ನಾಟಿ ಬದನೆಗೆ ಸಾಟಿ ಎಲ್ಲಿ?

7

ನಾಟಿ ಬದನೆಗೆ ಸಾಟಿ ಎಲ್ಲಿ?

Published:
Updated:
Deccan Herald

‘ಇ ದು ಯಾವ ಬದನೆ? ಇಷ್ಟೊಂದು ಹಳದಿ ಬಣ್ಣ ತುಂಬಿಕೊಂಡಿದೆಯಲ್ಲ?’

‘ಅರೆ! ಇದೇ ಅಲ್ವಾ, ವಾಂಗೀಬಾತ್‌ಗೆ ಬಳಸುವ ಬದನೆ?’

‘ಇಲ್ನೋಡಿ... ಬಿಳಿ ಬಣ್ಣದ ಬದನೆ! ಇಂಥದನ್ನು ಎಲ್ಲೂ ಕಂಡೆ ಇಲ್ಲ ನಾನು’

ಕೆಲವು ದಿನಗಳ ಹಿಂದೆ ಕಾಂತರಾಜು ತೋಟಕ್ಕೆ ಬಂದಿದ್ದ ಬಹುರಾಷ್ಟ್ರೀಯ ಕಂಪನಿಯೊಂದರ ಉದ್ಯೋಗಿಗಳು ಬಗೆಬಗೆಯ ಬದನೆಗಳನ್ನು ನೋಡಿ ಉದ್ಗರಿಸುತ್ತಿದ್ದರು. ಒಂದೆರಡು ನಮೂನೆಯ ಬದನೆಕಾಯಿ ಮಾತ್ರ ನೋಡಿದ್ದ ಅವರಿಗೆ ಇಷ್ಟೊಂದು ತಳಿಗಳನ್ನು ಕಂಡು ಅಚ್ಚರಿಯಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕು ಕಂಬಳಿಪುರ ಗ್ರಾಮದ ಕಾಂತರಾಜು–ಸುಚಿತ್ರ ಕೃಷಿಕ ದಂಪತಿಯು ಬೆಳೆದಿದ್ದ ತರಹೇವಾರಿ ಬದನೆಗಳು ಎಲ್ಲರನ್ನೂ ವಿಸ್ಮಯಗೊಳಿಸುವಂಥವೇ ಆಗಿವೆ.

ತರಕಾರಿ ಕೃಷಿಯಲ್ಲಿ ಪ್ರಾವೀಣ್ಯ ಸಾಧಿಸಿರುವ ಕಾಂತರಾಜು, ಹಲವು ದೇಸಿ ತಳಿಗಳ ಸಂರಕ್ಷಣೆಯನ್ನೂ ಮಾಡುತ್ತಿದ್ದಾರೆ. ಇದೇ ಉದ್ದೇಶದಿಂದ ಅವರು ಈ ಬಾರಿ ಹತ್ತು ತಳಿಗಳ ದೇಸಿ ಬದನೆಯನ್ನು ಬೆಳೆದಿದ್ದಾರೆ. ಭಾರತದ ಬೇರೆ ಬೇರೆ ರಾಜ್ಯಗಳ ತಳಿಗಳ ಜತೆ ಕೀನ್ಯಾದ ಬದನೆ ತಳಿಯೊಂದು ತೋಟದಲ್ಲಿ ಕಾಯಿಯೊಂದಿಗೆ ತೂಗಾಡುತ್ತ ಮನಸೆಳೆಯುತ್ತಿದೆ.

ಒಣಭೂಮಿ ಪ್ರದೇಶಕ್ಕೆ ಹೊಂದಿಕೊಳ್ಳುವ ಬದನೆ, ಮಳೆ ಕಡಿಮೆ ಇದ್ದರೆ ಹೆಚ್ಚು ಇಳುವರಿ ಕೊಡುವುದು ಖಚಿತ ಎನ್ನುತ್ತಾರೆ ಕಾಂತರಾಜು. ಸಾಲಿನಿಂದ ಸಾಲಿಗೆ ಆರು ಮತ್ತು ಗಿಡದಿಂದ ಗಿಡಕ್ಕೆ ಎರಡು ಅಡಿ ಅಂತರದಲ್ಲಿ ಸಸಿ ನಾಟಿ ಮಾಡಿದ್ದಾರೆ. ನಾಟಿ ಮಾಡುವ ಮುನ್ನ ಒಂದು ಬೊಗಸೆಯಷ್ಟು ಕೊಟ್ಟಿಗೆ ಗೊಬ್ಬರವನ್ನು ಹಾಕಿ, ಒಂದೂವರೆ ತಿಂಗಳಿಗೆ ಪುನಃ ಕೊಟ್ಟಿಗೆ ಗೊಬ್ಬರವನ್ನು ಬುಡಕ್ಕೆ ಕೊಟ್ಟು ಮಣ್ಣು ಏರಿಸಿದ್ದಾರೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಜೀವಾಮೃತವನ್ನು ತಪ್ಪದೇ ಕೊಟ್ಟಿದ್ದಾರೆ. ಕೀಟ ನಿರ್ವಹಣೆಗೆ ಸೋಲಾರ್ ಟ್ರ್ಯಾಪ್ ಬಳಕೆ ಮಾಡಿ, ಯಶಸ್ಸು ಕಂಡಿದ್ದಾರೆ. ಜನವರಿ ತಿಂಗಳಲ್ಲಿ ಬದನೆ ನಾಟಿ ಮಾಡಿದ್ದು, ಈಗ ಎಲ್ಲ ತಳಿಗಳೂ ಕಾಯಿ ಹೊತ್ತು ನಿಂತಿವೆ.

‘ದಿನನಿತ್ಯ ಬಳಸಬಹುದಾದ ತರಕಾರಿ ಬದನೆಯಲ್ಲಿ ದೇಸಿ ತಳಿಗಳು ಹೆಚ್ಚು ರುಚಿ ಹೊಂದಿರುತ್ತವೆ. ತರಕಾರಿ ಬೆಳೆಯಲು ಒಂದಷ್ಟು ಕೌಶಲ ಬೇಕು. ಕಂಬಳಿಪುರ ಹಾಗೂ ಮಾಯಸಂದ್ರ ಗ್ರಾಮಗಳ ಹಲವು ಕೃಷಿಕರು ತರಕಾರಿ ಬೇಸಾಯದಲ್ಲಿ ಪರಿಣಿತರು. ಆ ಪೈಕಿ ಕಾಂತರಾಜು–ಸುಚಿತ್ರ ದಂಪತಿಯು ಸಹಜ ಸಮೃದ್ಧ ಸಂಸ್ಥೆಯ ದೇಸಿ ಬದನೆ ತಳಿ ಸಂರಕ್ಷಣೆ ಆಂದೋಲನಕ್ಕೆ ಕೈ ಜೋಡಿಸಿದ್ದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಕಾರ್ಯಕ್ರಮ ಸಂಯೋಜಕಿ ಅನಿತಾ ರೆಡ್ಡಿ. ಈಗಾಗಲೇ ಈ ಗ್ರಾಮದಲ್ಲಿ ಹಲವು ತರಕಾರಿಗಳ ದೇಸಿ ತಳಿಗಳು ಪುನರ್ಜನ್ಮ ಪಡೆದಿದ್ದು, ಹತ್ತಾರು ತಳಿಗಳ ಸಂರಕ್ಷಣೆ ನಡೆಯುತ್ತಿದೆ. ಈ ಸಾಲಿಗೆ ಈ ದಂಪತಿಯ ದೇಸಿ ಬದನೆ ಸಂರಕ್ಷಣೆ ಮತ್ತೊಂದು ಸೇರ್ಪಡೆ ಎಂದು ಸಹಜ ಸಾವಯವ ತರಕಾರಿ ಬೆಳೆಗಾರರ ಸಂಘದ ಸಂಚಾಲಕಿ ನಾಗರತ್ನ ಸಂತಸ ವ್ಯಕ್ತಪಡಿಸುತ್ತಾರೆ.

‘ನಾವು ತರಕಾರಿಯನ್ನು ದಶಕಗಳಿಂದಲೂ ಬೆಳೆಯುತ್ತಿದ್ದೇವೆ. ಆದರೆ ದೇಸಿ ತಳಿಗಳ ಸಾಮರ್ಥ್ಯ ನಮಗೆ ಅಚ್ಚರಿ ಮೂಡಿಸಿದೆ. ಹೆಚ್ಚೇನೂ ಆರೈಕೆ ಬಯಸದ ಈ ತಳಿಗಳು ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ರೈತರಿಗೆ ಆದಾಯ ಕೊಡುತ್ತವೆ. ಒಂದೆರಡು ತರಹದ ಬದನೆ ಬಳಸುವವರಿಗೆ ಈ ತಳಿಗಳು ಒಳ್ಳೆಯ ಆಯ್ಕೆಯನ್ನು ತೆರೆದು ಇಡುತ್ತವೆ’ ಎನ್ನುತ್ತಾರೆ ಕಾಂತರಾಜು.

ಸ್ಥಳೀಯ ಮಣ್ಣು- ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುವ ದೇಸಿ ತಳಿ ಬದನೆಯನ್ನು ಸಂರಕ್ಷಿಸುವ ಬದಲಿಗೆ ಆಧುನಿಕ ಕೃಷಿ ವಿಜ್ಞಾನವು ಹೈಬ್ರಿಡ್ ತಳಿಗಳ ಪ್ರಚಾರದ ಬೆನ್ನು ಬಿದ್ದಿದೆ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಬಿ.ಟಿ. ಬದನೆ ಅಭಿವೃದ್ಧಿಗೆ ಕೋಟಿಗಟ್ಟಲೇ ಹಣ ಸುರಿಯಲಾಗುತ್ತಿದೆ. ಈ ಬಗ್ಗೆ ಅದಾಗಲೇ ಪರಿಸರವಾದಿಗಳು, ಹಲವು ವಿಜ್ಞಾನಿಗಳಿಂದ ಪ್ರತಿರೋಧ ವ್ಯಕ್ತವಾಗಿದೆ. ಒಂದೊಂದು ಪ್ರದೇಶದ ವೈಶಿಷ್ಟ್ಯವನ್ನು ತನ್ನೊಡಲಲ್ಲಿ ಇಟ್ಟುಕೊಂಡು ಸಾವಿರಾರು ವರ್ಷಗಳಿಂದ ರೂಪುಗೊಂಡ ಪೌಷ್ಟಿಕಾಂಶಗಳ ನಾಟಿ ಬದನೆ ತಳಿಗಳಿಗೆ ಸಾಟಿ ಎಲ್ಲಿದೆ?

ಬದನೆ ವೈವಿಧ್ಯ

1.  ಕೊತ್ತಿತಲೆ ಬದನೆ: ಇದು ರಾಮನಗರ ಮೂಲದ್ದು. ಇಳುವರಿ ಕಡಿಮೆ. ಆದರೆ, ಒಂದು ಕಾಯಿ ಒಂದು ಕೆಜಿವರೆಗೂ ತೂಗುತ್ತದೆ. ಬೆಕ್ಕಿನ ತಲೆ ತರಹ ಕಾಣುವ ಕಾರಣದಿಂದ ‘ಕೊತ್ತಿತಲೆ’ ಬದನೆ ಎಂಬ ಹೆರು. ರೋಗ- ಕೀಟ ಬಾಧೆ ಕಡಿಮೆ. ಬಹುವಾರ್ಷಿಕ ಬದನೆ.

2.  ಹಸಿರು ಗುಂಡು ಬದನೆ: ಉತ್ತಮ ಇಳುವರಿ ಕೊಡುವ ಹಾಗೂ ಹೆಚ್ಚು ಬೇಡಿಕೆಯಿರುವ ತಳಿ. ಸುಮಾರು ೪ ಅಡಿ ಎತ್ತರ ಬೆಳೆಯುತ್ತದೆ. ಸಾವಯವ ಗೊಬ್ಬರದ ಪ್ರಮಾಣ ಹೆಚ್ಚು ಕೊಡಬೇಕು. ಆರು ತಿಂಗಳ ಬೆಳೆ. ಕೀಟ ಮತ್ತು ರೋಗ ಬಾಧೆ ಕಡಿಮೆ. ಮಳೆ ಹೆಚ್ಚಾದರೂ ತಡೆಯುತ್ತದೆ.

3.  ಬಿಳಿ ಉದ್ದ ಬದನೆ: ಈ ತಳಿಯ ಹೂವು ಮತ್ತು ಕಾಯಿ ಎರಡು ಬಿಳಿ ಬಣ್ಣ. ಮೂರರಿಂದ ನಾಲ್ಕು ಅಡಿ ಎತ್ತರ ಬೆಳೆಯುತ್ತದೆ. ಕಾಂಡ ಗಟ್ಟಿಯಾಗಿರುತ್ತದೆ. ಹೆಚ್ಚು ಮಳೆ ತಡೆಯುತ್ತದೆ. ರೋಗವಿಲ್ಲ. ಆದರೆ ಕೀಟ ಬಾಧೆಗೆ ಈಡಾಗುತ್ತದೆ. ಆರು ತಿಂಗಳ ಅವಧಿಯ ತಳಿ.

4.  ಗೋಯಾಕುಂಬ ಬದನೆ: ಇದು ಕೀನ್ಯಾ ಮೂಲದ ಬದನೆ. ಬದನೆ ಕಾಯಿಗಳು ನಾಟಿ ಟೊಮೆಟೊ ಹೋಲುತ್ತವೆ. ಅಂದಾಜು ೫ ಅಡಿ ಎತ್ತರ ಬೆಳೆಯುವ ತಳಿ ಇದು. ಎಲೆಗಳು ತುಂಬಾ ಸಣ್ಣ; ಕಾಂಡ ಗಟ್ಟಿ. ಎಲ್ಲ ತರಹದ ಮಣ್ಣಿಗೂ ಎಲ್ಲ ಕಾಲಕ್ಕೂ ಹೊಂದಿಕೊಳ್ಳುತ್ತದೆ. ಇಳುವರಿ ಸ್ವಲ್ಪ ಕಡಿಮೆ; ಬೇಡಿಕೆಯೂ ಕಡಿಮೆ. ಯಾವುದೇ ಕೀಟ ಮತ್ತು ರೋಗ ಬಾಧೆ ಇಲ್ಲ.

5.  ನೀಲಿ ಗುಂಡು ಬದನೆ: ನೀಲಿ ಬಣ್ಣವಿದ್ದು, ಕಾಯಿಗಳು ಗುಂಡಾಗಿರುವುದರಿಂದ ’ನೀಲಿ ಗುಂಡು ಬದನೆ’ ಎನ್ನುತ್ತಾರೆ. ಸುಮಾರು ನಾಲ್ಕು ಅಡಿ ಎತ್ತರ ಬೆಳೆಯುತ್ತದೆ. ಮಳೆ ಜಾಸ್ತಿಯಾದರೆ ತಡೆಯುವುದಿಲ್ಲ. ಆರು ತಿಂಗಳ ಅವಧಿಯ ಈ ತಳಿ ಕೆಂಪು ಗೋಡು ಮಣ್ಣಿಗೆ ಹೆಚ್ಚು ಸೂಕ್ತ,

6. ನೀಲಿ ಉದ್ದ ಬದನೆ: ಕೆಂಪು ಗೋಡು ಮಣ್ಣಿನಲ್ಲಿ ಹೆಚ್ಚು ಇಳುವರಿ ಕೊಡುವ ಈ ತಳಿಯ ಬದನೆ ಗಿಡಗಳು ಸುಮಾರು ನಾಲ್ಕು ಅಡಿ ಎತ್ತರ ಬೆಳೆಯುತ್ತವೆ. ಕಾಯಿಗಳು ಸಿಹಿಯಾಗಿದ್ದು ಒಂದು ಅಡಿ ಉದ್ದ ಬೆಳೆಯುತ್ತವೆ. ಕಾಂಡಕೊರಕ ಹುಳುವಿನ ಕಾಟ ಇದೆ; ಆದರೆ ರೋಗ ಬಾಧೆ ಇಲ್ಲ. ನೀರಾವರಿಗೆ ಹೆಚ್ಚು ಸೂಕ್ತ.

7.  ಬಿಳಿ ಸುಂದರ ಬದನೆ (ಕಾಶ್ಮೀರಿ ಬದನೆ): ಕಾಯಿ ಮತ್ತು ಹೂವಿನ ಬಣ್ಣ ಬಿಳಿಯಾಗಿದ್ದು ಮಾಮೂಲಿ ಬದನೆ ಇರುವ ಹಾಗೇ ಇರುವುದಿಲ್ಲ ಮದನಪಲ್ಲಿ ಟಮೋಟ ತರಹ ಇರುತ್ತೆ. ಹೆಚ್ಚು ಸುಂದರವಾಗಿದ್ದು ಆಕರ್ಷಕವಾಗಿರುತ್ತದೆ. ಮೂರರಿಂದ ನಾಲ್ಕು ಅಡಿ ಎತ್ತರ ಬೆಳೆಯುತ್ತದೆ. ಹೆಚ್ಚು ಬಾರ ತಡೆಯುವುದಿಲ್ಲ. ಕಾಂಡ ಗಟ್ಟಿ ಇಲ್ಲ ಮತ್ತು ಚಿಕ್ಕ ಕಾಂಡ ಎಲೆಗಳು ಸಹ ಚಿಕ್ಕವು. ಕೀಟ ಮತ್ತು ರೋಗ ಬಾಧೆ ಇಲ್ಲ. ಇಳುವರಿ ಕಡಿಮೆ. ಬೇರೆ ಬದನೆಗಳು ಕಾಯಿ ಬಿಟ್ಟ ಹದಿನೈದು ದಿನ ಕಳೆದ ನಂತರ ಕಾಯಿ ಬಿಡುತ್ತದೆ.

8. ಈರಂಗೆರೆ ಬದನೆ: ಮೈಸೂರು ಮೂಲದ ತಳಿ. ನೀಳವಾದ ಹಸಿರು ಕಾಯಿ ಥೇಟ್ ಹಾವಿನಂತೆ ಕಾಣುತ್ತದೆ ! ತಿಪಟೂರು ಭಾಗದಲ್ಲಿ ಮನೆ ಮುಂದಿನ ಕೈತೋಟಗಳಲ್ಲಿ ಇದನ್ನು ಬಹುವಾರ್ಷಿಕ ಬೆಳೆಯಾಗಿ ಬೆಳೆದುಕೊಳ್ಳುತ್ತಾರೆ. ವಾಂಗಿ ಬಾತ್‌ಗೆ ಹೇಳಿಮಾಡಿಸಿದಂಥದು. ಒಂದು ಕಾಲದಲ್ಲಿ ಮೈಸೂರು- ಮಂಡ್ಯ ಭಾಗದಲ್ಲಿ ಅತಿ ಹೆಚ್ಚು ಖ್ಯಾತಿ ಪಡೆದಿದ್ದ ಬದನೆ ತಳಿಯಿದು.

9.  ನೀಲಿ ಬದನೆ: ಆರು ತಿಂಗಳ ಬೆಳೆ. ಮಳೆ ಹೆಚ್ಚು ಸುರಿದರೂ ಸಮಸ್ಯೆಯಿಲ್ಲದೇ ಬೆಳೆಯುತ್ತದೆ. ನಾಲ್ಕು ಅಡಿ ಎತ್ತರದ ಈ ತಳಿಯ ಬದನೆ ಇಳುವರಿ ಅಧಿಕ. ರುಚಿ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ರೋಗ- ಕೀಟ ಬಾಧೆ ಕಡಿಮೆ.

10.  ಮುಸುಕು ಬದನೆ: ಸೇಬು ಹಣ್ಣಿನ ಆಕಾರದ ಕಾಯಿ ಮನಸೆಳೆಯುತ್ತವೆ. ಎಲೆಗಳು ಕಾಯಿಯನ್ನು ಆವರಿಸಿರುವುದರಿಂದ ಇದಕ್ಕೆ ’ಮುಸುಕು ಬದನೆ’ ಎಂಬ ಹೆಸರು ಬಂದಿದೆ. ಒಮ್ಮೆ ನೆಟ್ಟರೆ ಮೂರು ವರ್ಷಗಳ ಕಾಲ ಸತತವಾಗಿ ಕಾಯಿ ಬಿಡುತ್ತಲೇ ಇರುತ್ತದೆ. ಮನೆ ಹಿಂದೆ ಕೈತೋಟದಲ್ಲಿ ಮೂರ‍್ನಾಲ್ಕು ಗಿಡ ಇದ್ದರೆ ವರ್ಷವಿಡೀ ಬದನೆ ಲಭ್ಯ. ರುಚಿಯಾದ ಅಡುಗೆಗೆ ಈ ಬದನೆ ಬಳಕೆಯಾದರೂ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ.

ಬದನೆ ಕಾಯಿಯ ಇತಿಹಾಸ..

ಬದನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಮಾಯಣ, ಬೌದ್ಧ, ಜೈನ ಕೃತಿಗಳ ಜತೆಗೆ, ಉತ್ತರಾಧ್ಯಯನ ಸೂತ್ರ, ಪ್ರಜಾಪಾನ ಸೂತ್ರ, ಜಾತಕದಲ್ಲಿ ಬದನೆಯ ಉಲ್ಲೇಖವಿದೆ. ಸಂಸ್ಕೃತದಲ್ಲಿ ಇದಕ್ಕೆ ವರ್ತಕು, ವೃತಂಕ, ವಾಂತಕಿ, ವಂತಿಕಾ ಎಂದು ಕರೆದರೆ, ಪರ್ಶಿಯನ್ ಭಾಷೆಯಲ್ಲಿ ‘ಬಧಿಂಜನ್’ ಹಾಗೂ ಅರಬ್ ಭಾಷೆಯಲ್ಲಿ ‘ಅಲ್-ಬದಿಂಜನ್’ ಎನ್ನುವುದೂ ಉಂಟು.

ಒಂದರ್ಥದಲ್ಲಿ ಬದನೆ ಭಾರತೀಯರ ಬದುಕಿನ ಭಾಗವೇ ಹೌದು. ವರಹಾಮಿಹಿರನ ‘ಬೃಹತ್‌ಸಂಹಿತೆ’ಯಲ್ಲಿ ಬದನೆಯ ಪ್ರಸ್ತಾಪ ಬರುತ್ತದೆ. ಸುರಪಾಲನ ವೃಕ್ಷಾರ್ಯವೇದ ಗ್ರಂಥದಲ್ಲಿ ಬದನೆಕಾಯಿಯ ಗಾತ್ರ ದೊಡ್ಡದು ಮಾಡುವ, ಗಿಡ ಪೋಷಿಸುವ ತಂತ್ರಗಳ ವಿವರ ಸಿಗುತ್ತದೆ. ಆರ್ಯುವೇದದಲ್ಲಿ ಇದು ಔಷಧಿಯಾಗಿ ಬಳಕೆಯಾಗುತ್ತದೆ. ಸಾವಿರ ವರ್ಷಗಳಿಗೂ ಹಳೆಯದಾದ ತಮಿಳುನಾಡಿದ ಸಾಹಿತ್ಯದಲ್ಲಿ ಬದನೆ ಪ್ರಸ್ತಾಪವಿದೆ. ವರ್ಷದ ಬಹುತೇಕ ಎಲ್ಲ ಕಾಲದಲ್ಲೂ ಬೆಳೆಯಬಹುದಾದ ತರಕಾರಿ ಇದಾಗಿದ್ದು, ಬದನೆಯನ್ನು ಒಳಗೊಂಡ ಜನಪದ ಹಾಡುಗಳು, ಗಾದೆಗಳು, ನುಡಿಗಟ್ಟುಗಳು ಸಾಕಷ್ಟಿವೆ.

ಕಾಡು ಬದನೆಯನ್ನು ಕೃಷಿಗೆ ಒಗ್ಗಿಸಿದ ಹೆಮ್ಮೆ ಭಾರತೀಯರದು. ನಾಲ್ಕು ಸಾವಿರ ವರ್ಷಗಳಿಂದ ಬದನೆಯ ಕೃಷಿ ಭಾರತದಲ್ಲಿ ನಡೆಯುತ್ತಿದೆ. ರೈತರು ನೂರಾರು ತರಹದ ಬದನೆ ತಳಿಗಳನ್ನು ಅಭಿವೃದ್ಧಿಪಡಿಸಿ ಆಯಾ ಪ್ರದೇಶಕ್ಕೆ ಒಗ್ಗಿಸಿದ್ದಾರೆ. ಎಂಟನೇ ಶತಮಾನದಲ್ಲಿ ಅರಬ್ ವರ್ತಕರು ಬದನೆಯನ್ನು ಮಧ್ಯಪ್ರಾಚ್ಯ ದೇಶಗಳಿಗೆ ಪರಿಚಯಿಸಿದರು. ಅಲ್ಲಿಂದ ಇದು ಯೂರೋಪ್‌ಗೆ ಬಂತು; ಇಡೀ ಪ್ರಪಂಚಕ್ಕೆ ಹರಡಿತು. ಇದರ ಕಾಯಿಗಳು ಮೊಟ್ಟೆ ಆಕಾರದಲ್ಲಿ ಇರುವುದರಿಂದ ಉತ್ತರ ಅಮೆರಿಕ ಖಂಡದಲ್ಲಿ ಇದನ್ನು ‘ಎಗ್ ಪ್ಲಾಂಟ್’ ಎಂದೇ ಕರೆಯಲಾಗುತ್ತದೆ!

ಭಾರತದಲ್ಲಿ ಐದು ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬದನೆಯ ಕೃಷಿ ನಡೆಯುತ್ತಿದೆ. ಎಲ್ಲ ಮಣ್ಣಿಗೂ ಒಗ್ಗುವ ಅಪರೂಪದ ಬೆಳೆ. ’ಬಡವರ ತರಕಾರಿ’ ಎಂಬ ಹೆಗ್ಗಳಿಕೆ.

ಬದನೆ ವೈವಿಧ್ಯ

ಕೊತ್ತಿತಲೆ ಬದನೆ: ಇದು ರಾಮನಗರದ ಮೂಲದ್ದು. ಇಳುವರಿ ಕಡಿಮೆ. ಆದರೆ, ಒಂದು ಕಾಯಿ ಒಂದು ಕೆ.ಜಿ.ವರೆಗೂ ತೂಗುತ್ತದೆ. ಬೆಕ್ಕಿನತಲೆ ತರಹ ಕಾಣುವ ಕಾರಣದಿಂದ ‘ಕೊತ್ತಿತಲೆ’ ಬದನೆ ಎಂಬ ಹೆಸರು. ಇದಕ್ಕೆ ರೋಗ- ಕೀಟ ಬಾಧೆ ಕಡಿಮೆ. ಇದು ಬಹುವಾರ್ಷಿಕ ಬದನೆ.

ಹಸಿರು ಗುಂಡು ಬದನೆ: ಉತ್ತಮ ಇಳುವರಿ ಕೊಡುವ ಹಾಗೂ ಹೆಚ್ಚು ಬೇಡಿಕೆಯಿರುವ ತಳಿ. ಸುಮಾರು 4 ಅಡಿ ಎತ್ತರ ಬೆಳೆಯುತ್ತದೆ. ಸಾವಯವ ಗೊಬ್ಬರದ ಪ್ರಮಾಣ ಹೆಚ್ಚು ಕೊಡಬೇಕು. ಆರು ತಿಂಗಳ ಬೆಳೆ. ಕೀಟ ಮತ್ತು ರೋಗ ಬಾಧೆ ಕಡಿಮೆ. ಮಳೆ ಹೆಚ್ಚಾದರೂ ತಡೆಯುತ್ತದೆ.

ಬಿಳಿ ಉದ್ದ ಬದನೆ: ಈ ತಳಿಯ ಹೂವು ಮತ್ತು ಕಾಯಿ ಎರಡು ಬಿಳಿ ಬಣ್ಣ. ಮೂರರಿಂದ ನಾಲ್ಕು ಅಡಿ ಎತ್ತರ ಬೆಳೆಯುತ್ತದೆ. ಕಾಂಡ ಗಟ್ಟಿಯಾಗಿರುತ್ತದೆ. ಹೆಚ್ಚು ಮಳೆ ತಡೆಯುತ್ತದೆ. ರೋಗವಿಲ್ಲ. ಆದರೆ ಕೀಟ ಬಾಧೆಗೆ ಈಡಾಗುತ್ತದೆ. ಆರು ತಿಂಗಳ ಅವಧಿಯ ತಳಿ.

ಗೋಯಾಕುಂಬ ಬದನೆ: ಇದು ಕೀನ್ಯಾ ಮೂಲದ ಬದನೆ. ಬದನೆಕಾಯಿಗಳು ನಾಟಿ ಟೊಮೆಟೊವನ್ನು ಹೋಲುತ್ತವೆ. ಅಂದಾಜು 5 ಅಡಿ ಎತ್ತರ ಬೆಳೆಯುವ ತಳಿ ಇದು. ಎಲೆಗಳು ತುಂಬಾ ಸಣ್ಣ; ಕಾಂಡ ಗಟ್ಟಿ. ಎಲ್ಲ ತರಹದ ಮಣ್ಣಿಗೂ ಎಲ್ಲ ಕಾಲಕ್ಕೂ ಹೊಂದಿಕೊಳ್ಳುತ್ತದೆ. ಇಳುವರಿ ಸ್ವಲ್ಪ ಕಡಿಮೆ; ಬೇಡಿಕೆಯೂ ಕಡಿಮೆ. ಯಾವುದೇ ಕೀಟ ಮತ್ತು ರೋಗ ಬಾಧೆ ಇಲ್ಲ.

ನೀಲಿ ಗುಂಡು ಬದನೆ: ನೀಲಿ ಬಣ್ಣವಿದ್ದು, ಕಾಯಿಗಳು ಗುಂಡಾಗಿರುವುದರಿಂದ ‘ನೀಲಿ ಗುಂಡು ಬದನೆ’ ಎನ್ನುತ್ತಾರೆ. ಸುಮಾರು ನಾಲ್ಕು ಅಡಿ ಎತ್ತರ ಬೆಳೆಯುತ್ತದೆ. ಮಳೆ ಜಾಸ್ತಿಯಾದರೆ ತಡೆಯುವುದಿಲ್ಲ. ಆರು ತಿಂಗಳ ಅವಧಿಯ ಈ ತಳಿ ಕೆಂಪು ಗೋಡು ಮಣ್ಣಿಗೆ ಹೆಚ್ಚು ಸೂಕ್ತ,

ನೀಲಿ ಉದ್ದ ಬದನೆ: ಕೆಂಪು ಗೋಡು ಮಣ್ಣಿನಲ್ಲಿ ಹೆಚ್ಚು ಇಳುವರಿ ಕೊಡುವ ಈ ತಳಿಯ ಬದನೆ ಗಿಡಗಳು ಸುಮಾರು ನಾಲ್ಕು ಅಡಿ ಎತ್ತರ ಬೆಳೆಯುತ್ತವೆ. ಕಾಯಿಗಳು ಸಿಹಿಯಾಗಿದ್ದು ಒಂದು ಅಡಿ ಉದ್ದ ಬೆಳೆಯುತ್ತವೆ. ಕಾಂಡಕೊರಕ ಹುಳುವಿನ ಕಾಟ ಇದೆ; ಆದರೆ ರೋಗ ಬಾಧೆ ಇಲ್ಲ. ನೀರಾವರಿಗೆ ಹೆಚ್ಚು ಸೂಕ್ತ.

ಬಿಳಿ ಸುಂದರ ಬದನೆ (ಕಾಶ್ಮೀರಿ ಬದನೆ): ಕಾಯಿ ಮತ್ತು ಹೂವಿನ ಬಣ್ಣ ಬಿಳಿಯಾಗಿದ್ದು ಮಾಮೂಲಿ ಬದನೆ ಇರುವ ಹಾಗೇ ಇರುವುದಿಲ್ಲ. ಮದನಪಲ್ಲಿ ಟೊಮೆಟೊ ತರಹ ಇರುತ್ತೆ. ಮೂರರಿಂದ ನಾಲ್ಕು ಅಡಿ ಎತ್ತರ ಬೆಳೆಯುತ್ತದೆ. ಹೆಚ್ಚು ಭಾರ ತಡೆಯುವುದಿಲ್ಲ. ಕಾಂಡ ಗಟ್ಟಿ ಇಲ್ಲ ಮತ್ತು ಚಿಕ್ಕ ಕಾಂಡ ಎಲೆಗಳು ಸಹ ಚಿಕ್ಕವು. ಕೀಟ ಮತ್ತು ರೋಗ ಬಾಧೆ ಇಲ್ಲ. ಇಳುವರಿ ಕಡಿಮೆ. ಬೇರೆ ಬದನೆಗಳು ಕಾಯಿ ಬಿಟ್ಟ ಹದಿನೈದು ದಿನ ಕಳೆದ ನಂತರ ಕಾಯಿ ಬಿಡುತ್ತದೆ.

ಈರಂಗೆರೆ ಬದನೆ: ಮೈಸೂರು ಮೂಲದ ತಳಿ. ನೀಳವಾದ ಹಸಿರು ಕಾಯಿ. ಥೇಟ್ ಹಾವಿನಂತೆ ಕಾಣುತ್ತದೆ! ತಿಪಟೂರು ಭಾಗದಲ್ಲಿ ಮನೆ ಮುಂದಿನ ಕೈತೋಟಗಳಲ್ಲಿ ಇದನ್ನು ಬಹುವಾರ್ಷಿಕ ಬೆಳೆಯಾಗಿ ಬೆಳೆದುಕೊಳ್ಳುತ್ತಾರೆ. ವಾಂಗಿಬಾತ್‌ಗೆ ಹೇಳಿಮಾಡಿಸಿದಂಥದ್ದು. ಒಂದು ಕಾಲದಲ್ಲಿ ಮೈಸೂರು- ಮಂಡ್ಯ ಭಾಗದಲ್ಲಿ ಅತಿ ಹೆಚ್ಚು ಖ್ಯಾತಿ ಪಡೆದಿದ್ದ ಬದನೆ ತಳಿಯಿದು.

ನೀಲಿ ಬದನೆ: ಆರು ತಿಂಗಳ ಬೆಳೆ. ಮಳೆ ಹೆಚ್ಚು ಸುರಿದರೂ ಸಮಸ್ಯೆಯಿಲ್ಲದೇ ಬೆಳೆಯುತ್ತದೆ. ನಾಲ್ಕು ಅಡಿ ಎತ್ತರದ ಈ ತಳಿಯ ಬದನೆ ಇಳುವರಿ ಅಧಿಕ. ರುಚಿ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ರೋಗ- ಕೀಟ ಬಾಧೆ ಕಡಿಮೆ.

ಮುಸುಕು ಬದನೆ: ಈ ತಳಿಯ ಕಾಯಿ ಸೇಬು ಹಣ್ಣಿನ ಆಕಾರದಲ್ಲಿರುತ್ತದೆ. ಎಲೆಗಳು ಕಾಯಿಯನ್ನು ಆವರಿಸಿರುವುದರಿಂದ ಇದಕ್ಕೆ ‘ಮುಸುಕು ಬದನೆ’ ಎಂಬ ಹೆಸರು ಬಂದಿದೆ. ಒಮ್ಮೆ ನೆಟ್ಟರೆ ಮೂರು ವರ್ಷ ಸತತವಾಗಿ ಕಾಯಿ ಬಿಡುತ್ತಲೇ ಇರುತ್ತದೆ. ಮನೆ ಹಿಂದೆ ಕೈತೋಟದಲ್ಲಿ ಮೂರ‍್ನಾಲ್ಕು ಗಿಡ ಇದ್ದರೆ ವರ್ಷವಿಡೀ ಬದನೆ ಲಭ್ಯ. ರುಚಿಯಾದ ಅಡುಗೆಗೆ ಈ ಬದನೆ ಬಳಕೆಯಾದರೂ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ.

ದೇಸಿ ಬದನೆ ತಳಿಯ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 7090009922

ಚಿತ್ರಗಳು: ಜಗದೀಶ್ ಮಂಡ್ಯ

Tags: 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !