ಹಲಸು ರಕ್ಷಣೆ; ಹಲವು ಉಪಾಯ

ಮಂಗಳವಾರ, ಏಪ್ರಿಲ್ 23, 2019
31 °C

ಹಲಸು ರಕ್ಷಣೆ; ಹಲವು ಉಪಾಯ

Published:
Updated:
Prajavani

ತುಮಕೂರು ಜಿಲ್ಲೆ ಚೇಳೂರು, ತೋವಿನಕರೆ ಭಾಗದ ಬಹುತೇಕರ ತೋಟಗಳಲ್ಲಿ ಹಲಸಿನ ಮರಗಳಿವೆ. ಅದೇ ರೀತಿ ಜಮೀನಿಗೆ ಹೊಂದಿಕೊಂಡಂತೆ ಗುಡ್ಡಗಳಿವೆ. ಹೀಗಾಗಿ ಪ್ರತಿ ಬಾರಿ ಹಲಸಿನ ಮರಗಳಲ್ಲಿ ಹಣ್ಣು ಬಿಟ್ಟಾಗ ಕರಡಿ ದಾಳಿ ಮಾಡುತ್ತವೆ. ಹಣ್ಣಾಗುವ ಬಲಿತ ಕಾಯಿಗಳ ಜತೆಗೆ, ಎಳೆ ಕಾಯಿಗಳನ್ನು ಕಿತ್ತು ಹಾಳು ಮಾಡುತ್ತೇವೆ. ಕರಡಿಗಳಿಂದ ಹಲಸಿನ ಫಸಲು ರಕ್ಷಿಸಿಕೊಳ್ಳುವುದು ರೈತರಿಗೆ ಬಹುದೊಡ್ಡ ಸವಾಲಾಗಿದೆ.

ಕೆಲವು ರೈತರು ಕರಡಿ ಹಾವಳಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಎಳೆ ಹಲಸಿನ ಕಾಯಿಗಳನ್ನೇ ಕಿತ್ತು ಮಾರುತ್ತಿದ್ದರು. ಒಮ್ಮೊಮ್ಮೆ ರಾಶಿ ರಾಶಿ ಕಾಯಿಗಳನ್ನು ಕಿತ್ತು ಕಡಿಮೆ ಬೆಲೆಗೆ ಮಾರಾಟ ಮಾಡಿ, ನಷ್ಟ ಅನುಭವಿಸಿದ ಉದಾಹರಣೆಗಳಿವೆ.

ಇಂಥ ಕರಡಿ ದಾಳಿಯಿಂದ ನಷ್ಟ ಅನುಭವಿಸುತ್ತಿದ್ದ ತೋವಿನಕೆರೆ ಸಮೀಪದ ಬರಕ ಗ್ರಾಮದ ಕೆಲವು ರೈತರು, ಹಲಸಿನ ಫಸಲು ರಕ್ಷಣೆಗಾಗಿ ಒಂದು ಸುಲಭ ಉಪಾಯ ಮಾಡಿಕೊಂಡಿದ್ದಾರೆ. ಅದು ಹೀಗಿದೆ;

ಹಲಸಿನ ಮರಕ್ಕೆ ಕೆಳಗಿನಿಂದ ರೆಂಬೆಗಳು ಒಡಮೂಡಿರುವ ಜಾಗದವರೆಗೂ ತಗಡಿನ ಶೀಟ್ ಸುತ್ತುತ್ತಾರೆ. ತಗಡಿನ ಡಬ್ಬವನ್ನು ದಾರದಿಂದ ಕಟ್ಟಿ, ಮರದ ಪಕ್ಕದಲ್ಲೇ ನೇತಾಡುವಂತೆ ಕೊಂಬೆಗೆ ತೂಗು ಹಾಕುತ್ತಾರೆ. ‘ಗಾಳಿ ಬೀಸಿದಾಗಲೆಲ್ಲ ಡಬ್ಬ ತೂಗಾಡುತ್ತಾ, ಮರಕ್ಕೆ ಕಟ್ಟಿರುವ ತಗಡಿಗೆ ಬಡಿಯುತ್ತಾ ಶಬ್ಧ ಮಾಡುತ್ತದೆ. ಈ ಶಬ್ಧಕ್ಕೆ ಹೆದರುವ ಕರಡಿಗಳು ಹಣ್ಣಿಗಾಗಿ ಮರ ಏರಲು ಬರುವ ಕರಡಿ, ಈ ಶಬ್ಧಕ್ಕೆ ಹೆದರಿ ಓಡಿ ಹೋಗುತ್ತದೆ’ ಎನ್ನುತ್ತಾರೆ ರೈತರು.

ತಗಡಿನ ಕವಚದ ಉಪಾಯವನ್ನು ಅನುಸರಿಸಲು ಆರಂಭಿಸಿದ ಮೇಲೆ ಕರಡಿಗಳು ಹಲಸಿನ ಫಸಲ ಮೇಲೆ ದಾಳಿ ಮಾಡುವುದು ತಪ್ಪಿದೆ. ಸೂಕ್ತ ಸಮಯದಲ್ಲಿ ಹಣ್ಣುಗಳನ್ನು ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗಿದೆ ಎನ್ನುತ್ತಾರೆ ರೈತರು.

ಬಯಲು ಸೀಮೆ ಭಾಗದಲ್ಲಿ ಹೀಗೆ ಹಲಸಿನ ಬೆಳೆಯನ್ನು ರಕ್ಷಣೆ ಮಾಡಿಕೊಂಡರೆ, ಮಲೆನಾಡು ಭಾಗದಲ್ಲಿ ಮಂಗಗಳು ಹಾಗೂ ಕರಡಿಯಿಂದ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಬಣ್ಣ ಬಣ್ಣದ ಸೀರೆಯನ್ನು ಸುತ್ತುತ್ತಾರೆ. ಇತ್ತೀಚೆಗೆ ವಾಟ್ಸ್‌ಆ್ಯಪ್‌ ಗ್ರೂಪ್‌ವೊಂದರಲ್ಲಿ ಹಲಸಿನ ಮರಕ್ಕೆ ಸೀರೆ ಸುತ್ತಿದ ಚಿತ್ರವೊಂದನ್ನು ಹಂಚಿಕೊಂಡಿದ್ದರು.

-ಶ್ರೀ

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !