‘ಸಹಜ ಕೃಷಿ’ಯ ಅನುಭವ ಕಥನ

7

‘ಸಹಜ ಕೃಷಿ’ಯ ಅನುಭವ ಕಥನ

Published:
Updated:
Prajavani

ನಿವೃತ್ತ ಪ್ರಾಚಾರ್ಯ, ಸಹಜ ಕೃಷಿಕ ಪ್ರೊ.ಶಿವನಂಜಯ್ಯ ಬಾಳೆಕಾಯಿ ಅವರು ತಮ್ಮ ನಾಲ್ಕು ದಶಕಗಳ ಸಹಜ ಕೃಷಿಯಲ್ಲಿ ಕಂಡುಕೊಂಡ ಅನುಭವಗಳನ್ನು ಒಟ್ಟಾಗಿಸಿ ‘ಇದು ಸಹಜ ಕೃಷಿ’ ಕೃತಿ ಪ್ರಕಟಿಸಿದ್ದಾರೆ.

ಸಹಜ ಕೃಷಿಯ ಅನುಭವಗಳ ಕುರಿತು ಈಗಾಗಲೇ ನಾಲ್ಕು ಕೃತಿಗಳನ್ನು ಪ್ರಕಟಿಸಿರುವ ಅವರು, ಈ ಕೃತಿಯಲ್ಲೂ ನಾಲ್ಕು ದಶಕಗಳ ಕೃಷಿ ಪಯಣದ ಜತೆಗೆ, ತಮ್ಮ ಜತೆ ಒಡನಾಡಿದ ವಿಜ್ಞಾನಿಗಳು, ಲೇಖಕರು, ರೈತರು ಮತ್ತು ತಮ್ಮ ತೋಟಕ್ಕೆ ಭೇಟಿ ನೀಡಿದವರೊಂದಿಗೆ ಚರ್ಚಿಸಿದ ವಿಚಾರಗಳನ್ನು ದಾಖಲಿಸಿದ್ದಾರೆ.

ಭಾರತದ ಇಂದಿನ ಕೃಷಿ ಪರಿಸ್ಥಿತಿಯ ವಿವರಣೆಯೊಂದಿಗೆ ಆರಂಭವಾಗುವ ಈ ಕೃತಿಯಲ್ಲಿ ಆಧುನಿಕ ಕೃಷಿಯ ಕರಾಳ ಮುಖಗಳನ್ನು ಲೇಖಕರು ವಿವರಿಸಿದ್ದಾರೆ. ರಾಸಾಯನಿಕ ಕೃಷಿಯ ಪರಿಣಾಮದ ವಿವರಣೆ ನೀಡುತ್ತಲೇ, ಸಾವಯವ ಕೃಷಿಯ ಅರ್ಥ, ಮಹತ್ವ ಮತ್ತು ಅದರ ಪ್ರಸ್ತುತತೆಯನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ‘ಸಾವಯವ ಕೃಷಿ ಎಲ್ಲ ಕೃಷಿ ವಿಧಾನಗಳ ತಾಯಿ’ ಎಂದು ಉಲ್ಲೇಖಿಸುವ ಅವರು, ಸಾವಯವ ಕೃಷಿ ಪದ್ಧತಿ ಕೂಡ ಅವಲಂಬನಾ ರಹಿತ ಕೃಷಿಯೇ. ಆದರೆ, ಅದನ್ನು ಇತ್ತೀಚೆಗೆ ಹೆಚ್ಚು ಬಂಡವಾಳ ತೊಡಗಿಸುವ, ಶ್ರಮಬೇಡಿಕೆಯ ಪದ್ಧತಿಯನ್ನಾಗಿ ಮಾಡಿಕೊಳ್ಳಲಾಗಿದೆ. ಇದನ್ನು ಬದಲಾಯಿಸಿಕೊಂಡರೆ, ಈ ಕೃಷಿ ಸುಲಭವಾಗುತ್ತದೆ’ ಎಂಬ ಸಲಹೆ ನೀಡಿದ್ದಾರೆ.

ಪರ್ಯಾಯ ಕೃಷಿ ವಿಧಾನಗಳಲ್ಲಿ ಸಾವಯವ ಕೃಷಿ ಜತೆಗೆ, ಜೈವಿಕ ಕೃಷಿ, ಸಹಜ ಕೃಷಿ, ನೈಸರ್ಗಿಕ ಕೃಷಿ, ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡಾವಳ ಕೃಷಿ ಪದ್ಧತಿ ಕುರಿತು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಪುಕುವೊಕ ಪ್ರತಿಪಾತಿಸುವ ಸಹಜ ಕೃಷಿ ಮತ್ತು ಸಾವಯವ ಕೃಷಿಯನ್ನು ವಿಶ್ಲೇಷಿಸುತ್ತಾ, ಯಾವುದು ಯಾವ ಪ್ರದೇಶದವರಿಗೆ ಸೂಕ್ತ, ಯಾವ ಬೆಳೆಗೆ ಉಳುಮೆ ರಹಿತ ಕೃಷಿ ಸಾಧ್ಯ ಎಂಬುದನ್ನು ವಿವರಿಸಿದ್ದಾರೆ.

ಮರ ಆಧಾರಿತ ಕೃಷಿ, ಮಿಶ್ರಬೆಳೆ ಪದ್ಧತಿ, ಸಸ್ಯ ಜನ್ಯ ಕೀಟನಾಶಕಗಳ ಬಳಕೆ, ಕಳೆ ನಿರ್ವಹಣೆ, ಕೃಷಿ ಹವಾಮಾನಕ್ಕೆ ತಕ್ಕ ಬೆಳೆ ಬೆಳೆಯುವುದು ಸೇರಿದಂತೆ ಪರಿಸರ ಪೂರಕ ಕೃಷಿ ಕ್ರಮಗಳನ್ನು ವಿವರಿಸುತ್ತಾ, ತಮ್ಮ ತೋಟದ ವಿನ್ಯಾಸವನ್ನೇ ಉದಾಹರಣೆಯಾಗಿ ನೀಡಿದ್ದಾರೆ.

ಬರಗಾಲಕ್ಕೆ ಅನುಸರಿಸಬೇಕಾದ ತಳ ನೀರಾವರಿ ಪದ್ಧತಿ, ಕಡಿಮೆ ನೀರು ಕೇಳುವಂತೆ ತೋಟದ ಮಣ್ಣಿನ ರಕ್ಷಣೆಗೆ ಮುಚ್ಚಿಗೆ ಬೆಳೆಗಳನ್ನು ಬೆಳೆಸುವುದು ಕಾಂಪೋಸ್ಟ್ ತಯಾರಿಕೆ, ಸಾವಯವ ಟಾನಿಕ್‌ಗಳ ತಯಾರಿಕೆ ವಿಧಾನಗಳ ವಿವರವನ್ನು ಕೋಷ್ಠಕ ಸಹಿತ ವಿವರಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ತೋಟದ ಚಟುವಟಿಕೆಗಳ ವಿಡಿಯೊಗಳನ್ನು ಹಾಕುತ್ತಾ, ತೋಟದಲ್ಲಿನ ಬೆಳವಣಿಗೆಗಳನ್ನು ಪೋಸ್ಟ್‌ ಮಾಡುತ್ತಾ, ಅಲ್ಲಿ ಕೃಷಿ ಆಸಕ್ತರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಶಿವನಂಜಯ್ಯ ಅವರು, ಪುಸ್ತಕ ಕೊನೆಯಲ್ಲಿ ಅಂಥದ್ಧೇ ಸಾಮಾನ್ಯ ಪ್ರಶ್ನೆಗಳನ್ನು ಹಾಕಿಕೊಂಡು ಉತ್ತರ ನೀಡಿ ದ್ದಾರೆ. ಇದು ಪುಸ್ತಕ ಓದಿ ಮುಗಿಸುವಾಗ, ಸಹಜ ಕೃಷಿಯ ಬಗ್ಗೆ ಮನದಲ್ಲಿ ಉಳಿಯುವ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.

ಪ್ರಕಾಶನ : ಕದಳಿ ಪ್ರಕಾಶನ, ಚಿಕ್ಕನಾಯ್ಕನಹಳ್ಳಿ

ಬೆಲೆ: ₹150 (ಅಂಚೆ ವೆಚ್ಚ ಪ್ರತ್ಯೇಕ)

ವಿಳಾಸ: ಶಿವನಂಜಯ್ಯ ಬಾಳೇಕಾಯಿ, ಜೆ.ಸಿ.ಪುರ, ಚಿಕ್ಕನಾಯ್ಕನಹಳ್ಳಿ ತಾ.
ತುಮಕೂರು ಜಿಲ್ಲೆ. ದೂ: 9964451421

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !