ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡದ ತೋಟ ಪರಿಸರ ಪಾಠ

Last Updated 11 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಫಲ ಬಿಟ್ಟ ತೆಂಗು–ಕಂಗಿನ ಮಧ್ಯೆ ಕಂಗೊಳಿಸುವ ಬಿದಿರ ಮೆಳೆ. ನಡು–ನಡುವೆ ಬಗೆ ಬಗೆಯ ಸಸಿಗಳ ತಂಪು, ಸೊಂಪು. ಈ ಸಸಿಗಳ ಹೆಸರು, ವೈಶಿಷ್ಟ್ಯವನ್ನು ಪಟಪಟನೆವಿವರಿಸುವಾಗ ಪಕ್ಕದಲ್ಲೇ, ಮರದಿಂದ ರುಂಯ್‌ ಎಂದು ಹಾರುವ ದುಂಬಿಯ ಮಂದ್ರ ಸ್ವರದ ಝೇಂಕಾರ. ಎತ್ತರದ ಮರದಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳ ಸಾಥ್‌...

ಇದೆಲ್ಲವೂ ಸೇರಿದಾಗ ಭೂಲೋಕದ ಈ ಸಣ್ಣ ಪ್ರದೇಶ ಸ್ವರ್ಗಕ್ಕೆ ಕಿಚ್ಚು ಹಚ್ಚಿತೇ ಎಂಬ ಸಂದೇಹ ಮೂಡುವ ವಾತಾವರಣ ಸೃಷ್ಟಿಯಾಗುತ್ತದೆ. ಇದು, ಕಾಸರಗೋಡಿನ ಪೆರ್ಲ ಸಮೀಪದ ಬೆದ್ರಂಪಳ್ಳದಲ್ಲಿರುವ ಮಹಮ್ಮದ್ ಅಲಿ ಅವರ ‘ಗುಡ್ಡದ ತೋಟ’.

ಕರ್ನಾಟಕದ ಗಡಿ ಭಾಗದಿಂದ 10 ಕಿಲೋಮೀಟರ್ ದೂರದಲ್ಲಿದೆ, ಬೆದ್ರಂಪಳ್ಳ. ಮಹಮ್ಮದ್ ಅಲಿ, ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ. ಗುಡ್ಡ ಮತ್ತು ಇಳಿಜಾರು ಪ್ರದೇಶಗಳಲ್ಲಿ ಹರಡಿರುವ ಸುಮಾರು 18 ಎಕರೆ ತೋಟವನ್ನು ಸಸ್ಯಕಾಶಿಯನ್ನಾಗಿ ಪರಿವರ್ತಿಸಿದ್ದಾರೆ. ಇದು ಲಾಭಕ್ಕಾಗಿ ಮಾಡಿದ ತೋಟವಲ್ಲ, ಬದಲಿಗೆ ವಿನಾಶದ ಅಂಚಿನಲ್ಲಿರುವ ಮರ ಮತ್ತು ಹಣ್ಣಿನ ಗಿಡಗಳನ್ನು ರಕ್ಷಿಸಿ, ಬೆಳೆಸಿ, ಬೇರೆಯವರಿಗೂ ಪರಿಚಯಿಸುವುದು ಅವರ ಉದ್ದೇಶ. ಹೀಗಾಗಿ ಅವರ ಗುಡ್ಡದ ತೋಟದಲ್ಲಿ ತೆಂಗು, ಅಡಿಕೆ ನಡುವೆ ಬಗೆ ಬಗೆಯ ಸಸಿಗಳು ನಳನಳಿಸುತ್ತಿವೆ. ಈ ತೋಟಕ್ಕಾಗಿಯೇ ಗುಡ್ಡದಲ್ಲಿ ಸುರಂಗ ಕೊರೆದು ಶುದ್ಧ ನೀರನ್ನು ಬಗೆದು ಕೆಳಗಿನ ಪ್ರದೇಶಗಳಿಗೆ ‘ಇಳಿಸಿ’ ಹಸಿರಿಗೆ ಉಸಿರು ನೀಡಿದ್ದಾರೆ. ಇದರ ಪರಿಣಾಮ ಅಪರೂಪದ ಹಣ್ಣುಗಳು ನಗೆ ಸೂಸುತ್ತಿವೆ. ಈ ಜೀವವೈವಿಧ್ಯದ ಸಸ್ಯ ಕಾಶಿಯನ್ನೇ ವಿದ್ಯಾರ್ಥಿಗಳಿಗೆ ಪರಿಸರದ ಪಾಠ ಹೇಳಲು ಬಳಸುವ ಅಲಿ, ಊರ ಜನರಲ್ಲೂ ಪರಿಸರ ರಕ್ಷಣೆಯ ಕಾಳಜಿ ಮೂಡಿಸುತ್ತಿದ್ದಾರೆ. ಅವರ ಪರಿಸರ ಪ್ರೀತಿಗೆ ಕೇರಳ ಸರ್ಕಾರ ಈ ವರ್ಷದ ‘ವನಮಿತ್ರ’ ಪ್ರಶಸ್ತಿ ಘೋಷಿಸಿದೆ.

ಗುಡ್ಡ, ತೋಟದಲ್ಲಿ ಏನೇನಿದೆ?
ಅಲಿ ಅವರ ತೋಟ ಮತ್ತು ಗುಡ್ಡದಲ್ಲಿ ಹಲವು ಬಗೆಯ ಮಾವು, ಹಲಸು, ಸೀತಾಫಲ, ರಾಮಫಲ, ಲಕ್ಷ್ಮಣ ಫಲ, ಮ್ಯಾಂಗೊಸ್ಟಿನ್‌, ದುರಿಯಾನ್‌, ರಂಬೂಟಾನ್‌, ಪುಲಾಸಾನ್‌, ಎಗ್‌ ಫ್ರೂಟ್‌, ಮಿಲ್ಕ್‌ ಫ್ರೂಟ್‌, ಮಲಯನ್ ಆ್ಯಪಲ್‌, ದಾಳಿಂಬೆ, ಜಂಬೂ ನೇರಳೆ, ಬ್ಯಾಂಕಾಕ್‌ ಆ್ಯಪಲ್‌, ಬಗೆ ಬಗೆಯ ಆಮ್ಟೆ, ಪೈನಾಪಲ್‌, ಪಿಸ್ತಾ, ಬಾದಾಮ್‌, ಸ್ಟ್ರಾಬೆರಿ, ಗುವಾ, ಅನೇಕ ಬಗೆಯ ಹುಳಿಗಳ ಗಿಡ–ಮರಗಳು ಇವೆ. ಕಾಸಾರಕ, ನಾಗಸಂಪಿಗೆ, ಹೆಬ್ಬಲಸು ಮುಂತಾದ ಅವಸಾನದ ಅಂಚಿನಲ್ಲಿರುವ ವಿವಿಧ ಜಾತಿಯ ಮರಗಳೂ ಇರುವುದರಿಂದ ಬೆದ್ರಂಪಳ್ಳದ ಈ ಗುಡ್ಡದ ತೋಟ ಜೀವವೈವಿಧ್ಯ ತಾಣವಾಗಿ ಮಾರ್ಪಟ್ಟಿದೆ.

ತಮ್ಮ ಹವ್ಯಾಸ ಮತ್ತು ಅದಕ್ಕೆ ಪ್ರೇರಣೆಯಾದ ಕಾರಣವನ್ನು ಅಲಿ ಹೀಗೆ ವಿವರಿಸುತ್ತಾರೆ; ‘2009ರಲ್ಲಿ ಕಣ್ಣೂರು ಜಿಲ್ಲೆಯ ಆರಳಂನಲ್ಲಿ ನಡೆದ ಪರಿಸರ ಅಧ್ಯಯನ ಶಿಬಿರವೊಂದರಲ್ಲಿ ಭಾಗವಹಿಸಿದ್ದೆ. ಅಲ್ಲಿ ಮರ–ಗಿಡಗಳ ಔಷಧೀಯ ಗುಣ ಮತ್ತು ಒಂದೊಂದು ಜಾತಿಯ ಮರ ಪರಿಸರ ರಕ್ಷಣೆಯಲ್ಲಿ ವಹಿಸುವ ಪಾತ್ರಗಳ ಬಗ್ಗೆ ಕೇಳಿದ್ದೆ. ಆಗಲೇ ನನ್ನೊಳಗೆ ಒಬ್ಬ ಪರಿಸರ ಪ್ರೇಮಿ ಹುಟ್ಟುಕೊಂಡ. ವಿಸ್ತಾರವಾರ ತೋಟ ಮತ್ತು ಕಾಡು ಇರುವುದರಿಂದ ನಮ್ಮ ಮನೆಯ ಸುತ್ತ ಮರ, ಪ್ರಾಣಿ–ಪಕ್ಷಿಗಳನ್ನು ಉಳಿಸುವ ಕಾಯಕ ಕೈಗೊಳ್ಳುವುದು ಸುಲಭ ಎಂದು ನನ್ನ ಮನಸ್ಸು ಹೇಳಿತು. ಅಲ್ಲಿ ಕಂಡ ಕನಸು ನನಸಾಗಿಸಲು ಪ್ರಯತ್ನಿಸುತ್ತಿದ್ದೇನೆ...’

‘ವಿಷ ಹೊರಸೂಸುತ್ತವೆ ಎಂದು ಹೇಳಲಾಗುವ ಮರಗಳನ್ನು ದೂರ ಮಾಡಿ ದೇಸಿ ತಳಿಯ ಸಸಿ–ಮರಗಳನ್ನು ಬೆಳೆಸುವುದು ನನ್ನ ಆದ್ಯತೆ. ಇದರಿಂದ ನಮಗೆ ‘ಫಲ’ ಸಿಗುತ್ತದೆ; ಪ್ರಾಣಿ–ಪಕ್ಷಿಗಳಿಗೆ ಆಹಾರವೂ ಆಗುತ್ತದೆ’ ಎಂದು ವಿವರಿಸುವ ಅಲಿ ತೋಟದ ಬಾಳೆಗೊನೆಗಳನ್ನು ಕಡಿಯುವುದು ಅಪರೂಪ. ಹಣ್ಣು ತಿಂದು ಪಕ್ಷಿಗಳು ಮತ್ತು ಅಳಿಲಿನಂಥ ಪ್ರಾಣಿಗಳು ಉಳಿಯಲಿ ಎಂಬುದು ಅವರ ಸಿದ್ಧಾಂತ!

ಕೇರಳದ ಆರಳಂ, ಪಾಲಕ್ಕಾಡ್‌, ಮಂಗಳೂರಿನ ಶಿವರಾಮ ಕಾರಂತ ಉದ್ಯಾನ, ಮೈಸೂರು, ಶಿವಮೊಗ್ಗದ ನರ್ಸರಿಗಳ ಸಸಿಗಳು ಇವರ ತೋಟದಲ್ಲಿ ಹಸಿರಾಗಿವೆ. ಪಕ್ಷಿ ಮತ್ತು ಕೀಟಗಳು ಸೊಳ್ಳೆಗಳನ್ನು ತಿನ್ನುವುದರಿಂದ ಅಲಿ ಅವರ ಮನೆಯಲ್ಲಿ ಸೊಳ್ಳೆ ಕಾಟವಿಲ್ಲವಂತೆ. ಅನೇಕ ಹೊಸ ಬಗೆಯ ಹಕ್ಕಿಗಳು ಬಂದಿರುವುದರಿಂದ ಪರಾಗ ಸ್ಪರ್ಶ ಸುಲಭವಾಗಿ, ತೋಟದಲ್ಲಿ ಫಸಲು ಹೆಚ್ಚಾಗಿದೆ. ಮನೆಯ ಸುತ್ತ ತಂಪು–ಸೊಂಪಿನ ಮತ್ತು ಮಾಲಿನ್ಯಮುಕ್ತ ವಾತಾವರಣ ನಿರ್ಮಾಣವಾಗಿದೆ.

‘ಬೆಳೆ ಕಡಿಮೆಯಾಗಿ ಆರ್ಥಿಕ ನಷ್ಟಕ್ಕೆ ಜಾಗತಿಕ ತಾಪಮಾನವೇ ಕಾರಣ ಎಂದು ಹೇಳಲಾಗುತ್ತದೆ. ಆದರೆ ಪರಾಗಸ್ಪರ್ಶ ಆಗದೇ ಇರುವುದು ಕೂಡ ಕೃಷಿ ನಷ್ಟಕ್ಕೆ ಕಾರಣ ಎಂದು ಅನೇಕರಿಗೆ ಗೊತ್ತೇ ಇಲ್ಲ. ಹೀಗಾಗಿ ಪಕ್ಷಿ, ಕೀಟಗಳು, ಜೇನುನೊಣಗಳನ್ನು ಉಳಿಸಬೇಕು. ಅವುಗಳಿಗೆ ಆಹಾರ ಸಿಗುವ ಹಣ್ಣುಗಳನ್ನು ಬೆಳೆಸಬೇಕು’ ಎಂಬುದು ಅಲಿ, ಕೃಷಿಕರಿಗೆ ನೀಡುವ ಸಲಹೆ.

ಅಪರೂಪದ ಹಸುಗಳ ತಳಿಯೂ ಇದೆ
ಮರ–ಗಿಡಗಳ ಜೊತೆ ಔಷಧೀಯ ಗುಣ ಇರುವ ಅನೇಕ ಸಸ್ಯಗಳನ್ನೂ ಅಲಿ ಬೆಳೆಸುತ್ತಿದ್ದಾರೆ. ವಿನಾಶದತ್ತ ಸಾಗುತ್ತಿರುವ ದನಗಳ ತಳಿಗಳಿಗೆ ಮರುಜೀವ ನೀಡುವ ‘ಸಾಹಸ’ವೂ ನಡೆಯುತ್ತಿದೆ. ಕಪಿಲೆ ಜಾತಿಗೆ ಸೇರಿದ 18 ದನಗಳು ಇವರ ಕೊಟ್ಟಿಗೆಯಲ್ಲಿ ಇವೆ. ಹೈನುಗಾರಿಕೆಯನ್ನು ಉದ್ಯಮವನ್ನಾಗಿ ಮಾಡುತ್ತಿಲ್ಲ. ಮನೆಗೆ ಶುದ್ಧ ಹಾಲು, ಗಿಡಗಳಿಗೆ ಗೊಬ್ಬರ ಸಿಕ್ಕರೆ ಸಾಕು.

**

ಕಾಲೇಜಿನಲ್ಲೂ ಇದೆ ಆರ್‌ಇಟಿ ಪಾರ್ಕ್‌
ಕಾಲೇಜಿನಲ್ಲಿ, ಒಂದು ಎಕರೆ ಜಾಗದಲ್ಲಿ ಆರ್‌ಇಟಿ (ರೇರ್ ಎಂಡೇಂಜರ್ಡ್‌ ಟ್ರೀಸ್‌) ಪಾರ್ಕ್ ಸ್ಥಾಪಿಸಲಾಗಿದೆ. ಈ ಮೂಲಕ ಮರ–ಗಿಡ ಬೆಳೆಸುವ ಹವ್ಯಾಸ ಮೂಡಿಸಲು ಪ್ರಯತ್ನಿಸಲಾಗಿದೆ. ಪ್ರತಿ ವರ್ಷ 60–70 ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಶಿಬಿರ ಇವರ ತೋಟದಲ್ಲೇ ನಡೆಯುತ್ತದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಚಾರಣ ಇರುತ್ತದೆ, ಇಂಗು ಗುಂಡಿಗಳನ್ನು ನಿರ್ಮಿಸುವ ಪ್ರಾತ್ಯಕ್ಷಿಕೆಯೂ ನಡೆಯುತ್ತದೆ. ಸುರಂಗಗಳ ಮಹತ್ವ ತಿಳಿಸಲಾಗುತ್ತದೆ. ಬೇರುಗಳು ಮಣ್ಣನ್ನು ಹಿಡಿದಿಡುವುದು ಹೇಗೆ ಎಂಬುದನ್ನು ಪ್ರತ್ಯಕ್ಷವಾಗಿ ನೋಡುವುದಕ್ಕೂ ಇಲ್ಲಿ ಅವಕಾಶವಿದೆ. ಮನೆಗೆ ಬಂದ ಅತಿಥಿಗಳಿಗೆ, ವಿದ್ಯಾರ್ಥಿಗಳಿಗೆ ಅಪರೂಪದ ಸಸಿಗಳೇ ‘ಗಿಫ್ಟ್‌’. ‘ಇಂಥ ಚಟುವಟಿಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಸಸಿಗಳನ್ನು ಬೆಳೆಸುವ ಆಸಕ್ತಿ ಹುಟ್ಟಿದೆ. ಅವರು ತಮ್ಮ ಮನೆಯ ಸುತ್ತ ಹಸಿರು ಬೆಳೆಸುತ್ತಿದ್ದಾರೆ. ಸಾಕಷ್ಟು ಹಣ ಮತ್ತು ಸಮಯ ವ್ಯಯಿಸಿದರೂ ಅದರಿಂದ ಸತ್ಕಾರ್ಯ ಆಗುತ್ತಿರುವುದರಿಂದ ಖುಷಿಯಾಗುತ್ತದೆ; ಸಾರ್ಥಕ ಭಾವ ಮೂಡಿದೆ’ ಎಂಬುದು ಅಲಿ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT