ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಳಿಗೆ ಭೇಟಿ ನೀಡುವ ಮುನ್ನ...

Last Updated 19 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಪ್ರಗತಿಪರ ಕೃಷಿಕರ ತೋಟ, ಹೊಲ, ಗದ್ದೆ ಅಥವಾ ನರ್ಸರಿ ಎಲ್ಲಿಗೆ ಭೇಟಿ ನೀಡುವಾಗ ಒಂದಷ್ಟು ಶಿಸ್ತು ಪಾಲಿಸುವುದು ಒಳ್ಳೆಯದು. ಆ ಶಿಸ್ತು ಹೇಗಿದ್ದರೆ ಒಳ್ಳೆಯದು ಎಂಬುದನ್ನು ಕೃಷಿಕರಾಗಿರುವ ವಾಣಿ ಶ್ರೀಹರ್ಷ ಸ್ವ ಅನುಭವದ ಉದಾಹರಣೆಯೊಂದಿಗೆ ಇಲ್ಲಿ ವಿವರಿಸಿದ್ದಾರೆ.

ಇವತ್ತು ಕೃಷಿಕರೊಬ್ಬರ ತೋಟ, ನರ್ಸರಿ ನೋಡೋಕೆ ಹೋಗಿದ್ದೆವು. ಮೊದಲೇ ಕರೆ ಮಾಡಿ ಸಮಯ ತಿಳಿದುಕೊಂಡೇ ಹೋಗಿದ್ದೆವು. ಅವರಲ್ಲಿಗೆ ಹೋದಾಗ ಹಾರ್ದಿಕವಾಗಿ ಸ್ವಾಗತಿಸಿದರು. ತೋಟ ನೋಡೋಕೆ ಹೊರಡುವ ಮುನ್ನ ‘ನೀವು ತಪ್ಪು ತಿಳಿಯದೇ, ಬೇಸರಿಸಿಕೊಳ್ಳದೇ ಇದ್ದರೆ ನನ್ನದೊಂದು ಷರತ್ತು ಇದೆ’ ಎಂದರು. ನಾವು ಏನು ಅಂತ ಕೇಳಿದಾಗ ‘ನೀವು ನಮ್ಮ ತೋಟದಲ್ಲಿ ನನ್ನ ಗಮನಕ್ಕೆ ಬರದಂತೆ ಯಾವುದೇ ಗಿಡವನ್ನೂ, ಎಲೆಯನ್ನೂ ಮುಟ್ಟುವಂತಿಲ್ಲ ಇದೇ ನನ್ನ ಷರತ್ತು’ ಎಂದರು.

‘ನಮಗೆ ಅರ್ಥವಾಗಲಿಲ್ಲ. ಸರಿಯಾಗಿ ತಿಳಿಸಿ. ಯಾಕೆ ಈ ಥರ ಹೇಳ್ತಿದೀರಿ’ ಅಂತ ಕೇಳಿದೆವು. ಅದಕ್ಕವರು ‘ತುಂಬಾ ಜನ ನಮ್ಮ ತೋಟ, ನರ್ಸರಿ ನೋಡೋಕೆ ಅಂತ ಬರ್ತಾರೆ. ನಾನು ತುಂಬಾ ಆಸಕ್ತಿಯಿಂದ ಗಿಡ ನೆಟ್ಟು, ಗೊಬ್ಬರ ಹಾಕಿ, ಕಳೆ ತೆಗೆದು ಆರೈಕೆ ಮಾಡಿ ನೆಟ್ಟಂತಹ ಗಿಡದಲ್ಲಿರುವ ಎಲೆ, ಕಾಯಿ, ಹಣ್ಣು, ಹೂವು ಕೊಯ್ಯುತ್ತಾರೆ. ಎಷ್ಟೋ ಸಲ ಅದೆಲ್ಲಿಂದಲೋ ತಂದ ಹೊಸತಾದ ಗಿಡವೊಂದು ಹಣ್ಣು, ಕಾಯಿ ಬಿಟ್ಟಿರುತ್ತೆ. ನಾವು ಇನ್ನೇನು ಇವತ್ತು ನಾಳೆ ಕೊಯ್ಯಬೇಕು ಎನ್ನುವಾಗ ಬಂದವರಾರೋ ಕೊಯ್ದು ಬಿಡುತ್ತಾರೆ. ತುಂಬಾ ಸಲ ನಾವು ಕಾತರದಿಂದ ಕಾಯುತ್ತಿದ್ದ ಮೊದಲ ಫಸಲನ್ನು ಕಳೆದುಕೊಂಡಿದ್ದೇವೆ. ನಾನು ಬೇರೆ ಬೇರೆ ಕಡೆಯಿಂದ ಕಷ್ಟಪಟ್ಟು ಒಂದಷ್ಟು ಗಿಡಗಳನ್ನು ತಂದು ನೆಟ್ಟಿದ್ದೇನೆ. ಅದರ ಒಂದು ಎಲೆ ಹೋದರೂ ತೊಂದರೆ ಆಗುತ್ತೆ ಗಿಡಕ್ಕೆ. ಹಾಗಾಗಿ ಹೀಗೆ ಹೇಳುತ್ತಿದ್ದೇನೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಒಂದು ಶಾಲೆಯ ಕೆಲವು ಮಕ್ಕಳನ್ನು ಇಬ್ಬರು ಶಿಕ್ಷಕರು ಕರೆ ತಂದಿದ್ದರು. ಮಕ್ಕಳಿಗೆ ತೋಟದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಸರಿಯಾಗಿ ಹೇಳಿ ಕರೆದುಕೊಂಡು ಬಂದಿದ್ದರು. ಆ ಕಾರಣ ಮಕ್ಕಳು ಯಾವುದೇ ಗಿಡವನ್ನೂ ಮುಟ್ಟದೇ ತುಂಬಾ ಶಿಸ್ತಿನಿಂದ, ಆಸಕ್ತಿಯಿಂದ ನಡೆದುಕೊಂಡರು. ಇನ್ನು ಯಾರಿಗೂ ತೋಟಕ್ಕೆ ಬರೋಕೆ ಬಿಡಬಾರದು. ಬರೀ ನರ್ಸರಿಗೆ ಮಾತ್ರ ಅವಕಾಶ ಕೊಡಬೇಕು ಅಂತ ಮಾಡಿದ್ದ ನಿರ್ಧಾರ ಈ ಮಕ್ಕಳ ವರ್ತನೆಯಿಂದ ಬದಲಾಯಿತು. ಅಂದಿನಿಂದ ತೋಟ ಮತ್ತು ನರ್ಸರಿಯ ವೀಕ್ಷಣೆಗೆ ಅವಕಾಶ ಕೊಟ್ಟು, ಮುಲಾಜಿಲ್ಲದೇ ಈ ಷರತ್ತು ಹಾಕಿ ಬಿಡುತ್ತಿದ್ದೇನೆ’ ಎಂದರು. ಅವರ ಆತಂಕ, ಕಾಳಜಿ ಸರಿ ಎನ್ನಿಸಿತು.

ಮುಂದೆ 3-4 ಗಂಟೆ ಅವರ ಜೊತೆ ಕಳೆದಾಗ, ಇನ್ನೊಬ್ಬರ ತೋಟಕ್ಕೆ ಹೋದಾಗ ನಾವು ಕೆಲವು ಅಂಶಗಳನ್ನು ಪಾಲಿಸಬೇಕು ಅಂತ ಅನಿಸಿತು. ಆ ಅಂಶಗಳು ಇಲ್ಲಿವೆ;

* ಆ ತೋಟ ಅವರ ವೈಯಕ್ತಿಕ ಸ್ವತ್ತು. ನಾವಲ್ಲಿಗೆ ಹೋಗಿದ್ದೇವೆ ಅಂದರೆ ಅದು ಅವರ ಒಪ್ಪಿಗೆ ಇರೋದಕ್ಕೆ ಮಾತ್ರ. ಹಾಗಾಗಿ ಅವರ ಒಪ್ಪಿಗೆ ಇಲ್ಲದೇ ಯಾವ ವಸ್ತುವನ್ನೂ ಮುಟ್ಟದಿರಿ. ಅವರು ಕೊಡುವ ಮಾಹಿತಿಗಾಗಿ ನಾವು ಅಲ್ಲಿಗೆ ಹೋಗಿದ್ದೇವೆ. ಅವರಿಗೆ ತೊಂದರೆ ಕೊಡುವುದಕ್ಕಲ್ಲ.

  • ಇನ್ನೊಬ್ಬರ ಮನೆಯ ಗಿಡಗಳಿಂದ ಅವರು ಹೇಳದೇ ಕಾಯಿ, ಹಣ್ಣು, ಹೂವು, ಎಲೆ ಏನನ್ನೂ ಕೊಯ್ಯದಿರಿ. ಕೊಯ್ದರೆ, ಅದು ಅವರಿಗೆ ಅವಮಾನ ಮಾಡಿದಂತೆ.
  • ಇನ್ನೊಬ್ಬರ ತೋಟಕ್ಕೆ ನೀವು ಹೋಗುತ್ತಿರುವುದು ಅವರು ಮಾಡಿರುವ ಸಾಧನೆ, ಕೆಲಸ, ಆವಿಷ್ಕಾರ ನೋಡೋಕೆ. ಹಾಗಾಗಿ ಅವರ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ನಿಮ್ಮ ಮಾತುಗಳು ಅಗತ್ಯಕ್ಕೆ ಬೇಕಾದಷ್ಟೇ ಇರಲಿ.
  • ಅವರ ಯಾವುದೋ ವಿಧಾನಕ್ಕಿಂತ ನಿಮ್ಮ ಬಳಿ ಸುಲಭದ ವಿಧಾನಗಳಿದ್ದರೆ ಅದನ್ನು ನಯವಾಗಿ ತಿಳಿಸಿ. ನಿಮ್ಮ ವಿಧಾನವೇ ಅತ್ಯುತ್ತಮ ಎಂಬ ಮೇಲರಿಮೆ ಬೇಡ.
  • ಮಕ್ಕಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮೊದಲೇ ಅವರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿಟ್ಟಿರಿ. ಸರಿಯಾದ ರೀತಿಯಲ್ಲಿ ಹೇಳಿದರೆ ಎಷ್ಟೇ ತುಂಟ ಮಕ್ಕಳಾದರೂ ಅರ್ಥ ಮಾಡಿಕೊಳ್ಳುತ್ತಾರೆ.
  • ತೋಟಕ್ಕೆ ಹೊರಡುವ ಮೊದಲು ಅವರಲ್ಲಿ ನಿಮಗೆ ಕೊಡಲು ಸಮಯವೆಷ್ಟಿದೆ ಅಂತ ಕೇಳಿಕೊಳ್ಳಿ. ಬಹಳಷ್ಟು ಸಲ ಅವರು ಸಂಕೋಚದಿಂದ ತಮ್ಮ ಕೆಲಸ ಹಾಳು ಮಾಡಿಕೊಳ್ಳುವುದಿದೆ. ನಿಮ್ಮಿಂದಾಗಿ ಅವರ ಕೆಲಸದ ಸಮಯ ಹಾಳಾಗದಿರಲಿ.
  • ಪರಿಚಯದವರ ನರ್ಸರಿಗೆ ಹೋಗಿ ನಿಮ್ಮಲ್ಲಿ ಇರುವ ಹಣಕ್ಕಿಂತ ಜಾಸ್ತಿ ಗಿಡಗಳನ್ನು ತೆಗೆದುಕೊಂಡು ಉಳಿದ ಹಣ ಆಮೇಲೆ ತಲುಪಿಸುತ್ತೇವೆ ಅಂತ ಹೇಳುವುದು ಸರಿಯಾದ ರೀತಿಯಲ್ಲ. ವ್ಯವಹಾರ ಬೇರೆ ವಿಶ್ವಾಸ ಬೇರೆ ಎನ್ನುವುದು ತಿಳಿಯಿರಿ.
  • ಸಾಧ್ಯವಾದಷ್ಟು ಆಸಕ್ತರಷ್ಟೇ ಹೋಗಿ. ನಿಮ್ಮ ಜೊತೆಗೆ ಆಸಕ್ತಿ ಇಲ್ಲದವರನ್ನು ಕರೆದುಕೊಂಡು ಹೋದರೆ ಅವರಿಂದಲೇ ಹೆಚ್ಚು ಹಾನಿ. ಟೈಂಪಾಸ್ ಮಾಡೋಕೆ ಬೇರೆ ಜಾಗಗಳನ್ನು ಹುಡುಕಿ. ಕೃಷಿಕರ ತೋಟಗಳನ್ನಲ್ಲ.
  • ಕೆಲವರಿಗೆ ಎಲೆ ಚಿವುಟಿ ಪರಿಮಳ ನೋಡುವ ಕೆಟ್ಟ ಅಭ್ಯಾಸ ಇರುತ್ತದೆ. ಉದಾಹರಣೆಗೆ ‘ಇದು ಜೀರಿಗೆ ಮಾವಿನ ಮಿಡಿಯ ಗಿಡ’ ಎಂದು ತೋರಿಸಿದಾಗ ಅದರ ಎಲೆ ಚಿವುಟಿ ಪರಿಮಳ ನೋಡದಿರಿ. ಅವರೇ ಎಲೆ ಮುರಿದು ಕೊಟ್ಟರಷ್ಟೇ ನೋಡಿ.
  • ಕೊಟ್ಟಿಗೆಯಲ್ಲಿ ದನಕರುಗಳನ್ನು ನೋಡಲು ಹೋದಾಗ ಎಚ್ಚರಿಕೆ ವಹಿಸಿ. ಹೆಚ್ಚಿನ ದನಕರುಗಳು ಅಪರಿಚಿತರಿಗೆ ಹೆದರುತ್ತವೆ. ನೀವು ಹೋದಾಗ ಅತ್ತಿತ್ತ ಓಡಾಡುವ ಭರದಲ್ಲಿ ಜಾರಿಬೀಳುವ ಸಂಭವ ಇರುತ್ತದೆ. ಹಾಲು ಕರೆಯುವ ಸಂದರ್ಭದಲ್ಲಿ ಹೋಗದಿದ್ದರೆ ಉತ್ತಮ.
  • ಯಾರದ್ದೇ ತೋಟಕ್ಕೆ ಹೋಗುವ ಮೊದಲು ಅವರಿಗೆ ಕರೆ ಮಾಡಿ ಅವರ ಸಮಯ ತಿಳಿದು ಕೊಂಡು ಹೋಗಿ. ಮನೆಯಲ್ಲೇ ಇರ್ತಾರೆ ಅಂದ ಮಾತ್ರಕ್ಕೆ ಅವರಿಗೆ ಬೇಕಾದಾಗೆಲ್ಲ ಸಮಯವಿರುತ್ತೆ ಅಂತ ಅಲ್ಲ. ತಮ್ಮದೇ ಆದ ಕೆಲಸದ ಯೋಜನೆಯನ್ನು ಅವರು ಹಾಕಿಕೊಂಡಿರುತ್ತಾರೆ. ಅದಕ್ಕೆ ತೊಂದರೆ ಆಗದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT