ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತ ನೀರಿನಲ್ಲಿ ಹಲವು ಬೆಳೆ

Last Updated 26 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಒಂದು ವರ್ಷಕ್ಕೆ ಎರಡು ಸೀಸನ್ ತರಕಾರಿ. ಒಂದೊಂದು ಸೀಸನ್‌ನಲ್ಲಿ ವೆರೈಟಿ ವೆರೈಟಿ ತರಕಾರಿ. ಜಮೀನು ತುಂಬಾ ತರಕಾರಿ. ವರ್ಷಪೂರ್ತಿ ತರಕಾರಿ..!

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಮೂಡಚಿಂತಲಹಳ್ಳಿಯ ಶಿಲ್ಪಾ ಅವರ ಜಮೀನಿನಲ್ಲಿ ವರ್ಷ ಪೂರ್ತಿ ತರಕಾರಿಯದ್ದೇ ಕಾರುಬಾರು. ಅಂತರ್ಜಲ ಪಾತಾಳಕ್ಕಿಳಿದಿದ್ದರೂ, ಒಣ ಭೂಮಿಯೊಂದಿಗೆ ಪ್ರೀತಿಯಿಂದ ಗುದ್ದಾಡುತ್ತಾ ಏಳು ಎಕರೆಯಲ್ಲಿ ವರ್ಷಪೂರ್ತಿ ತರಕಾರಿ ಬೆಳೆಯುತ್ತಾರೆ. ವಾರ್ಷಿಕ ₹10 ಲಕ್ಷದಿಂದ ₹12 ಲಕ್ಷದವರೆಗೂ ವಹಿವಾಟು ನಡೆಸುತ್ತಾರೆ. ‘ನಮ್ಮ ಕೃಷಿ ಆದಾಯ ಯಾವುದೇ ಸರ್ಕಾರಿ ಅಧಿಕಾರಿಗಳ ಸಂಬಳಕ್ಕೂ ಕಡಿಮೆ ಇಲ್ಲ’ ಎನ್ನುತ್ತಾರೆ ಅವರು.

ಕೃಷಿ ಕುಟುಂದವರಾದ ಶಿಲ್ಪಾ ಪದವೀಧರೆ. 11 ವರ್ಷಗಳ ಹಿಂದೆ ಮೂಡಚಿಂತಲಹಳ್ಳಿಯ ಲೋಕೇಶ್ ಬಾಬು ಅವರೊಂದಿಗೆ ವಿವಾಹವಾ ಯಿತು. ಮದುವೆಗೆ ಮುನ್ನ ಶಿಕ್ಷಕಿಯಾಗಬೇಕೆಂಬ ಕನಸಿತ್ತು. ಅದು ಸಾಧ್ಯವಾಗಲಿಲ್ಲ. ಆದರೆ, ಗಂಡನ ಮನೆ ಸೇರಿದ ನಂತರ ಕುಟುಂಬ ನಿರ್ವಹಣೆಯಾಚೆಗೂ ಏನಾದರೂ ಮಾಡಬೇಕು ಎಂಬ ತುಡಿತ ಕಾಡಿತು. ಆಗ ಆಯ್ಕೆ ಮಾಡಿಕೊಂಡಿದ್ದೇ ಕೃಷಿ ಚಟುವಟಿಕೆ. 10 ಎಕರೆ ಒಣ ಭೂಮಿಯಲ್ಲಿ ಕೃಷಿ ಮಾಡಲು ನಿರ್ಧಾರ ಮಾಡಿದರು.

ಆದರೆ, ಮಳೆಯ ಕೊರತೆ. ಪಾತಾ ಳಕ್ಕೆ ಕುಸಿದಿರುವ ಅಂತರ್ಜಲ ಕೃಷಿಗೆ ಅಡ್ಡಿಯಾ ಯಿತು. ಆದರೂ ಛಲ ಬಿಡಲಿಲ್ಲ. ಪತಿಯ ದುಡಿಮೆಯಲ್ಲಿ ಉಳಿಸಿದ ಹಣದಲ್ಲಿ ಕೊಳವೆಬಾವಿ ಕೊರೆಸಿ ಕೃಷಿ ಆರಂಭಿಸಿದರು. ಓದಿನಿಂದ ಗಳಿಸಿದ ಸಾಮಾನ್ಯ ಜ್ಞಾನ, ಕೃಷಿ ಕುಟುಂಬದ ಜೀವನಾನುಭವ ಕೃಷಿಯಲ್ಲಿ ಸಕಾರಾತ್ಮಕ ಹೆಜ್ಜೆಗಳಿಗೆ ನೆರವಾಯಿತು.

ಎರಡು ಸೀಸನ್ ತರಕಾರಿ

ಆರು ತಿಂಗಳಿಗೊಂದರಂತೆ, ವರ್ಷಕ್ಕೆ ಎರಡು ಸೀಸನ್‌ಗಳಲ್ಲಿ ಹತ್ತು ಎಕರೆಯಲ್ಲಿ ವೈವಿಧ್ಯಮಯ ತರಕಾರಿ ಬೆಳೆಯುತ್ತಾರೆ ಶಿಲ್ಪಾ. ಮಾರ್ಚ್‌ನಿಂದ ಆಗಸ್ಟ್‌ವರೆಗೂ ಟೊಮೆಟೊ, ಕ್ಯಾರೆಟ್‌, ಬೀಟ್‌ರೂಟ್‌ ಮತ್ತು ದೊಣ್ಣೆ ಮೆಣಸಿನಕಾಯಿ ಬೆಳೆಯುತ್ತಾರೆ. ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಸೌತೆಕಾಯಿ, ಆಲೂಗೆಡ್ಡೆ, ಬೀನ್ಸ್‌ನಂತಹ ಬೆಳೆ ಬೆಳೆಯುತ್ತಾರೆ. ಒಂದೊಂದು ಪ್ಲಾಟ್‌ನಲ್ಲಿ ಒಂದೊಂದು ಬೆಳೆ. ಪ್ರತಿಯೊಂದು ಬೆಳೆಗೂ ಪ್ಲಾಸ್ಟಿಕ್ ಮಲ್ಚಿಂಗ್ ಮಾಡುತ್ತಾರೆ. ಎಲ್ಲವುದಕ್ಕೂ ತುಂತುರು ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಕೀಟ ಬಾಧೆ ನಿಯಂತ್ರಣಕ್ಕೆ ಕೀಟ ಆಕರ್ಷಕ ಬಲೆಗಳನ್ನು ಅಳವಡಿಸಿದ್ದಾರೆ. ಹೀಗಾಗಿ ನೀರು, ಗೊಬ್ಬರ, ಔಷಧದ ಖರ್ಚನ್ನು ಕಡಿಮೆ ಮಾಡಿಕೊಂಡಿದ್ದಾರೆ. ಸದ್ಯ ಐದು ಬೋರ್‌ವೆಲ್‌ಗಳಿವೆ. ಮೂರರಲ್ಲಿ ನೀರಿಲ್ಲ. ಅದಕ್ಕಾಗಿ ಕೃಷಿಹೊಂಡ ಮಾಡಿಸಿದ್ದಾರೆ. ಕೊಳವೆಬಾವಿಗಳ ನೀರನ್ನು ಹೊಂಡದಲ್ಲಿ ಸಂಗ್ರಹಿಸಿ ಹನಿ ನೀರಾವರಿ, ಸೂಕ್ಷ್ಮ ಸ್ಪ್ರಿಂಕ್ಲರ್ ಮೂಲಕ ಮಿತವಾಗಿ ನೀರು ಬಳಸುತ್ತಾರೆ.

‘ಬೆಳೆಗಳಿಗೆ ನೀರು, ಗೊಬ್ಬರ ಎಲ್ಲ ಡ್ರಿಪ್ (ವೆಂಚುರಿ) ಮೂಲಕ ಕೊಡುತ್ತೇವೆ. ಪ್ಲಾಸ್ಟಿಕ್ ಮಲ್ಚಿಂಗ್ ಮಾಡಿರುವುದರಿಂದ ಕಳೆ ಬೆಳೆಯುವುದಿಲ್ಲ. ನೀರಿನ ಆವಿಯಾಗುವ ಪ್ರಮಾಣದಲ್ಲಿ ಕಡಿತವಾಗುತ್ತದೆ. ಮಣ್ಣಿನಲ್ಲಿ ತೇವಾಂಶ ಉಳಿದುಕೊಳ್ಳುವುದರಿಂದ ಫಸಲು ಚೆನ್ನಾಗಿ ಬರುತ್ತದೆ’ ಎಂದು ವಿವರಿಸುತ್ತಾರೆ ಶಿಲ್ಪಾ. ಸದ್ಯ ಆರು ಎಕರೆಯಲ್ಲಿ ಟೊಮೆಟೊ ಬೆಳೆ ಇದ್ದು, ಎರಡು ಎಕರೆಯಲ್ಲಿ ಒಣ ಬೇಸಾಯದಲ್ಲಿ ರಾಗಿ, ಅವರೆಯಂತಹ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ.

ಆಲೂಗೆಡ್ಡೆ ಕೃಷಿ

ಸಾಮಾನ್ಯವಾಗಿ ಒಂದು ಚೀಲ ಬೀಜ ಹಾಕಿ 30 ಚೀಲ ಆಲೂಗಡ್ಡೆ ಬೆಳೆಯುವುದು ವಾಡಿಕೆ. ಆದರೆ, ಶಿಲ್ಪಾ ಅವರು 50 ಚೀಲದವರೆಗೂ ಬೆಳೆದಿದ್ದಾರಂತೆ. ನಿರೀಕ್ಷೆಗೂ ಮೀರಿ ಇಳುವರಿ ಬಂದಿದೆ. ‘ಬೀಜ ಬಿತ್ತನೆಗೆ ಮುನ್ನ ಭೂಮಿಯನ್ನು ಚೆನ್ನಾಗಿ ಹದಗೊಳಿಸುತ್ತೇವೆ. ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿಯನ್ನು ಕೊಡುತ್ತೇವೆ. ಉತ್ತಮವಾಗಿ ಆರೈಕೆ ಮಾಡುತ್ತೇವೆ. ಇದೇ ಕಾರಣದಿಂದ ನಾವು ಅಂದುಕೊಂಡಿದ್ದಕ್ಕಿಂತ ಆಲೂಗೆಡ್ಡೆಯಲ್ಲಿ ಹೆಚ್ಚು ಇಳುವರಿ ಬಂತು’ ಎನ್ನುತ್ತಾರೆ ಶಿಲ್ಪಾ ಪತಿ ಲೋಕೇಶಬಾಬು.

ಆಲೂಗೆಡ್ಡೆ ಬೆಳೆಯುವವರು ಸಾಮಾನ್ಯವಾಗಿ ಒಂದು ಬ್ಯಾಗ್ ಆಲೂ ಬೀಜವನ್ನು ಬಿತ್ತಿ 30 ಚೀಲ ಬೆಳೆಯುತ್ತಾರೆ. ಒಂದು ಚೀಲ ಬೀಜ ಹಾಕಿ, 50 ಬ್ಯಾಗ್ ಬೆಳೆದಿದ್ದೇವೆ. ಒಂದು ಚೀಲ ಅಂದರೆ 50 ಕೆ.ಜಿ ಇರುತ್ತದೆ ಎಂದು ವಿವರಿಸುತ್ತಾರೆ ಲೋಕೇಶ್ ಬಾಬು. ‘ಸಕಾಲಕ್ಕೆ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ, ಬೇವು, ಹೊಂಗೆ ಹಿಂಡಿ ಕೊಟ್ಟಿದ್ದೇವೆ. ಹೀಗಾಗಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಇಳುವರಿ ಬಂತು’ ಎನ್ನುತ್ತಾರೆ.

ಬೇರೆ ಬೇರೆ ಮಾರ್ಕೆಟ್

ಪ್ರತಿಯೊಂದು ತರಕಾರಿಗೂ ಮಾರುಕಟ್ಟೆ ಕಂಡುಕೊಂಡಿರುವ ಶಿಲ್ಪಾ–ಲೋಕೇಶ್ ಬಾಬು ದಂಪತಿ, ಉತ್ಪನ್ನಗಳ ಮಾರಾಟ ದಲ್ಲಿ ಅಷ್ಟಾಗಿ ಎಡವಿಲ್ಲ. ಟೊಮೆಟೊವನ್ನು ಸ್ಥಳೀಯ ಚಿಂತಾಮಣಿ ಮಾರುಕಟ್ಟೆಗೆ ತಾವೇ ಕೊಂಡೊಯ್ಯುತ್ತಾರೆ. ದೊಣ್ಣೆ ಮೆಣಸಿನ ಕಾಯಿಯನ್ನು ಬೆಂಗಳೂರಿನ ಸಿಟಿ ಮಾರ್ಕೆಟ್‌ಗೆ ಕಳಿಸುತ್ತಾರೆ. ಕ್ಯಾರೆಟ್‌, ಬೀಟ್‌ರೂಟ್‌ ಖರೀದಿಗೆ ಖರೀದಿದಾರರು ಹೊಲದ ಅಂಗಳಕ್ಕೆ ಬರುತ್ತಾರೆ. ಸೌತೆಕಾಯಿ, ಬೀನ್ಸ್‌ ಕೂಡ ಹೀಗೆ ಮಾರಾಟವಾಗುತ್ತದೆ. ಹೀಗಾಗಿ ಮಾರುಕಟ್ಟೆ ಸಮಸ್ಯೆ ತಲೆದೋರಿಲ್ಲ. ‘ಈಗಲೂ 800 ಬಾಕ್ಸ್ ಟೊಮೆಟೊ ಕೊಯ್ಲು ಮಾಡಿದ್ದೇನೆ. ಒಂದು ಬಾಕ್ಸ್‌ (15 ಕೆಜಿ) ₹220 ಗೆ ಮಾರಾಟವಾಯಿತು. ಕಮಿಷನ್ ಹೋಗಿ ₹180 ಕೈಗೆ ಬರುತ್ತದೆ, ಸಾಕಲ್ಲವಾ’ ಎನ್ನುತ್ತಾರೆ ಲೋಕೇಶ್‌.

ತರಕಾರಿ ಜತೆ ಇತರೆ ಬೆಳೆ

ತರಕಾರಿ ಬೆಳೆ ಜತೆಗೆ ನಾಲ್ಕು ಎಕರೆಯಲ್ಲಿ ಎರಡು ವೆರೈಟಿಯ 120 ಮಾವಿನ ಮರಗಳಿವೆ. ಆರು ತಿಂಗಳ ಹಿಂದೆ ಮೂರು ಎಕರೆಯಲ್ಲಿ ದಾಳಿಂಬೆ ಹಾಕಿದ್ದಾರೆ. ಅದರ ನಡುವೆಯೇ ಕುಂಬಳ ಬೀಜ ಊರಿದ್ದಾರೆ.

‘ಇರುವುದೇ ಹತ್ತು ಎಕರೆ ಭೂಮಿ, ಇಷ್ಟೆಲ್ಲ ಹೇಗೆ ಬೆಳೆಯುತ್ತೀರಿ’ ಎಂದು ಶಿಲ್ಪಾ ಅವರನ್ನು ಕೇಳಿದರೆ, ‘ಮೊದಲು 10 ಎಕರೆಯಲ್ಲಿ ಹೇಗೆ ಕೃಷಿ ಮಾಡುವುದಪ್ಪ ಎನ್ನಿಸುತ್ತಿತ್ತು. ಈಗ ಜಮೀನು ಸಾಲದೇ, ಇನ್ನೂ ಐದು ಎಕರೆ ಜಮೀನು ಲೀಸ್‌ಗೆ ತಗೊಂಡು ಕೃಷಿ ಮಾಡುತ್ತಿದ್ದೇವೆ’ ಎನ್ನುತ್ತಾರೆ ಅವರು.

ಸಮಗ್ರ ಕೃಷಿಯ ಮಹತ್ವ ಅರಿತಿರುವ ಈ ದಂಪತಿ ಕೃಷಿ ಜತೆಗೆ 20 ನಾಟಿ ಕೋಳಿ, 50 ಕುರಿ, 6 ಆಕಳುಗಳನ್ನು ಸಾಕಿದ್ದಾರೆ. ‘ಸಣ್ಣ ಹಿಡುವಳಿದಾರರು ಸಾವಯವ ಪದ್ಧತಿಯಲ್ಲಿ ಪರಿಣಾಮಕಾರಿಯಾಗಿ ಕೃಷಿ ಮಾಡಬಹುದು. ಆದರೆ ದೊಡ್ಡ ಹಿಡುವಳಿದಾರರಿಗೆ ಕಷ್ಟ’ ಎನ್ನುವ ಈ ದಂಪತಿ ಸಾವಯವ, ರಾಸಾಯನಿಕ ಎರಡನ್ನೂ ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿ ಬೆಳೆ ತೆಗೆಯುತ್ತಿದ್ದಾರೆ. ಬೆಳೆಗೆ ಜೀವಾಮೃತ, ಪಂಚಗವ್ಯದಂತಹ ಉಪಚಾರವನ್ನು ಮಾಡುತ್ತಿದ್ದಾರೆ.

ಕೃಷಿ ಕ್ಷೇತ್ರದಲ್ಲಿನ ಈ ಸಾಧನೆಗಾಗಿ ಶಿಲ್ಪಾ ಅವರಿಗೆ 2016ರಲ್ಲಿ ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿ, 2017ರಲ್ಲಿ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ದೊರೆತಿತ್ತು. ಈ ವರ್ಷ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅವರಿಗೆ ರಾಜ್ಯಮಟ್ಟದ ಎಚ್. ಡಿ. ದೇವೇಗೌಡ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗೆ ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿಮೇಳದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT