ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಬಂಪರ್‌ ಬೆಳೆ ನಿರೀಕ್ಷೆ

ಸೋಮವಾರಪೇಟೆ ತಾಲ್ಲೂಕಿನಾದ್ಯಂತ ಉತ್ತಮ ಮುಂಗಾರು
Last Updated 20 ಆಗಸ್ಟ್ 2021, 2:57 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನಾದ್ಯಂತ ಈ ಬಾರಿ ಮುಂಗಾರು ಮಳೆ ಉತ್ತಮ ವಾಗಿ ಬಂದಿದ್ದರಿಂದ ಶೇ 90 ರಷ್ಟು ಭತ್ತ ನಾಟಿ ಕಾರ್ಯ ಮುಗಿದಿದ್ದು, ರೈತರು ಬಂಪರ್‌ ಬೆಳೆ ನಿರೀಕ್ಷೆಯಲ್ಲಿದ್ದಾರೆ.

ಕೆಲ ವರ್ಷಗಳಿಂದ ಜೂನ್ ಮೊದಲ ವಾರದಲ್ಲಿ ಸರಿಯಾಗಿ ಮಳೆ ಆಗದಿದ್ದರಿಂದ, ಭತ್ತದ ಕೃಷಿಗೆ ಹಿನ್ನಡೆ ಆಗುತ್ತಿತ್ತು. ಈ ಬಾರಿ ಪ್ರಾರಂಭದಿಂದಲೇ ಉತ್ತಮ ಮಳೆಯಾಗುತ್ತಿದೆ. ಚಿಕ್ಲಿಹೊಳೆ ಜಲಾಶಯ ಮತ್ತು ಕುಶಾಲನಗರ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ 2,400 ಹೆಕ್ಟೇರ್ ಹಾಗೂ ಇತರೆ 9,600 ಹೆಕ್ಟೇರ್ ಪ್ರದೇಶ ಸೇರಿ ಒಟ್ಟು 12 ಸಾವಿರ ಹೆಕ್ಟೇರ್ ಭತ್ತ ಕೃಷಿಗಾಗಿ ಮೀಸಲಾಗಿದೆ.

‘ಶಾಂತಳ್ಳಿ ಹೋಬಳಿಯಾದ್ಯಂತ ಬಿರುಸಿನ ಮಳೆ ಸುರಿಯುತ್ತಿದೆ. ಹೀಗಾಗಿ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ, ಶಾಂತಳ್ಳಿ, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭತ್ತ ನಾಟಿ ಕಾರ್ಯ ಯಶಸ್ವಿಯಾಗಿದೆ. ಭಾರಿ ಮಳೆ ಸುರಿದ ಸಂದರ್ಭ ಕೆಲವೆಡೆ ಭತ್ತದ ಗದ್ದೆಗೆ ಹೊಳೆ ನೀರು ತುಂಬಿ ನಷ್ಟವಾಗಿತ್ತು. ನಂತರ ಅದನ್ನು ಸರಿಪಡಿಸಲಾಗಿದೆ’ ಎಂದು ಕೃಷಿಕ ಗರ್ವಾಲೆಯ ಪಳಂಗಪ್ಪ ಹೇಳಿದರು.

ಹವಾಮಾನ ವೈಪರೀತ್ಯದಿಂದ ಭತ್ತದ ಇಳುವರಿ ಕಡಿಮೆ ಹಾಗೂ ಲಾಭದಾಯಕ ಅಲ್ಲ ಎಂದು ನಂಬಿದ ಬಹಳಷ್ಟು ರೈತರು ತಮ್ಮ ಗದ್ದೆಗಳನ್ನು ಕಾಫಿ, ಅಡಿಕೆ, ಬಾಳೆ, ಶುಂಠಿ ಸೇರಿದಂತೆ ಇನ್ನಿತರೆ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಕೆಲವರು ಪಾಳು ಬಿಟ್ಟಿದ್ದಾರೆ. ನಿಗದಿತ ಯೋಜನೆಯಂತೆ ಭತ್ತದ ಕೃಷಿ ತಾಲ್ಲೂಕಿನಲ್ಲಿ ನಡೆಯುತ್ತಿಲ್ಲ ಎಂಬ ಮಾತು ರೈತರಿಂದ ಕೇಳಿಬರುತ್ತಿದೆ.

‘ಭತ್ತದ ಕೃಷಿಯನ್ನು ರೈತರಿಗೆ ಲಾಭದಾಯಕ ಬೆಳೆಯನ್ನಾಗಿ ಮಾಡಬೇಕಿದೆ. ಕೃಷಿಯಿಂದ ಆದಾಯ ಕಡಿಮೆ ಎಂಬ ನಿರ್ಲಕ್ಷ್ಯ ಭಾವನೆ ಜನರಲ್ಲಿ ಬಂದಿದೆ. ಭತ್ತ ಕೃಷಿಯನ್ನು ಉಳಿಸಲು ಸರ್ಕಾರ ರೈತರಿಗೆ ಸಹಾಯಧನ ನೀಡಬೇಕು. ತಪ್ಪಿದಲ್ಲಿ ಭತ್ತದ ಕೃಷಿಯೇ ಜಿಲ್ಲೆಯಿಂದ ಕಣ್ಮರೆಯಾಗಬಹುದು’ ಎಂದು ಕಿತ್ತೂರು ಗ್ರಾಮದ ಧರ್ಮಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹೆಚ್ಚಿನವರು ಗದ್ದೆಯನ್ನು ಪಾಳುಬಿಟ್ಟಿದ್ದಾರೆ. ಇದು ಮುಂದಿನ ದಿನಗಳಲ್ಲಿ ಆಹಾರದ ಕೊರತೆಗೆ ಕಾರಣವಾಗಬಹುದು ಎಂದು ರೈತರು ಆತಂಕ ಪಡುತ್ತಾರೆ

‘ಪಾಳು ಬಿಟ್ಟಿರುವ ಜಮೀನಿನಲ್ಲಿ ಭತ್ತ ಬೆಳೆಯಬೇಕಿದೆ. ಇದರಿಂದಾಗಿ ಅಂತರ್ಜಲವೂ ಹೆಚ್ಚಾಗುತ್ತದೆ. ಕೃಷಿ ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಗದ್ದೆಗಳನ್ನು ಪಾಳು ಬಿಡದೆ, ಕೃಷಿ ಚಟುವಟಿಕೆ ನಡೆಸಿದಲ್ಲಿ ನಮಗೂ ಮತ್ತು ಮಕ್ಕಳ ಜೀವನಕ್ಕೆ ಸಹಕಾರಿ ಆಗಲಿದೆ’ ಎಂದು ಕೃಷಿಕ ಮೋಹನ್‌ ಕುಮಾರ್ ಸಲಹೆ ನೀಡುತ್ತಾರೆ.

‘ಸರ್ಕಾರ ಪ್ರಸಕ್ತ ಸಾಲಿನಲ್ಲಿ ಹೈಬ್ರಿಡ್ ಮತ್ತು ಸಾಮಾನ್ಯ ತಳಿಯ ಭತ್ತದ ಬೀಜ ಹಾಗೂ ಗೊಬ್ಬರನ್ನು ಸಹಾಯಧನದ ಯೋಜನೆಯಲ್ಲಿ ವಿತರಿಸಿದೆ. ಈ ಬಾರಿ ಮುಂಗಾರು ಮಳೆ ಭತ್ತದ ಕೃಷಿಗೆ ಆಶಾದಾಯಕವಾಗಿದ್ದು, ಉತ್ತಮ ಫಸಲನ್ನು ನಿರೀಕ್ಷಿಸಬಹುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಯಾದವ್ ಬಾಬು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT