ಕಾನಕಲ್ಲಟೆ ಸವಿದಿದ್ದೀರಾ?

7

ಕಾನಕಲ್ಲಟೆ ಸವಿದಿದ್ದೀರಾ?

Published:
Updated:
Deccan Herald

‘ಈ ವರ್ಷ ಅನ್ಯಾನ್ಯ ಮೇಳಗಳ ಮಳಿಗೆಗಳಲ್ಲಿ ಒಂದು ಕ್ವಿಂಟಾಲ್ ಕಾನಕಲ್ಲಟೆ ಮಾರಾಟವಾಯಿತು’– ಎನ್ನುತ್ತಾ ಖುಷಿ ಹಂಚಿಕೊಂಡರು ರವಿಶಂಕರ್ ಸುಣ್ಣಂಗುಳಿ. ಇವರು ಕಾಸರಗೋಡು ಜಿಲ್ಲೆಯ ಮೀಯಪದವಿನ ಕೃಷಿಕರು. ಜತೆಗೆ ಹಲಸು ಬೆಳೆ ಪ್ರಿಯರು.

ಕಾನಕಲ್ಲಟೆ ಒಂದು ಕಾಡು ತರಕಾರಿ. ಸಸ್ಯಶಾಸ್ತ್ರೀಯ ಹೆಸರು Cayratia mollissima.ಇದನ್ನು ಕಾನುಕಲ್ಲಟೆ, ಕಾನುಕಲ್ಲಂಟೆ, ಕಲ್ಲಾಟೆ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಈ ಕಾಯಿಯನ್ನು ಕಾಡಿನಿಂದಲೇ ಆಯ್ದು ತಂದು ಖಾದ್ಯಗಳನ್ನು ಮಾಡುವುದು ಪಾರಂಪರಿಕವಾಗಿ ಬಂದಿದೆ.

ಇದು ಗುಡ್ಡದಲ್ಲಿ ಹುಲುಸಾಗಿ ಬೆಳೆಯುವ ಬಳ್ಳಿ ಜಾತಿಯ ತರಕಾರಿ. ಆರೈಕೆ ಮಾಡಿ ಬೆಳೆಸುವವರು ತೀರಾ ವಿರಳ. ‘ನಾನು ಕಾನಕಲ್ಲಟೆಯ ಕೃಷಿ ಮಾಡಿದ್ದೇನೆ ಎಂದು ಹೇಳಿಕೊಂಡರೆ ಜನ ನಿಜವಾಗಿ ಇವನಿಗೆ ತಲೆ ಕೆಟ್ಟಿದೆ ಎನ್ನುತ್ತಾರೆ’ ಎಂದು ಕಣ್ಣುಮಿಟುಕಿಸಿದರು ರವಿಶಂಕರ್. ’ಏಕೆಂದರೆ, ಕಾಡಿನಲ್ಲಿ ಸಹಜವಾಗಿ ಬೆಳೆಯುವ ತರಕಾರಿಯನ್ನು ಪ್ರತ್ಯೇಕವಾಗಿ ‘ನಿಗಾ ವಹಿಸಿ, ಆರೈಕೆ ಮಾಡಿ ಇತರ ತರಕಾರಿಗಳಂತೆ ಬೆಳೆಸಿದ್ದೇನಲ್ಲ, ಅದಕ್ಕೆ’ ಎಂದು ಅವರು ಸಮರ್ಥನೆ ನೀಡುತ್ತಾರೆ !

ಕಾಡಿನಲ್ಲಿ ಬೆಳೆಯುವ ಈ ತರಕಾರಿಯನ್ನು ಕಂಡಾಗ, ‘ಇದನ್ನೇಕೆ ತೊಂಡೆಕಾಯಿ, ಪಡುವಲ ಕಾಯಿಯಂತೆ ಮನೆಯಂಗಳದಲ್ಲಿ, ಕೃಷಿ ಜಮೀನಿನಲ್ಲಿ ಬೆಳೆಸಬಾರದು’ ಎಂದು ರವಿಶಂಕರ್ ಯೋಚನೆ ಮಾಡಿದರು. ನಂತರ ಗುಡ್ಡದಲ್ಲಿ ಸುಲಭವಾಗಿ ಸಿಕ್ಕಿದ ಆರೇಳು ಬಳ್ಳಿಗಳನ್ನು ತಂದರು. ಚಿಕ್ಕ ಚಿಕ್ಕ ತುಂಡು ಮಾಡಿ ಪ್ಲಾಸ್ಟಿಕ್ ಕವರ್‌ನಲ್ಲಿ ಬೆಳೆಸಿದರು. ನಂತರ ಏರುಮಡಿಗೆ ವರ್ಗಾಯಿಸಿ, ಕೋಳಿಗೊಬ್ಬರ, ಎರೆಗೊಬ್ಬರ, ಸುಡುಮಣ್ಣು ಹಾಕಿ ಬಳ್ಳಿ ಬೆಳೆಸಿದರು.

ಬಳ್ಳಿಗಳು ಹಬ್ಬಲು ಚಪ್ಪರ ವ್ಯವಸ್ಥೆ ಮಾಡಿದರು. ಬಳ್ಳಿ ಬೆಳೆಯುತ್ತಾ ಚಪ್ಪರದ ತುಂಬಾ ಹರಡಿಕೊಂಡಿತು. ನಂತರ ಹೂ ಬಿಟ್ಟು, ಕಾಯಿಗಳು ಕಾಣಿಸಿಕೊಂಡವು. ಈ ವರ್ಷ ಮೇ ತಿಂಗಳಲ್ಲಿ ಗೊಂಚಲು ಗೊಂಚಲು ಕಾಯಿಗಳು ಕಾಣಿಸಿಕೊಂಡವು. ಜೂನ್ ಮೊದಲ ವಾರದಿಂದಲೇ ಕೊಯ್ಲು ಆರಂಭವಾಯಿತು. ‘ಕಾಡಿನಲ್ಲಿ ಬೆಳೆಯುವ ಈ ತರಕಾರಿ ಬಳ್ಳಿ ಮರಕ್ಕೆ ಹಬ್ಬುವ ಕಾರಣ ಬೆಳವಣಿಗೆ ತೀರಾ ಕಡಿಮೆ. ಆದರೆ ಚಪ್ಪರದ ಆಶ್ರಯದಲ್ಲಿ ಬೆಳೆಸುವುದರಿಂದ, ತುಸು ನಿಗಾವಹಿಸುವುದರಿಂದ ವೇಗವಾಗಿ ಬೆಳೆದು, ಚಪ್ಪರದಾದ್ಯಂತ ಬಳ್ಳಿ ಹರಡಿಕೊಂಡು ಸೊಂಪಾಗಿ ಹೂವು ಬಿಡುತ್ತವೆ, ಕಾಯಿಯ ಪ್ರಮಾಣವೂ ಹೆಚ್ಚುತ್ತದೆ’ ಎನ್ನುತ್ತಾರೆ ರವಿಶಂಕರ್. ಬೇರೆ ಬೇರೆ ಬೆಳೆಗಳನ್ನು ಕೃಷಿ ಮಾಡುತ್ತಾ ಸಮಯ ಹೊಂದಿಸಿಕೊಂಡು ಈ ತರಕಾರಿ ಬೆಳೆವಣಿಗೆ ಬಗ್ಗೆ ನಿಗಾ ವಹಿಸುತ್ತಾರೆ.

ಕಾಡಿನಿಂದ ತಂದು ಆರು ಬಳ್ಳಿಗಳು ಕನಿಷ್ಠ 250 ಚದರ ಅಡಿಯಿಂದ 300 ಚದರ ಅಡಿ ವ್ಯಾಪ್ತಿಯಲ್ಲಿ ಹರಡಿಕೊಂಡಿವೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಈ ಕಾಯಿಗೆ ಬೇಡಿಕೆ ಹೆಚ್ಚು. ಕೊಂಕಣಿಗರು, ಕರ್ಹಾಡರಿಗೆ (ಒಂದು ಸಮುದಾಯ) ಇದು ಪ್ರಿಯವಾದ ತರಕಾರಿ.

ರವಿಶಂಕರ್ ಅವರು ಈ ಬಾರಿ ಒಂದು ಕೆ.ಜಿಗೆ ಕಾನಕಲ್ಲಟೆಯನ್ನು ₹80ಕ್ಕೆ ಮಾರಾಟ ಮಾಡಿದ್ದಾರೆ. ಮಾತ್ರವಲ್ಲ, ಕೆಲವೊಂದು ಅಂಗಡಿಗಳ ಮೂಲಕ ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ.

‘ಇದು ನನಗೆ ಹೊಸ ಕೃಷಿ. ಹಾಗಾಗಿ ಈ ಕಾಯಿ ಬೆಳವಣಿಗೆ, ಮಾರುಕಟ್ಟೆಯ ಮರ್ಮ ಗೊತ್ತಾಗಿಲ್ಲ. ಮಂಗಳೂರಿನಂತಹ ನಗರದಲ್ಲಿ ಮಾರಾಟ ಮಾಡಲು ಪ್ರಯತ್ನಿಸಬೇಕು’ ಎನ್ನುತ್ತಾರೆ ಅವರು. ಪಾರಂಪರಿಕ ಆಹಾರಗಳ ಅರಿವಿದ್ದರಿಗೆ ಕಾನಕಲ್ಲಟೆ ಗೊತ್ತು. ಹೊಸ ತಲೆಮಾರಿಗೆ ಅಷ್ಟು ಪರಿಚಯವಿಲ್ಲ. ಅಂಗಡಿಯವರಿಗೂ ಕಾನಕಲ್ಲಟೆಯ ಪರಿಚಯ ಅಷ್ಟಕ್ಕಷ್ಟೇ. ಹಾಗಾಗಿ ಸುಲಭದಲ್ಲಿ ಮಾರಾಟ ಮಾಡುವುದು ಕಷ್ಟ.

ಕಾನಕಲ್ಲಟೆಯಿಂದ ಮೆಣಸುಕಾಯಿ, ಮಜ್ಜಿಗೆಹುಳಿ, ಸಾಂಬಾರು, ಹಲಸಿನ ಬೀಜ ಸೇರಿಸಿದ ಪಲ್ಯ ಮತ್ತು ಹಣ್ಣಿನ ಸಾಸಿವೆ ಬಲು ರುಚಿಯಾಗಿರುತ್ತದೆ. ಈ ತರಕಾರಿಯನ್ನು ಒಂದು ಹಬೆಯಲ್ಲಿ ಬೇಯಿಸಿ ಪೂರ್ಣವಾಗಿ ಬೀಜವನ್ನು ಬೇರ್ಪಡಿಸಬೇಕು. ಇದು ಪ್ರಮುಖವಾದ ಕೆಲಸ. ಈ ಕಾಯಿಯನ್ನು ಕೆಲವರು ಅಲ್ಲಿಲ್ಲಿ ಮನೆ ಮಟ್ಟಕ್ಕೆ ಬೆಳೆಯುತ್ತಿದ್ದಾರೆ. ಮಂಗಳೂರಿನಲ್ಲಿ ನಡೆಯುವ ಸಾವಯವ ಸಂತೆಯಲ್ಲಿ ಇದನ್ನು ಮಾರಾಟ ಮಾಡುತ್ತಾರೆ. ರುಚಿ ತಿಳಿದವರು ಖಾಯಂ ಗ್ರಾಹಕರಾಗುತ್ತಾರೆ.

ಬೀಜ ಅಪಾಯ, ಎಚ್ಚರ...!
‘ಕಾನಕಲ್ಲಟೆಯ ಬೀಜ ತುಂಬಾ ಅಪಾಯಕಾರಿ. ಅಲರ್ಜಿ ಉಳ್ಳವರಲ್ಲಿ ಗಂಭೀರ ಪರಿಣಾಮವಾದೀತು. ಗಂಟಲು ಕೆರೆತ ಆರಂಭವಾಗಿ ಉಸಿರು ಕಟ್ಟುವ ಹಂತಕ್ಕೂ ಹೋಗಬಹುದು. ಇದು ನನ್ನ ಸ್ವಂತ ಅನುಭವ. ಆದುದರಿಂದ ಬೇಯಿಸುವಾಗ ಒಂದೇ ಒಂದು ಬೀಜ ಉಳಿಯದಂತೆ ನೋಡಿಕೊಳ್ಳಬೇಕು’ ಎಂದು ಕಾಯಿ ಬಳಸುವವರಿಗೆ ಎಚ್ಚರಿಕೆ ನೀಡುತ್ತಾರೆ ಏತಡ್ಕದ ಡಾ. ವೈ.ಎಸ್. ಮೋಹನ್ ಕುಮಾರ್

ಕಾನಕಲ್ಲಟ್ಟೆ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 09446676029.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !