ್ಬರವಾಗುತ್ತದೆ. ಅಲ್ಲದೇ ನೀರಿನ ತೇವವನ್ನು ಅದೇ ಹಿಡಿದಿಟ್ಟುಕೊಂಡಿರುತ್ತದೆ. ಹಾಗಾಗಿ ಒಮ್ಮೆ ಇಳುವರಿ ಆರಂಭಗೊಂಡರೆ ಖರ್ಚಿಲ್ಲದೇ, ನಿರ್ವಹಣೆ ಇಲ್ಲದೇ ಹಲವು ವರ್ಷ ಆದಾಯ ಗಳಿಸಬಹುದು. ಕಳೆದ ವರ್ಷ ಗೇರುಬೀಜ ಕೆ.ಜಿ.ಗೆ 150 ಇತ್ತು. ಈ ವರ್ಷ ಸ್ವಲ್ಪ ಇಳಿಕೆಯಾಗಿ ₹ 130ರ ವರೆಗೆ ಇತ್ತು’ ಎನ್ನುತ್ತಾರೆ ಗೇರು ಕೃಷಿಕ ನ್ಯಾಮತಿ ತಾಲ್ಲೂಕು ಸವಳಂಗ ಬಳಿಯ ಚಿನ್ನಿಕಟ್ಟೆ ಅರ್ಜುನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT