ದೇಶಿ ಕೃಷಿ ಸಂಸ್ಕೃತಿಯ ಅರಿವು ಹೊಂದಿರುವ ಲಾರಿ ಚಾಲಕ ಮಂಜುನಾಥ್ ಅವರು ತಮ್ಮ ಲಾರಿಯೊಂದಿಗೆ ಪುಟ್ಟ ಕೈಚೀಲವನ್ನು ತಪ್ಪದೇ ಕೊಂಡೊಯ್ಯುತ್ತಾರೆ ಏಕೆ?

ಆ ಲಾರಿ ಡ್ರೈವರ್ ಸೀಟಿನ ಪಕ್ಕದಲ್ಲಿ ಯಾವಾಗಲೂ ಒಂದು ಪುಟ್ಟ ಕೈಚೀಲ ಇರುತ್ತದೆ. ಅದರೊಳಗೆ ಬಗೆಬಗೆಯ ದೇಶಿ ಬಿತ್ತನೆ ಬೀಜಗಳು–ಕಪ್ಪು ಮತ್ತು ಬಿಳಿ ಬಣ್ಣದ ತುಪ್ಪದ ಹೀರೆಕಾಯಿ, ಸೋರೆ, ಕತ್ತಿ ಅವರೆ, ಕಾಡು ಅವರೆ, ಬಳ್ಳಿ ಆಲೂಗಡ್ಡೆ...

ಒಮ್ಮೆ ಪ್ರತಿ ಮನೆಯ ಹಿತ್ತಲಿನಲ್ಲೂ ಸಾಮಾನ್ಯವಾಗಿ ಬೆಳೆಯುತ್ತಿದ್ದ ಈ ದೇಶಿ ಬೀಜಗಳು ಈಗ ನಿಧಾನವಾಗಿ ಕಾಣೆಯಾಗುತ್ತಿವೆ. ಅಂತಹ ಅಪರೂಪದ ಬೀಜಗಳನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಹಳ್ಳಿಗಳಿಂದ ಸಂಗ್ರಹಿಸಿ, ಮತ್ತೊಂದು ಜಿಲ್ಲೆಯ ರೈತರ ತೋಟಗಳಿಗೆ ತಲುಪಿಸುವ ಕೆಲಸವನ್ನು ಎಸ್.ಎಂ.ಗೊಲ್ಲಹಳ್ಳಿಯ ಮಂಜುನಾಥ್ ಮಾಡುತ್ತಿದ್ದಾರೆ. ಹೀಗೆ ಒಂದು ಊರಿನ ಹಿತ್ತಲಿನಿಂದ ಹೊರಡುವ ಬೀಜ, ಮತ್ತೊಂದು ಊರಿನ ಮಣ್ಣಿನಲ್ಲಿ ಮತ್ತೆ ಮೊಳಕೆಯೊಡೆಯುತ್ತಿದೆ.

ವೃತ್ತಿಯಲ್ಲಿ ಲಾರಿ ಮತ್ತು ಆಟೊ ಚಾಲಕರಾದ ಮಂಜುನಾಥ್, ಹಲವು ವರ್ಷಗಳಿಂದ ದೇಶಿ ಬಿತ್ತನೆ ಬೀಜಗಳನ್ನು ಊರಿನಿಂದ ಊರಿಗೆ ಕೊಂಡೊಯ್ಯುವ ಅಪರೂಪದ ಕೆಲಸ ಮಾಡುತ್ತಿದ್ದಾರೆ. ಅವರ ಲಾರಿ ಈಗ ಕೇವಲ ಸರಕು ಸಾಗಿಸುವುದಿಲ್ಲ; ಹಳ್ಳಿಗಳ ನಡುವೆ ದೇಶಿ ಬೀಜಗಳನ್ನೂ ಸಾಗಿಸುತ್ತಿದೆ. ಅವರು ಪ್ರಯಾಣಿಸುವ ದಾರಿಗಳ ಜೊತೆಗೇ ಬೀಜಗಳ ಪ್ರಯಾಣವೂ ಸಾಗುತ್ತಿದೆ.

ಮಹಾರಾಷ್ಟ್ರದ ದೂರದ ಹಳ್ಳಿಯಿಂದ ‘ಕತ್ತಿ ಅವರೆ’ ಬೀಜ ತರುತ್ತಾರೆ. ಬಿಹಾರದ ‘ಸೋರೆ’ ಬೀಜವನ್ನು ಇಲ್ಲಿನ ರೈತರಿಗೆ ನೀಡುತ್ತಾರೆ. ಅವರ ಬಳಿ ಸದಾ 10 ರಿಂದ 15 ಬಗೆಯ ದೇಶಿ ಬಿತ್ತನೆ ಬೀಜಗಳ ಸಂಗ್ರಹ ಇರುತ್ತದೆ. ಎಲ್ಲಿಗೆ ಹೋದರೂ ಆ ಕೈಚೀಲವನ್ನು ಮರೆಯುವುದಿಲ್ಲ. ಕೆಲವೊಮ್ಮೆ ಪ್ರಯಾಣದ ನಡುವೆ ಪರಿಚಯವಾದ ರೈತರಿಂದ ಹೊಸ ಬೀಜಗಳನ್ನೂ ಸಂಗ್ರಹಿಸುತ್ತಾರೆ.

ಇಲ್ಲಿಯವರೆಗೆ 50ಕ್ಕೂ ಹೆಚ್ಚು ರೈತರಿಗೆ ಅಪರೂಪದ ಬಿತ್ತನೆ ಬೀಜಗಳನ್ನು ಹಂಚಿದ್ದಾರೆ. ಯಾರಿಗೆ ಯಾವ ಬೀಜ ಕೊಟ್ಟರು, ಯಾರಿಂದ ಯಾವ ಬೀಜ ಪಡೆದರು ಎನ್ನುವ ವಿವರಗಳನ್ನು, ಮೊಬೈಲ್ ಸಂಖ್ಯೆ ಮತ್ತು ವಿಳಾಸ ಸಮೇತ ದಾಖಲಿಸಿಕೊಂಡಿದ್ದಾರೆ. ತಮ್ಮ ಬಳಿ ಇರುವ ಬೀಜಗಳು ಯಾವ ಊರಿಗೆ ತಲುಪಿವೆ ಎನ್ನುವುದನ್ನೂ ನೆನಪಿಟ್ಟುಕೊಳ್ಳುತ್ತಾರೆ.

ಲಾರಿ ಚಾಲನೆ ಮಾಡಿಕೊಂಡು ಊರು, ಪೇಟೆಗಳನ್ನು ಸುತ್ತುವ ಮಂಜುನಾಥ್, ಕಾಫಿ–ಟೀ ವಿರಾಮಗಳಲ್ಲಿ ಅಥವಾ ಲೋಡ್, ಅನ್ಲೋಡ್ ನಡುವಿನ ಬಿಡುವಿನಲ್ಲಿ ರೈತರನ್ನು ಮಾತಿಗೆ ಎಳೆಯುತ್ತಾರೆ. ಅಪರಿಚಿತರು ಕೂಡ ಕೆಲವೇ ನಿಮಿಷಗಳಲ್ಲಿ ಅವರಿಗೆ ಆಪ್ತರಾಗಿಬಿಡುತ್ತಾರೆ.

‘ನಿಮ್ಮ ಊರಲ್ಲಿ ಅಪರೂಪದ ತರಕಾರಿ ಗಿಡಗಳು ಉಳಿದಿವೆಯಾ? ನಿಮ್ಮ ಅಜ್ಜಿ–ಅಮ್ಮನ ಕಾಲದಲ್ಲಿ ಬೆಳೆದ ಗಿಡಗಳ ಬೀಜ ಇದೆಯಾ? ನನ್ನ ಬಳಿ ಕೆಲ ಬೀಜಗಳಿವೆ, ಬೇಕಿದ್ದರೆ ಕೊಡುತ್ತೇನೆ. ನಿಮ್ಮ ಬಳಿ ಇರುವ ಬೀಜಗಳನ್ನು ನನಗೂ ಕೊಡಿ...’ ಹೀಗೆ ಆರಂಭವಾಗುವ ಮಾತುಕತೆ, ನಿಧಾನವಾಗಿ ಬೀಜ ವಿನಿಮಯಕ್ಕೆ ತಿರುಗುತ್ತದೆ. ಮಾತು ಮುಗಿಯುವಷ್ಟರಲ್ಲಿ ಅವರ ಕೈಚೀಲದಲ್ಲಿದ್ದ ಕೆಲವು ಬೀಜಗಳು ಮತ್ತೊಬ್ಬ ರೈತನ ಮನೆಯತ್ತ ಪ್ರಯಾಣ ಆರಂಭಿಸಿರುತ್ತವೆ. ಹೊಸ ಬೀಜಗಳು ಮಂಜುನಾಥ್ ಅವರ ಕೈಚೀಲ ಸೇರಿರುತ್ತವೆ.

ಮಂಜುನಾಥ್ ಅವರ ಈ ಕೆಲಸಕ್ಕೆ ಮುಖ್ಯ ಪ್ರೇರಣೆ ಸಾವಯವ ಕೃಷಿಕ ದಿವಂಗತ ಎಲ್.ನಾರಾಯಣರೆಡ್ಡಿ. ಹಲವು ವರ್ಷಗಳ ಹಿಂದೆ ಕೇಳಿದ್ದ ಅವರ ಉಪನ್ಯಾಸವೊಂದು ಮಂಜುನಾಥ್ ಅವರನ್ನು ಆಳವಾಗಿ ಚಿಂತನೆಗೆ ಹಚ್ಚಿತ್ತು.

‘ಆರೋಗ್ಯದ ಮೂಲ ಆಹಾರದಲ್ಲೇ ಇದೆ’ ಎನ್ನುವ ಆ ಮಾತುಗಳು, ಪತ್ನಿಯ ಅನಾರೋಗ್ಯದ ಸಂದರ್ಭದಲ್ಲೂ ಅವರನ್ನು ಕಾಡಿದ್ದವು. ಅಲ್ಲಿಂದಲೇ ಹಿತ್ತಲುಗಳಲ್ಲಿ ಬೆಳೆದಿದ್ದ ಹಸಿರು ತರಕಾರಿಗಳ ಕಡೆಗೆ ಅವರ ಆಸಕ್ತಿ ಹೆಚ್ಚಿತು. ಹಳೆಯ ದೇಶಿ ತರಕಾರಿಗಳ ಬೀಜಗಳನ್ನು ಸಂಗ್ರಹಿಸಿ, ಅವುಗಳನ್ನು ಮತ್ತಷ್ಟು ಜನರಿಗೆ ತಲುಪಿಸಬೇಕು ಎನ್ನುವ ಸಂಕಲ್ಪ ಮೂಡಿತು.

ಹಾಸನ, ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳ ರೈತರಿಂದ ಅವರು ಬೀಜಗಳನ್ನು ಸಂಗ್ರಹಿಸಿದ್ದಾರೆ. ತಮ್ಮಿಂದ ಬೀಜ ಪಡೆದವರನ್ನು ಮತ್ತು ಬೀಜ ನೀಡಿದವರನ್ನು ಒಂದೆಡೆ ಸೇರಿಸಲು ‘ಆರೋಗ್ಯದ ಅರಿವು ಜಾಗೃತಿ ಅಭಿಯಾನ ಕರ್ನಾಟಕ’ ಹೆಸರಿನ ವಾಟ್ಸ್ಆ್ಯಪ್ ಗುಂಪನ್ನೂ ರಚಿಸಿದ್ದಾರೆ. ಆ ಗುಂಪಿನಲ್ಲಿ ರೈತರು ತಮ್ಮ ಬೆಳೆಗಳ ಚಿತ್ರಗಳು ಮತ್ತು ಅನುಭವಗಳನ್ನೂ ಹಂಚಿಕೊಳ್ಳುತ್ತಾರೆ.

ಅವರ ಬಳಿ ಇರುವ ಪ್ರತಿಯೊಂದು ಬೀಜದ ಹಿಂದೆಯೂ ಒಂದು ಕಥೆ ಇದೆ.

‘ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹುಲ್ಲೇಕೆರೆಯ ಪರಮೇಶ್–ವೀಣಾ ದಂಪತಿಗೆ ಬಳ್ಳಿ ಆಲೂಗೆಡ್ಡೆ ಕೊಟ್ಟಿದ್ದೆ. ಅವರು ಚೆನ್ನಾಗಿ ಬೆಳೆಸಿ, ಮತ್ತಷ್ಟು ಗೆಡ್ಡೆಗಳನ್ನು ವಾಪಸ್ ಕೊಟ್ಟರು. ಅದನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಖಾನೆ ಹೊಸಹಳ್ಳಿಯ ಸ್ನೇಹಿತರಿಗೆ ನೀಡಿದೆ. ಅವರು ಸುಮಾರು 150 ಕೆ.ಜಿ ಗೆಡ್ಡೆ ಬೆಳೆಸಿದರು. ಅಲ್ಲಿಂದ ಅದು ಯಾದಗಿರಿ ಜಿಲ್ಲೆಯ ರೈತರವರೆಗೂ ತಲುಪಿದೆ...’

ಒಂದು ಗೆಡ್ಡೆ, ಹೀಗೆ ಹಳ್ಳಿಯಿಂದ ಹಳ್ಳಿಗೆ ಪ್ರಯಾಣಿಸುತ್ತಿದೆ ಎನ್ನುವಂತೆ ಅವರು ಹೇಳುವಾಗ ಅವರ ಮುಖದಲ್ಲಿ ವಿಶಿಷ್ಟ ತೃಪ್ತಿ ಕಾಣಿಸುತ್ತದೆ. ತಾವು ನೀಡಿದ ಬೀಜ ಮತ್ತೊಂದು ಊರಿನಲ್ಲಿ ಮೊಳಕೆಯೊಡೆದಿದೆ ಎನ್ನುವ ಖುಷಿ ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ.

ಆಟೊ ಓಡಿಸುವಾಗ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡುವ ಜನರನ್ನು ಅವರು ಆಗಾಗ್ಗೆ ಭೇಟಿಯಾಗುತ್ತಾರೆ.

‘ರಕ್ತದೊತ್ತಡ, ಸಕ್ಕರೆ ಕಾಯಿಲೆ ಈಗ ಸಾಮಾನ್ಯವಾಗಿದೆ. ಅನಾರೋಗ್ಯಕ್ಕೆ ಆಹಾರವೂ ಒಂದು ಕಾರಣ ಅನ್ನಿಸುತ್ತದೆ. ನಾರಾಯಣರೆಡ್ಡಿ ಅವರ ಮಾತುಗಳು ಆಗಾಗ್ಗೆ ನೆನಪಾಗುತ್ತವೆ’ ಎನ್ನುತ್ತಾರೆ.

‘ನನ್ನ ಬಳಿ ಇರುವ ಹಣವನ್ನು ಹಂಚುತ್ತಿಲ್ಲ. ಅಷ್ಟು ಶ್ರೀಮಂತನೂ ಅಲ್ಲ. ಆದರೆ ಪ್ರತಿಫಲ ನಿರೀಕ್ಷೆ ಇಲ್ಲದೆ ಮಾಡುವ ಕೆಲಸಗಳು ಸಾಕಷ್ಟಿವೆ. ಯಾರಿಂದಲೋ ಪಡೆದ ಬೀಜವನ್ನು ಮತ್ತೊಬ್ಬರಿಗೆ ಕೊಡುತ್ತೇನೆ. ಅವರು ಬೆಳೆಸಿದ ನಂತರ ಮತ್ತೆ ಇನ್ನಷ್ಟು ಜನರಿಗೆ ಹಂಚುತ್ತಾರೆ. ಅದರಲ್ಲಿ ನನಗೆ ಸಂತೋಷ ಇದೆ’ ಎಂದು ಹೇಳುತ್ತಾರೆ.

ತಮ್ಮ ಬಳಿಯೂ ಒಂದೂವರೆ ಎಕರೆ ಮಳೆ ಆಶ್ರಿತ ಜಮೀನಿದೆ. ಕೆಲವು ವರ್ಷಗಳ ಹಿಂದೆ ಅಲ್ಲಿ ದೇಶಿ ತರಕಾರಿಗಳನ್ನು ಬೆಳೆದಿದ್ದರು. ಮನೆಯಲ್ಲೇ ಬೀಜ ಬ್ಯಾಂಕ್ ಕೂಡ ಮಾಡಿದ್ದರು. ಆದರೆ ಪತ್ನಿಯ ಅನಾರೋಗ್ಯದಿಂದ ಬದುಕಿನಲ್ಲಿ ಏರುಪೇರುಗಳಾದವು.

‘ಮತ್ತೆ ನಮ್ಮ ಜಮೀನಿನಲ್ಲೂ ಅಪರೂಪದ ತರಕಾರಿಗಳನ್ನು ಬೆಳೆಸಿ, ಬೀಜ ಸಂಗ್ರಹ ಮಾಡಬೇಕು’ ಎನ್ನುವ ಆಸೆಯನ್ನು ಅವರು ಇನ್ನೂ ಉಳಿಸಿಕೊಂಡಿದ್ದಾರೆ.

ಬಿಹಾರದಿಂದ ತಂದ ಸೋರೆಕಾಯಿ ಒಂದರಿಂದ ಸುಮಾರು 25 ಜನರಿಗೆ ಅಡುಗೆ ಮಾಡಬಹುದು ಎನ್ನುವರು. ತಿಪಟೂರು ತಾಲ್ಲೂಕಿನ ಅಣಪನಹಳ್ಳಿಯಿಂದ ‘ಕಾಡು ಅವರೆ’, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ‘ಚತುರ್ಮುಖ ಅವರೆ’ ಸಂಗ್ರಹಿಸಿದ್ದಾರೆ. ಕಡಿಮೆ ನೀರಿನಲ್ಲಿ ಬೆಳೆಯುವ, ಆರೋಗ್ಯಕ್ಕೆ ಒಳ್ಳೆಯ ಅನೇಕ ತರಕಾರಿಗಳ ಬೀಜಗಳು ಈಗ ಅವರ ಕೈಚೀಲದಲ್ಲಿವೆ.

ಮುಂದಿನ ದಿನಗಳಲ್ಲಿ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಬೀಜ ಸಂಗ್ರಹಿಸಿದ ರೈತರನ್ನು ಒಂದೆಡೆ ಸೇರಿಸಿ, ಅವರ ಅನುಭವ ಹಂಚಿಕೊಳ್ಳುವ ಕಾರ್ಯಕ್ರಮಗಳನ್ನೂ ನಡೆಸಬೇಕು ಎನ್ನುವ ಯೋಜನೆ ಅವರದು. ಬೀಜಗಳ ಜೊತೆಗೆ ಹಿತ್ತಲು ಸಂಸ್ಕೃತಿಯನ್ನೂ ಉಳಿಸಬೇಕು ಎನ್ನುವುದು ಅವರ ಆಶಯ.

ಮತ್ತೊಂದು ಊರಿನತ್ತ ಲಾರಿ ಹೊರಡುವಾಗ, ಮಂಜುನಾಥ್ ಮತ್ತೆ ಆ ಪುಟ್ಟ ಕೈಚೀಲವನ್ನು ಮರೆತಿಲ್ಲ. ಅದರೊಳಗೆ ಕೆಲ ಬಿತ್ತನೆ ಬೀಜಗಳಷ್ಟೇ ಇಲ್ಲ; ನಿಧಾನವಾಗಿ ಮರೆಯಾಗುತ್ತಿರುವ ಹಿತ್ತಲುಗಳ ನೆನಪುಗಳೂ ಇವೆ.

(ಮಂಜುನಾಥ್: 9972430177)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.