ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನು ಕೃಷಿಕರಿಗೆ ಕೈಪಿಡಿ

Last Updated 28 ಜನವರಿ 2019, 19:30 IST
ಅಕ್ಷರ ಗಾತ್ರ

ಜೇನು ಸಾಕಾಣಿಕೆ, ಜೇನು ನೊಣಗಳ ಜೀವನಚಕ್ರ, ಕೃಷಿ, ಪರಿಸರ‌ ಮತ್ತು ‌ಜೇನು ನೊಣಗಳ ನಡುವಿನ ಸಂಬಂಧ, ಜೇನು ತುಪ್ಪದಲ್ಲಿರುವ ಔಷಧೀಯ ಗುಣಗಳ ವಿವರಣೆ ಸೇರಿದಂತೆ ಜೇನು‌ಕೃಷಿ ಕುರಿತ ಹಲವು ಮಾಹಿತಿಗಳನ್ನು ಒಳಗೊಂಡ ಕೃತಿ ‘ಅಡವಿ ಜೇನು ಸಂರಕ್ಷಣೆ ಮತ್ತು ಜೇನು ಕೃಷಿ’.

ಈ ಪುಸ್ತಕದಲ್ಲಿ ಮೂರು ಭಾಗಗಳಲ್ಲಿ ಮಾಹಿತಿ‌ ನೀಡಲಾಗಿದೆ. ಮೊದಲ ಭಾಗದಲ್ಲಿ ಜೇನು ಕೃಷಿ, ಎರಡನೇ ಭಾಗದಲ್ಲಿ ಜೇನು ತುಪ್ಪದ ಔಷಧೀಯ ಗುಣಗಳು‌ ಹಾಗೂ‌ ಮೂರನೇ ಭಾಗದಲ್ಲಿ‌ ಅಡವಿ ಜೇನು ಸಂರಕ್ಷಿಸುವ ಕುರಿತು‌ ಮಾಹಿತಿ‌ ಇದೆ.

ಜೇನು ಸಾಕಾಣಿಕೆ ಕೃಷಿಯ ಅವಿಭಾಜ್ಯ ಅಂಗ ಆಗಬೇಕು. ಇದು ಕೃಷಿ - ತೋಟಗಾರಿಕೆಯ ಉಪಕಸುಬು ಮಾತ್ರವಲ್ಲ, ಬೆಳೆಗಳ ಇಳುವರಿ ಹೆಚ್ಚಳಕ್ಕೂ ನೆರವಾಗುತ್ತದೆ ಎಂಬ ಮಾಹಿತಿಯನ್ನು ಚಿತ್ರಗಳ ಸಹಿತ ವಿವರಿಸಲಾಗಿದೆ. ಕೃತಿಯ ಆರಂಭದಲ್ಲೇ ಜೇನು ನೊಣಗಳ ಪ್ರಭೇದಗಳಾದ ತುಡುವೆ ಜೇನು, ಯೂರೋಪಿಯನ್ ಜೇನು, ಕೋಲು ಜೇನು, ರಾಳ ಜೇನು ಮತ್ತು ಹೆಜ್ಜೇನು ಕುರಿತು ವಿವರಣೆ ನೀಡಿದ್ದಾರೆ ಲೇಖಕರು.

ಜೇನುನೊಣಗಳ ದೇಹ ರಚನೆ, ಗುಣಲಕ್ಷಣ, ಜೀವನ ಚರಿತ್ರೆ ಮತ್ತು ಕುಟುಂಬದ ವ್ಯವಸ್ಥೆ ಕುರಿತು ವೈಜ್ಞಾನಿಕ ಮಾಹಿತಿ ನೀಡಲಾಗಿದೆ ರಾಣಿ ಜೇನು ನೊಣದ ಕಾರ್ಯ, ಕೆಲಸಗಾರ್ತಿ ನೊಣದ ಕೆಲಸ, ಗಂಡು ನೊಣ ಏನು ಮಾಡುತ್ತದೆ ಎಂಬುದರ ಕುರಿತು ಸಂಕ್ಷಿಪ್ತ ಮಾಹಿತಿ ಇದೆ. ಜೇನು ನೊಣಗಳ ವಿಶಿಷ್ಟ ಸ್ವಭಾವ, ಸಂವಹನ ಕ್ರಿಯೆ, ತುಪ್ಪ ಉತ್ಪಾದಿಸುವ ಪ್ರಕ್ರಿಯೆಯನ್ನೂ ಕೃತಿಯಲ್ಲಿ ವಿವರಿಸಲಾಗಿದೆ.

ಜೇನು ಸಾಕಾಣಿಕೆಯ ಉಪಕರಣಗಳಾದ ಸ್ಟಾಂಡ್, ಅಡಿಹಲಗೆ, ಕೋಣೆಗಳು, ಜೇನು ಕೋಣೆ, ಮುಚ್ಚಳ, ಚೌಕಟ್ಟು, ಪೆಟ್ಟಿಗೆಯ ಕುರಿತ ವಿವರಣೆಯಿದೆ‌. ಕೈ ಚೀಲ ಜೋಡಿಸುವುದು, ಫೀಡರ್‌ನಲ್ಲಿ ಆಹಾರ ಪೂರೈಕೆ.. ಹೀಗೆ ಕೆಲವು ಉಪಕರಣಗಳನ್ನು ಕಾರ್ಯವೈಖರಿಯನ್ನು ಚಿತ್ರಸಹಿತ ವಿವರಿಸಲಾಗಿದೆ‌. ವಿಶೇಷವಾಗಿ ಜೇನುಪೆಟ್ಟಿಗೆ ತಯಾರಿಕೆ ಕುರಿತು ರೇಖಾ ಚಿತ್ರಗಳ‌ ಮೂಲಕ ನೀಡಿರುವ ವಿವರಣೆ‌ ಓದುಗರಿಗೆ ಸರಳವಾಗಿ ಮಾಹಿತಿ ರವಾನಿಸುತ್ತದೆ. ಇದು ಹೊಸದಾಗಿ ಜೇನು‌ಕೃಷಿ ಆರಂಭಿಸುವವರಿಗೆ ಮಾರ್ಗದರ್ಶನ‌ ನೀಡುವಂತಿದೆ.

ಜೇನುತುಪ್ಪ ತೆಗೆಯುವ ಪ್ರಕ್ರಿಯೆ, ಯಂತ್ರದಿಂದ ತುಪ್ಪ ತೆಗೆಯುವ ವಿಧಾನ, ಜೇನುಗೂಡುಗಳ ಪರೀಕ್ಷೆ, ಗೂಡುಗಳನ್ನು ಯಾವ ಸ್ಥಳದಲ್ಲಿ‌ ಇಡಬೇಕು‌ ಎಂಬ ಮಾಹಿತಿಯ ವಿವರಣೆ ಇದೆ.

ಜೇನ್ನೊಣಗಳ ಪ್ರಮುಖ ಆಹಾರಗಳನ್ನು ಪಟ್ಟಿ ರೂಪದಲ್ಲಿ‌ ಕೊಟ್ಟಿದ್ದಾರೆ. ಪಟ್ಟಿಗೆ ಅನುಗುಣವಾಗಿ ವರ್ಣರಂಜಿತ ಚಿತ್ರಗಳಿವೆ. ಇದರಿಂದ ಹೆಸರು ಮತ್ತು‌ ಸಸ್ಯಗಳನ್ನು ಗುರುತಿಸಲು‌ ಸುಲಭವಾಗುತ್ತದೆ. ಯಾವ ಬೆಳೆಗಳ ನಡುವೆ ಜೇನು ಪೆಟ್ಟಿಗೆ ಇಡಬೇಕು, ದ್ವಿದಳ ಧಾನ್ಯ ಬೆಳೆಯುವ ಹೊಲ ಗದ್ದೆಗಳು ಮತ್ತು ತೋಟಗಾರಿಕಾ ಬೆಳೆಗಳ ನಡುವೆ ಜೇನು ಸಾಕಾಣಿಕ ಮಾಡಿದರೆ, ಅದರಿಂದಾಗುವ ಪ್ರಯೋಜನಗಳ ವಿವರಣೆ ಇದೆ. ಜೇನು ಪೆಟ್ಟಿಗೆಗಳನ್ನು ಸ್ಥಳಾಂತರಿಸುವ ವಿಧಾನ‌ ಮತ್ತು ಸಮಯದ‌ ಬಗ್ಗೆ ವಿವರವಾದ ಮಾಹಿರಿ‌ ಇದೆ. ಜೇನು ನೊಣಗಳಿಗಿರುವ ಶತೃಗಳು, ಅದರಿಂದ ಕಾಪಾಡುವ ವಿಧಾನಗಳನ್ನು ಪರಿಚಯಿಸಲಾಗಿದೆ.

ಆಯುರ್ವೇದ ವೈದ್ಯರು‌ ಜೇನುತುಪ್ಪದಲ್ಲಿ‌ನ‌ ಔಷಧಿಯ ಗುಣಗಳ‌ ಬಗ್ಗೆ ತಿಳಿಸಿದ್ದಾರೆ. ಜೇನುತುಪ್ಪ ಅಲ್ಲದೇ ಜೇನು ಕೃಷಿಯಿಂದ ದೊರೆಯುವ‌ ಪ್ರತ್ಯಕ್ಷ ಮತ್ತು ಪರೋಕ್ಷ ಲಾಭಗಳ ವಿವರವೂ ಇದೆ. ಜೇನು ಕೃಷಿಯ ಮಾಹಿತಿ‌ ಜತೆಗೆ ವರ್ಣರಂಜಿತ ಚಿತ್ರಗಳು ಪುಸ್ತಕದ ಅಂದ ಹಾಗೂ‌ ಗುಣಮಟ್ಟವನ್ನು‌ ಮೌಲ್ಯವರ್ಧಿಸಿವೆ.

ಡಾ.ಎಸ್.ಪ್ರದೀಪ್, ಸಿ.ಡಿ.ಶ್ರೀಕಾಂತ್, ಡಾ.ಪತಂಜಲಿ ಅವರು ಈ ಕೃತಿಯ ಲೇಖಕರು. ಸಾಗರ ತಾಲ್ಲೂಕಿನ ಭೀಮನಕೋಣೆಯ ಗ್ರಾಮ ಅರಣ್ಯ ಸಮಿತಿ, ಅರಣ್ಯ ಇಲಾಖೆ, ಶಿವಮೊಗ್ಗ ಜಿಲ್ಲೆ ನವಿಲೆಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಸಾವಯವ ಕೃಷಿ ಸಂಶೋಧನಾ ಕೇಂದ್ರದ‌ ಸಹಯೋಗದಲ್ಲಿ ಈ ಕೃತಿ ಪ್ರಕಟವಾಗಿದೆ. ಪುಸ್ತಕ‌ ಕುರಿತು‌ ಹೆಚ್ಚಿನ‌ ಮಾಹಿತಿಗಾಗಿ,: ಗ್ರಾಮ ಅರಣ್ಯ ಸಮಿತಿ, ಭೀಮನಕೋಣೆ, ಸಾಗರ ತಾಲ್ಲೂಕು, ಇವರನ್ನು‌ ಸಂಪರ್ಕಿಸಬಹುದು. 9449363350.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT