ಶನಿವಾರ, ಏಪ್ರಿಲ್ 1, 2023
23 °C
ಅರ್ಧ ಎಕರೆಯಲ್ಲಿ ವಾರಕ್ಕೆ ₹8 ಸಾವಿರ ಆದಾಯ ಪಡೆಯುತ್ತಿರುವ ರೈತ ರಫಿಕ್‌

ಬೆಂಡೆಕಾಯಿ ಬೆಳೆದು ಆದಾಯ ಗಳಿಸಿದ ಪದವೀದರ

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಸಮೀಪದ ಸಿಂದಬಂದಗಿ ಗ್ರಾಮದ ರೈತ ರಫಿಕ್ ಚಿಟಗುಪ್ಪೆ ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಕೇವಲ ಅರ್ಧ ಎಕರೆ ಭೂಮಿಯಲ್ಲಿ ಬೆಂಡೆಕಾಯಿ ಬೆಳೆದು ಆದಾಯ ಕಂಡುಕೊಂಡಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಸುಮ್ಮನೆ ಕುಳಿತುಕೊಳ್ಳದೆ ತಮ್ಮ ಪರಿಚಯಸ್ಥರ ಅರ್ಧ ಎಕರೆ ಭೂಮಿಯನ್ನು ವರ್ಷಕ್ಕೆ ₹7 ಸಾವಿರ ಕೊಟ್ಟು ಗುತ್ತಿಗೆ ಪಡೆದಿದ್ದಾರೆ. ಅದರಲ್ಲಿ ಬೆಂಡೆಕಾಯಿ ಬೆಳೆದಿದ್ದಾರೆ. ಉತ್ತಮ ಫಸಲು ಬರುತ್ತಿರುವ ಕಾರಣ ಆದಾಯ ಕೂಡ ಚೆನ್ನಾಗಿದೆ.

‘ಅನ್‌ಲಾಕ್ ಘೋಷಣೆ ಮಾಡಿರುವುದರಿಂದ ಎಲ್ಲ ತರಕಾರಿ ಮಾರುಕಟ್ಟೆಗಳಲ್ಲಿ ಬೇರೆ ಜಿಲ್ಲೆಗಳಿಂದ ತರಕಾರಿ ಖರೀದಿಸುವವರು ಬರುತ್ತಿದ್ದಾರೆ. ಹೀಗಾಗಿ ಸದ್ಯ ತರಕಾರಿಗಳಿಗೆ ಉತ್ತಮ ಬೆಲೆ ಸಿಗುತ್ತಿದೆ’ ಎಂದು ರಫಿಕ್ ತಿಳಿಸುತ್ತಾರೆ.

‘ನಾನು ಅರ್ಧ ಎಕರೆಯಲ್ಲಿ ಬೆಳೆದ ಬೆಂಡೆಕಾಯಿ ಪ್ರತಿ ಎರಡು ದಿನಗಳಿಗೊಮ್ಮೆ 2-3 ಕ್ವಿಂಟಲ್ ಇಳುವರಿ ಬರುತ್ತಿದೆ. ಪ್ರತಿ ಕ್ವಿಂಟಲ್ ಬೆಂಡೆಕಾಯಿ ₹2 ಸಾವಿರಕ್ಕೆ ಮಾರಾಟ ಆಗುತ್ತಿದೆ. ಹೀಗಾಗಿ ಪ್ರತಿ ವಾರಕ್ಕೆ ನನಗೆ ₹8 ಸಾವಿರದಂತೆ ತಿಂಗಳಿಗೆ ₹30 ಸಾವಿರ ಲಾಭವಾಗುತ್ತಿದೆ’ ಎಂದು ಅವರು ಸಂತಸ ವ್ಯಕ್ತಪಡಿಸುತ್ತಾರೆ.

‘ದೀರ್ಘಾವಧಿ ಬೆಳೆಗಳಿಗೆ ಹೆಚ್ಚಿನ ಬಂಡವಾಳ ತೊಡಗಿಸಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಡಿಮೆ ಅವಧಿ ಮತ್ತು ಕಡಿಮೆ ಬಂಡವಾಳದಲ್ಲಿ ಫಲ ಕೊಡುವ ಬೆಳೆ ಹಾಗೂ ಹೈನುಗಾರಿಕೆಯತ್ತ ಗಮನಹರಿಸಬೇಕು. ಇದರಿಂದ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ರೈತ ಮುಖಂಡ ದತ್ತಾತ್ರೇಯ ಉಮರ್ಗೆ ತಿಳಿಸುತ್ತಾರೆ.

‘ಪ್ರಸ್ತುತ ದಿನಗಳಲ್ಲಿ ಬಹುತೇಕ ಯುವಕರು ಪದವಿ ಮುಗಿಸಿಕೊಂಡು ನಗರಗಳಿಗೆ ಕೆಲಸ ಅರಸಿಕೊಂಡು ಹೋಗುತ್ತಾರೆ. ಆದರೆ, ಪದವೀಧರ ಯುವಕ ರಫಿಕ್ ಸ್ವಂತ ಭೂಮಿ ಇಲ್ಲದಿದ್ದರೂ ಬೇರೆಯವರ ಭೂಮಿಯನ್ನು ವರ್ಷಕ್ಕೆ ಗುತ್ತಿಗೆ ಪಡೆದುಕೊಂಡು ಕೃಷಿಯಲ್ಲಿ ತೊಡಗಿಕೊಂಡು ಲಾಭ ಗಳಿಸುತ್ತಿದ್ದಾರೆ. ಇವರು ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದಾರೆ’ ಎಂದು ಸಿಂದಬಂದಗಿಯ ಹಿರಿಯರಾದ ಬಸವಣಪ್ಪ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು