ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಬೆಳೆಗಳ ಮಿಶ್ರ ಕೃಷಿ ತೋಟ

Last Updated 26 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಒಂದೇ ನೋಟದಲ್ಲಿ ಕಾಣುವ ಏಳು ಎಕರೆ ಜಮೀನು. ಒಂದು ಕಡೆ ಅಡಿಕೆ, ನಡುವೆ ಕಾಫಿ ಬೆಳೆ. ಅಡಿಕೆ ಅಪ್ಪಿ ಬೆಳೆದಿರುವ ಕಾಳು ಮೆಣಸು. ತೋಟದ ಸುತ್ತ ತೇಗದ ಮರಗಳು. ತೋಟ ಹೊಕ್ಕರೆ ಕಣ್ಣಿಗೆ ತಂಪು, ಮನಸ್ಸಿಗೆ ಹಿತ. ಮೆದುಳಿಗೆ ಜ್ಞಾನ!

ಬೆಳೆ ವರ್ಣನೆ ಓದಿ, ಯಾವುದೋ ಮಲೆನಾಡಿನ ಕೃಷಿ ತೋಟದ ಕಥೆ ಎಂದುಕೊಂಡಿರಾ? ಖಂಡಿತ ಅಲ್ಲ. ಇದು ಸದಾ ಮಳೆ ಕೊರತೆ ಎದುರಿಸುವ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ದೊಡ್ಡಿಂದುವಾಡಿಯ ಫಯಾಜ್‌ ಖಾನ್ ಅವರ ಕೃಷಿ ಭೂಮಿ. ಒಟ್ಟು ಏಳು ಎಕರೆ. ಇದರಲ್ಲಿ ಬಹು ಬೆಳೆಗಳಿವೆ. ಬಹುತೇಕವು ವಾಣಿಜ್ಯ ಬೆಳೆಗಳು. ಹಾಗಾಗಿಯೇ ಈ ವಿಧಾನವನ್ನು ‘ವಾಣಿಜ್ಯ ಬೆಳೆಗಳ ಮಿಶ್ರ ಕೃಷಿ’ ಎನ್ನಬಹುದು.

ಫಯಾಜ್ ಅವರು ಈಗ ಗುತ್ತಿಗೆದಾರರು. ಆದರೆ ಕೃಷಿ ಬಗ್ಗೆ ಅಪಾರ ಪ್ರೀತಿ. ಇದು ಬಾಲ್ಯದಿಂದಲೇ ಬೆಳೆಸಿಕೊಂಡಿದ್ದು. ‘ಅಪ್ಪ ರಾಗಿ, ಜೋಳ ಬೆಳೆಯುತ್ತಿದ್ದರು. ಹಾಗಾಗಿ ಬಾಲ್ಯದಲ್ಲೇ ಕೃಷಿ ಪಾಠವಾಗಿತ್ತು. ‘ಆ ಪ್ರೀತಿಯೇ ಇವತ್ತು ತೋಟದಲ್ಲಿ ಹೊಸ ಹೊಸ ಬೆಳೆಗಳನ್ನು ಬೆಳೆಯುವ ಪ್ರಯತ್ನಕ್ಕೆ ನೆರವಾಗಿದೆ’ ಎನ್ನುತ್ತಾರೆ ಫಯಾಜ್.

ಅಡಿಕೆಯಿಂದಲೇ ಆರಂಭ

ಮೂರ್ನಾಲ್ಕು ವರ್ಷಗಳ ಹಿಂದೆ ಸೋದರ ಸಂಬಂದಿ ಮಹಮ್ಮದ್ ನಾಸಿರುದ್ದೀನ್ ಜತೆ ಸೇರಿ ಈ ಏಳು ಎಕರೆ ತೋಟ ಡಖರೀದಿಸಿದರು. ಆಗ 3400 ಅಡಿಕೆ ಮರಗಳಿತ್ತು. ಜತೆಗೆ ಬಾಳೆ, ಅರಿಸಿನ ಬೆಳೆಗಳಿದ್ದವು. ಆದರೆ, 400 ಅಡಿಕೆ ಗಿಡಗಳು ಮಾತ್ರ ಫಸಲು ಕೊಡುತ್ತಿದ್ದವು. ಅಂತರ ಬೆಳೆಗಳು ಮತ್ತು ಹೆಚ್ಚಾಗಿದ್ದ ನೀರಿನ ಕೊರತೆ, ಮಣ್ಣಿನಲ್ಲಿ ಪೌಷ್ಟಿಕಾಂಶದ ಕೊರತೆ, ಸೂಕ್ತ ಆರೈಕೆ ಇಲ್ಲದ್ದು... ಹೀಗೆ ಒಂದಷ್ಟು ವ್ಯತ್ಯಾಸಗಳಿಂದಾಗಿ, ಅಡಿಕೆ ಫಸಲು ಕಡಿಮೆ ಇತ್ತು.

ತೋಟ ಖರೀದಿಸಿದ ನಂತರ ಫಯಾಜ್‌ ಖಾನ್ ಇಂಥ ಸಮಸ್ಯೆಗಳನ್ನು ಪಟ್ಟಿ ಮಾಡಿದರು. ಗೆಳೆಯರಿಂದ, ಕೃಷಿ ತಜ್ಞರಿಂದ ಪ್ರತಿಯೊಂದಕ್ಕೂ ಪರಿಹಾರ ಕಂಡುಕೊಂಡರು. ಮೊದಲು ಅಡಿಕೆಗೆ ತೊಂದರೆ ಕೊಡುತ್ತಿದ್ದ ಒತ್ತೊತ್ತಾದ ಬಹು ಬೆಳೆಗಳನ್ನು ತೆಗೆಸಿದರು. ಒಂದೂವರೆ ಇಂಚು ನೀರು ಪೂರೈಸುತ್ತಿದ್ದ ಎರಡು ಕೊಳವೆಬಾವಿಗಳ ಜತೆಗೆ ಇನ್ನೊಂದು ಕೊಳವೆಬಾವಿ ಕೊರೆಸಿದರು. ತೋಟದಿಂದ ಹೊರ ಹೋಗುತ್ತಿದ್ದ ‘ಮಳೆ ನೀರಿಗೆ ದಿಗ್ಭಂದನ’ ಹಾಕಿಸಿದರು. ಅಲ್ಲಿ ಬಿದ್ದ ಮಳೆ ನೀರು ಅದೇ ತಾಕಿನಲ್ಲಿ ಇಂಗುವಂತೆ ಮಾಡಿದರು. ಅದೃಷ್ಟವೆಂಬಂತೆ ಎರಡು ವರ್ಷ ಸ್ವಲ್ಪ ಸ್ವಲ್ಪ ಮಳೆಯಾಯಿತು. ತೋಟದಲ್ಲಿ ನೀರು ಇಂಗಿತು. ಮೂರು ಕೊಳವೆಬಾವಿಗಳು ರೀಚಾರ್ಜ್ ಆದವು. ಇಷ್ಟಾದರೂ ನೀರಿನ ಇಳುವರಿ ಹೆಚ್ಚಾಗಲಿಲ್ಲ. ಮೂರು ಕೊಳವೆಬಾವಿಗಳಿಂದ ಮೂರುವರೆ ಇಂಚಿನಷ್ಟು ನೀರಷ್ಟೇ ಸಿಕ್ಕಿತು. ಆದರೂ ನೀರು –‍ ಪೋಷಕಾಂಶ – ಆರೈಕೆ ಮಾಡಿದ ಕಾಣದಿಂದಾಗಿ ಈಗ ಮೂರು ಸಾವಿರ ಅಡಿಕೆ ಮರಗಳು ಫಸಲು ಕೊಡಲಾರಂಭಿಸಿವೆ.

ಕಾಫಿ ಗಿಡ ಬಂದಿದ್ದು...

ಮಳೆ ನೀರು ಇಂಗಿದ್ದು, ತೋಟದಲ್ಲಿನ ಬೆಳೆಯ ತ್ಯಾಜ್ಯಗಳು ಮಣ್ಣಿನಲ್ಲಿ ಕರಗಿದ್ದರಿಂದ,‌ ಮಣ್ಣು ಫಲವತ್ತಾಯಿತು. ಮಣ್ಣಿನಲ್ಲಿರುವ ತೇವಾಂಶ ರಕ್ಷಣೆಗೆ ಸಹಾಯವಾಯಿತು. ಇದೇ ವೇಳೆ ಸಕಲೇಶಪುರದ ಕಾಫಿ ಎಸ್ಟೇಟ್‌ ನಿರ್ವಹಣೆ ಮಾಡುತ್ತಿದ್ದ ಗೆಳೆಯ ಮಕ್ಬಲ್ ಪಾಷ ತೋಟಕ್ಕೆ ಬಂದಿದ್ದರು. ನೆಲದ ಗುಣ ನೋಡಿ ‘ಇಲ್ಲಿ, ಕಾಫಿ ಬೆಳೆಯಿರಿ’ ಎಂದು ಸಲಹೆ ನೀಡಿದರು. ಅವರ ಸಲಹೆಯಿಂದಾಗಿ ಪ್ರಾಯೋಗಿಕವಾಗಿ ಅಲ್ಲಲ್ಲಿ ಕಾವೇರಿ ತಳಿಯ ಕಾಫಿ ಗಿಡಗಳನ್ನು ಹಾಕಿದರು. ಸ್ವಲ್ಪ ಬೆಳವಣಿಗೆ ಪರವಾಗಿಲ್ಲ ಎನ್ನಿಸಿತು. ನಂತರ ಐದು ಎಕರೆಯ ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಮೂರು ಸಾವಿರ ಕಾಫಿ ಗಿಡಗಳನ್ನು ನಾಟಿ ಮಾಡಿಸಿದರು. ಕಾಫಿಯ ಜತೆ ಜತೆಗೆ ಹಾಲಿ ಇದ್ದ ತೇಗ, ಅಡಿಕೆ ಮರಗಳಿಗೆ ಕಾಳುಮೆಣಸಿನ ಬಳ್ಳಿಗಳನ್ನೂ ಹಬ್ಬಿಸಿದರು. ತಜ್ಞ ರೈತರ ಸಲಹೆಯಿಂದ ಗಿಡಗಳ ಪೋಷಣೆಗೆ ಹೆಚ್ಚು ಗಮನ ಕೊಟ್ಟರು.

ನೆಟ್ಟ ಕಾಫಿ ಗಿಡಗಳು ಎರಡೂವರೆ ವರ್ಷಕ್ಕೆ ಫಸಲು ನೀಡಲು ಆರಂಭಿಸಿದವು. ‘ಇದೊಂದು ರೀತಿ ಅಚ್ಚರಿ ಸೃಷ್ಟಿಸಿತು. ಕೊನೆಗೆ ವಿಜ್ಞಾನಿಗಳೇ ತೋಟಕ್ಕೆ ಬಂದು ಪರೀಕ್ಷೆ ಮಾಡಿ ಇದೊಂದು ಉತ್ತಮ ಪ್ರಗತಿ ಎಂಬ ರಿಪೊರ್ಟ್‌ ಕೊಟ್ಟರು’ ಎಂದು ಫಯಾಜ್ ಖಾನ್ ನೆನಪಿಸಿಕೊಳ್ಳುತ್ತಾರೆ. ಮೊದಲ ವರ್ಷದ ಕಾಫಿ ಬೆಳೆ ಕೊಯ್ಲಾಗಿದೆ. ಬೀಜಗಳನ್ನು ಒಣಗಿಸಿಟ್ಟಿದ್ದಾರೆ. ‘ಒಂದು ಸಾವಿರ ಕೆ.ಜಿ.ಯಷ್ಟು ಫಸಲು ರೆಡಿ ಇದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬರುವವರೆಗೂ ಕಾಯುತ್ತೇವೆ. ಅಲ್ಲಿವರೆಗೆ ಅಡಿಕೆ ಆದಾಯ ಇದ್ದೇ ಇದೆಯಲ್ಲ’ ಎನ್ನುತ್ತಾರೆ ಅವರು.

ಸಮಗ್ರ ಒಳಸುರಿ ಪೂರೈಕೆ

ಅಡಿಕೆ ಮರಗಳಿಗೆ ಕಾಳುಮೆಣಸು ಹಬ್ಬಿಸಿದ್ದಾರೆ. ಎರಡು ಮರಗಳ ಸಾಲಿನ ನಡುವೆ ಕಾಫಿ ಗಿಡಗಳನ್ನು ನೆಟ್ಟಿದ್ದಾರೆ. ಅಡಿಕೆಗೆ ಕೊಡುವ ನೀರು ಮತ್ತು ಗೊಬ್ಬರ ಮೆಣಸಿಗೂ ಸಿಗುತ್ತದೆ. ನೀರು ಪೂರೈಕೆಗಾಗಿ ಅಡಿಕೆ ಮರಗಳ ನಡುವೆ ಡ್ರಿಪ್ ಪೈಪ್ ಹಾಕಿಸಿದ್ದು, ಒಂದು ಮೈಕ್ರೋ ಟ್ಯೂಬ್ ಜೋಡಿಸಿದ್ದಾರೆ. ಅದನ್ನು ಒಂದು ಕಡೆಗೆ ತಿರುಗಿಸಿದರೆ ಅಡಿಕೆಗೆ, ಇನ್ನೊಂದು ಕಡೆ ತಿರುಗಿಸಿದರೆ ಕಾಫಿ ಗಿಡಕ್ಕೆ ಹೋಗುತ್ತದೆ. ಹೀಗೆ ಒಂದೇ ಕಾಲದಲ್ಲಿ ಎರಡು ಕೆಲಸಗಳಾಗುವುದರಿಂದ ಶ್ರಮ ಕಡಿಮೆ. ಸಕಾಲದಲ್ಲಿ ಗೊಬ್ಬರ, ನೀರು ಪೂರೈಸಿದಂತಾಗುತ್ತದೆ. ಈ ಕ್ರಮಬದ್ಧ ಆರೈಕೆಯಿಂದ ಹೆಚ್ಚು ಅಡಿಕೆ ಮರಗಳು ಫಸಲು ಕೊಡಲು ಕಾರಣವಾಯಿತು. ಮಾತ್ರವಲ್ಲ ಬಯಲುಸೀಮೆಯಲ್ಲೂ ಕಾಫಿಯಂತಹ ಬೆಳೆ ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ ಫಯಾಜ್. ‌

ಮೊದ ಮೊದಲು ಇಲ್ಲಿ ಕಾಫಿ, ಮೆಣಸು ಬೆಳೆಯಲು ಪ್ರಾರಂಭಿಸಿದಾಗ ಜನರು ಇವರಿಗೆ ಹುಚ್ಚು ಹಿಡಿದಿದೆ ಎಂದು ಅಣಕಿಸಿದ್ದರಂತೆ. ಇಲ್ಲಿ ರಾಗಿ, ಜೋಳ ಬೆಳೆಯುವುದೇ ಕಷ್ಟ ಎಂದು ನಗಾಡಿದ್ದರಂತೆ. ಈಗ ಅವರೇ ಅಚ್ಚರಿ ಪಡುತ್ತಿದ್ದಾರಂತೆ. ಈಗ ಅವರ ತೋಟದಲ್ಲಿ ಕಿತ್ತಳೆ, ಬಾಳೆ, ಸಪೋಟ, ನಿಂಬೆ, ಪಪ್ಪಾಯ ಬೆಳೆಯನ್ನೂ ಬೆಳೆಯುತ್ತಿದ್ದಾರೆ. ಬೇಲಿಯಲ್ಲಿ ಕಾಡು ಮರಗಳಿವೆ. ಹಣ್ಣಿನ ಗಿಡಗಳು ಫಲ ಕೊಡುವ ಹಂತದಲ್ಲಿವೆ. ಜತೆಗೆ ಹೈಬ್ರಿಡ್ ಹುಲ್ಲು ಬೆಳೆದು ಮಾರಾಟ ಮಾಡುತ್ತಿದ್ದಾರೆ.

ಮುಕ್ಕಾಲು ಭಾಗ ಸಾವಯವ

ವರ್ಷಕ್ಕೆ ಎರಡು ಬಾರಿ ಇಡೀ ತೋಟಕ್ಕೆ ಆಡಿನ ಗೊಬ್ಬರ ಕೊಡುತ್ತಾರೆ. ಬೆಳೆಯುಳಿಕೆಗಳನ್ನು (ಕೃಷಿ ತ್ಯಾಜ್ಯ) ತೋಟದಲ್ಲಿ ಕರಗಿಸುತ್ತಾರೆ. ಕಾಫಿ ಮತ್ತು ಮೆಣಸಿಗೆ ಸುಣ್ಣದ ಅಂಶ ಪೂರೈಕೆ ಮಾಡಲು ಔಷದ ಸಿಂಪಡಿಸುತ್ತಾರೆ. ಬೆಳೆಗಳಿಗೆ ಹೆಚ್ಚಿನ ಪೋಷಕಾಂಶ ಪೂರೈಕೆಗೆ ದ್ರವರೂಪದ ಔಷಧವೊಂದನ್ನು ಪಂಜಾಬ್‌ನಿಂದ ತರಿಸಿದ್ದಾರೆ. ‘ಇಲ್ಲಿವರೆಗೂ ಡ್ರಿಪ್‌ ಮೂಲಕ ನೀರು ಕೊಡುತ್ತಿದ್ದೆ. ಈಗ ಕಾಫಿ ಗಿಡಕ್ಕೆ ಮೇಲಿನಿಂದ ನೀರು ಔಷಧ ಕೊಡಬೇಕು. ಹಾಗಾಗಿ ಮುಂದೆ ಸ್ಪ್ರಿಂಕ್ಲರ್‌ ಅಳವಡಿಸುತ್ತಿದ್ದೇನೆ. ಈಗ ಮುಕ್ಕಾಲು ಪಾಲು ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಿದ್ದೇನೆ. ಹತ್ತು ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಫಯಾಜ್.

‘ನಿಮ್ಮಲ್ಲಿ ದುಡ್ಡು ಇತ್ತು. ನೀರಿಲ್ಲದ ಜಮೀನಿನಲ್ಲೂ ಹೀಗೆ ತೋಟ ಮಾಡಿದ್ದೀರಿ. ಹಣವಿಲ್ಲದವರು ಹೇಗೆ ಮಾಡೋಕೆ ಆಗುತ್ತದೆ?’ ಎಂದು ಫಯಾಜ್ ಅವರನ್ನು ಪ್ರಶ್ನಿಸಿದರೆ, ‘ಹಣವಿಲ್ಲದೇ ಕೃಷಿ ಮಾಡೋದು ಕಷ್ಟ ಸರ್. ಹಾಗಂತ ದುಡ್ಡಿದ್ದವರೆಲ್ಲ ಇಷ್ಟು ಚೆನ್ನಾಗಿ ತೋಟ ಮಾಡಲೂ ಆಗುವುದಿಲ್ಲ. ಅದಕ್ಕೆ ಕೃಷಿ ಬಗ್ಗೆ ಪ್ರೀತಿ ಇರಬೇಕು. ನಿತ್ಯವೂ ತೋಟದ ಜತೆ ಸಂಪರ್ಕವಿರಬೇಕು. ನಾನು ಎಷ್ಟೇ ಕೆಲಸವಿದ್ದರೂ, ದಿನಕ್ಕೆ ಅರ್ಧ ತೋಟ ಸುತ್ತು ಹಾಕಿ, ಎಲ್ಲವನ್ನೂ ಗಮನಿಸುತ್ತೇನೆ. ಉಳಿದರ್ಧ ನಾಳೆ ನೋಡುತ್ತೇನೆ. ಸಮಸ್ಯೆ ಕಂಡರೆ, ಕೆಲಸಗಾರರನ್ನು ಎಚ್ಚರಿಸಿ, ಸರಿಪಡಿಸಲು ಹೇಳುತ್ತೇನೆ. ನಾವು ಮಕ್ಕಳನ್ನು ಆರೈಕೆ ಮಾಡುವಂತೆ, ತೋಟವನ್ನು ನೋಡಿಕೊಂಡರೆ ಕೃಷಿಯಲ್ಲಿ ಗೆಲ್ಲಬಹುದು’ ಎಂದು ಅಭಿಪ್ರಾಯಪಡುತ್ತಾರೆ ಫಯಾಜ್. ವಾಣಿಜ್ಯ ಬೆಳೆಯ ಮಿಶ್ರ ಕೃಷಿ ತೋಟದ ಕುರಿತ ಅನುಭವ ಹಂಚಿಕೊಳ್ಳಲು ಫಯಾಜ್ ಅವರ ಸಂಪರ್ಕ ಸಂಖ್ಯೆ: 9448247140.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT