ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕು

2005ರ ಮೊದಲು ಹುಟ್ಟಿದವರಿಗೂ ಅನ್ವಯ:
Last Updated 3 ಫೆಬ್ರುವರಿ 2018, 19:37 IST
ಅಕ್ಷರ ಗಾತ್ರ

ನವದೆಹಲಿ: ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ 2005, ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಹಕ್ಕನ್ನು ನೀಡುತ್ತದೆ. 2005ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡುವುದಕ್ಕೆ ಮೊದಲು ಹುಟ್ಟಿದವರು ಅಥವಾ ನಂತರ ಹುಟ್ಟಿದವರು ಎಂಬ ಯಾವುದೇ ತಾರತಮ್ಯಕ್ಕೆ ಇಲ್ಲಿ ಅವಕಾಶ ಇಲ್ಲ. ಒಡಹುಟ್ಟಿದವರು ಎಂಬ ಅಂಶವೇ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಸಮಾನ ಹಕ್ಕನ್ನು ನೀಡುತ್ತದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಕೆಲ ಬದಲಾವಣೆಗಳಾಗಿವೆ. ಗಂಡು ಮಕ್ಕಳಷ್ಟೇ ಹಕ್ಕನ್ನು ಹೆಣ್ಣು ಮಕ್ಕಳಿಗೂ ನೀಡುವುದಕ್ಕಾಗಿಯೇ ಬದಲಾವಣೆ ತರಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರ ಪೀಠ ಹೇಳಿದೆ.

ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರೂ ಸಮಾನರು ಎಂಬ ಅಂಶವು 2005ಕ್ಕಿಂತ ಹಿಂದೆ ದಾಖಲಾದ ಪಾಲು ವಿವಾದ ಪ್ರಕರಣಗಳಿಗೂ ಅನ್ವಯ. ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸಮಾನರಲ್ಲ ಎಂಬ ಪೂರ್ವಗ್ರಹವನ್ನು ಹೋಗಲಾಡಿಸುವುದಕ್ಕಾಗಿಯೇ ಕಾಯ್ದೆಯಲ್ಲಿ ಬದಲಾವಣೆಗಳನ್ನು ತರಲಾಗಿದೆ ಎಂದೂ ತಿಳಿಸಿದೆ.

ಹೆಣ್ಣು ಮಕ್ಕಳಿಗೆ ಹಕ್ಕು ಮತ್ತು ಹೊಣೆಗಾರಿಕೆಯಲ್ಲಿ ಸಮಾನತೆ ಇದೆ. ಹಾಗೆಯೇ, ಪಿತ್ರಾರ್ಜಿತವಾಗಿ ಪಡೆದುಕೊಂಡ ಆಸ್ತಿಯನ್ನು ಉಯಿಲು ಅಥವಾ ಇತರ ದಾಖಲೆಗಳ ಮೂಲಕ ತಮಗೆ ಇಷ್ಟ ಬಂದ ರೀತಿಯಲ್ಲಿ ವಿಲೇವಾರಿ ಮಾಡುವ ಅಧಿಕಾರವೂ ಅವರಿಗೆ ಇದೆ.

ಕರ್ನಾಟಕ ಹೈಕೋರ್ಟ್‌ ತೀರ್ಪಿನ ವಿರುದ್ಧ ಗುರುಲಿಂಗಪ್ಪ ಸವದಿ ಅವರ ಹೆಣ್ಣು ಮಕ್ಕಳು ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಇಲ್ಲ ಎಂದು ಸವದಿ ಅವರ ಗಂಡು ಮಕ್ಕಳು ವಾದಿಸಿದ್ದರು. ಸವದಿ ಅವರ ಹೆಣ್ಣು ಮಕ್ಕಳು ಹಿಂದೂ ಉತ್ತರಾಧಿಕಾರ ಕಾಯ್ದೆ 1956 ಜಾರಿಗೆ ಬರುವ ಮೊದಲೇ ಹುಟ್ಟಿದವರು. ಹಾಗಾಗಿ ಅವರಿಗೆ ಆಸ್ತಿಯಲ್ಲಿ ಹಕ್ಕಿಲ್ಲ. ಅದಲ್ಲದೆ, ಮದುವೆಯ ಸಮಯದಲ್ಲಿ ಅವರು ಹಣ ಮತ್ತು ಚಿನ್ನ ಪಡೆದು ಆಸ್ತಿ ಹಕ್ಕನ್ನು ತ್ಯಜಿಸಿದ್ದಾರೆ ಎಂಬ ವಾದವನ್ನೂ ಗಂಡು ಮಕ್ಕಳು ಮುಂದಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT