ಗುರುವಾರ , ಆಗಸ್ಟ್ 22, 2019
22 °C
ಕೈತೋಟದ ನೆಲಮೂಲ ಜ್ಞಾನ

ಮೆಣಸಿ ಹಿತ್ತಲು

Published:
Updated:
Prajavani

ಮನೆಯ ಸಮೀಪ ಕೈತೋಟ ಮಾಡಲು ಜಾಗವಿಲ್ಲದಾಗ, ಜಮೀನಿನಲ್ಲಿ ಗಿಡ-ಮರಗಳ ನೆರಳು, ಸಾಕು ಪ್ರಾಣಿಗಳ ಮಸ್ಯೆಗಳಿಗೆ ಪರಿಹಾರವಾಗಿ ವಿಕಾಸಗೊಂಡ ಮಾದರಿಯೇ ‘ಮೆಣಸಿ ಹಿತ್ತಲು’. ಇದನ್ನು ಮೆಣಸಿನ ಹಿತ್ತಲೂ ಎಂದೂ ಕರೆಯುತ್ತಾರೆ. ಮೈಸೂರು, ಹೆಗ್ಗಡದೇವನ ಕೋಟೆ ಭಾಗದಲ್ಲಿ ಈಗಲೂ ಅಲ್ಲಲ್ಲಿ ಈ ಮಾದರಿಯ ತೋಟಗಳನ್ನು ಕಾಣುತ್ತವೆ.

ಇದು ಕೇವಲ ಮೆಣಸಿನಕಾಯಿ ಬೆಳೆಯುವ ತೋಟವಷ್ಟೇ ಅಲ್ಲ. ಅದರ ಜತೆಗೆ ಬೇರೆ ತರಕಾರಿಗಳನ್ನು ಬೆಳೆಸುತ್ತಾರೆ. ಮೆಣಸಿನಕಾಯಿ ಮುಖ್ಯ ಬೆಳೆಯಾಗಿರುವುದರಿಂದ ಆ ಹೆಸರು ಬಂದಿದೆ. ಮಹಿಳೆಯರು ಹೊಲಗಳಲ್ಲಿ ಬೆಳಿಗ್ಗೆ ಸಂಜೆವರೆಗೂ ದುಡಿಯುತ್ತಾರೆ. ಹೀಗಾಗಿ ಮನೆಗೆ ಬೇಕಾಗುವ ತರಕಾರಿಗಳನ್ನು ಇಲ್ಲೇ ಬೆಳೆಸುತ್ತಾರೆ. ಇದು ಕೈತೋಟ ಕುರಿತ ಹಳ್ಳಿಗರಲ್ಲಿರುವ ನೆಲಮೂಲ ಜ್ಞಾನ.

ಸ್ಥಳದ ಆಯ್ಕೆ

ಮೆಣಸಿನ ಹಿತ್ತಲು ಮಾಡಲು ಹೊಲದ ಮೂಲೆಯಲ್ಲಿ ಜಾಗ ಆಯ್ಕೆ ಮಾಡುತ್ತಾರೆ. ಸ್ಥಳದ ಆಯ್ಕೆ, ಹೊಲದಲ್ಲಿನ ಬೆಳೆ ಸಂಯೋಜನೆಯನ್ನೂ ಆಧರಿಸಿರುತ್ತದೆ. ಕೆಲವರು ಇದನ್ನು ಮಾಡಲು ಪಾಳು ಭೂಮಿ ಆಯ್ಕೆ ಮಾಡಿಕೊಂಡರೆ, ಕೆಲವರು ಫಲವತ್ತಾದ ಕೃಷಿ ಭೂಮಿ ಆಯ್ದುಕೊಳ್ಳುತ್ತಾರೆ. ಕೆಲವು ರೈತರು ಪ್ರತಿ ವರ್ಷ ಹಿತ್ತಿಲಿನ ಜಾಗ ಬದಲಿಸುತ್ತಿರುತ್ತಾರೆ.

ಭೂಮಿ ಸಿದ್ಧತೆ

ಏಪ್ರಿಲ್-ಮೇ ತಿಂಗಳಲ್ಲಿ ಜಾಗ ಆಯ್ಕೆ ಮಾಡಿ, ಭೂಮಿ ಹದ ಮಾಡುತ್ತಾರೆ. ಕೃಷಿ ತ್ಯಾಜ್ಯ, ಬೇಲಿಯಲ್ಲಿ ಸಿಗುವ ಸೊಪ್ಪು ಎಲ್ಲ ಮಣ್ಣಿಗೆ ಸೇರಿಸಿ ಉಳುಮೆ ಮಾಡುತ್ತಾರೆ. ಕೊಟ್ಟಿಗೆ ಗೊಬ್ಬರವನ್ನೂ ಸೇರಿಸುತ್ತಾರೆ. ಒಂದು ಹದ ಮಳೆ ಬರುವವರೆಗೂ ಮಾಗಲು ಬಿಡುತ್ತಾರೆ. ಭರಣಿ, ಕೃತ್ತಿಕಾ ಮಳೆ ಮತ್ತು ಮುಂಗಾರಿನ ಮೃಗಶಿರ, ಆರಿದ್ರಾ ಮಳೆ ಬಂದಾಗ ಬದನೆ, ಟೊಮೆಟೊ, ಮೆಣಸಿನ ಸಸಿಗಳನ್ನು ನಾಟಿ ಮಾಡುತ್ತಾರೆ. ಈ ಪ್ರಮುಖ ಬೆಳೆಗಳ ಜತೆಗೆ ದೀರ್ಘಕಾಲಿಕ, ಅಲ್ಪಕಾಲಿಕ ಬಳ್ಳಿಗಳು, ಸೊಪ್ಪು, ಗೆಣಸುಗಳನ್ನು ಹಾಕುತ್ತಾರೆ. ಚಂಡು ಹೂವು, ಸೇವಂತಿಗೆಯ ಹೂವುಗಳಿರುತ್ತವೆ. ಆರಂಭದಲ್ಲಿ ಉಳುಮೆ ಮಾತ್ರ ನೇಗಿಲಿಂದ ಮಾಡುತ್ತಾರೆ. ಉಳಿದೆಲ್ಲ ಕೆಲಸಗಳು ಕೈಯಲ್ಲಿಂದಲೇ ಮಾಡುತ್ತಾರೆ.

ಜೂನ್ ತಿಂಗಳ ಆರಂಭದಲ್ಲಿ ಮೆಣಸಿನ ಹಿತ್ತಲ ಮಧ್ಯಭಾಗದಲ್ಲಿ ಬದನೆ, ಹಸಿಮೆಣಸಿನಕಾಯಿ ಟೊಮೆಟೊ ಗಿಡಗಳ ಸಸಿಗಳನ್ನು ಸಾಲುಗಳಲ್ಲಿ ನಾಟಿ ಮಾಡುತ್ತಾರೆ. ಜತೆಗೆ ಬೆಂಡೆ, ಗೋರಿ(ಜವಳಿ) ಬೀಜಗಳನ್ನು ಸಾಲುಗಳಲ್ಲಿ ಬಿತ್ತುವುದು ರೂಢಿ. ಇದಾದ ಒಂದೂವರೆ ತಿಂಗಳ ನಂತರ ಅಲ್ಪಕಾಲಿಕ ಸೊಪ್ಪುಗಳಾದ ಹುಳಿಬಸಳೆ, ಕೊತ್ತಂಬರಿ, ಕೀರೆ, ದಂಟು, ಚಕ್ಕೋತವನ್ನು ತೆಳ್ಳಗೆ ಚೆಲ್ಲುತ್ತಾರೆ. ಮೆಣಸಿ ಹಿತ್ತಲಿನ ನಾಲ್ಕು ಅಂಚುಗಳ ಕೆಲವು ಕಡೆ ಏರು ಬದುಗಳನ್ನು ಮಾಡಿ, ಸಿಹಿ ಗೆಣಸಿನ ಬಳ್ಳಿ, ಕೆಲವು ಕಡೆ ಸೌತೆ, ಮಿಣಕಿ, ಹೀರೆ ಬಳ್ಳಿಗಳನ್ನು ಹಬ್ಬಿಸುತ್ತಾರೆ. ಹಿತ್ತಲಿನ ಎಲ್ಲ ಕಡೆ ಮೈಸೂರು ಚೆಂಡು ಹೂವು ಸಸಿಗಳನ್ನು ಜೋಡಣೆ ಮಾಡುತ್ತಾರೆ.

ನಾಟಿ ಬೀಜಗಳ ಬಳಕೆ

ಜೂನ್ ತಿಂಗಳ ಕೊನೆ ವಾರದಿಂದ ಫಸಲು ಆರಂಭವಾಗುತ್ತದೆ. ನವೆಂಬರ್ ತಿಂಗಳವರೆಗೂ ಈ ಮೆಣಸಿ ಹಿತ್ತಲಿನಿಂದ ನಿರಂತರವಾಗಿ ತರಕಾರಿ ಬರುತ್ತಿರುತ್ತದೆ.

ಮೆಣಸಿನ ಹಿತ್ತಲಿಗೆ ಸಾಮಾನ್ಯವಾಗಿ ದೇಸಿ ಬೀಜಗಳನ್ನು ಉಪಯೋಗಿಸುತ್ತಾರೆ. ಬಹುತೇಕ ಬೀಜಗಳನ್ನು ಕಳೆದ ವರ್ಷದ ಮೆಣಸಿನ ಹಿತ್ತಲಿನ ತರಕಾರಿಗಳಿಂದಲೇ ಸಂಗ್ರಹಿಸಿರುತ್ತಾರೆ. ಬೀಜಗಳನ್ನು ಬಿಸಿಲನಲ್ಲಿ ಒಣಗಿಸಿ, ಬೀಜೋಪಚಾರ ಮಾಡಿ, ಶೇಖರಿಸಿಟ್ಟು, ಮುಂದಿನ ವರ್ಷ ಬಳಸುವುದು ರೂಢಿ.

ಸದ್ಯ ಆರ್ಥಿಕ ಬೆಳೆಗಳ ಪ್ರವೇಶದಿಂದಾಗಿ ಮಹಿಳೆಯರಿಗೆ ಕೆಲಸದ ಒತ್ತಡಗಳು ಹೆಚ್ಚಾಗಿವೆ. ಹೀಗಾಗಿ ಮೆಣಸಿನ ಹಿತ್ತಲುಗಳ ವೈವಿಧ್ಯ, ವಿನ್ಯಾಸಗಳು ಕ್ಷೀಣಸಿವೆ. ಈಗಲೂ ಮನೆಯಮಟ್ಟಿನ ತರಕಾರಿ ಬೆಳೆದುಕೊಳ್ಳಲು ಮೆಣಸಿ ಹಿತ್ತಲು ತುಂಬಾ ಸಹಕಾರಿ.

(ಮಾಹಿತಿ ಕೃಪೆ: ಪೀಪಲ್ ಟ್ರೀ, ಬೆಂಗಳೂರು ಪ್ರಕಾಶನದ ‘ಹಿತ್ತಲ ಚಿತ್ತಾರ’ಗಳು ಕೃತಿಯಿಂದ)

Post Comments (+)