ಹೈನುಗಾರಿಕೆಯಲ್ಲಿ ಖುಷಿ ಕಂಡ ಎಂಜಿನಿಯರ್‌

ಶನಿವಾರ, ಏಪ್ರಿಲ್ 20, 2019
31 °C
ಲಕ್ಷಾಂತರ ರೂಪಾಯಿ ಸಂಬಳದ ಸರ್ಕಾರಿ ನೌಕರಿಗೆ ಗುಡ್‌ ಬೈ

ಹೈನುಗಾರಿಕೆಯಲ್ಲಿ ಖುಷಿ ಕಂಡ ಎಂಜಿನಿಯರ್‌

Published:
Updated:
Prajavani

ಮಾನ್ವಿ: ತಾಲ್ಲೂಕಿನ ರಾಧಾಕೃಷ್ಣ ಕ್ಯಾಂಪಿನ ಎಂಜಿನಿಯರ್‌ ಶಿವಪ್ರಸಾದ ಸಂಗಮ್‌ ಈಗ ಪ್ರಗತಿಪರ ಹಾಗೂ ಮಾದರಿ ರೈತರಾಗಿ ಕೃಷಿ ಕಾಯಕದಲ್ಲಿ ತೊಡಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಕೃಷಿ ಜತೆಗೆ ಕುರಿ ಮತ್ತು ಕೋಳಿ ಸಾಕಾಣಿಕೆಯನ್ನೂ ಮಾಡಿಕೊಂಡಿದ್ದಾರೆ.

ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯದ ಎಂಜಿನಿಯರ್‌ ನೌಕರಿ, ಕ್ಲಾಸ್‌–ಒನ್‌ ಸಿವಿಲ್‌ ಗುತ್ತಿಗೆದಾರ ವೃತ್ತಿಗಳಿಗೆ ವಿದಾಯ ಹೇಳಿದ್ದ ಶಿವಪ್ರಸಾದ್‌, 10 ವರ್ಷಗಳಿಂದ ಕೃಷಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸುಶಿಕ್ಷಿತರು, ಪದವೀಧರರು ಕೃಷಿ ಕ್ಷೇತ್ರ ಕಡೆಗೆ ನಿರಾಸಕ್ತಿ ವ್ಯಕ್ತಪಡಿಸುವ ಈ ದಿನಗಳಲ್ಲಿ ಎಂಜಿನಿಯರ್‌ ಶಿವಪ್ರಸಾದ್‌ ಅವರ ಆಸಕ್ತಿ ಹಾಗೂ ಪರಿಶ್ರಮ ಇತರರಿಗೆ ಮಾದರಿಯಾಗಿದೆ.

1992ರಲ್ಲಿ ರಾಯಚೂರಿನ ರಾಂಪುರ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಡಿಪ್ಲೊಮಾ ಸಿವಿಲ್ ಎಂಜಿನಿಯರಿಂಗ್‌ ಪದವಿ ಪಡೆದ ನಂತರ ಶಿವಪ್ರಸಾದ ಸುಮಾರು 15 ವರ್ಷಗಳ ಅವಧಿಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಎಂಜಿನಿಯರ್‌ ಹುದ್ದೆ ನಿಭಾಯಿಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಜಲ ನಿರ್ಮಲ ಯೋಜನೆ, ಜಲಸಂವರ್ಧನ ಯೋಜನೆಗಳ ಕಿರಿಯ ಎಂಜಿನಿಯರ್‌ ಹುದ್ದೆ, ಮೈಟಾಸ್ ಕಂಪೆನಿಯಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ನಿರ್ವಹಣೆ ಎಂಜಿನಿಯರ್‌,  ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ಎಂಜಿನಿಯರ್‌, ಬಾಗಲಕೋಟೆ–ಬಾದಾಮಿ ರೇಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಎಂಜಿನಿಯರ್‌, ಸಿಂಧನೂರಿನಲ್ಲಿ ಸ್ವಯಂಘೋಷಿತ ಆಸ್ತಿಗಳ ಸಮೀಕ್ಷೆಗೆ ನೋಡಲ್‌ ಎಂಜಿನಿಯರ್‌ ಹುದ್ದೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು.

ರಾಜ್ಯದ ವಿವಿಧೆಡೆ ಬಿಎಸ್‌ಎನ್‌ಎಲ್‌ ಮೊಬೈಲ್‌ ಟವರ್‌ಗಳ ನಿರ್ಮಾಣ ಕಾಮಗಾರಿಗಳನ್ನು ಅವರು ನಿರ್ವಹಿಸಿದ್ದರು.

‘ಕಾಮಗಾರಿಗಳ ನಿರ್ವಹಣೆಯಲ್ಲಿ ರಾಜಕೀಯ ಪ್ರಭಾವ, ಜನಪ್ರತಿನಿಧಿಗಳ ಸ್ವಜನಪಕ್ಷಪಾತ, ಅಧಿಕಾರಿಗಳ ಒತ್ತಡ ಮತ್ತು ಭ್ರಷ್ಟಾಚಾರದಿಂದ ಬೇಸತ್ತು ಅಲ್ಲಿಂದ ಹೊರಬಂದೆ’ ಎಂದು ಅವರು ಹೇಳುತ್ತಾರೆ.

ಎಂಜಿನಿಯರ್‌ ನೌಕರಿ ತೊರೆದ ನಂತರ ಅವರು ಕೆಲವು ವರ್ಷ ಕ್ಲಾಸ್‌–ಒನ್‌ ಸಿವಿಲ್‌ ಗುತ್ತಿಗೆದಾರರಾಗಿ ಮಾನ್ವಿ ತಾಲ್ಲೂಕಿನಲ್ಲಿ ರಸ್ತೆ, ಚೆಕ್‌ ಡ್ಯಾಮ್‌ಗಳ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಗುತ್ತಿಗೆ ಪಡೆದು ಪೂರ್ಣಗೊಳಿಸಿದ್ದರು.

‘ಎಂಜಿನಿಯರ್‌ ನೌಕರಿ ಮತ್ತು ಗುತ್ತಿಗೆದಾರಿಕೆ ವೃತ್ತಿಗಳಲ್ಲಿ ಹೆಚ್ಚಿನ ವೇತನ, ಆದಾಯ ಇದ್ದರೂ ಕೂಡ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಹೀಗಾಗಿ ಆ ಕ್ಷೇತ್ರಗಳನ್ನು ತೊರೆದು ಕುಟುಂಬದ ಮೂಲ ಕಸುಬಾಗಿದ್ದ ಹೈನುಗಾರಿಕೆ ಮತ್ತು ಕೃಷಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಸಂಕಲ್ಪ ಮಾಡಿದೆ. ಆದಾಯ ಗಳಿಕೆಗಿಂತ ಕೃಷಿ ಬದುಕು ಜೀವನದಲ್ಲಿ ಹೆಚ್ಚು ನೆಮ್ಮದಿ ನೀಡಿದೆ’ ಎಂದು ಶಿವಪ್ರಸಾದ ತೃಪ್ತಿ ವ್ಯಕ್ತಪಡಿಸುತ್ತಾರೆ.

‘ಕುಟುಂಬದ 17 ಎಕರೆ ಭೂಮಿಯಲ್ಲಿ ಭತ್ತ, ಹತ್ತಿ, ಸೆಣಬು ಮುಂತಾದ ಬೆಳೆಗಳನ್ನು ಬೆಳೆದಿದ್ದಾರೆ. ಕೃಷಿಗಾಗಿ ಕಾಲುವೆ ನೀರನ್ನು ಅವಲಂಬಿಸದೆ ಸ್ವಂತ ಕೊಳವೆಬಾವಿಗಳ ನೀರಿನ ಮೂಲಕ ಬೆಳೆ ಬೆಳೆಯುತ್ತಿದ್ದಾರೆ. ತಮ್ಮ ಒಟ್ಟು ಭೂಮಿಯಲ್ಲಿ ಭತ್ತದ ಜತೆಗೆ 5 ಎಕರೆ ಪ್ರದೇಶದಲ್ಲಿ ಸೆಣಬು, ಕುರಿಗಳಿಗಾಗಿ 1 ಎಕರೆ ಪ್ರದೇಶದಲ್ಲಿ ಮೇವು ಬೆಳೆಯುತ್ತಿದ್ದಾರೆ. ಭೂಮಿಯ ಫಲವತ್ತತೆ ಹೆಚ್ಚಿಸಲು ಸೆಣಬು ಸಹಕಾರಿ ಎಂಬುದು ಅವರ ಅಭಿಪ್ರಾಯ.

2 ವರ್ಷಗಳಿಂದ ಕೃಷಿ ಜತೆಗೆ ಕುರಿ ಮತ್ತು ಕೋಳಿ ಸಾಕಾಣಿಕೆ ಉದ್ಯಮವನ್ನೂ ಅವರು ಆರಂಭಿಸಿದ್ದಾರೆ. ಪಶು ಸಂಗೋಪನ ಇಲಾಖೆ ವತಿಯಿಂದ ಕೋಳಿಗಳನ್ನು ಖರೀದಿಸಿ ಸಾಕುವ ಅವರು, ಮೊಟ್ಟೆ ಮತ್ತು ಕೋಳಿಗಳ ಮಾರಾಟದಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಕೋಳಿಗಳ ಮಾರಾಟದ ಜತೆಗೆ ಪ್ರತಿ ಎರಡು ದಿನಕ್ಕೊಮ್ಮೆ ಖುದ್ದಾಗಿ ಮಾನ್ವಿ ಪಟ್ಟಣಕ್ಕೆ ತೆರಳಿ ಅಂಗಡಿಗಳಿಗೆ ಮೊಟ್ಟೆಗಳನ್ನು ಮಾರಾಟ ಮಾಡುತ್ತಾರೆ. ಮನೆಯ ಹತ್ತಿರ ಕುರಿ ಮತ್ತು ಕೋಳಿ ಸಾಕಾಣಿಕೆಯ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ.

ಕುರಿ ಮಾರಾಟಕ್ಕೆ ಸಿಂಧನೂರಿನ ಕುರಿ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ. 2 ವರ್ಷಗಳಲ್ಲಿ ಕೃಷಿ ಜತೆಗೆ ಕುರಿ ಮತ್ತು ಕೋಳಿ ಸಾಕಾಣಿಕೆ ಉದ್ಯಮದ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ.

‘ಕೃಷಿ ಜತೆಗೆ ಕುರಿ ಮತ್ತು ಕೋಳಿ ಸಾಕಾಣಿಕೆ ಪರ್ಯಾಯ ಆದಾಯ ಒದಗಿಸುತ್ತಿವೆ. ಇದರಿಂದ ಉತ್ತಮ ಲಾಭ ಗಳಿಕೆ ಸಾಧ್ಯವಾಗಿದೆ. ಬರ ನೆಪದಲ್ಲಿ ಕೃಷಿ ಕಾರ್ಮಿಕರ ಗುಳೆ ಹೆಚ್ಚಾಗಿರುವ ಕಾರಣ ಸ್ಥಳೀಯವಾಗಿ ಕೂಲಿ ಕಾರ್ಮಿಕರು ಕೆಲಸಕ್ಕೆ ಸಿಗುತ್ತಿಲ್ಲ. ಆದರೂ ಸ್ವಂತ ದುಡಿಮೆ ಮೂಲಕ ಎಲ್ಲಾ ಕೆಲಸ ನಾನೇ ನಿರ್ವಹಿಸುವೆ’ ಎಂದು ಶಿವಪ್ರಸಾದ ಹೇಳುತ್ತಾರೆ.

ಮಲ್ಲಿಕಾರ್ಜುನ ಚಿಮ್ಲಾಪುರ, ಪೋಮ್ಯಾ ನಾಯಕ, ಬಸನಗೌಡ ಹರವಿ ಎಂಬ ರೈತರು ಶಿವಪ್ರಸಾದ ಅವರ ಮಾರ್ಗದರ್ಶನದಲ್ಲಿ ಕುರಿ ಸಾಕಾಣಿಕೆಗೆ ಮುಂದಾಗಿದ್ದಾರೆ.

‘ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ರೈತರಿಗಾಗಿ ಸರ್ಕಾರ ಜಾರಿಗೆ ತರುವ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಸಣ್ಣ ರೈತರಿಗೆ ಸರ್ಕಾರದ ನೆರವು, ಸವಲತ್ತುಗಳು ಸಿಗಬೇಕು’ ಎಂಬುದು ಶಿವಪ್ರಸಾದ ಅವರ ಒತ್ತಾಯ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !