ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟೆತ್ತಿನ ಬಂಟ

Last Updated 29 ಜುಲೈ 2019, 19:30 IST
ಅಕ್ಷರ ಗಾತ್ರ

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ಅಡರಕಟ್ಟಿಯ ರೈತ ಖಾನಪ್ಪ ಹನಮಂತಪ್ಪ ತಳವಾರ ಒಂಟಿ ಎತ್ತಿನಲ್ಲಿ ವ್ಯವಸಾಯದ ಎಲ್ಲ ಕೆಲಸಗಳನ್ನು ಮಾಡುವಂತಹ ಉಪಕರಣವೊಂದನ್ನು ವಿನ್ಯಾಸಗೊಳಿಸಿದ್ದಾರೆ. ಮಾತ್ರವಲ್ಲ ಎರಡು ವರ್ಷಗಳಿಂದ ಬಳಸುತ್ತಾ, ವ್ಯವಸಾಯದಲ್ಲಿ ಕಾರ್ಮಿಕರ ಖರ್ಚು ಉಳಿಸುವುದು ಹೇಗೆ ಎಂಬುದನ್ನು ಕಂಡುಕೊಂಡಿದ್ದಾರೆ.

ಆ ಉಪಕರಣಕ್ಕೆ ‘ಒಂಟೆತ್ತಿನ ಬಂಟ’ ಎಂದು ಹೆಸರು ಇಟ್ಟಿದ್ದಾರೆ. ಎರಡು ಕೋಲು, ಒಂದು ದಪ್ಪಗಿನ ಕಬ್ಬಿಣದ ಕಂಬಿ, ಎರಡು ಚಕ್ರಗಳನ್ನು ಸೇರಿಸಿ ಉಪಕರಣ ರೂಪಿಸಿದ್ದಾರೆ. ಚಕ್ರ ತಿರುಗಲು ಬೇಕಾದ ಬೇರಿಂಗ್‌ಗಳಿವೆ. ‘ಲಕ್ಷ್ಮೇಶ್ವರದ ಅಂಗಡಿಯಿಂದ ಕಂಬಿ ಖರೀದಿಸಿದೆ. ಉಳಿದ ಎಲ್ಲ ವಸ್ತುಗಳು ಅಲ್ಲಲ್ಲೇ ಸಿಕ್ಕಿದವು. ನನ್ನ ತಲೆಯಲ್ಲಿ ಒಂದು ವಿನ್ಯಾಸವಿತ್ತು. ಅದರ ಪ್ರಕಾರ ಜೋಡಿಸುವಂತೆ ವರ್ಕ್‌ಷಾಪ್‌ನಲ್ಲಿ ಹೇಳಿದೆ. ನಾನು ಹೇಳಿದಂತೆ ಜೋಡಣೆಯಾಯಿತು. ಪರಿಪೂರ್ಣ ಉಪಕರಣ ಸಿದ್ಧವಾಯಿತು’ ಎನ್ನುತ್ತಾ ಉಪಕರಣ ತಯಾರಿಯನ್ನು ಖಾನಪ್ಪ ವಿವರಿಸಿದರು.

ಈ ಉಪಕರಣಕ್ಕೆ ಉಳುಮೆ, ಬಿತ್ತನೆ, ಎಡೆಕುಂಟೆ ಸೇರಿದಂತೆ ಯಾವುದೇ ಚಟುವಟಿಕೆ ಕೈಗೊಳ್ಳಲು ಬೇಕಾದ ಬಿಡಿಭಾಗಗಳನ್ನು ಜೋಡಿಸಬಹುದು. ಹಾಗೆ ಜೋಡಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಸಿದ್ದಾರೆ. ಎಡೆಕುಂಟೆ ಬೇಕಾದರೆ, ಅದಕ್ಕೆ ಬೇಕಾದ ಭಾಗವನ್ನು ಜೋಡಿಸಬಹುದು. ಬಿತ್ತನೆಗಾದರೆ, ಕೂರಿಗೆಯ ಕೊಳವೆಗಳನ್ನು ಜೋಡಿಸಬಹುದು.

‘ಎರಡು ವರ್ಷಗಳಿಂದ ಈ ಉಪಕರಣ ಬಳಸುತ್ತಾ ಎಡೆಕುಂಟೆ ಹೊಡೆಯುತ್ತಿದ್ದೇನೆ. ಬಿತ್ತನೆ ಮಾಡುತ್ತಿದ್ದೇನೆ. ಎರಡು ಎತ್ತುಗಳು ಮಾಡುವಷ್ಟೇ ಕೆಲಸವನ್ನು ಒಂದು ಎತ್ತಿನಿಂದ ಮಾಡಲು ಸಾಧ್ಯವಿದೆ ಎಂಬುದು ನನ್ನ ಅರಿವಿಗೆ ಬಂದಿದೆ. ಎರಡು ಎತ್ತುಗಳನ್ನು ಹೂಡಿಕೊಂಡು ಉಳುಮೆ, ಬಿತ್ತನೆ ಮಾಡುವಾಗ ಆಳುಗಳ ಹೆಚ್ಚಾಗಿ ಬೇಕಾಗಿತ್ತು. ಆದರೆ, ಈ ಉಪಕರಣಕ್ಕೆ ಒಂದು ಎತ್ತು, ಒಂದು ಆಳು ಸಾಕು’ ಎನ್ನುತ್ತಾ ತನ್ನ ಬಂಟನ ಶಕ್ತಿ–ಸಾಮರ್ಥ್ಯವನ್ನು ವಿವರಿಸುತ್ತಾರೆ ಖಾನಪ್ಪ.

ಐಡಿಯಾ ಹೊಳೆದಿದ್ದು ಹೇಗೆ ?

‘ಈ ಬಂಟ’ನನ್ನು ತಯಾರಿಸುವ ಹಿಂದಿನ ಕಥೆ ಏನು’ ಎಂದು ಖಾನಪ್ಪ ಅವರನ್ನು ಕೇಳಿದರೆ, ಒಂದು ಸ್ವಾರಸ್ಯಕರ ಘಟನೆಯೊಂದನ್ನು ತೆರೆದಿಡುತ್ತಾರೆ.

ಖಾನಪ್ಪ ಬಿಎ, ಬಿಇಡಿ ಓದಿ, ಕೆಲ ವರ್ಷ ಖಾಸಗಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಊರಲ್ಲಿ ಜಮೀನು ಇದ್ದಿದ್ದರಿಂದ, ಮೂಲ ವೃತ್ತಿ ಕೃಷಿಗೆ ಮರಳಿದರು. ಆ ವೇಳೆ ಕುಟುಂಬದಲ್ಲಿ ಆಸ್ತಿ ಪಾಲು ಮಾಡಬೇಕಾಗಿ ಬಂತು. ಇವರ ಪಾಲಿಗೆ ಒಂದು ಎತ್ತು, ಐದೂವರೆ ಎಕರೆ ಹೊಲ ಬಂತು. ಒಂದು ಎತ್ತು ಇಟ್ಟುಕೊಂಡು ವ್ಯವಸಾಯ ಮಾಡುವುದು ಹೇಗೆ? ಎಂದು ಚಿಂತಿಸಿದರು. ‘ಈ ಒಂಟಿ ಎತ್ತು ಬಳಸಿಯೇ ಕೃಷಿ ಮಾಡುವಂತಹ ಉಪಕರಣ ಕಂಡು ಹಿಡಿದುಕೊಳ್ಳಬೇಕು’ ಎಂದು ತೀರ್ಮಾನಿಸಿದರು ಖಾನಪ್ಪ. ಒಂದೆರಡು ವರ್ಷಗಳ ಕಾಲ ಸತತವಾಗಿ ಪ್ರಯೋಗಗಳನ್ನು ಮಾಡಿ, ಅಂತಿಮವಾಗಿ ನಾಲ್ಕೂವರೆ ಸಾವಿರ ರೂಪಾಯಿ ವೆಚ್ಚದಲ್ಲಿ ‘ಒಂಟೆತ್ತಿನ ಬಂಟ’ ಸಿದ್ಧಪಡಿಸಿದರು.

ಈ ‘ಬಂಟ’ನನ್ನು ಬಳಸಿಕೊಂಡು ಶೇಂಗಾ, ಹೆಸರು, ಹತ್ತಿ, ಬಿಳಿಜೋಳ ಸೇರಿದಂತೆ ಇನ್ನೂ ಅನೇಕ ಬೆಳೆಗಳಿಗೆ ಎಡೆ ಹೊಡೆಯಬಹುದು. ಬೀಜ ಬಿತ್ತನೆ ಮಾಡಬಹುದು. ‘ಈ ಉಪಕರಣದ ಬಳಕೆಯಿಂದ ಶ್ರಮ ಕಡಿಮೆಯಾಗುತ್ತದೆ. ಆಳಿನ ಕೂಲಿ ಉಳಿಯುತ್ತದೆ. ವ್ಯವಸಾಯದ ಖರ್ಚು ಕಡಿಮೆಯಾಗುತ್ತದೆ’ ಎನ್ನುತ್ತಾರೆ ಖಾನಪ್ಪ.

ಹನಮಂತಪ್ಪ ತಾನು ತಯಾರಿಸಿದ ಕಬ್ಬಿಣದ ಎಡೆ ಕುಂಟೆಗೆ ಎತ್ತು ಕಟ್ಟಿಕೊಂಡು ಶೇಂಗಾ ಬೆಳೆಗೆ ಎಡೆ ಹೊಡೆಯುತ್ತಿದ್ದರೆ, ಅದನ್ನು ನೋಡಲೆಂದೇ ಅಕ್ಕಪಕ್ಕದ ರೈತರು, ಸುತ್ತಲಿನ ಮಂದಿ ಹೊಲದ ಬಳಿ ಬಂದು ನಿಲ್ಲುತ್ತಾರಂತೆ. ಉಪಕರಣ ಕುರಿತ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 9880516619

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT