ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕು ಚಲಾಯಿಸಿ–ರಿಯಾಯಿತಿ ಪಡೆಯಿರಿ

Last Updated 11 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾರಾಂತ್ಯದ ಮೋಜಿನ ಗುಂಗಿನಲ್ಲಿರುವ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಹೋಟೆಲ್‌, ರೆಸ್ಟೋರೆಂಟ್‌, ಚಲನಚಿತ್ರ ಮಂದಿರಗಳು ಹಾಗೂ ಶಿಕ್ಷಣ ಸಂಸ್ಥೆಗಳು ಆಕರ್ಷಕ ಕೊಡುಗೆಗಳನ್ನು ‍ಪ್ರಕಟಿಸಿವೆ.

ವಾರಾಂತ್ಯಗಳಲ್ಲಿ ಮತದಾನ ನಡೆದ ದಿನಗಳಲ್ಲಿ ನಗರದಲ್ಲಿ ಮತಗಟ್ಟೆಗೆ ಬರುವವರ ಪ್ರಮಾಣ ಗಣನೀಯವಾಗಿ ಕಡಿಮೆಯಾದ ಉದಾಹರಣೆಗಳಿವೆ. ಈ ಬಾರಿಯೂ ಮತದಾನ ಶನಿವಾರ ನಿಗದಿಯಾಗಿದೆ. ಹಾಗಾಗಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಈ ಉಪಕ್ರಮಕ್ಕೆ ಮುಂದಾಗಿವೆ.

ವಾಸುದೇವ ಅಡಿಗಾಸ್‌ ಹೋಟೆಲ್‌ನಲ್ಲಿ ಉಚಿತ ಕಾಫಿ ನೀಡಲಾಗುತ್ತದೆ. ಮತದಾನ ಮಾಡಿದವರು ಬೆರಳಿಗೆ ಶಾಯಿ ಹಾಕಿರುವ ಗುರುತನ್ನು ತೋರಿಸಿ ರಿಯಾಯಿತಿ ಪಡೆಯಬಹುದು. ಕೆಲವು ಹೋಟೆಲ್‌ಗಳು ಶೇ 5ರಿಂದ 10ರಷ್ಟು ರಿಯಾಯಿತಿ ಪ್ರಕಟಿಸಿವೆ. ನಿಸರ್ಗ ಹೋಟೆಲ್‌ನಲ್ಲಿ ಮೊದಲ ಮತದಾರರಿಗೆ ಉಚಿತವಾಗಿ ದೋಸೆ ನೀಡಲಾಗುತ್ತದೆ. ಬಳಿಕ ಬಂದವರಿಗೆ ಉಚಿತ ಕಾಫಿ ನೀಡಲಾಗುತ್ತದೆ.

‘ಕೆಲವು ಹೋಟೆಲ್‌ಗಳಲ್ಲಿ ರಿಯಾಯಿತಿ ನೀಡುತ್ತಿರುವುದು ನಿಜ. ಆದರೆ, ಹೋಟೆಲ್‌ ಮಾಲೀಕರ ಸಂಘದಿಂದ ಅಂತಹ ನಿರ್ಧಾರ ತೆಗೆದುಕೊಂಡಿಲ್ಲ. ಅನೇಕ ಗ್ರಾಹಕರು ಉಚಿತ ಸೇವೆಯನ್ನು ಇಷ್ಟಪಡುವುದೂ ಇಲ್ಲ. ಕಡ್ಡಾಯವಾಗಿ ಮತದಾನ ಮಾಡಿ ಎಂದು ಸಂಘಟನೆ ವತಿಯಿಂದ ಎಲ್ಲ ಹೋಟೆಲ್‌ಗಳಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ’ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್‌ ತಿಳಿಸಿದರು.

‘ಪರವೂರಿನ ಸಾಕಷ್ಟು ಮಂದಿ ಸಿಬ್ಬಂದಿ ಇದ್ದಾರೆ. ತಮ್ಮ ಹಕ್ಕು ಚಲಾಯಿಸಲು ಅವರಿಗೆ ರಜೆ ನೀಡಲಾಗಿದೆ. ಉಳಿದವರಿಗೆ ಮತ ಚಲಾಯಿಸಲು ಹೋಗಿ ಬರಲು ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಸಂಘದ ವೀರೇಂದ್ರ ಎನ್‌. ಕಾಮತ್‌ ತಿಳಿಸಿದರು.

ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಪಠ್ಯಕ್ರಮದ ಹಲವು ಶಾಲೆಗಳೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಮತ ಚಲಾಯಿಸಿದ ಬಗ್ಗೆ ಪೋಷಕರಿಬ್ಬರು ಗುರುತು ತೋರಿಸಿದರೆ ಶುಲ್ಕದಲ್ಲಿ ರಿಯಾಯಿತಿ ಕೊಡಲಾಗುತ್ತದೆ ಎಂದು ಪ್ರಕಟಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT