ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿಕಲ್ಲಿಗೆ ಹಾಳಾದ ಬೆಳೆಗೆ ಸಿಗದ ಪರಿಹಾರ

ನಾಲ್ಕು ತಿಂಗಳ ಹಿಂದೆ ಭತ್ತ ಬೆಳೆಗಾರರಿಗೆ ಹೊಡೆತ ನೀಡಿದ್ದ ಮಳೆ
Last Updated 5 ಸೆಪ್ಟೆಂಬರ್ 2019, 12:08 IST
ಅಕ್ಷರ ಗಾತ್ರ

ದಾವಣಗೆರೆ: ಮೂರು ತಿಂಗಳ ಹಿಂದೆ ಆಲಿಕಲ್ಲು ಸಹಿತ ಸುರಿದ ಮಳೆಗೆ ಭತ್ತ ಬೆಳೆ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ದೊರಕಿಲ್ಲ. ಪರಿಹಾರಕ್ಕಾಗಿ ಕಾದು ಕುಳಿತ ಅನ್ನದಾತನಿಗೆ ನಿರಾಸೆ ಮೂಡಿಸಿದೆ.

ಮೇಯಲ್ಲಿ ಸುರಿದಿದ್ದ ಈ ಮಳೆಗೆ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ಮತ್ತು ಹರಿಹರ ತಾಲ್ಲೂಕುಗಳಲ್ಲಿ 1,700 ಹೆಕ್ಟೇರ್‌ ಭತ್ತ ಹಾನಿಯಾಗಿತ್ತು. ಕೂಡಲೇ ಪರಿಹಾರ ನೀಡುವುದಾಗಿ ಆಗ ಈ ಸ್ಥಳಗಳಿಗೆ ಭೇಟಿ ನೀಡಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ಭರವಸೆ ನೀಡಿದ್ದರು.

‘ನನ್ನ ಆರು ಎಕರೆ ಅಲ್ಲದೇ ಬೇರೆಯವರ ಆರು ಎಕರೆ ಗದ್ದೆಯನ್ನು ಲಾವಣಿ ಹಾಕಿಕೊಂಡಿದ್ದೆ. ಅದರಲ್ಲಿ ಭತ್ತ ಬೆಳೆದಿದ್ದೆ. ಇನ್ನೇನು ಕಟಾವಿಗೆ ವಾರ ಇದೆ ಎನ್ನುವ ಸಮಯದಲ್ಲಿ ಮೇ ತಿಂಗಳಲ್ಲಿ ಆಲಿಕಲ್ಲು ಸಹಿತ ಮಳೆ ಬಂದಿದ್ದರಿಂದ ಭತ್ತ ನೀರೊಳಗೆ ಮಲಗಿ ಬಿಟ್ಟಿತು. ಎಕರೆಗೆ 40ರಿಂದ 45 ಚೀಲ ಬರಬೇಕಿದ್ದ ಭತ್ತ ಸುಮಾರು 15 ಚಿಲಗಳಷ್ಟೇ ದಕ್ಕಿತು. ಇದರಿಂದ ಸುಮಾರು ₹ 2.5 ಲಕ್ಷ ಹೊರೆ ಮೈಮೇಲೆ ಬಿದ್ದಿದೆ’ ಎಂದು ಮಲ್ಲನಾಯಕನಹಳ್ಳಿಯ ರೈತ ಎಂ.ಆರ್‌. ರುದ್ರಪ್ಪ ಅಳವತ್ತುಕೊಂಡರು.

ಸರ್ಕಾರ ನಷ್ಟ ಪರಿಹಾರವನ್ನು ಬಹಳ ಕಡಿಮೆ ನಿಗದಿಗೊಳಿಸಿದೆ. ಅದೂ ಬಂದಿಲ್ಲ. ನಷ್ಟ ಪರಿಹಾರವನ್ನು ಹೆಚ್ಚಿಸಿ ಕೂಡಲೇ ನೀಡಬೇಕು ಎಂಬುದು ಅವರ ಒತ್ತಾಯವಾಗಿದೆ.

ಆಲಿಕಲ್ಲು ಮಳೆಗೆ ಭತ್ತದ ಪೈರುಗಳು ಹೋದವು. ಅದರ ಜತೆಗೆ ಬಾಳೆ ತೋಟಗಳೂ ಹಾಳಾದವು. ತೆಂಗಿನ ಮರಗಳಿಗೂ ತೊಂದರೆಯಾಗಿದೆ. ಶಾಸಕರೂ ಸೇರಿ ವಿವಿಧ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ನೋಡಿ ಫೋಟೊ ತೆಗೆಸಿಕೊಂಡು ಹೋಗಿದ್ದಷ್ಟೇ ಬಂತು. ಯಾವುದೇ ಪರಿಹಾರ ಬಂದಿಲ್ಲ ಎಂದು ಮಲೇಬೆನ್ನೂರು ಶ್ರೀನಿವಾಸನಗರ ವೆಂಕಟಪ್ಪ ಬೇಸರ ವ್ಯಕ್ತಪಡಿಸಿದರು.

ಈ ಬಾರಿ ಮಳೆ ತಡವಾಗಿ ಬಂದಿದ್ದರಿಂದ ಭದ್ರಾ ಜಲಾಶಯದಿಂದ ನೀರು ಬಿಡಲು ತಡವಾಗಿ ನಿರ್ಧರಿಸಿದ್ದರಿಂದ ಭತ್ತ ಬೆಳೆಯಲು ಇನ್ನಾಗುವುದಿಲ್ಲ ಎನ್ನುತ್ತಾರೆ ಅವರು.

‘ಶೀಘ್ರ ಪರಿಹಾರ’

ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಆಲಿಕಲ್ಲು ಮಳೆಗೆ ತೊಂದರೆ ಆಗಿರುವುದು ನಿಜ. ಅವುಗಳ ಕಡತ ಪರಿಶೀಲನೆ ಮುಗಿದಿದೆ. ಇನ್ನೊಂದೆರಡು ವಾರಗಳಲ್ಲಿ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹೆಕ್ಟೇರ್‌ಗೆ ₹ 13,500 ಅಂದರೆ ಎಕರೆಗೆ ₹ 5,400 ಪರಿಹಾರ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT