ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ್ಯಾದ್ರಿ ಪಂಚಮುಖಿ ಕರಾವಳಿಯ ತಗ್ಗು ಪ್ರದೇಶಕ್ಕೆ ಸೂಕ್ತ ಕೆಂಪು ಭತ್ತದ ತಳಿ

Last Updated 23 ಅಕ್ಟೋಬರ್ 2019, 12:08 IST
ಅಕ್ಷರ ಗಾತ್ರ

ಬ್ರಹ್ಮಾವರ: ಕರಾವಳಿ ಪ್ರದೇಶದ ಭತ್ತ ಬೆಳೆಯುವ ಬಯಲು(ನೆರೆ ಪೀಡಿತ)ಗದ್ದೆಗಳು ಬಹುತೇಕ ಸಾಂಪ್ರದಾಯಿಕ ತಳಿಗಳಿಗೆ ಸೀಮಿತವಾಗಿವೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಕಡಿಮೆ ಭತ್ತದ ಇಳುವರಿ ಪಡೆಯುವ ಕೃಷಿಕರಿಗೆ ಪರಿಹಾರ ರೂಪದಲ್ಲಿ ನೆರೆ ಹಾವಳಿಯನ್ನು ತಡೆದು ಬೆಳೆಯಬಲ್ಲ ‘ಸಹ್ಯಾದ್ರಿ ಪಂಚಮುಖಿ’ ಎಂಬ ಕೆಂಪು ಭತ್ತದ ತಳಿಯನ್ನು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿ, ರೈತರಿಗೆ ಬೆಳೆಯಲು ಶಿಫಾರಸ್ಸು ಮಾಡಿದೆ.

ದಪ್ಪ ಗಾತ್ರದ, ಕೆಂಪು ಕಾಳಿನ ಭದ್ರ ಎಂ.ಓ4 ಭತ್ತದ ತಳಿಯನ್ನು ವ್ಯಾಪಕವಾಗಿ ಕರಾವಳಿ ಕರ್ನಾಟಕದಲ್ಲಿ ಮುಂಗಾರಿನ ಅವಧಿಯಲ್ಲಿ ಬೆಳೆಯಲಾಗುತ್ತಿದೆ. ಪ್ರವಾಹ ಪೀಡಿತ ಬಯಲು ಗದ್ದೆಗಳಲ್ಲಿ ಇವು ವಾರಮಾತ್ರ ನೆರೆನೀರಿನಲ್ಲಿ ಮುಳುಗಡೆ ಪುನರುಜ್ಜೀವನ ಗುಣಹೊಂದಿವೆ, ಮುಳುಗಡೆ ಬಳಿಕ ಕಡಿಮೆ ಇಳುವರಿಗೆ ಕಾರಣವಾಗುವ ಗುಣವನ್ನು ಹೊಂದಿದೆ. ಕರಾವಳಿ ಪ್ರದೇಶದಲ್ಲಿ ವಾರ್ಷಿಕವಾಗಿ 300 ಹೆಕ್ಟೇರ್‌ಗಿಂತಲೂ ಅಧಿಕ ಭತ್ತ ಬೆಳೆಯುವ ಪ್ರದೇಶ ನಿರಂತರ ಮಳೆಯ ಕಾರಣ ನೆರೆಪೀಡಿತವಾಗಿದ್ದು, ಈ ಕಾರಣದಿಂದ ರೈತರು ಕಡಿಮೆ ಆದಾಯ ಹೊಂದುವಂತಾಗಿದೆ. ಹೀಗಾಗಿ ಬಯಲು ಗದ್ದೆಯ ಪರಿಸರಕ್ಕೆ ಸೂಕ್ತವಾಗಬಲ್ಲ ಭತ್ತದ ತಳಿಯ ಅಭಿವೃದ್ಧಿಪಡಿಸಲಾಗಿದೆ.ಈ ಪ್ರದೇಶದ ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗಬಲ್ಲ ಮತ್ತು ಹೆಚ್ಚಿನ ಇಳುವರಿ ಸಾಮರ್ಥ್ಯದ ತಳಿಯೇ ‘ಸಹ್ಯಾದ್ರಿ ಪಂಚಮುಖಿ’.

ವೈಜ್ಞಾನಿಕ ವಿವರಣೆ: ಸಹ್ಯಾದ್ರಿ ಮಂಚಮುಖಿ ತಳಿಯ ಬಗ್ಗೆ ಮಾಹಿತಿ ನೀಡಿದ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಶ್ರೀದೇವಿ ಎ.ಜಕ್ಕೇರಾಳ, ‘ ಈ ತಳಿಯು ಇರ್ಗಾ 318-11-6-9 ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದ ತಳಿಯ ಶುದ್ಧ ಆಯ್ಕೆಯಾಗಿದ್ದು, ಬಯಲು ಗದ್ದೆಗಳಿಗೆ ಮುಂಗಾರು ಬೆಳೆಯಾಗಿ ಬೆಳೆಯಲು ಅತ್ಯಂತ ಪ್ರಶಸ್ತವಾಗಿರುತ್ತದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಈ ತಳಿಯು ನಿರಂತರವಾಗಿ ಹೆಕ್ಟೇರ್ ಒಂದಕ್ಕೆ ಸರಾಸರಿ 56 ಕ್ವಿಂಟಲ್‌ ಇಳುವರಿ ಕೊಟ್ಟಿದೆ. ಮುಂಗಾರಿನಲ್ಲಿ ಇದು ಸ್ಥಳೀಯ ಹೋಲಿಕೆ ತಳಿ ಎಂ.ಓ4 ನ (ಹೆಕ್ಟೇರ್ ಒಂದಕ್ಕೆ 48 ಕ್ವಿಂಟಲ್) ಇಳುವರಿಗಿಂತಲೂ ಶೇಕಡ 14 ರಷ್ಟು ಹೆಚ್ಚು ಫಸಲು ನೀಡುತ್ತದೆ. ಹಾಗೆಯೇ ಬಹು ಕ್ಷೇತ್ರ ಪರೀಕ್ಷೆಯಲ್ಲಿ ಹೆಕ್ಟೇರ್ ಒಂದಕ್ಕೆ 55 ಕ್ವಿಂಟಲ್ ಇಳುವರಿ ಕೊಟ್ಟಿದ್ದು ಇದು ಎಂ.ಓ4 ತಳಿಯ (ಹೆಕ್ಟೇರ್ ಒಂದಕ್ಕೆ 44 ಕ್ವಿಂಟಲ್) ಇಳುವರಿಗಿಂತಲೂ ಶೇ 23 ರಷ್ಟು ಹೆಚ್ಚಿನದಾಗಿರುತ್ತದೆ. ರಾಜ್ಯ ಕೃಷಿ ಇಲಾಖೆಯಿಂದ ನಡೆಸಲಾಗಿರುವ 21 ಕ್ಷೇತ್ರ ಪ್ರಯೋಗಗಳಲ್ಲಿ ಸಹ್ಯಾದ್ರಿ ಪಂಚಮುಖಿ ತಳಿಯು ಎಂ.ಓ4 ತಳಿಗಿಂತ ಶೇ 26 ರಷ್ಟು ಅಧಿಕ ಇಳುವರಿ ದಾಖಲಿಸಿದೆ. ಈ ತಳಿಯು ಸ್ಥಳೀಯ ಪ್ರಾಯೋಗಿಕ ತಾಕುಗಳ ಬಯಲು ಗದ್ದೆಗಳಲ್ಲಿ ಅಧಿಕ ಪ್ರದರ್ಶನ ಪ್ರಯೋಗಗಳಲ್ಲಿ ಎಂ.ಓ4 ನ ಇಳುವರಿಗಿಂತ ಶೇ 15 ಮತ್ತು ರೈತರ 50 ಹೆಕ್ಟೇರ್‌ಗಿಂತಲೂ ಅಧಿಕ ಪ್ರದರ್ಶನ ತಾಕುಗಳಲ್ಲಿ ಶೇ 26ಕ್ಕಿಂತಲೂ ಹೆಚ್ಚು ಇಳುವರಿಯನ್ನು ಕಳೆದ ಎರಡು ವರ್ಷಗಳಲ್ಲಿ ದಾಖಲಿಸಿದೆ’ ಎಂದು ತಿಳಿಸಿದರು.

ತಳಿಯ ಗುಣ: ‘ಹಸಿರು ಎಲೆಗಳುಳ್ಳ, ಎತ್ತರ ನಿಲುವನ್ನು ಹೊಂದಿದ ಈ ತಳಿಯಲ್ಲಿ ಹೆಚ್ಚಿನ ತೆಂಡೆಗಳನ್ನು ಕಾಣಬಹುದಾಗಿದೆ. ಇದು ಮಧ್ಯಮಾವಧಿ ತಳಿಯಾಗಿರುವುದರಿಂದ ಬಿತ್ತಿದ ಸುಮಾರು 130ರಿಂದ 135 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಈ ತಳಿಯನ್ನು ಕರಾವಳಿ ಭಾಗದ ಬಯಲು ಗದ್ದೆಗಳಲ್ಲಿ ಮತ್ತು ಮುಂಗಾರು ಬೆಳೆಯಾಗಿ ಬೆಳೆಯಲು ಶಿಫಾರಸು ಮಾಡಲಾಗಿದೆ. ಹುಲ್ಲಿನ ಇಳುವರಿಯು ಅಧಿಕವಾಗಿದೆ ಮತ್ತು ಈ ತಳಿಯು ಕೀಟ ಬಾಧೆಯನ್ನು ತಡೆದು ಬೆಳೆಯುವಂತಹ ಸಾಮರ್ಥ್ಯ ಹೊಂದಿದೆ. ಬೆಂಕಿ ಮತ್ತು ಕಂದು ಮಚ್ಚೆ ರೋಗಕ್ಕೆ ಶೀಘ್ರ ಪ್ರತಿರೋಧವನ್ನು ಹೊಂದಿದೆ. ಈ ತಳಿಯಲ್ಲಿ ಜೊಳ್ಳು ಕಡಿಮೆ, ಭತ್ತ ಪುಷ್ಟಿದಾಯಕವಾಗಿದ್ದು, ಪ್ರತಿ ಹೆಕ್ಟೇರ್‌ಗೆ ಸುಮಾರು 50ರಿಂದ 55 ಕ್ವಿಂಟಲ್ ಭತ್ತದ ಇಳುವರಿಯನ್ನು ಪಡೆಯಬಹುದು’ ಎಂದು ಶ್ರೀದೇವಿ ತಿಳಿಸಿದರು.

ವಿಶೇಷತೆ: ಕೆಂಪು ಭತ್ತದ ಈ ತಳಿಯು ನೋಡಲು ಆಕರ್ಷಣೀಯವಾಗಿದ್ದು, ಅನ್ನ ಬೇಯಿಸಲು ಭದ್ರ (ಎಂ.ಓ4) ತಳಿಗೆ ಹೋಲಿಸಿದರೆ ಕಡಿಮೆ ನೀರು ಸಾಕು ಮತ್ತು ಬೇಯಿಸಿದ ಅನ್ನ ಮೃದುವಾಗಿದ್ದು, ಅಲ್ಪ ಪ್ರಮಾಣದ ಪರಿಮಳ ಹೊಂದಿದ್ದು, ಊಟಕ್ಕೆ ರುಚಿಯಾಗಿದೆ. ಈ ತಳಿಯ ಭತ್ತದ ಕಾಳುಗಳು ಭದ್ರ (ಎಂ.ಓ4) ತಳಿಯ ಭತ್ತದಂತೆ ದಪ್ಪ ಮತ್ತು ಮಧ್ಯಮ ಗಾತ್ರ ಹೊಂದಿದ್ದು, ಕುಚಲಕ್ಕಿಗೆ ಯೋಗ್ಯವಾಗಿರುವುದರಿಂದ ಗ್ರಾಹಕರ ಆದ್ಯತೆಯನ್ನು ಹೊಂದಿರುತ್ತದೆ. ನೆರೆಹಾವಳಿಯನ್ನು 8ರಿಂದ 12 ದಿನಗಳವರೆಗೂ ತಡೆದು ಬೆಳೆಯುವ ಸಾಮರ್ಥ್ಯ ಹೊಂದಿದ್ದು, ಮಾಗಿದ ಪೈರು ಕೊಯ್ಲಿಗೆ ವಿಳಂಬವಾದರೂ ಮಳೆ ಗಾಳಿಯಿಂದ ನೆಲಕ್ಕೆ ಬೀಳುವುದಿಲ್ಲ ಹಾಗೂ ಜೈವಿಕ ಮತ್ತು ಅಜೈವಿಕ ಒತ್ತಡಗಳನ್ನೂ ತಡೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಬೇಸಾಯ ಕ್ರಮ: ಈ ತಳಿಯು ಮೇ ತಿಂಗಳ ಕೊನೆ ಮತ್ತು ಜೂನ್ 1 ನೇ ವಾರದಲ್ಲಿ ಬಿತ್ತನೆಗೆ ಸೂಕ್ತವಾಗಿದೆ. ಪ್ರತಿ ಹೆಕ್ಟೇರ್‌ಗೆ 62ಕಿ.ಗ್ರಾಂ ರಸಗೊಬ್ಬರದೊಂದಿಗೆ ಸುಮಾರು 5 ಟನ್ ಹಸಿರೆಲೆ ಮತ್ತು ಕೊಟ್ಟಿಗೆ ಗೊಬ್ಬರವನ್ನು ಉಪಯೋಗಿಸಬಹುದು. 20ಸೆಂ.ಮೀx10 ಸೆಂ.ಮೀ. ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದು.

ಸೂಚನೆ: ಪ್ರತಿ ಗದ್ದೆಗಳಿಗೆ ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಬಿತ್ತನೆಗಾಗಿ ಉಪಯೋಗಿಸಬೇಕೆಂದಿರುವ ಬೀಜವನ್ನು ಉಪ್ಪು ನೀರಿನ ದ್ರಾವಣದಲ್ಲಿ (1:4 ಪ್ರಮಾಣದಲ್ಲಿ) ಹಾಕಿ ಚೆನ್ನಾಗಿ ಕಲಸಬೇಕು. ಮೇಲೆ ತೇಲುತ್ತಿರುವ ಅರ್ಧ ಬಲಿತಿರುವ ಮತ್ತು ಜೊಳ್ಳಾದ ಬೀಜಗಳನ್ನು ಬೇರ್ಪಡಿಸಿ ಗಟ್ಟಿಯಾದ ಬಿತ್ತನೆ ಬೀಜವನ್ನು ಸ್ವಚ್ಛವಾದ ನೀರಿನಲ್ಲಿ ತೊಳೆದು ಬಿತ್ತನೆಗೆ ಉಪಯೋಗಿಸಬೇಕು. 25 ದಿವಸಗಳಿಗೂ ಹೆಚ್ಚು ವಯಸ್ಸಾದ ಪೈರನ್ನು ನಾಟಿಗೆ ಬಳಸುವುದು ಸೂಕ್ತವಲ್ಲ ಮತ್ತು 5 ಸೆಂ.ಮಿ.ಗೂ ಹೆಚ್ಚು ಆಳದಲ್ಲಿ ಪೈರು ನಾಟಿ ಮಾಡಬಾರದು ಎಂದು ತಳಿ ಅಭಿವೃದ್ಧಿ ಪಡಿಸಿದ ವಿಜ್ಞಾನಿ ಶ್ರೀದೇವಿ ಎ.ಜಕ್ಕೇರಾಳ ಪ್ರಜಾವಾಣಿಗೆ ತಿಳಿಸಿದರು.

ದೂರವಾಣಿ 9538200850 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT