ಕಾಳುಮೆಣಸಿನ ಕೈಪಿಡಿ

7

ಕಾಳುಮೆಣಸಿನ ಕೈಪಿಡಿ

Published:
Updated:
Deccan Herald

ಸಂಬಾರ ಉತ್ಪನ್ನ ಕಾಳುಮೆಣಸು ಕುರಿತು ಇಂಗ್ಲಿಷ್‌ನಲ್ಲಿ ಸಾಕಷ್ಟು ಕೃತಿಗಳಿವೆ. ಅಕಾಡೆಮಿಕ್ ಹಂತದಲ್ಲೂ ಪುಸ್ತಕಗಳು ಪ್ರಕಟವಾಗಿವೆ. ಆದರೆ, ಕನ್ನಡದಲ್ಲಿ ಕೃತಿಗಳಿರುವುದು ತುಂಬಾ ಕಡಿಮೆ. ಲೇಖಕ ಅಚ್ಚನಹಳ್ಳಿ ಸುಚೇತನ ‘ಕಪ್ಪು ಬಂಗಾರ’ ಕೃತಿ ಮೂಲಕ ಆ ಕೊರತೆಯನ್ನು ನೀಗಿಸಿದಂತೆ ಕಾಣುತ್ತಿದೆ.

‘ಕಪ್ಪು ಬಂಗಾರ’ ಪುಸ್ತಕದ ಅಡಿ ಶೀರ್ಷಿಕೆ ಹೇಳುವಂತೆ ಈ ಕೃತಿಯಲ್ಲಿ ಕಾಳುಮೆಣಸಿನ ವಿಶ್ವರೂಪವನ್ನೇ ಲೇಖಕರು ಪರಿಚಯಿಸಿದ್ದಾರೆ. ಈ ಸಂಬಾರ ಹುಟ್ಟಿದ್ದು, ಬೆಳೆದಿದ್ದು ವಿದೇಶಗಳಿಂದ, ನಮ್ಮ ದೇಶದವರೆಗೆ ವಿಸ್ತಾರಗೊಂಡಿದ್ದು, ರೋಮ್‌, ಚೀನಾದಿಂದ ಬ್ರಿಟಿಷರವರೆಗೆ, ಕೇರಳದಿಂದ ಹಿಡಿದು ತಮಿಳುನಾಡು, ಕರ್ನಾಟಕದ ಮಲಬಾರ್‌ ತೀರ ಮತ್ತು ಕಾಫಿ ಎಸ್ಟೇಟ್‌ವರೆಗೆ ಕಾಳುಮೆಣಸು ಕ್ರಮಿಸಿರುವ ಎಲ್ಲ ಹೆಜ್ಜೆಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

ಕೃತಿಯಲ್ಲಿ ಇತಿಹಾಸದಿಂದ ಆರಂಭವಾಗಿ, ಸಸ್ಯಾಭಿವೃದ್ಧಿ, ತೋಟದ ನಿರ್ವಹಣೆ, ಜಾಗದ ಆಯ್ಕೆ, ಭೂಮಿ ಸಿದ್ಧತೆ, ನಾಟಿ ಕ್ರಮ, ಬೇಸಾಯ ಕ್ರಮ, ಗೊಬ್ಬರದ ನಿರ್ವಹಣೆ, ಬಳ್ಳಿಯ ಬೆಳವಣಿಗೆ, ಕೊಯ್ಲು, ಕೊಯ್ಲೋತ್ತರ ಸಂಸ್ಕರಣೆ, ಮಾರುಕಟ್ಟೆ, ಬಳಕೆ, ಔಷಧೋಪಚಾರದ ಜತೆಗೆ ದೇಶ, ವಿದೇಶಗಳ ವೈವಿಧ್ಯಮಯ ತಳಿಗಳನ್ನು ಪರಿಚಯಿಸಲಾಗಿದೆ. ಸಸ್ಯ ಸಂರಕ್ಷಣೆ ಮತ್ತು ರೋಗಗಳ ನಿರ್ವಹಣೆ ತಾಂತ್ರಿಕ ವಿಷಯವಾದರೂ, ಅದನ್ನು ಸರಳ ನಿರೂಪಣೆಯಲ್ಲಿ ವಿವರಿಸಿರುವುದರಿಂದ ಓದುಗರಿಗೆ ಸುಲಭವಾಗಿ ಅರ್ಥವಾಗುತ್ತದೆ. ಇದರ ಜತೆಗೆ ಯಾವ್ಯಾವ ದೇಶಗಳಲ್ಲಿ ಕಾಳುಮೆಣಸಿನ ಉತ್ಪಾದನೆ, ಮಾರುಕಟ್ಟೆ ಹೇಗಿದೆ ಎಂಬುದನ್ನು ವಿವರಿಸಿರುವ ಮಾಹಿತಿ, ಮೆಣಸು ರಫ್ತುಮಾಡುವವರಿಗೆ ಅನುಕೂಲವಾಗಬಹುದು.

ಅಡುಗೆಗಾಗಿ, ಔಷಧವಾಗಿ ಬಳಕೆಯಾಗುವ ಕಾಳುಮೆಣಸಿನ ಕುರಿತು ಚರಕ ಸಂಹಿತೆಯಲ್ಲಿ ಉಲ್ಲೇಖಿಸಿರುವುದನ್ನು ಲೇಖಕರು ಪ್ರಸ್ತಾಪಿಸಿದ್ದಾರೆ. ಕಾಳುಮೆಣಸು ಯಾವ ಬೆಳೆ ಜತೆ ಸಂಗಾತಿ ಬೆಳೆಯಾಗುತ್ತದೆ, ಬೆಳೆಗಾರರು ಅನುಸರಿಸುವ ಸುಲಭ ಹಾಗೂ ತಾಂತ್ರಿಕ ವಿಧಾನಗಳು, ಬೆಳೆಗಾರರ ಯಶೋಗಾಥೆಗಳನ್ನು ಕೃತಿಯ ಕೊನೆಯಲ್ಲಿ ಉಲ್ಲೇಖಿಸಲಾಗಿದೆ. ಬಣ್ಣ ಬಣ್ಣದ ಚಿತ್ರಗಳು ಪುಸ್ತಕದ ಅಂದವನ್ನು ಹೆಚ್ಚಿಸಿವೆ. ಮೂಡಿಗೆರೆ ತಾಲ್ಲೂಕು ದೇವವೃಂದದ ಕೃಷಿಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಪುಸ್ತಕದ ಬೆಲೆ:₹350. ಕೃತಿ ಕುರಿತ ಹೆಚ್ಚಿನ ಮಾಹಿತಿಗಾಗಿ, ಪ್ರಕಾಶಕರು, ಕೃಷಿಕ, ದೇವವೃಂದ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. ದೂ: 08263–239190, 9945277806

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !