ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿಯ ಹೆಸರು ಬೆಳೆಗಾರರ ಕೂಗಿಗೆ ಸ್ಪಂದಿಸದ ಸರ್ಕಾರ

ಹೆಸರು ಬೆಳೆಗಾರರನ್ನು ಕಾಡುತ್ತಿರುವ ಮಳೆ
Last Updated 27 ಆಗಸ್ಟ್ 2020, 16:04 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಬಂಪರ್ ಇಳುವರಿಯ ನಿರೀಕ್ಷೆಯಲ್ಲಿದ್ದ ಹೆಸರು ಬೆಳೆಗಾರರಿಗೆ ಮಳೆರಾಯ ಬೇತಾಳನಂತೆ ಕಾಡುತ್ತಿದ್ದಾನೆ. ಬೆಳೆಗಾರರು ಕಂಗಾಲಾಗಿದ್ದು ಕೊಯ್ಲಿಗೆ ಬಂದ ಹೆಸರು ರಾಶಿ ಮಾಡಲಾಗದೆ ಪರದಾಡುವ ಸ್ಥಿತಿ ಎದುರಾಗಿದೆ.

2 ದಿನ ಬಿಡುವು ನೀಡಿದ್ದ ಮಳೆ ಮತ್ತೆ ಗುರುವಾರ ಬೆಳಿಗ್ಗೆ 7.20ಕ್ಕೆ 10 ನಿಮಿಷ ಮತ್ತು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ಚೆನ್ನಾಗಿ ಸುರಿದಿದೆ. ಹೆಸರು ಬೆಳೆ ರಾಶಿ ಮಾಡಲು ಹೊಲಗಳಿಗೆ ಹೋಗಿದ್ದ ರೈತರು ಮಳೆಗೆ ಹಿಡಿಶಾಪ ಹಾಕುತ್ತ ಮರಳಿದರು.

ಹುಲುಸಾಗಿ ಬೆಳೆದಿದ್ದ ಹೆಸರು ಬೆಳೆ ಕೊಯ್ಲಿಗೆ ಬಂದಾಗ ಬಿಡುವು ನೀಡದೆ ನಿರಂತರ ಮಳೆ ಸುರಿಯುತ್ತಿರುವುದರಿಂದ ಬೆಳೆಗಾರರಿಗೆ ‘ಕೈಗೆ ಬಂದ ತುತ್ತು ಬಾಯಿಗೆ ಬಾರಲಿಲ್ಲ’ ಎಂಬಂತಾಗಿದೆ.

ಒಂದೆಡೆ ಬೇತಾಳನಂತೆ ಕಾಡುತ್ತಿರುವ ಮಳೆ, ಇನ್ನೊಂದು ಕಡೆ ಕೂಲಿ ಕಾರ್ಮಿಕರ ಕೊರತೆಯಿಂದ ನಲುಗಿದ ಹೆಸರು ಬೆಳೆಗಾರ ಹೊಲದಲ್ಲಿನ ಬೆಳೆಯನ್ನು ರಾಶಿ ಮಾಡದೇ ಬಿಟ್ಟು ಬಿಡುವಂತಾಗಿದೆ.

ಮನೆಯವರೇ ಕೂಡಿಕೊಂಡು ಅಳಿದುಳಿದ ಬೆಳೆಯನ್ನು ಕಷ್ಟಪಟ್ಟು ರಾಶಿ ಮಾಡಿದರೆ ಹೆಸರುಕಾಳನ್ನು ಮಾರುಕಟ್ಟೆಯಲ್ಲಿ ಕೊಳ್ಳುವವರೇ ಇಲ್ಲ. ಖರೀದಿಸಿದರೂ ಪ್ರತಿ ಕ್ವಿಂಟಲಗೆ ಕನಿಷ್ಠ ₹2500ರಿಂದ ₹ 6000 ದರದಲ್ಲಿ ಖರೀದಿಸುತ್ತಿದ್ದಾರೆ.

ರೈತರ ಕಷ್ಟ ನಮಗೂ ಅರ್ಥವಾಗುತ್ತದೆ, ಆದರೆ ನಾವು ಅಸಹಾಯಕರಾಗಿದ್ದೇವೆ. ಮಾರುಕಟ್ಟೆಗೆ ಬಂದ ರೈತರ ಉತ್ಪನ್ನ ಗುಣಮಟ್ಟ ಸರಿಯಲ್ಲಿ. ಮಳೆಯಿಂದ ಹಾಳಾಗಿದೆ. ಕಾಳುಗಳು ತೇವಗೊಂಡು ತೂಕ ಹೆಚ್ಚಾಗಿ ತೂಗುತ್ತವೆ. ಇವುಗಳನ್ನು ಒಣಗಿಸಿ ಸಂಸ್ಕರಿಸಿದರೆ ಪ್ರತಿ ಕ್ವಿಂಟಲಗೆ 20 ಕೆ.ಜಿ ಖೋತಾ ಆಗುತ್ತಿದೆ. ಹೀಗಾಗಿ ಕನಿಷ್ಠ ದರ ಅನಿವಾರ್ಯವಾಗಿದೆ ಎಂದು ಚಿಂಚೋಳಿ ಎಪಿಎಂಸಿಯ ವರ್ತಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 5 ಸಾವಿರ ಹೆಕ್ಟೇರ್‌ನಲ್ಲಿ ಉದ್ದು ಬೆಳೆಯಲಾಗಿದೆ. ಆದರೆ ಸರ್ಕಾರ ಬೆಂಬಲ ಬೆಲೆಗೆ ಉದ್ದು ಹಾಗೂ ಹೆಸರು ಖರೀದಿಗೆ ಮುಂದಾಗದಿರುವುದರಿಂದ ರೈತಾಪಿ ಜನರು ಬೇಸರಗೊಂಡಿದ್ದಾರೆ.

ರೈತರು ತಮ್ಮ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಮೇಲೆ ಖರೀದಿ ಕೇಂದ್ರ ತೆರೆದರೆ ಇದರಿಂದ ಬೆಳೆಗಾರರಿಗೆ ಲಾಭವಾಗುವುದಿಲ್ಲ ಎಂದು ರೈತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT