ಸೋಮವಾರ, ಜನವರಿ 25, 2021
27 °C
ಪ್ರವೃತ್ತಿಗಳ ಪ್ರೀತಿಯ ಗಡಿನಾಡ ಕೃಷಿಕ

PV Web Exclusive: ಬಹುಮುಖಿ – ಕೃಷಿ ಸುಖಿ !

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಕಾಸರಗೋಡಿನ ಕೃಷಿಕ ಬೆಳೇರಿ ಸತ್ಯನಾರಾಯಣ ಅವರಿಗೆ ದೇಸಿ ಭತ್ತದ ತಳಿಗಳ ಸಂಗ್ರಹಿಸುವುದು ಸೇರಿದಂತೆ ಹಲವು ಹವ್ಯಾಸಗಳಿವೆ. ಇವುಗಳಲ್ಲಿ ಕೆಲವು ಖುಷಿಗಾಗಿ ಮಾಡಿದರೆ, ಇನ್ನು ಕೆಲವನ್ನು ಸ್ವಾವಲಂಬಿ ಬದುಕಿಗಾಗಿಯೇ ಅಳವಡಿಸಿಕೊಂಡಿದ್ದಾರೆ. ಈ ಬಹುಮುಖಿ ಹವ್ಯಾಸಗಳು, ಅವರ ಬದುಕಿನ ಏಕತಾನತೆಯನ್ನು ನಿವಾರಿಸಿ ಖುಷಿಯ ಜತೆಗೆ, ಮನಸ್ಸಿಗೆ ಹಿತವನ್ನೂ ನೀಡುತ್ತಿವೆ.

***

‘ಲೇಖನ ಓದಿ ಒಂದೇ ದಿನದಲ್ಲಿ ನೂರಾರು ಮಂದಿ ಫೋನ್ ಮಾಡಿದ್ದರು. ಅವರಲ್ಲಿ ಬಹುತೇಕರು ದೇಸಿ ಭತ್ತದ ಬೀಜ ಕೇಳಿದರು. ಹಲವರು ಸಲಹೆ ಕೊಟ್ಟರು, ನನ್ನ ಕೆಲಸದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಅವರಲ್ಲಿ ಒಬ್ಬರು ನಿವೃತ್ತ ವಿಜ್ಞಾನಿ ಕೂಡ ಇದ್ದರು...ತುಂಬಾ ಖುಷಿಯಾಯ್ತು ಸರ್...‘

ಹೀಗೆ ತಡರಾತ್ರಿ ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ ಕಳಿಸಿದ್ದರು ಕೃಷಿಕ ಬೆಳೇರಿ ಸತ್ಯನಾರಾಯಣ. ‌ದೇಸಿ ತಳಿ ಭತ್ತದ ಸಂರಕ್ಷಣೆಯಲ್ಲಿ ಅವರು ತೊಡಗಿರುವ ಬಗ್ಗೆ ಲೇಖನ ‘ಪ್ರಜಾವಾಣಿ‘ಯಲ್ಲಿ ಆ ದಿನವಷ್ಟೇ ಪ್ರಕಟವಾಗಿತ್ತು. ಶಿವಮೊಗ್ಗದ ಕೃಷಿ ವಿಜ್ಞಾನಿ ಡಾ. ಉಲ್ಲಾಸ್ ಎಂ.ವೈ. ಬರೆದಿದ್ದ ಆ ಲೇಖನ ಅಷ್ಟೆಲ್ಲ ರೈತ ಮಿತ್ರರನ್ನು ಇವರಿಗೆ ಪರಿಚಯಿಸಿತ್ತು. ಸಹಜವಾಗಿ ಅವರು ಸಂಭ್ರಮದಲ್ಲಿದ್ದರು.


ಸತ್ಯನಾರಾಯಣ ಬೆಳೇರಿಯವರು ದೇಸಿ ಭತ್ತದ ತಳಿಗಳನ್ನು ಬೆಳೆಸುವ ರೀತಿ

ಸಂಭ್ರಮದಲ್ಲಿದ್ದವರಿಗೆ ಮಾತುಗಳು ತುಳುಕುತ್ತಿರುತ್ತವಂತೆ. ಹಾಗಾಗಿ, ಇವರೂ ಮಾತು ಮುಂದುವರಿಸಿದ್ದರು. ‘ಕಾಸರಗೋಡಿನ ಪುಟ್ಟ ಹಳ್ಳಿಯಲ್ಲಿರುವ ನಮ್ಮಂಥವರು ಏನು ಕೆಲಸ ಮಾಡುತ್ತಿದ್ದರೂ ಹೊರಗಿನ ಪ್ರಪಂಚಕ್ಕೆ ತಿಳಿಯುತ್ತಿರಲಿಲ್ಲ. ಈ ಲೇಖನ, ಕೇರಳ ನೆಲದಲ್ಲಿರುವ ನನ್ನಂತಹವನ ಕೆಲಸವನ್ನು ಇಡೀ ಕರ್ನಾಟಕಕ್ಕೇ ಪರಿಚಯಿಸಿತು. ಅದನ್ನು ಗಮನಿಸಿ, ಸ್ಥಳೀಯ ಪತ್ರಿಕೆಗಳು, ಮಲಯಾಳಂ ಪತ್ರಿಕೆಗಳು ನನ್ನ ಕೆಲಸದ ಬಗ್ಗೆ ಬರೆದಿವೆ’ ಎನ್ನುತ್ತಾ ಪತ್ರಿಕೆಯ ತುಣುಕುಗಳನ್ನು ಹಂಚಿಕೊಂಡರು.

ಇವರ ಮಾತು ಅಷ್ಟಕ್ಕೇ ಮುಗಿದಿದ್ದರೆ, ಇಂದು ಪುನಃ ಅವರ ಬಗ್ಗೆ ಬರೆಯುವ ಅಗತ್ಯವಿರುತ್ತಿರಲಿಲ್ಲ. ಆದರೆ, ಅವರು ಪ್ರತಿ ಮಾತಿಗೂ ಜೋಡಿಸಿಕೊಡುತ್ತಿದ್ದ ಫೋಟೊಗಳು, ಅವರ ಕೃಷಿ ಸಂಬಂಧಿ ಪ್ರವೃತ್ತಿಗಳ ಪ್ರಪಂಚವನ್ನೇ ತೆರೆದಿಡುತ್ತಿದ್ದವು. ಅಷ್ಟೇ ಅಲ್ಲ, ಪ್ರವೃತ್ತಿ, ಹವ್ಯಾಸಗಳ ಮೇಲಿನ ಪ್ರೀತಿ ಮತ್ತು ಬದ್ಧತೆಯನ್ನು ಸಾಕ್ಷ್ಯೀಕರಿಸುತ್ತಿದ್ದವು. ಇಂಥ ಬಹುಮುಖಿ ಪ್ರತಿಭೆಯನ್ನು ಕಂಡ ಮೇಲೆ ಅವೆಲ್ಲವನ್ನೂ ಬರೆಯದೇ ಸುಮ್ಮನಿರಲು ಸಾಧ್ಯವಿಲ್ಲ ಎನ್ನಿಸಿತು.

ತಳಿ ಸಂಗ್ರಹದ ಹವ್ಯಾಸ

ಕಾಸರಗೋಡು ಜಿಲ್ಲೆ, ಪೆರ್ಲ ಸಮೀಪದಲ್ಲಿರುವ ಕಿನ್ನಿಂಗಾರು ಪಕ್ಕದ ಪುಟ್ಟ ಗ್ರಾಮ ಬೆಳೇರಿ ಸತ್ಯನಾರಾಯಣ ಅವರ ಊರು. ಅವರಿಗೆ ಐದು ಎಕರೆ ಜಮೀನಿದೆ. ಅದರಲ್ಲಿ ನಾಲ್ಕು ಎಕರೆಯಲ್ಲಿ ರಬ್ಬರ್‌ ಪ್ಲಾಂಟೇಷನ್. ಉಳಿದ ಜಮೀನಿನಲ್ಲಿ ವಾಸಕ್ಕೆ ಮನೆ, ಸ್ವಲ್ಪ ಅಡಿಕೆ, ತೆಂಗಿನ ಮರಗಳಿವೆ. ಮನೆಯ ಅಂಗಳದಲ್ಲಿ ತರಕಾರಿ, ಹೂವು, ಹಣ್ಣಿನ ಮರಗಳಿವೆ. ಜತೆಗೆ, ಇದೇ ಅಂಗಳದ ಒಂದು ಭಾಗದಲ್ಲಿ ವಿವಿಧ ಭತ್ತದ ತಳಿಗಳನ್ನು ಬೆಳೆಸುತ್ತಾರೆ.


ದೇಸಿ ಭತ್ತದ ತಳಿಗಳ ಪೈರು

ವಿಚಿತ್ರ ಎಂದರೆ, ಸತ್ಯನಾರಾಯಣ ಅವರಿಗೆ ಇಷ್ಟು ಜಮೀನಿದ್ದರೂ ಭತ್ತ ಬೆಳೆಯುವುದಕೆ ಸೂಕ್ತ ಜಾಗವಿಲ್ಲ. ಜಮೀನು ಎತ್ತರದ ಪ್ರದೇಶದಲ್ಲಿರುವುದು ಇದಕ್ಕೆ ಕಾರಣ. ವಾರ್ಷಿಕ ಸರಾಸರಿ ಮೂರೂವರೆ ಸಾವಿರ ಮಿಲಿಮೀಟರ್ ಮಳೆ ಬೀಳುವ ಪ್ರದೇಶದಲ್ಲಿದ್ದರೂ, ನೀರು ಸಂಗ್ರಹ ಕಷ್ಟ. ಭತ್ತದ ಕೃಷಿಗೆ ಅಗತ್ಯವಾದಷ್ಟು ನೀರು ಅಲಭ್ಯವಾಗಿದ್ದರಿಂದ, ನೀರಿನ ಸೌಲಭ್ಯವಿರುವವರ ಜತೆಯಲ್ಲಿ ಭತ್ತ ಬೆಳೆದುಕೊಳ್ಳುತ್ತಾರಂತೆ.

ಭತ್ತ ಬೆಳೆಯಲು ಇಷ್ಟೆಲ್ಲ ಕಷ್ಟವಿದ್ದರೂ, ಅವರಿಗೆ ದೇಸಿ ಭತ್ತದ ತಳಿಗಳ ಬಗ್ಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿಯೇ, ಪತ್ರಿಕೆಗಳಲ್ಲಿನ ಕೃಷಿ ಲೇಖನಗಳನ್ನು ಓದುತ್ತಾ, ನಾಟಿ ಭತ್ತದ ತಳಿಗಳ ಸಂಗ್ರಹ ಆರಂಭಿಸಿದರು. ಊರೂರು ಸುತ್ತಿ ಸುತ್ತಿ ಬೀಜಗಳನ್ನು ಸಂಗ್ರಹಿಸಿದ್ದಾರೆ. ಸಂಗ್ರಹಿಸಿದ ಬೀಜಗಳನ್ನು ಗ್ರೋಬ್ಯಾಗ್‌ಗಳಲ್ಲಿ ಬಿತ್ತನೆ ಮಾಡಿ, ಬೀಜಗಳನ್ನು ದುಪ್ಪಟ್ಟಾಗಿಸಿದ್ದಾರೆ.

ಸಾಮಾನ್ಯವಾಗಿ ನೆಲದಲ್ಲಿ ಮಡಿ ಮಾಡಿ, ನೀರು ನಿಲ್ಲಿಸಿ ಗುಂಟೆ, ಎಕರೆಗಳಲ್ಲಿ ಭತ್ತ ಬೆಳೆದು, ಬೀಜೋತ್ಪಾದನೆ ಮಾಡುತ್ತಾರೆ. ಆದರೆ, ಇವರು ಗ್ರೋ ಬ್ಯಾಗ್‌ಗಳಲ್ಲಿ ಹತ್ತು ಹನ್ನೆರಡು ಬೀಜ ಬಿತ್ತಿ, ನೂರು ಗ್ರಾಂ, ಇನ್ನೂರು ಗ್ರಾಂ ಬೀಜಗಳನ್ನು ಸಂಗ್ರಹಿಸಿ, ಶೇಖರಿಸುತ್ತಾರೆ. ಸದ್ಯ ಇವರ ಸಂಗ್ರಹದಲ್ಲಿ 200ಕ್ಕೂ ಹೆಚ್ಚು ದೇಸಿ ಭತ್ತದ ತಳಿಗಳಿವೆ. ಅದನ್ನು ಡಬ್ಬಿಗಳಲ್ಲಿ ತುಂಬಿ, ಕಪಾಟಿನಲ್ಲಿ ಒಪ್ಪವಾಗಿ ಜೋಡಿಸಿಟ್ಟಿದ್ದಾರೆ. ಅದು ಒಂದು ರೀತಿ ‘ಬೀಜ ಬ್ಯಾಂಕ್‘ ತರಹವೇ ಕಾಣುತ್ತದೆ.

ದಶಕಗಳ ಹಿಂದೆ ಶುರು ಮಾಡಿದ ಈ ಹವ್ಯಾಸದಿಂದಾಗಿ ಮಹಾರಾಷ್ಟ್ರದ ರತ್ನಾಗಿರಿ, ಬೆಳ್ತಂಗಡಿ, ಕೇರಳದ ಕಣ್ಣೂರು, ಮಂಗಳೂರು, ಶಿವಮೊಗ್ಗ.. ಹೀಗೆ ಹಲವು ಕಡೆಗಳಲ್ಲಿರುವ ಭತ್ತದ ಸಂರಕ್ಷಕರನ್ನು ಭೇಟಿ ಮಾಡಿದ್ದಾರೆ. ಕೃಷಿ ಸಂಶೋಧನಾ ಕೇಂದ್ರಗಳನ್ನು ಸುತ್ತಾಡಿ ಬೀಜಗಳನ್ನು ಸಂಗ್ರಹಿಸಿದ್ದಾರೆ.

‘ನನ್ನ ಹಲವು ಹವ್ಯಾಸಗಳಲ್ಲಿ, ದೇಸಿ ಭತ್ತದ ಬೀಜದ ತಳಿ ಸಂಗ್ರಹ ಇಷ್ಟವಾದ ಹವ್ಯಾಸ. ‌‌ಈ ಪೀಳಿಗೆಗೆ ಇಂಥ ತಳಿಗಳ ಬಗ್ಗೆ ಸರಿಯಾಗಿ ಅರಿವಿಲ್ಲ. ಇನ್ನು ಮುಂದಿನವರೂ ಇವುಗಳನ್ನು ಪೂರ್ಣ ಮರೆತುಬಿಡುತ್ತಾರೆ. ಭವಿಷ್ಯದ ಪೀಳಿಗೆಗೆ ಪರಿಚಯಿಸು ವುದಕ್ಕಾಗಿ ಈ ತಳಿ ಸಂಗ್ರಹ ಮಾಡುತ್ತಿದ್ದೇನೆ’ ಎನ್ನುತ್ತಾರೆ ಸತ್ಯನಾರಾಯಣ.

‘ಭತ್ತದ ತಳಿಗಳ ಸಂಖ್ಯೆಯೇನೋ ಹೆಚ್ಚಿದೆ. ಆದರೆ ಬಿತ್ತನೆ ಮಾಡಿ, ಬೆಳೆಯುವಷ್ಟು ಬೀಜಗಳು ಇಲ್ಲ. ಇರುವ ಬೀಜವನ್ನು ದುಪ್ಪಟ್ಟು ಮಾಡಿ, ದೊಡ್ಡ ಪ್ರಮಾಣದಲ್ಲಿ ಬಿತ್ತನೆ ಬೀಜಗಳನ್ನು ಬೆಳೆಯುವವರೊಂದಿಗೆ ವಿನಿಮಯ ಮಾಡಿಕೊಳ್ಳುತ್ತೇನೆ’ ಎನ್ನುವ ಸತ್ಯನಾರಾಯಣ ಅವರ ಮಾತುಗಳಲ್ಲಿ ದೇಸಿ ತಳಿಗಳನ್ನು ಉಳಿಸಿ ಬೆಳೆಸಬೇಕೆಂಬ ಆಶಯ ಅಡಗಿದೆ.

ಭತ್ತದ ತಳಿಗಳ ಜತೆಗೆ, ಕೆಲವು ಕಡೆ ಸಿರಿಧಾನ್ಯಗಳನ್ನು ಬೆಳೆಸಿದ್ದಾರೆ. ‘ಈ ಭಾಗದಲ್ಲಿ ಸಿರಿಧಾನ್ಯ ಬೆಳೆಯುವುದು ಅಪರೂಪ. ಆದರೂ, ನಾನು ಬೇರೆ ಕಡೆಯಿಂದ ಬೀಜ ತರಿಸಿಕೊಂಡು, ಬೆಳೆಸಿದ್ದೇನೆ. ಎಲ್ಲವೂ ಸ್ಯಾಂಪಲ್‌ಗಾಗಿ ಬೆಳೆದಿರುವುದು’ ಎನ್ನುತ್ತಾ, ಸೊಂಪಾಗಿ ಬೆಳೆದ ನವಣೆಯ ತೆನೆಗಳಿರುವ ಫೋಟೊ ಹಂಚಿಕೊಂಡರು ಸತ್ಯನಾರಾಯಣ.

ಜೇನು ಕೃಷಿಯೂ ಹವ್ಯಾಸ

ಹೀಗೆ ಮಾತಿನ ನಡುವೆ ಗದ್ದದ ತುಂಬಾ ಜೇನುಹುಳುಗಳನ್ನು ಹತ್ತಿಸಿಕೊಂಡಿದ್ದ ಚಿತ್ರವೊಂದನ್ನು ಕಳಿಸಿದರು. ಕೆನ್ನೆ, ಗಡ್ಡದ(ಗದ್ದ) ಮೇಲೆ ಮುಲುಗುಟ್ಟುತ್ತಿದ್ದ ಹುಳುಗಳನ್ನು ಕಂಡು, ’ಅರೆ, ಮುಖಕ್ಕೆಲ್ಲ ಜೇನು ನೊಣಗಳನ್ನು ಹತ್ತಿಸಿಕೊಂಡಿದ್ದೀರಿ, ಅವು ಕಚ್ಚುವುದಿಲ್ಲವೇ’ ಎಂದು ಅಚ್ಚರಿಯಿಂದ ಕೇಳಿದೆ. ಅದಕ್ಕೆ ಅವರು ‘ಇದೂ ನನ್ನ ಹವ್ಯಾಸ ಸರ್. ನನಗೆ ಅಭ್ಯಾಸವಾಗಿಬಿಟ್ಟಿದೆ. ಅವು ಏನೂ ಮಾಡೋದಿಲ್ಲ’ ಎಂದು ನಗುತ್ತಲೇ ಉತ್ತರಿಸಿದರು.


ಸತ್ಯನಾರಾಯಣರ ಜೇನಿನೊಂದಿಗಿನ ಗೆಳೆತನ

ಜೇನು ಹುಳುಗಳೊಂದಿಗೆ ಸಿಹಿಯಂತಹ ಗೆಳೆತನ ಇವರದ್ದು. ಗಡ್ಡಕ್ಕೆ ಸ್ವಲ್ಪ ಜೇನು ತುಪ್ಪ ಸವರಿಕೊಂಡು, ಪೆಟ್ಟಿಗೆ ಮುಂದೆ ಸಮಾಧಾನದಿಂದ ನಿಂತರೆ, ಜೇನು ನೊಣಗಳು ಮುತ್ತಿಕೊಳ್ಳುತ್ತವೆ. ಸ್ವಲ್ಪ ಹೊಗೆ ಎದುರು ನಿಂತರೆ, ಗಡ್ಡದ ಮೇಲಿಂದ ತಾನಾಗೆ ಹಾರಿ ಹೋಗುತ್ತವೆ. ಇದಕ್ಕೆ ಅಭ್ಯಾಸದ ಜತೆಗೆ ಜೇನು ಹುಳುಗಳೊಂದಿಗೆ ಒಡನಾಟವೂ ಇರಬೇಕು ಎನ್ನುವುದು ಅವರ ಅಭಿಪ್ರಾಯ.

ಜೇನು ಕೃಷಿ, ಸತ್ಯನಾರಾಯಣ ಅವರ ಮತ್ತೊಂದು ಹವ್ಯಾಸ. ದಶಕದ ಹಿಂದೆ ರಬ್ಬರ್‌ ಮಂಡಳಿಯವರು ಏರ್ಪಡಿಸಿದ್ದ ತರಬೇತಿಯಲ್ಲಿ ಜೇನು ಸಾಕಾಣಿಕೆ ಕಲಿತಿದ್ದಾರೆ. ಮನೆಯ ಸುತ್ತಮುತ್ತ ಬೆಳೆದಿರುವ ತರಕಾರಿ, ಹೂವಿನ ಗಿಡಗಳ ನಡುವೆ ಐದು ಜೇನಿನ ಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ಜೇನುತುಪ್ಪ ತೆಗೆದು ಮಾರಾಟ ಮಾಡುತ್ತಾರೆ. ಅವರಿಗೆ ಇದು ಖುಷಿಯ ಹವ್ಯಾಸದ ಜತೆಗೆ ಸಣ್ಣ ಉಪ ಆದಾಯ ಕೂಡ.

ಈ ಜೇನಿನ ಜತೆಗೆ ಮೊಜಂಟಿ ಜೇನನ್ನು(ಚುಚ್ಚದ ಜೇನು) ಸಾಕಾಣಿಕೆ ಮಾಡುತ್ತಿದ್ದಾರೆ. ಪಿವಿಸಿ ಪೈಪು, ಬಿದಿರಿನ ಬೊಂಬು, ತೆಂಗಿನ ಚಿಪ್ಪಿನೊಳಗೆ(ಗೆರಟೆ).. ಹೀಗೆ ವಿವಿಧ ಕಡೆ ಮೊಜಂಟಿ ಜೇನು ಸಾಕಣೆ  ಇದೆ. ‘ಇದರ ತುಪ್ಪಕ್ಕೆ ಔಷಧೀಯ ಗುಣವಿದೆ. ಔಷಧಯಾಗಿ ಬಳಸಲು ಕೇಳುವವರಿಗೆ ಕೊಟ್ಟು ಬಿಡುತ್ತೇನೆ‘ ಎನ್ನುತ್ತಾರೆ ಅವರು.

ಕಸಿ ಕಟ್ಟುವ ಕಲೆ ...

ದಶಕದ ಹಿಂದಿನ ಕಥೆ. ಸತ್ಯನಾರಾಯಣ, ಮಂಗಳೂರಿನ ಉಳ್ಳಾಲದ ಗೇರು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿದ್ದ ಅಧಿಕಾರಿ ಡಿ.ಪಿ ಕುಮಾರ್ ಅವರು ಗೇರು ಗಿಡಕ್ಕೆ ಕಸಿ ಕಟ್ಟುವ ಕುರಿತು ಮಾಹಿತಿ ನೀಡಿದರು. ಅಲ್ಲೇ ಇದ್ದ ಪರಿಣತರು ಕಸಿ ಕಟ್ಟುವುದನ್ನು ತೋರಿಸಿದರು. 'ಅದನ್ನೆಲ್ಲ ನೋಡಿಕೊಂಡು ಬಂದು ಮನೆಯಲ್ಲಿ ಗೇರಿನ ಗಿಡಗಳ ಗೆಲ್ಲಿಗೆ ಕಸಿ ಕಟ್ಟಿದೆ. ಅದು ಚಿಗುರಿದ ತಕ್ಷಣ ಕುಮಾರ್ ಅವರಿಗೆ ಪತ್ರ ಬರೆದು ತಿಳಿಸಿದ್ದೆʼ – ನೆನಪಿಸಿಕೊಂಡರು ಸತ್ಯನಾರಾಯಣ. ಆಗಿನಿಂದಲೂ, ಜಾಯಿಕಾಯಿ, ಮಾವು, ಹಲಸು, ಗೇರು ಗಿಡಗಳಿಗೆ ಕಸಿಕಟ್ಟುತ್ತಿದ್ದಾರೆ.


ಕಸಿಕಟ್ಟುವಲ್ಲೂ ನಿಪುಣರು

ಜಾಯಿಕಾಯಿ ಮರದ ಟೊಂಗೆಗಳಿಗೆ ಕಸಿಕಟ್ಟಿ ಸಸಿ ಮಾಡಿದ ಚಿತ್ರವನ್ನು ಹಂಚಿಕೊಂಡರು ಸತ್ಯನಾರಾಯಣ. ಆ ಮರದ ಪಕ್ಕದಲ್ಲಿದ್ದ ಟೊಂಗೆಗಳಿಗೆ ಕಸಿಕಟ್ಟಿ ಸಸಿಗಳನ್ನು ಬೆಳೆಸಿದ್ದರು. ‘ನನ್ನ ಮನೆಗೆ ಬೇಕಾದ ಕಸಿಗಿಡಗಳನ್ನು ನಾನೇ ಮಾಡಿ ಕೊಳ್ಳುತ್ತೇನೆ. ಗೆಳೆಯರಿಗೂ ಮಾಡಿಕೊಡುತ್ತೇನೆ. ಯಾವುದಾದರೂ ವಿಶೇಷ ತಳಿ ಕಂಡಾಗ, ಅವುಗಳಿಗೆ ಕಸಿ ಕಟ್ಟಿ ಸಸಿಗಳನ್ನು ಮಾಡಿ ತಂದು ಬೆಳೆಸುತ್ತೇನೆ. ನರ್ಸರಿ ಮಾಡಿ ಗಿಡಗಳನ್ನು ಮಾರಾಟ ಮಾಡುವುದಿಲ್ಲ. ಆಸಕ್ತರಿಗೆ ಕಲಿಸುವ ಪ್ರಯತ್ನವ ನ್ನಂತೂ ಮಾಡಿದ್ದೇನೆ‘ ಎನ್ನುತ್ತಾರೆ ಅವರು.

ಬಹುಮುಖಿ ಪ್ರತಿಭೆ..

‘ಪ್ರತಿ ಪ್ರವೃತ್ತಿಯೂ ಬೇೆರೆಯವರ ಮೇಲಿನ ಅವಲಂಬನೆಯನ್ನು ತಪ್ಪಿಸಿದೆ‘ ಎಂಬ ನಂಬಿಕೆ ಸತ್ಯನಾರಾಯಣ ಅವರದ್ದು. ಅದಕ್ಕಾಗಿಯೇ, ಅವರು ಕೃಷಿ ಕೆಲಸಗಳ ಜತೆಗೆ, ಎಲೆಕ್ಟ್ರಿಕ್ ಕೆಲಸಗಳನ್ನು ಕಲಿತಿದ್ದಾರೆ. ಮಣ್ಣು ಮತ್ತು ಸಿಮೆಂಟ್ ಕೆಲಸ ಮಾಡುವ ಕೌಶಲವೂ ಗೊತ್ತಿದೆ. ಜತೆಗೆ, ಕಾರ್ಪೆಂಟರಿ ಕೆಲಸಗಳನ್ನು ಮಾಡುತ್ತಾರೆ.

ಗಾರೆ ಕೆಲಸ, ಮರಗೆಲಸವನ್ನು ಅನುಭವಿ ಮಿತ್ರರಿಂದ ಕಲಿತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಬಿರದಲ್ಲಿ ಎಲೆಕ್ಟ್ರಿಕ್‌ ಮತ್ತು ಮೋಟಾರ್‌ ರಿವೈಂಡಿಂಗ್‌ ಕೆಲಸ ಕಲಿತಿದ್ದಾರೆ. ʻಇವೆಲ್ಲ ದುಡಿಮೆಗಾಗಿ ಕಲಿತದ್ದಲ್ಲ. ನಮ್ಮ ಮನೆಯ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಬಾರದು ಎಂಬ ಉದ್ದೇಶದಿಂದ ಅಭ್ಯಾಸ ಮಾಡಿದ್ದುʼ ಎನ್ನುವುದು ಸತ್ಯನಾರಾಯಣ ಅಭಿಪ್ರಾಯ.

ʼನೋಡಿ, ನಮ್ಮ ಮನೆಯ ಮೋಟಾರ್ ಕೆಟ್ಟು ಹೋಗಿ ನೀರು ಎತ್ತದಿರುವಾಗ, ರಿಪೇರಿಗಾಗಿ ಬೇರೆಯವರನ್ನು ಕಾಯುವುದಿಲ್ಲ. ನಾನೇ ಸರಿ ಮಾಡಿಕೊಳ್ಳುತ್ತೇನೆ. ಮನೆಯಲ್ಲಿ ಮಕ್ಕಳಿಗೆ ಕುರ್ಚಿ, ಮೇಜು ಬೇಕಾಯಿತು. ಅವುಗಳನ್ನು ನಾನೇ ಮಾಡಿಕೊಂಡೆ. ಮನೆಯ ಹಟ್ಟಿ ಗೋಡೆ ಎತ್ತರಿಸಬೇಕಾಯಿತು. ಆ ನಿರ್ಮಾಣ ಕೆಲಸವೂ ನನ್ನದೇ‘ ಎಂದು ಪ್ರವೃತ್ತಿಯ ಉಪಯೋಗವನ್ನು ಉದಾಹರಿಸಿದರು ಸತ್ಯನಾರಾಯಣ. ಅವರ ಮಾತುಗಳನ್ನು ಕೇಳುತ್ತಿದ್ದರೆ, ‘ಇದೇ ಅಲ್ಲವೇ ನಿಜವಾದ ಸ್ವಾವಲಂಬಿ ಕೃಷಿ ಜೀವನ‘ ಎನ್ನಿಸಿತು.

ಕವಿ, ವ್ಯಂಗ್ಯಚಿತ್ರಕಾರ, ಲೇಖಕ..

ಸತ್ಯನಾರಾಯಣ ಅವರು ಕೃಷಿ ಮತ್ತು ಕೃಷಿ ಪೂರಕ ಹವ್ಯಾಸಗಳ ಜತೆಗೆ ಕವಿತೆ, ಲೇಖನಗಳನ್ನು ಬರೆಯುತ್ತಾರೆ. ಅಷ್ಟೇ ಅಲ್ಲ, ವ್ಯಂಗ್ಯ ಚಿತ್ರಗಳನ್ನು ಬರೆಯುವ ಹವ್ಯಾಸವೂ ಇದೆ. ವ್ಯಂಗ್ಯಚಿತ್ರಕಾರ ಎಲ್‌‌ಎನ್‌ ರಾವ್‌ ಅವರ ಬಳಿ ಕಾರ್ಟೂನ್‌ ಬರೆಯುವುದನ್ನು ಕಲಿತಿದ್ದಾರೆ. ನಾಡಿನ ಹಲವು ಪತ್ರಿಕೆಗಳಲ್ಲಿ ಇವರ ಬರಹ, ಚಿತ್ರಗಳು ಪ್ರಕಟವಾಗಿವೆ. ಬದುಕಿನ ಏಕತಾನತೆ ಬ್ರೇಕ್‌ ಮಾಡಲು ಅವರಿಗೆ ಸಾಹಿತ್ಯ ಕೃಷಿ ನೆರವಾಗಿದೆ.


ಮನೆಯಂಗಳದ ಬದಿಯಲ್ಲೇ ಸಿರಿಧಾನ್ಯ

ʻನಾನು ಹೆಚ್ಚು ಓದಲಿಲ್ಲ. ಆದರೆ ಪುಟ್ಟ ಗ್ರಾಮದಲ್ಲಿದ್ದ ನನಗೆ ʻಆಕಾಶವಾಣಿʼಯೇ ನನ್ನ ಪಾಲಿನ ವಿಶ್ವವಿದ್ಯಾಲಯವಾಯಿತು. ಕೃಷಿ ಸೇರಿದಂತೆ ನನ್ನಲ್ಲಿ ಆಸಕ್ತಿ, ಪ್ರವೃತ್ತಿಗಳನ್ನು ಬೆಳೆಯುವಂತೆ ಮಾಡಿದ್ದೇ ಮಾಧ್ಯಮಗಳು. ಇವತ್ತು ಅದೇ ಮಾಧ್ಯಮ ನನ್ನ ಕೆಲಸವನ್ನು ಗುರುತಿಸಿದೆ‘ ಎಂದು ಖುಷಿಯಿಂದ ಹೇಳಿದರು.

ಹವ್ಯಾಸಗಳೆಲ್ಲ ಖುಷಿಗಾಗಿ ಮಾತ್ರ. ಹಾಗಾಗಿ ಇದು ಸಾಧನೆ ಎಂದೇನೂ ಎನ್ನಿಸಿಲ್ಲ. ಆದರೆ, ದೇಸಿ ತಳಿ ಬೀಜಗಳನ್ನು ಉಳಿಸುವ ಕೆಲಸ ಎಲ್ಲರಿಗೂ ತಿಳಿಯಬೇಕೆಂದು ಬಯಸಿದ್ದೆ. ಅದು ಆಗಿದೆ. ನನ್ನ ಜವಾಬ್ದಾರಿಯೂ ಹೆಚ್ಚಿದೆ. ತಳಿ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಿದರೆ ಒಳ್ಳೆಯದಾಗುತ್ತದೆ ಎಂಬ ಆಶಯ ವ್ಯಕ್ತಪಡಿಸುತ್ತಾರೆ ಸತ್ಯನಾರಾಯಣ.

ಸುಸ್ಥಿರ, ಸ್ವಾವಲಂಬಿ ಜೀವನಕ್ಕಾಗಿ ಅವಕಾಶ ಸಿಕ್ಕಾಗಲೆಲ್ಲ ಕೃಷಿಕೆ ಪೂರಕ ಚಟುವಟಿಕೆಗಳನ್ನು ಕಲಿಯುತ್ತಾ ಹೊರಟಿರುವ ಸತ್ಯನಾರಾಯಣ ಅವರ ಅನುಭವಗಳನ್ನು ಹಂಚಿಕೊಳ್ಳಲು ಸಂಪರ್ಕ ಸಂಖ್ಯೆ–9400650000.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು