ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕೃಷಿಯ ದಿವ್ಯದರ್ಶನ

Last Updated 15 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ದೊಡ್ಡ ಹಿಡುವಳಿ ಜಮೀನಿದೆ. ಸಾಕಷ್ಟು ನೀರಿನ ವ್ಯವಸ್ಥೆಯೂ ಇದೆ. ಹೀಗಿದ್ದರೂ ಅವರು ಏಕ ಬೆಳೆ ಪದ್ಧತಿಗೆ ಮಾರು ಹೋಗಿಲ್ಲ. ಅತಿ ದುಡಿಯಮೆ ಆಸೆಗಾಗಿ ಸಿಕ್ಕ ಸಿಕ್ಕ ಬೆಳೆಗಳನ್ನೂ ಬೆಳೆದಿಲ್ಲ. ಇರುವ ಸಂಪನ್ಮೂಲವನ್ನು ಸದ್ಭಳಕೆ ಮಾಡಿಕೊಂಡು, ಸಕಾಲಿಕ ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು, ಮಿಶ್ರಕೃಷಿ ಪದ್ಧತಿಯಲ್ಲಿ ಸಕಲೆಂಟು ಬೆಳೆಗಳನ್ನು ಬೆಳೆದಿದ್ದಾರೆ. ಇದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳದ ರೈತ ಧರೆಪ್ಪ ಪರಪ್ಪ ಕಿತ್ತೂರ ಅವರ ಹದಿನೆಂಟು ಎಕರೆಯ ಸಮಗ್ರ ಕೃಷಿ ದಿವ್ಯದರ್ಶನ.

ಧರೆಪ್ಪ ಓದಿದ್ದು 8ನೇ ತರಗತಿವರೆಗೆ. ವಿದ್ಯಾಭ್ಯಾಸ ಮೊಟಕುಗೊಳಿಸಿದ ಮಗನಿಗೆ ಅಪ್ಪ ಗೊಬ್ಬರದ ಅಂಗಡಿ ಉದ್ಯೋಗ ಮಾಡಲು ಹೇಳಿದರು. ಆದರೆ, ಮಗ ಅದನ್ನು ಬಿಟ್ಟು ಕೃಷಿ ಬದುಕನ್ನು ಆಯ್ಕೆ ಮಾಡಿಕೊಂಡರು. ಅದೇ ವೇಳೆ ರಾಜ್ಯದಲ್ಲಿ ಸಾವಯವ ಕೃಷಿಯ ಪ್ರಚಾರ ಜೋರಾಗಿತ್ತು. ನೆರೆ ರಾಜ್ಯದ ಮೋಹನ ದೇಶಪಾಂಡೆ ಅವರ ತಂಡ ಇದೇ ಕೃಷಿ ಪ್ರಚಾರಕ್ಕಾಗಿ ತೇರದಾಳಕ್ಕೆ ಬಂದಿತ್ತು. ತಂಡದ ಮಾಹಿತಿ, ಧರೆಪ್ಪ ಅವರನ್ನು ಕೃಷಿಯಲ್ಲಿ ಪ್ರಯೋಗಗಳನ್ನು ಮಾಡಲು ಉತ್ತೇಜಿಸಿತು. ಹೀಗಾಗಿ ಪ್ರಾಥಮಿಕ ಹಂತದಿಂದ ಸಮಗ್ರ ಕೃಷಿಯ ಪಾಠ ಕಲಿಯುತ್ತಾ, ಕಲಿತಿದ್ದನ್ನು ಜಮೀನಿನಲ್ಲಿ ಅಳವಡಿಸಲು ಆರಂಭಿಸಿದರು.

ಕಬ್ಬಿನ ಜತೆ ಮಿಶ್ರಬೆಳೆ
10 ಎಕರೆಯಲ್ಲಿ 8X6 ಅಡಿ ಅಂತರದ ಸಾಲಿನಲ್ಲಿ ಕಬ್ಬು ನಾಟಿ ಮಾಡುತ್ತಾರೆ. ಕಬ್ಬಿನ ಸಾಲಿನ ನಡುವಿರುವ ಎರಡು ಅಡಿ ಜಾಗದಲ್ಲಿ ಮೆನಸಿಣಕಾಯಿ, ಪಾಲಕ್, ಚವಳಿಕಾಯಿ, ಬೆಂಡೆಕಾಯಿ, ಹಾಗಲಕಾಯಿ, ಸವತಿಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆಯುತ್ತಾರೆ. ಕಬ್ಬಿನಿಂದ ₹ 15 ಲಕ್ಷ, ಕಬ್ಬು ಕೊಯ್ಲಿಗೆ ಬರುವವರೆಗೂ ಅಂತರಬೆಳೆಯಾಗಿ ಬೆಳೆಯುವ ತರಕಾರಿಯಿಂದ ₹ 3 ಲಕ್ಷ ಉಪ ಆದಾಯ. ಇದು ಪ್ರತಿ ವರ್ಷ ಅವರು ಕೈಗೊಳ್ಳುವ ಕಬ್ಬು – ತರಕಾರಿ ಜುಗಲ್ ಬಂದಿ ಕೃಷಿ.

ಉಳಿದ ಜಮೀನಿನಲ್ಲಿ ಬೇಲಿ ಬೆಳೆ, ಅಂತರ ಬೆಳೆ, ಅಕ್ಕಡಿ ಬೆಳೆಯಾಗಿ ಚಿಕ್ಕು, ರಾಮಫಲ, ಸೀತಾಫಲ, ಅಂಜೂರ, ಮೊಸಂಬಿ, ಬಾರೆ ಹಣ್ಣು, ಮಾವು, ಪೇರಲ, ನೆಲ್ಲಿ, ತೆಂಗು, ಅಡಿಕೆ, ಬಾಳೆ, ಪಪ್ಪಾಯಿ ಹಾಕಿದ್ದಾರೆ. ಜಮೀನಿನ ಬದುಗಳಲ್ಲಿ ನುಗ್ಗೆ ಮರಗಳಿವೆ. ಬೇಸಿಗೆ ವೇಳೆಗೆ ಕಲ್ಲಂಗಡಿ ಬೆಳೆದರೆ, ಗೆಡ್ಡೆ ತರಕಾರಿಯಾಗಿ ಗಜ್ಜರಿ, ಗೆಣಸು ಬೆಳೆಯುತ್ತಾರೆ. ಈ ಎಲ್ಲ ತರಕಾರಿ, ಹಣ್ಣುಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಹುಡುಕಿಕೊಂಡಿದ್ದಾರೆ. ದ್ವಿದಳ ಧಾನ್ಯ, ತರಕಾರಿ ಜತೆಗೆ, ಔಷಧೀಯ ಗಿಡ, ಸಂಬಾರ ಪದಾರ್ಥಗಳೂ ಸಂಗಾತಿ ಬೆಳೆಗಳಾಗಿವೆ. ನೀರಿನ ವ್ಯವಸ್ಥೆ ಉತ್ತಮವಾಗಿದ್ದರೂ, ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಮಾಡಿಕೊಂಡಿದ್ದಾರೆ. 9ಲಕ್ಷ ಲೀಟರ್ ನೀರು ಹಿಡಿಯುತ್ತದೆ. ಅದರಲ್ಲಿ ಮೀನು ಸಾಕಾಣಿಕೆ ಮಾಡಿದ್ದಾರೆ. ಹಸಿರು ಮನೆ ನಿರ್ಮಾಣ ಮಾಡಿಕೊಂಡು, ಅದರಲ್ಲಿ ಸ್ಥಳೀಯ ವೆರೈಟಿ ಸೇವಂತಿಗೆ ಬೆಳೆದಿದ್ದಾರೆ. ಕಳೆದ ವರ್ಷ 40 ಟನ್ ಸೇವಂತಿಗೆ ಬೆಳೆದ ಬೆಳಗಾವಿ, ಮುಂಬೈ ನಗರದಲ್ಲಿ ಮಾರಾಟ ಮಾಡಿದ್ದರು.

ಮಾರುಕಟ್ಟೆ ಆಧಾರಿತ ಬೆಳೆಗಳು
ಹಬ್ಬ, ಮದುವೆ, ಶುಭ ಸಮಾರಂಭಗಳು ನಡೆಯುವ ಮಾಸಗಳನ್ನು ಆಧಾರಿಸಿ ಆವೇಳೆಗೆ ಕೊಯ್ಲಿಗೆ ಬರುವಂತೆ ತರಕಾರಿ, ಹೂವು, ಹಣ್ಣು ಬೆಳೆಯುತ್ತಾರೆ. ಉದಾಹರಣೆ ಶಿವರಾತ್ರಿ ಹಬ್ಬದ ಹೊತ್ತಿಗೆ ಗೆಣಸು, ಗಜ್ಜರಿ ಕೊಯ್ಲಿಗೆ ಬರುವಂತೆ ನಾಟಿ ಮಾಡುತ್ತಾರೆ. ದೀಪಾವಳಿ ಹಾಗೂ ದಸರಾ ಹಬ್ಬಕ್ಕೆ ಬರುವಂತೆ ಚೆಂಡು ಹೂವು ಬೆಳೆಯುತ್ತಾರೆ. ‘ಸೀಜನ್ ಆಧರಿಸಿ ಬೆಳೆ ಬೆಳೆಯುವುದರಿಂದ ಮಾರುಕಟ್ಟೆ ಸುಲಭ. ಈಗ ದೀಪಾವಳಿ–ದಸರಾ ವೇಳೆ ಚೆಂಡು ಹೂವಿನಿಂದ ₹ 30 ರಿಂದ ₹ 40 ಸಾವಿರ ಆದಾಯ ಪಡೆಯುತ್ತೇನೆ’ ಎಂದು ಮಾರುಕಟ್ಟೆ ತಂತ್ರಗಾರಿಕೆಯನ್ನೂ ಅವರು ವಿವರಿಸುತ್ತಾರೆ.

ಬೆಳೆಗಳಿಗೆ ರೋಗ ಬಂದರೆ ಬೇವಿನೆಣ್ಣೆ ಬೇವಿನ ಹಿಂಡಿ, ಕೀಟಬಾಧೆ ನಿಯಂತ್ರಣಕ್ಕೆ ಅಂಟು ಬಲೆ, ಬೆಳವಣಿಗೆ ಉತ್ತಮವಾಗಲು ಬೆಳೆಗಳಿಗೆ ಜೀವಾಮೃತ, ಬೆಳ್ಳುಳ್ಳಿ ಮೆಣಸಿನಕಾಯಿ ಕಷಾಯ ಸಿಂಪಡಿಸುತ್ತಾರೆ.

ಸಾವಯವ ವಿಧಾನದಲ್ಲಿ ಅರಿಸಿನ, ಜವೆಗೋದಿ ಬೆಳೆಯುವ ಧರೆಪ್ಪ, ಜವೆಗೋದಿಯನ್ನು ರವೆ ಮಾಡಿ, ಅರಿಸಿನದಿಂದ ಪುಡಿ ತಯಾರಿಸಿ ಪ್ರತಿ ಕೆಜಿಗೆ ₹200 ದರ ನಿಗದಿಪಡಿಸಿ ಬೆಂಗಳೂರು, ದೆಹಲಿ ಹಾಗೂ ಮುಂಬೈ ಮಾರುಕಟ್ಟೆಗೆ ಕಳುಹಿಸುತ್ತಾರೆ.

‌ಹೈನುಗಾರಿಕೆ– ಪೂರಕ ಆದಾಯ
ಸಮಗ್ರ ಕೃಷಿಯ ಭಾಗವಾಗಿ ಹೈನುಗಾರಿಕೆಯೂ ಇದೆ. ಆರು ಎಮ್ಮೆ, ನಾಲ್ಕು ಹಸು, ಹನ್ನೆರಡು ಆಡುಗಳನ್ನು ಸಾಕಿದ್ದಾರೆ. ಎಮ್ಮೆ–ಹಸುಗಳಿಂದ ನಿತ್ಯ 10 ಲೀಟರ್ ಹಾಲು ಕರೆದು ಮಾರಾಟ ಮಾಡುತ್ತಾರೆ. ಹಾಲು ಮಾರಾಟದ ಹಣವೇ ಮನೆಯ ಖರ್ಚಿಗಾಗುತ್ತಿದೆ.

ಹೈಡ್ರೊಫೋನಿಕ್ಸ್‌ (ಜಲಕೃಷಿ) ವಿಧಾನದಲ್ಲಿ ಮೇವು ಬೆಳೆಸುತ್ತಾರೆ. ಹೆಚ್ಚುವರಿ ಮೇವಾಗಿ ಆಜೋಲವನ್ನು ರಾಸುಗಳಿಗೆ ಕೊಡುತ್ತಾರೆ. 10 ಸದಸ್ಯರ ಅವಿಭಕ್ತ ಕುಟುಂಬವಿರುವ ಕಾರಣ, ಹೊಲದ ಎಲ್ಲ ಕೆಲಸಗಳನ್ನೂ ಮನೆಯವರೇ ಮಾಡಿಕೊಳ್ಳು
ತ್ತಾರೆ. ಇದೇ ಕಾರಣಕ್ಕಾಗಿ ಆದಾಯದಲ್ಲಿ ಕಾರ್ಮಿಕರ ಕೂಲಿ ಖರ್ಚು ತೀರಾ ಕಡಿಮೆ.

ಜಾನುವಾರುಗಳ ಸೆಗಣಿ, ಗಂಜಲವನ್ನು ಗೋಬರ್ ಗ್ಯಾಸ್‌ಗೆ ಬಳಸುತ್ತಾರೆ. ಎರೆಹುಳು ಗೊಬ್ಬರ ತಯಾರಿಕೆಗೆ ಗೋಬರ್ ಸ್ಲರಿ ಬಳಕೆಯಾಗುತ್ತದೆ. ಬೆಳೆಗಳಿಗೆ ಹಸಿರೆಲೆ ಗೊಬ್ಬರ, ಹಟ್ಟಿ ಗೊಬ್ಬರ, ಮೇಲುಗೊಬ್ಬರವಾಗಿ ಎರೆಗೊಬ್ಬರ ಕೊಡುತ್ತಾರೆ. ಇದಕ್ಕಾಗಿ ಎಂಟು ತೊಟ್ಟಿಗಳನ್ನು ಮಾಡಿದ್ದಾರೆ. ಗೋಬರ್ ಸ್ಲರಿ ಜತೆಗೆ, ಬೆಳೆಯುಳಿಕೆ, ಕಬ್ಬಿನ ರವದಿಯನ್ನು ಗೊಬ್ಬರವಾಗಿಸುತ್ತಾರೆ. ಹೀಗಾಗಿ ಪ್ರತಿ ವರ್ಷ 30 ಟನ್ ಸಾವಯಗೊಬ್ಬರ ತಯಾರಿ ಮಾಡಿಕೊಂಡು, ಹೊರಗಿನಿಂದ ಗೊಬ್ಬರ ಖರೀದಿಸುವುದಕ್ಕೂ ಕಡಿವಾಣ ಹಾಕಿದ್ದಾರೆ.

ಕೃಷಿಯಲ್ಲಿ ಹಲವು ಪ್ರಯೋಗ ಮಾಡುತ್ತಾ ಯಶಸ್ಸು ಕಂಡಿರುವ ಧರೆಪ್ಪ ಅವರ ಸಾಧನೆ ಗುರುತಿಸಿ ಹಲವು ಪ್ರಶಸ್ತಿಗಳು ಸಂದಿವೆ. 2006–07ನೇ ಸಾಲಿನಲ್ಲಿ ಕೃಷಿ ಪಂಡಿತ ಪ್ರಶಸ್ತಿ, 2011-12 ನೇ ಸಾಲಿನಲ್ಲಿ 1 ಹೆಕ್ಟೆರ್‌ನಲ್ಲಿ 72 ಕ್ವಿಂಟಲ್ ಗೋದಿ ಬೆಳೆದು ಸಾಧನೆ ಮಾಡಿದ್ದಕ್ಕಾಗಿ ರಾಜ್ಯ ಸರ್ಕಾರ ‘ಕೃಷಿ ಪ್ರಶಸ್ತಿ’ ನೀಡಿ ಗೌರವಿಸಿದೆ. ರಾಷ್ಟ್ರಮಟ್ಟದ ‘ಫಾರ್ಮರ್ ಫೆಲೊ’ ಪ್ರಶಸ್ತಿ ಸಂದಿದೆ. ರಾಜ್ಯ ಸರ್ಕಾರ ಕೃಷಿ ಅಧ್ಯಯನಕ್ಕಾಗಿ ಇವರನ್ನು ಚೀನಾ ದೇಶಕ್ಕೆ ಕಳುಹಿಸಿತ್ತು.

ಸಂಗೀತ ಆಲಾಪನೆ
‘ಸರ್ ಜಗದೀಶಚಂದ್ರ ಬೋಸ್ ಅವರ ಸಸ್ಯಗಳಿಗೂ ಜೀವವಿದೆ’ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಧರೆಪ್ಪ, ನಿತ್ಯವೂ ಜಮೀನಿನಲ್ಲಿ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ಸಂಗೀತ ಕೇಳಿಸುತ್ತಾರೆ. ಇದಕ್ಕಾಗಿ ಕಬ್ಬಿನ ಗದ್ದೆಗಳ ಎರಡು ಭಾಗಕ್ಕೆ ಒಂದೊಂದು ಸೌಂಡ್ ಬಾಕ್ಸ್ ಗಳನ್ನು ಇಟ್ಟಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಗಿನ 4 ಗಂಟೆಯವರೆಗೆ ಶಹನಾಯಿವಾದನ, ಶಾಸ್ತ್ರೀಯ ಸಂಗೀತವನ್ನು ಹಾಕುತ್ತಾರೆ. ‘ಸಂಗೀತ ಕೇಳಿಸುವುದರಿಂದ ಬೆಳೆಗಳಿಗೆ, ಜಾನುವಾರುಗಳಿಗೂ ಹಿತವಾಗಿರುತ್ತದೆ. ಎರಡರ ಇಳುವರಿಯೂ ಹೆಚ್ಚಾಗುತ್ತದೆ’ ಎಂಬುದು ಇವರ ಅವರ ನಂಬಿಕೆ.

ಸಮಗ್ರ ಕೃಷಿ ಪದ್ಧತಿ ಕುರಿತ ಅನುಭವ ಹಂಚಿಕೆಗಾಗಿ ಧರೆಪ್ಪ ಅವರ ಸಂಪರ್ಕ ಸಂಖ್ಯೆ : 9916238273

ಪ್ಯಾಕೆಟ್ ಮಾಡಿದ ಅರಿಸಿನವನ್ನು ಪ್ರದರ್ಶಿಸುತ್ತಿರುವ ಧರೆಪ್ಪ ದಂಪತಿ
ಪ್ಯಾಕೆಟ್ ಮಾಡಿದ ಅರಿಸಿನವನ್ನು ಪ್ರದರ್ಶಿಸುತ್ತಿರುವ ಧರೆಪ್ಪ ದಂಪತಿ

(ಚಿತ್ರ ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT