ಕೃಷಿ ಭೂಮಿಯಲ್ಲಿ ‘ಏಕನಾಯಕ’ನ ಹೆಜ್ಜೆ

ಮಂಗಳವಾರ, ಏಪ್ರಿಲ್ 23, 2019
31 °C

ಕೃಷಿ ಭೂಮಿಯಲ್ಲಿ ‘ಏಕನಾಯಕ’ನ ಹೆಜ್ಜೆ

Published:
Updated:
Prajavani

ಅರಣ್ಯದಲ್ಲಿ ಬೆಳೆಯುತ್ತಿದ್ದ ಏಕನಾಯಕನ ಬಳ್ಳಿ, ಕಾಡಂಚಿನ ಬೇಲಿ ದಾಟಿ, ಹೊಲಗಳಿಗೆ ಅಡಿಯಿಟ್ಟಿದೆ. ಹೆಚ್ಚು ಶ್ರಮವಿಲ್ಲದೇ ಬೆಳೆಯಬಹುದಾದ ಏಕನಾಯಕ ಬೆಳೆಯನ್ನು ರೈತರು ನೆಚ್ಚಿದ್ದಾರೆ.

ಆಯುರ್ವೇದ ಔಷಧಕ್ಕೆ ಬಳಕೆಯಾಗುವ ಏಕನಾಯಕನ ಬಳ್ಳಿ (salacia) ಮೂಲತಃ ಕಾಡಿನ ಬೆಳೆ. ಅನಾದಿ ಕಾಲದಿಂದ ಆಯುರ್ವೇದದಲ್ಲಿ ಉಲ್ಲೇಖವಿದ್ದ ಈ ಬಳ್ಳಿಯ ಮಹತ್ವ ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ದಶಕದಿಂದೀಚೆಗೆ. ವಿಶೇಷವಾಗಿ ಮಧುಮೇಹ ನಿಯಂತ್ರಣ ಮತ್ತು ಬೊಜ್ಜು ನಿವಾರಣೆಗೆ ಇದು ಬಳಕೆಯಾಗುತ್ತಿದೆ. ಬಳಕೆ ಹೆಚ್ಚಾಗಿ, ಉತ್ಪಾದನೆ ಕಡಿಮೆಯಾದ ಕಾರಣ, ಪಶ್ಚಿಮಘಟ್ಟದ ವಿನಾಶದಂಚಿನಲ್ಲಿರುವ ಸಸ್ಯಗಳ ಸಾಲಿಗೆ ಏಕನಾಯಕ ಸೇರಿಕೊಂಡಿದೆ.

ಅಳಿವಿನಂಚಿನಲ್ಲಿರುವ ಏಕನಾಯಕ ಬಳ್ಳಿಯನ್ನು ಕಾಡಿನಿಂದ ತರಲು ಅರಣ್ಯ ಇಲಾಖೆ ನಿಯಂತ್ರಣ ಹೇರಿದೆ. ಔಷಧ ತಯಾರಿಕೆಗೆ ಈ ಸಸ್ಯ ಬೇಕೇಬೇಕು. ಇದರ ಬೇಡಿಕೆ ಹೆಚ್ಚಿದ ಪರಿಣಾಮ, ರೈತರ ಜಮೀನುಗಳಲ್ಲಿ ಏಕನಾಯಕನ ಬೀಳು ಮೈಚಾಚಿಕೊಳ್ಳಲಾರಂಭಿಸಿದೆ.

ಬೆಳೆಯುವುದು ಹೇಗೆ?
ನೀರು ನಿಲ್ಲದ ಜಾಗ ಇದಕ್ಕೆ ಹೆಚ್ಚು ಸೂಕ್ತ. ಒಂದು ಎಕರೆ ಭೂಮಿಯಲ್ಲಿ 4000ರಿಂದ 4500 ಗಿಡಗಳನ್ನು ನಾಟಿ ಮಾಡ
ಬಹುದು. ಗೇರು, ಮಾವು, ತೆಂಗಿನ ತೋಟದಲ್ಲಿ ಅಂತರ್ ಬೆಳೆಯಾಗಿ ಬೆಳೆಸಿದರೆ, 3500 ರಿಂದ 4000 ಗಿಡ ಬೆಳೆಸಬಹುದು. ಅತ್ಯಂತ ಕಡಿಮೆ ಕೂಲಿ ಕೆಲಸ ಬಯಸುವ ಬೆಳೆಯಿದು.

3X3 ಅಡಿ ಅಂತರದಲ್ಲಿ ನಾಟಿ ಮಾಡುವ ಗಿಡಗಳಿಗೆ ಮೊದಲನೇ ವರ್ಷ ದಿನಬಿಟ್ಟು ದಿನ ನೀರು ಬೇಕು. ನಂತರದ ಮೂರು ವರ್ಷ ವಾರಕ್ಕೆ ಎರಡು ಬಾರಿ ನೀರು ನೀಡಿದರೆ ಸಾಕು. ‘ನಾಲ್ಕನೇ ವರ್ಷ ಕಟಾವಿಗೆ ಬರುವ ಈ ಬೆಳೆಗೆ ಮರುಖರೀದಿ (buy back) ಒಪ್ಪಂದ ಕೂಡ ಮಾಡಿಕೊಳ್ಳಬಹುದು’ ಎನ್ನುತ್ತಾರೆ ಶಿರಸಿ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್.ವಾಸುದೇವ.

ಅಧಿಕ ಮಳೆಯಾಗುವ ಪ್ರದೇಶದಲ್ಲಿ ಬೆಳೆಯುವ ಈ ಬೆಳೆಯನ್ನು ನೀರಾವರಿ ವ್ಯವಸ್ಥೆಯಿ ದ್ದರೆ ಉಳಿದೆಡೆಗಳಲ್ಲೂ ಬೆಳೆಸಬಹುದು. ಈ ಬೆಳೆಗೆ ರೋಗಬಾಧೆಯ ಭೀತಿಯಿಲ್ಲ. ಜಾನುವಾರು ಇದನ್ನು ತಿನ್ನುವುದಿಲ್ಲ. ಕೋತಿಯ ಕಾಟವೂ ಇಲ್ಲ. ಪೊದೆಯಾಗಿ ಬೆಳೆಯುವುದರಿಂದ ಹೆಚ್ಚು ಕಳೆ ಹುಟ್ಟುವುದಿಲ್ಲ. ಸೂರ್ಯನ ಬಿಸಿಲು ಬಿದ್ದಷ್ಟು ಉತ್ತಮ.

‘ಸಸಿಗಳ ಖರೀದಿ, ಅವುಗಳ ಸಾಗಣೆ, ಹನಿ ನೀರಾವರಿ, ನಿರ್ವಹಣೆ ಸೇರಿ ಒಂದು ಎಕರೆಗೆ ಅಂದಾಜು ₹ 1 ಲಕ್ಷ ಬಂಡವಾಳ ತೊಡಗಿಸಿದರೆ, ನಾಲ್ಕನೇ ವರ್ಷಕ್ಕೆ ಕನಿಷ್ಠವೆಂದರೂ ₹ 4.5 ಲಕ್ಷ ಆದಾಯ ಗಳಿಸಬಹುದು. ಮರುಖರೀದಿ ಒಪ್ಪಂದ ವ್ಯವಸ್ಥೆ ಇರುವುದು ಸಕಾರಾತ್ಮಕ ಸಂಗತಿ’ ಎನ್ನುತ್ತಾರೆ ಬೆಳೆಗಾರ ಗಣೇಶ ನೆವ್ರೇಕರ್.

ನಾಲ್ಕನೇ ವರ್ಷಕ್ಕೆ ಗಿಡವನ್ನು ನೆಲದಿಂದ ಕಿತ್ತು ತೆಗೆಯುವ ಮೂಲಕ ಕೊಯ್ಲು ಮಾಡಬೇಕು. ಇದರ ಒಣ ಕಾಂಡ ಹಾಗೂ ಬೇರಿಗೆ ಬೇಡಿಕೆ ಹೆಚ್ಚು. ಈ ಬೆಳೆಯನ್ನು ಬೆಳೆಯುವ ಹಲವಾರು ರೈತರು ಲಾಭದ ಹಾದಿಯಲ್ಲಿದ್ದಾರೆ. ಏಕನಾಯಕ ಗಿಡದ ಜತೆಗೆ, ಮ್ಯಾಪಿಯಾ, ರಕ್ತಚಂದನದಂತಹ ಕಾಡಿನ ಔಷಧ ಸಸ್ಯಗಳನ್ನು ಸಹ ರೈತರು ಉಪಬೆಳೆಯಾಗಿ ಬೆಳೆಸಬಹುದು ಎಂಬುದು ಅವರ ಅಭಿಪ್ರಾಯ.

ಸಂಪರ್ಕ ಸಂಖ್ಯೆ: 9448933680

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !