ಕೈಹಿಡಿದ ಪೇರಲ ಆದಾಯ ಹೇರಳ!

7

ಕೈಹಿಡಿದ ಪೇರಲ ಆದಾಯ ಹೇರಳ!

Published:
Updated:

ಅಮ್ಮಾ, ನೋಡಲ್ಲಿ ಪೇರಲ ಹಣ್ಣು ಎಷ್ಟು ದೊಡ್ಡದಾಗಿದೆ!
ಮಗಳ ಆಶ್ಚರ್ಯದ ಕೂಗು, ಒಂದು ಕ್ಷಣ ವಾಹನ ನಿಲ್ಲಿಸಿ, ಹಣ್ಣು ಖರೀದಿಸಲು ಪ್ರೇರೇಪಿಸಿತು. ಬೆಳಗಾವಿ ಸೇರುವ ಹೆದ್ದಾರಿಗೆ ಹೊಂದಿಕೊಂಡಿರುವ ಜಿನರಾಳ ಕ್ರಾಸ್‍ನಲ್ಲಿ ದಪ್ಪ ಗಾತ್ರದ ಪೇರಲ ಮಾರುತ್ತಿದ್ದ ಯೂಸುಫ್‌ನಿಂದ ಹಣ್ಣು ಖರೀದಿಸಿದೆವು. ಇಷ್ಟು ದೊಡ್ಡ ಗಾತ್ರದ ಹಣ್ಣು ಕಂಡು, ‘ಇದನ್ನು ಎಲ್ಲಿ ಬೆಳೆಯುತ್ತಾರೆ’ ಎಂದು ಕೇಳಿಕೊಂಡೆವು. ಆತ ನೀಡಿದ ವಿಳಾಸ ಅರಸಿ ಹೊರಟಾಗ, ನಾವು ತಲುಪಿದ್ದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕುರಣೆವಾಡಿ ಗ್ರಾಮದ ಯುವ ಕೃಷಿಕ ಗೋಪಾಲ ಪರಸಪ್ಪ ಪೂಜಾರಿ ಇವರ ಕೃಷಿ ಕ್ಷೇತ್ರಕ್ಕೆ.

ಒಂದು ಎಕರೆಯಷ್ಟು ಪೇರಲ (ಸೀಬೆ, ಚೇಪೆಕಾಯಿ) ಹಣ್ಣಿನ ತೋಟ. ಪ್ರತಿ ಗಿಡದಲ್ಲೂ ಹಣ್ಣುಗಳು ತೊನೆದಾಡುತ್ತಿದ್ದವು. ಪಕ್ಕದಲ್ಲಿ ಕಬ್ಬಿನ ಗದ್ದೆ. ಅದಕ್ಕೆ ಹೊಂದಿಕೊಂಡಿರುವಂತೆ ಸೀತಾಫಲ ಹಣ್ಣಿನ ಗಿಡಗಳೂ ಕಂಡವು. ಹಣ್ಣಿನ ಬೆಳೆಗಳನ್ನು ಕಣ್ತುಂಬಿಕೊಳ್ಳುತ್ತಿದ್ದ, ನಮಗೆ ಎದುರಾದರು ಜಮೀನಿನ ವಾರಸುದಾರ ಗೋಪಾಲ ಪೂಜಾರಿ.

ಗೋಪಾಲ್, ಪದವಿಪೂರ್ವ ಶಿಕ್ಷಣ ಮುಗಿಸಿ, ಸೈನ್ಯಕ್ಕೆ ಸೇರುವ ಅವಕಾಶ ನಿರಾಕರಿಸಿ, ಕೃಷಿಯತ್ತ ಹೆಜ್ಜೆ ಹಾಕಿದ ಯುವಕ. ಅವರದ್ದು ಒಂಬತ್ತು ಎಕರೆ ಜಮೀನು. ಅದರಲ್ಲಿ ಒಂದು ಎಕರೆಯಲ್ಲಿ ಪೇರಲ ಕೃಷಿ ಮಾಡುತ್ತಿದ್ದಾರೆ. ನೀರಿನ ಆಸರೆಗಾಗಿ ಒಂದು ತೆರೆದ ಬಾವಿ ಇದೆ. ಆ ಬಾವಿಗೆ ನಾಲ್ಕು ಅಡ್ಡಬೋರುಗಳನ್ನು ಕೊರೆಸಿದ್ದಾರೆ. ಆರು ಇಂಚು ನೀರು ಸಿಕ್ಕಿದೆ. ಆ ನೀರನ್ನು ತೆರೆದ ಬಾವಿಯಲ್ಲಿ ಸಂಗ್ರಹಿಸುತ್ತಾರೆ. ಈ ನೀರು ಪೇರಲದ ಜತೆಗೆ, ಕಬ್ಬು, ಗೋವಿನ ಜೋಳ, ಸೋಯಾ ಅವರೆ ಹಾಗೂ ಸೀತಾಫಲಕ್ಕೆ ಆಧಾರವಾಗಿದೆ. ಜಮೀನಿನ ಅಂಚಿನಲ್ಲಿ ಕಾಡು ಮರಗಳಿವೆ. ಜತೆಗೆ ಎಮ್ಮೆ, ಆಕಳು ಸಾಕಿದ್ದಾರೆ. ಹೀಗಾಗಿ ಇವರದ್ದು ಒಂದು ರೀತಿ ಸಮಗ್ರ ಕೃಷಿ ಪದ್ದತಿ.

ನಾಟಿ – ನಿರ್ವಹಣೆ
ನಾಲ್ಕು ವರ್ಷಗಳಿಂದ ಪೇರಲ ಹಣ್ಣಿನ ಕೃಷಿ ಮಾಡುತ್ತಿದ್ದಾರೆ. ಬೆಳೆಯುತ್ತಿರುವ ತಳಿ ಹೆಸರು ಜಿ-ವಿಲಾಸ್ ಸುಧಾರಿತ ತಳಿ. 2014ರಲ್ಲಿ ಅಹಮದಾಬಾದ್ ನರ್ಸರಿಯಿಂದ ₹55ಕ್ಕೆ ಒಂದರಂತೆ ಸಸಿ ಖರೀದಿಸಿ ಒಂದು ಎಕರೆಯಲ್ಲಿ 10*5ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಈ ವರ್ಷ ಫೆಬ್ರುವರಿಯಲ್ಲಿ ಇನ್ನೊಂದು ಎಕರೆಯಲ್ಲಿ ಹೊಸದಾಗಿ ಸಸಿಗಳನ್ನು ನಾಟಿ ಮಾಡಿದ್ದಾರೆ.

ಸಸಿ ನಾಟಿ ಮಾಡಿದ 50 ರಿಂದ 55ನೇ ದಿನದ ವೇಳೆಗೆ ಚಾಟ್ನಿ (ರೆಂಬೆಗಳನ್ನು ಕತ್ತರಿಸುವುದು) ಮಾಡುವುದು ಅವಶ್ಯ. ನಂತರ ಕೊಂಬೆಗಳ ಬೆಳವಣಿಗೆ ತೀವ್ರಗೊಂಡಂತೆ ಒಂದು ತಿಂಗಳ ಅಂತರದಲ್ಲಿ 2 ರಿಂದ 3 ಚಾಟ್ನಿ ಮಾಡುವುದು ಸೂಕ್ತ. ಇದರಿಂದ ಹೂವು ಹೆಚ್ಚಾಗಿ, ಕಾಯಿ ಕಟ್ಟುವಿಕೆ ಉತ್ತಮವಾಗುತ್ತದೆ. ನಾಟಿ ಮಾಡಿದ ಆರು ತಿಂಗಳಿಗೆ ಮೊದಲ ಫಸಲು ಆರಂಭವಾಗುತ್ತದೆ. ಕಾಯಿಯ ಗಾತ್ರವೂ ದೊಡ್ಡದಾಗುತ್ತದೆ. ಗೋಪಾಲ್ ಈ ಎಲ್ಲ ವಿಧಾನಗಳನ್ನು ಸಮರ್ಪಕವಾಗಿ ಅಳವಡಿಸಿರುವುದರಿಂದ, ಇವರ ಜಮೀನಿನ ಪೇರಲ ಕಾಯಿಗಳು ಸರಾಸರಿ 200 ರಿಂದ 300ಗ್ರಾಂ ತೂಗುತ್ತಿವೆ. ಮಾತ್ರವಲ್ಲ, ಕಾಯಿಯ ತಿರುಳು ಮೃದುವಾಗಿದ್ದು ತುಂಬಾ ಸಿಹಿಯಾಗಿದೆ.

‘ಗಿಡ ಫಸಲು ಬಿಡುವಾಗ ವಾರಕ್ಕೆ ಮೂರು ಬಾರಿ ಕಾಯಿ ಕಟಾವು ಮಾಡಬೇಕು. ಮೂರು ತಿಂಗಳ ನಂತರ ಒಂದು ತಿಂಗಳು ಬಿಡುವು ಕೊಡಬೇಕು. ಈ ಅವಧಿಯಲ್ಲಿ ಕೊಂಬೆ ಸವರುವ ಕಾರ್ಯ ಮುಂದುವರಿಸಬೇಕು’ ಎನ್ನುತ್ತಾ ಸಾಗುವಳಿ ಕುರಿತ ಸಮಗ್ರ ಮಾಹಿತಿಯನ್ನು ತೆರೆದಿಡುತ್ತಾರೆ ಗೋಪಾಲ. ಈ ವರ್ಷ ನಾಟಿಯಾದ ಪೇರಲ ಗಿಡಗಳ ನಡುವೆ ಬದುವಿಗೆ ಒಂದೊಂದು ಸಾಲು ಬೀನ್ಸ್, ಹಸಿಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ಬೆಳೆದಿದ್ದಾರೆ. ಇದರ ಆದಾಯ ಇಪ್ಪತ್ತೊಂದು ಸಾವಿರ ಈಗ ಕೈ ಸೇರಿದೆ.

ರಸಾವರಿ ಪೂರೈಕೆ
ಹನಿ ನೀರಿನ ಮೂಲಕ ದ್ರವ ರಸಾವರಿ ಪೂರೈಕೆ ಮಾಡುತ್ತಾರೆ. ಗಿಡದಲ್ಲಿ ಹೂವು, ಕಾಯಿಕಚ್ಚುವ ಹಾಗೂ ಮಾಗುವ ಹಂತದಲ್ಲಿ ವಿವಧ ಬಗೆಯ ದ್ರವರೂಪಿ ಸಂಯುಕ್ತ ಗೊಬ್ಬರ ಕೊಡುತ್ತಾರೆ. ಕಜ್ಜಿ ತಿಗಣೆ ಹಾಗೂ ಹಣ್ಣುನೊಣ ನಿರ್ವಹಣೆಗೆ ಪ್ರತಿ 10ರಿಂದ 12ದಿನಕ್ಕೆ ಕೀಟನಾಶಕ ಸಿಂಪರಣೆ. 200ಚೀಲ (25-30ಕೆಜಿ/ಚೀಲ) ಬೆಳ್ಳುಳ್ಳಿ (ಕೊನೆಯಗ್ರೇಡ್) ಸಿಪ್ಪೆ, ಜೊಟ್ಟು ಖರೀದಿಸಿ ಪೇರಲ ಗಿಡಗಳ ನಡುವಿನ ಸಾಲಿನ ಮಣ್ಣಿಗೆ ಬೆರೆಸುತ್ತಾರೆ. ‘ಮಣ್ಣಿನಿಂದ ಪ್ರಸಾರವಾಗುವ ಕೀಟ, ರೋಗ ನಿರ್ವಹಣೆಯಲ್ಲಿ ಇದು ಸಹಕಾರಿ’ ಎನ್ನುತ್ತಾರೆ ಗೋಪಾಲ್ ತಂದೆ ಪರಸಪ್ಪ. ತಿಂಗಳಿಗೊಮ್ಮೆ ಹನಿ ನೀರಿನೊಂದಿಗೆ ಗೋಮೂತ್ರವೂ ಗಿಡ ತಲುಪುವ ವ್ಯವಸ್ಥೆ ಕಲ್ಪಿಸಿದ್ದಾರೆ.


ಗೋಪಾಲ ಪರಸಪ್ಪ ಪೂಜಾರಿ 

ಉತ್ತಮ ಇಳುವರಿ
ಒಂದು ಎಕರೆಯಲ್ಲಿ 870 ರಿಂದ 875 ಪೇರಲ ಗಿಡಗಳಿವೆ. ಸರಾಸರಿ ಪ್ರತಿಗಿಡಕ್ಕೆ 40 ಕೆ.ಜಿ ರಿಂದ 50ಕೆಜಿ ಫಸಲು ಸಿಗುತ್ತಿದೆ. ಎಕರೆಗೆ 40 ರಿಂದ 43 ಟನ್ ಇಳುವರಿ. ಕೆಜಿಗೆ ₹30ರಂತೆ ವ್ಯಾಪಾರಸ್ಥರು ತೋಟಕ್ಕೇ ಬಂದು ಖರೀದಿಸುತ್ತಾರಂತೆ. ‘ಒಳಸುರಿ ವೆಚ್ಚ ₹ 3 ಲಕ್ಷ. ಈ ಖರ್ಚು ಕಳೆದು ₹10 ಲಕ್ಷ ಆದಾಯ. ಗಿಡಗಳನ್ನು ಗುತ್ತಿಗೆ ಕೊಡುವುದರಿಂದ, ಗುತ್ತಿಗೆದಾರರೇ ಬಂದು ಕೊಯ್ಲು ಮಾಡಿಕೊಂಡು, ಇಲ್ಲೇ ತೂಕ ಹಾಕಿಸಿ, ಹಣ ಕೊಟ್ಟು ಹೋಗುತ್ತಾರೆ’ ಎನ್ನುತ್ತಾ ಖರ್ಚು, ಆದಾಯ ಹಾಗೂ ಮಾರುಕಟ್ಟೆ ವಿಧಾನವನ್ನು ತೆರೆದಿಡುತ್ತಾರೆ ಗೋಪಾಲ್.

‘ಮೊದಲ ವರ್ಷ ಸಸಿಗಳ ಖರೀದಿಗೆ ಹೆಚ್ಚು ಬಂಡವಾಳ ಅಗತ್ಯ. ಎರಡನೇ ವರ್ಷದಿಂದ ಅದರ ಖರ್ಚು ಆದಾಯದಲ್ಲಿ ಸೇರಿಕೊಳ್ಳುತ್ತದೆ. ಮುಂದಿನ ದಿನಗಳಲಿ ನಿರ್ವಹಣೆ ವೆಚ್ಚ ಮಾತ್ರ. ಕೊಯ್ಲು, ಸಾಗಾಣಿಕೆ, ದರ ಏರು-ಪೇರುಗಳ ಜಂಜಡಗಳಿಲ್ಲ. ಖರೀದಿ ಮಾಡಿದ ತಕ್ಷಣ ಹಣ ಪಾವತಿ ಮಾಡುತ್ತಾರೆ. ಇದೆಲ್ಲವನ್ನೂ ಲೆಕ್ಕ ಹಾಕಿದರೆ ವರ್ಷಕ್ಕೆ ಎರಡು ಬಾರಿ ಕಟಾವು ಮಾಡುವ ಪೇರಲ ಕೃಷಿ, ಕಬ್ಬು ಸಾಗುವಳಿಗಿಂತ ಉತ್ತಮ ಆದಾಯ’ ಎಂದು ಅನಿಸಿಕೆ ಹಂಚಿಕೊಳ್ಳುತ್ತಾರೆ ಕೃಷಿ ಕಾರ್ಯಗಳಲ್ಲಿ ನೆರವಾಗುವ ಅವರ ಸಹೋದರ ನಾಗರಾಜ.

ಉತ್ತಮ ಇಳುವರಿಯ ತಳಿ
ಪೇರಲಹಣ್ಣಿನಲ್ಲಿ ಟಿ.ಎಸ್.ಎಸ್(ಸಕ್ಕರೆ ಅಂಶ) ಕಡಿಮೆ, ಪೆಕ್ಟಿನ ಹಾಗೂ ನಾರಿನಂಶ ಹೆಚ್ಚು. ಜಿ-ವಿಲಾಸ್ ಸುಧಾರಿತ ತಳಿಯಲ್ಲಿ ಹಣ್ಣಿನ ಗಾತ್ರ ದೊಡ್ಡದು. ಜಾಮ್ ತಯಾರಿಕೆಗೆ ಇದು ಹೆಚ್ಚು ಬಳಕೆಯಾಗುತ್ತದೆ. ಮಹಾರಾಷ್ಟ್ರದಲ್ಲಿ ಇದನ್ನು ಹೆಚ್ಚು ಬೆಳೆಯುತ್ತಿದ್ದಾರೆ. ಯಾವುದೇ ಹವಾಗುಣ ಹಾಗೂ ನೀರು ಬಸಿದು ಹೋಗುವ ಮಣ್ಣಿನಲ್ಲಿ ಈ ತಳಿ ಉತ್ತಮ ಇಳುವರಿ ನೀಡುತ್ತದೆ. ಸಮರ್ಪಕ ನಿರ್ವಹಣಾ ಪದ್ದತಿ ಅನುಸರಿಸುವುದರಿಂದ ಅಧಿಕ ಇಳುವರಿ ಪಡೆಯಲು ಸಾಧ್ಯ. ಸೂಕ್ತ ಮಾರುಕಟ್ಟೆ ದರ ಕೂಡ ಪಡೆಯುತ್ತಿದ್ದಾರೆ ಎಂಬುದು ಗೋಕಾಕ್‌ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಲ್ಲಿಕಾರ್ಜುನ ಜನಮಟ್ಟಿ ಅಭಿಪ್ರಾಯ.

ಪೂರಕ ಆದಾಯದ ಸೀತಾಫಲ, ಕಬ್ಬು
ಪೇರಲ ಗಿಡಗಳ ಜತೆಗೆ, 10*10ಅಡಿ ಅಂತರದಲ್ಲಿ 430 ಸೀತಾಪಲ ಸಸಿಗಳನ್ನು ನಾಟಿ ಮಾಡಿದ್ದಾರೆ. ಗಿಡಗಳ ನಡುವೆ ಎರಡು ಸಾಲು ಕಬ್ಬು ನಾಟಿ ಮಾಡಿದ್ದಾರೆ. ಈ ವರ್ಷ ಒಂದೂವರೆ ಟನ್ ಮಾರಾಟವಾಗಿದ್ದು, ಇನ್ನೂ ಒಂದೂವರೆ ಟನ್ ಫಸಲು ಬರುವ ನಿರೀಕ್ಷೆ ಇದೆ. ಈ ಹಣ್ಣು ಒಂದು ಕೆಜಿಗೆ ₹40 ರಂತೆ ಮಾರಾಟವಾಗುತ್ತದೆ. ಗಣೇಶ ಹಬ್ಬದ ಸಮಯದಲ್ಲಿ ಗೊಂಚಲು ಸಹಿತ ಕಾಯಿಗಳಿಗೆ ಹಾಗೂ ಹಣ್ಣಿಗೆ ಹೆಚ್ಚಿನ ಬೇಡಿಕೆ ಎನ್ನುತ್ತಾರೆ ಗೋಪಾಲ. ಮುಂದಿನ ಹಂಗಾಮಿಗೆ ಸೀತಾಫಲದೊಂದಿಗೆ ಅಂತರ ಅಂತರಬೆಳೆಯಾಗಿ ನಿಂಬೆ ಹಾಗೂ ಕರಿಬೇವು ಸಾಗುವಳಿ ಮಾಡುವ ಚಿಂತನೆ ಇದೆ. 

ಐದು ಎಕರೆಯಲ್ಲಿ ಸಿ.ಓ-92005 ಕಬ್ಬು ಸಾಗುವಳಿ ಮಾಡಿದ್ದಾರೆ. ಎಕರೆಗೆ 70 ಟನ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಸೀತಾಫಲದ ಜೊತೆ ಬೆಳೆದ ಕಬ್ಬಿನಲ್ಲಿ 40 ಟನ್ ಇಳುವರಿ ಬಂದಿದೆ. ಸಮಗ್ರ ಕೃಷಿಯ ಭಾಗವಾಗಿ ಎರಡು ಎಮ್ಮೆ, ಒಂದು ಆಕಳು ಹಾಗೂ ಕರು ಇವೆ. ಜಮೀನಿನ ಉಳಿದ ಜಾಗದಲ್ಲಿ 200 ತೆಂಗು, 150 ನಿಂಬೆ ಹಾಗೂ 170 ಸಾಗವಾನಿ ಮರಗಳು ಪೂರಕ ಆದಾಯಕ್ಕೆ ನೆರವಾಗಿವೆ.

ಈ ಹೊತ್ತಿನ ಕೃಷಿ ಏರಿಳಿತಗಳ ನಡುವೆ ಸಮರ್ಪಕ ನಿರ್ಧಾರ, ಉತ್ತಮ ನಿರ್ವಹಣೆ ಹಾಗೂ ನಿರಂತರ ಗಳಿಕೆ ಮೂಲಕ ಯುವ ಕೃಷಿಕ ಗೋಪಾಲ ಪೂಜಾರಿ ಗಮನ ಸೆಳೆಯುತ್ತಾರೆ. ಸಮಗ್ರ ಕೃಷಿ ಕುರಿತ ಮಾಹಿತಿಗಾಗಿ ಗೋಪಾಲ ಪರಸಪ್ಪ ಪೂಜಾರಿ ಅವರನ್ನು 95909 58644 ಮೊಬೈಲ್‌ನಲ್ಲಿ ಸಂಪರ್ಕಿಸಬಹುದು.

ಉತ್ತಮ ಇಳುವರಿಯ ತಳಿ
ಪೇರಲಹಣ್ಣಿನಲ್ಲಿ ಟಿ.ಎಸ್.ಎಸ್(ಸಕ್ಕರೆ ಅಂಶ) ಕಡಿಮೆ, ಪೆಕ್ಟಿನ ಹಾಗೂ ನಾರಿನಂಶ ಹೆಚ್ಚು. ಜಿ-ವಿಲಾಸ್ ಸುಧಾರಿತ ತಳಿಯಲ್ಲಿ ಹಣ್ಣಿನ ಗಾತ್ರ ದೊಡ್ಡದು. ಜಾಮ್ ತಯಾರಿಕೆಗೆ ಇದು ಹೆಚ್ಚು ಬಳಕೆಯಾಗುತ್ತದೆ. ಮಹಾರಾಷ್ಟ್ರದಲ್ಲಿ ಇದನ್ನು ಹೆಚ್ಚು ಬೆಳೆಯುತ್ತಿದ್ದಾರೆ. ಯಾವುದೇ ಹವಾಗುಣ ಹಾಗೂ ನೀರು ಬಸಿದು ಹೋಗುವ ಮಣ್ಣಿನಲ್ಲಿ ಈ ತಳಿ ಉತ್ತಮ ಇಳುವರಿ ನೀಡುತ್ತದೆ. ಸಮರ್ಪಕ ನಿರ್ವಹಣಾ ಪದ್ದತಿ ಅನುಸರಿಸುವುದರಿಂದ ಅಧಿಕ ಇಳುವರಿ ಪಡೆಯಲು ಸಾಧ್ಯ. ಸೂಕ್ತ ಮಾರುಕಟ್ಟೆ ದರ ಕೂಡ ಪಡೆಯುತ್ತಿದ್ದಾರೆ ಎಂಬುದು ಗೋಕಾಕ್‌ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಲ್ಲಿಕಾರ್ಜುನ ಜನಮಟ್ಟಿ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 16

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !