ಶನಿವಾರ, ಅಕ್ಟೋಬರ್ 1, 2022
24 °C
ಜೀವಾಮೃತ, ನೀಮಾಸ್ತ್ರ, ಅಗ್ನಿಅಸ್ತ್ರ, ಬ್ರಹ್ಮಾಸ್ತ್ರ, ಶುಂಠಿ ಅಸ್ತ್ರ...

ಸಸ್ಯ ಸಂರಕ್ಷಣೆಗೆ ಎಷ್ಟೊಂದು ಅಸ್ತ್ರಗಳು

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ರಾಸಾಯನಿಕ ಗೊಬ್ಬರ ಮತ್ತು ರಾಸಾಯನಿಕ ಔಷಧಗಳನ್ನು ಬಳಸದೇ ಸಸ್ಯಮೂಲಗಳನ್ನೇ ಗೊಬ್ಬರ, ಔಷಧವಾಗಿ ಬಳಸುವ ಮೂಲಕ ಸಸ್ಯ ಸಂರಕ್ಷಣೆ ಮಾಡುವ ನೈಸರ್ಗಿಕ ಕೃಷಿ ವಿಧಾನಗಳು ಕೃಷಿ ಮೇಳದಲ್ಲಿ ರೈತರನ್ನು ಸೆಳೆದವು.

ಈಗಾಗಲೇ ಸಾವಯವ ಕೃಷಿಯಲ್ಲಿ ಗೋಮೂತ್ರ, ಗಂಜಲ ಬಳಸಿ ಜೀವಾಮೃತ ತಯಾರಿಸಿ ಬಳಸುವಂತೆ ಶುಂಠಿ, ಹುಳಿ ಮಜ್ಜಿಗೆ, ನುಗ್ಗೆ ಮತ್ತು ಪರಂಗಿ ಎಲೆಗಳ ದ್ರಾವಣದಿಂದಲೂ ಬೇಸಾಯದಲ್ಲಿ ಕೀಟಹತೋಟಿ ಮಾಡಲು ಸಾಧ್ಯ ಎಂಬ ಬಗ್ಗೆ ಕೃಷಿ ಇಲಾಖೆಯ ಬೇಸಾಯ ವಿಜ್ಞಾನ ವಿಭಾಗದ ಅಧಿಕಾರಿ, ಸಿಬ್ಬಂದಿ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು. 

ನೀಮಾಸ್ತ್ರ : 200 ಲೀ. ಬ್ಯಾರೆಲ್‌ನಲ್ಲಿ/ ಪಾತ್ರೆಯಲ್ಲಿ 10 ಲೀ. ದೇಸಿ ಹಸುವಿನ ಗೋಮೂತ್ರ, 5 ಕೆಜಿ ಸಗಣಿ, 10 ಕೆಜಿ ಬೇವಿನ ಎಲೆ, 175 ಲೀ. ನೀರನ್ನು  ಮಿಶ್ರಣ ಮಾಡಿ 3 ದಿನ ನೆರಳಿನಲ್ಲಿಟ್ಟು ಚೆನ್ನಾಗಿ ಕಲಕಬೇಕು. ಮೂರು ದಿನಗಳ ನಂತರ ಬಟ್ಟೆಯಲ್ಲಿ ಸೋಸಿದರೆ ನೀಮಾಸ್ತ್ರ ಸಿದ್ಧ. ಇದನ್ನು ಮೂರು ತಿಂಗಳ ತನಕ ಸಂಗ್ರಹಿಸಿ ರಸ ಹೀರುವ ಕೀಟಬಾಧೆಗೆ (ಪ್ರತಿ ಎಕರೆಗೆ 200 ಲೀ) ಬಳಸಬಹುದು.

ಅಗ್ನಿ ಅಸ್ತ್ರ: 1 ಕೆಜಿ ತಂಬಾಕು, 5 ಕೆಜಿ ಬೇವಿನ ಎಲೆ, 500 ಗ್ರಾಂ ಹಸಿಮೆಣಸಿನಕಾಯಿ, 500 ಗ್ರಾಂ ಜವಾರಿ ಬೆಳ್ಳುಳ್ಳಿಯನ್ನು 20 ಲೀ. ಗೋಮೂತ್ರ (ದೇಸಿ ಹಸು)ದಲ್ಲಿ ಜಜ್ಜಿ 20 ಲೀ. ಗಂಜಲಿನಲ್ಲಿ ಮಿಶ್ರಣ ಮಾಡಿ ನಾಲ್ಕು ಬಾರಿ ಉಕ್ಕಿ ಬರುವಷ್ಟು ಕುದಿಸಬೇಕು. ನಾಲ್ಕು ದಿನ ಬಿಟ್ಟು ಕಷಾಯವನ್ನು ಸೋಸಿ ಮೂರು ತಿಂಗಳವರೆಗೆ ಬಳಸಬಹುದು. ಈ ಅಗ್ನಿ ಅಸ್ತ್ರವನ್ನು ಎಲೆ ಸುರುಳಿ ಕೀಟ, ಕಾಂಡ ಕಾಯಿ ಕೊರೆಯುವ ಕೀಟಗಳ ನಿರ್ವಹಣೆಗೆ ಬಳಸಬಹುದು. ಪ್ರಮಾಣ 100 ಲೀ ನೀರಿಗೆ 5 ಲೀ. ಅಗ್ನಿ ಅಸ್ತ್ರ ಬೆರೆಸಿ ಎಕರೆಗೆ 200 ಲೀ. ಸಿಂಪಡಿಸಬೇಕು.

ಜೀವಾಮೃತ ತಯಾರಿ 20 ಲೀ. ದೇಸಿ ಹಸುವಿನ ಗೆಂಜಲು, 2 ಕೆಜಿ ದೇಸಿ ಹಸುವಿನ ಸಗಣಿಗೆ 200 ಲೀ ನೀರು ಬೆರೆಸಿ ಏಳು ದಿನ ಕೊಳೆಸಬೇಕು. ಪ್ರತಿ ದಿನ ಮೂರು ಬಾರಿ ಕಲಸಬೇಕು. ನಂತರ ಸೋಸಿದಾಗ ಬರುವ ಜೀವಾಮೃತವನ್ನು ಬೇರು ಕೊಳೆ ರೋಗ, ಎಲೆ ಚುಕ್ಕೆ ರೋಗ, ಎಲೆ ತುಕ್ಕು ರೋಗ, ಕೇದಗೆ ರೋಗ ನಿಗ್ರಹಕ್ಕೆ ಸಿಂಪಡಿಸಬೇಕು

ಶುಂಠಿ ಅಸ್ತ್ರ: ಒಂದು ಪಾತ್ರೆಯಲ್ಲಿ ದೇಸಿ ಹಸುವಿನ 1 ಲೀ. ಹಾಲನ್ನು ಕಾಯಿಸಿ ಕೆನೆ ತೆಗೆದು ಆರಲು ಬಿಡಬೇಕು. ಮತ್ತೊಂದು ಗಡಿಗೆಯಲ್ಲಿ 2 ಲೀ ನೀರಿನಲ್ಲಿ 200 ಗ್ರಾಂ ಒಳಗಿದ ಶುಂಠಿ ಪುಡಿ ಬೆರೆಸಿ ಅರ್ಧ ಗಂಟೆ ತನಕ ಕುದಿಸಿ ತಣಿಸಬೇಕು. ಅದಕ್ಕೆ ಕುದಿಸಿಟ್ಟ ಹಾಲನ್ನು ಬೆರೆಸಿ ಒಂದು ದಿನ ಬಿಡಬೇಕು. ಸೋಸಿದಾಗ ಸಿಗುವ ಶುಂಠಿ ಅಸ್ತ್ರವನ್ನು ಒಂದು ಎಕರೆಗೆ 200 ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು. ಎಲೆ ಚುಕ್ಕಿ ರೋಗ, ಎಲೆ ತುಕ್ಕು ರೋಗ, ಕೇದಿಗೆ ರೋಗ, ಬೂದು ರೋಗ ನಿಯಂತ್ರಣಕ್ಕೆ ಈ ಅಸ್ತ್ರ ಉತ್ತಮ.

ಹುಳಿ ಮಜ್ಜಿಗೆ: 5 ಲೀ ದೇಸಿ ಹಸುವಿನ ಹುಳಿ ಮಜ್ಜಿಗೆಯನ್ನು 200 ಲೀ. ನೀರು ಬೆರೆಸಿ ಸಿಂಪಡಿಸಿದಲ್ಲಿ ಎಲೆ ಚುಕ್ಕಿ ರೋಗ, ಎಲೆ ತುಕ್ಕು ರೋಗ, ಕೇದಿಗೆ ರೋಗ, ಬೂದು ರೋಗ ನಿಯಂತ್ರಣಕ್ಕೆ ಬರಲಿದೆ.

ಕೀಟಬಾಧೆ ನಿಗ್ರಹಕ್ಕೆ ಬ್ರಹ್ಮಾಸ್ತ್ರ

5ಕೆಜಿ ಬೇವಿನ ಎಲೆ, 2 ಕೆಜಿ ಸೀತಾಫಲ ಎಲೆ, 2 ಕೆಜಿ ಲಂಟನಾ ಕಳೆ ಸೊಪ್ಪು, 2 ಕೆಜಿ ಪೇರಲ ಎಲೆ, 2 ಕೆಜಿ ದಾಳಿಂಬೆ ಎಲೆ, 2 ಕೆಜಿ ಹಾಗಲ ಎಲೆ, 2 ಕೆಜಿ ಲಕ್ಕಿ ಸೊಪ್ಪು, 2 ಕೆಜಿ ಔಡಲ ಎಲೆ, 2 ಕೆಜಿ ಪಾರ್ಥೆನಿಯಂ ಎಲೆ, 2 ಕೆಜಿ ದತ್ತೂರ ಎಲೆಗಳಲ್ಲಿ ಯಾವುದಾದರೂ ಐದು ಬಗೆಯ ಎಲೆಗಳನ್ನು 20 ಲೀ ದೇಸಿ ಹಸುವಿನ ಮೂತ್ರದಲ್ಲಿ ರುಬ್ಬಿ ಚಟ್ನಿ ಮಾಡಿ ದೊಡ್ಡ ಪಾತ್ರೆಯಲ್ಲಿ (ತಾಮ್ರ ಹೊರತುಪಡಿಸಿ) ನಾಲ್ಕು ಬಾರಿ ಉಕ್ಕುವಷ್ಟು ಕುದಿಸಬೇಕು. ನಾಲ್ಕು ದಿನ ಆರಲು ಬಿಟ್ಟು ಪ್ರತಿನಿತ್ಯ ಮೂರು ಬಾರಿ ತಿರುವಬೇಕು. ಸೋಸಿದಾಗ ಸಿಗುವ 15 ಲೀಟರ್‌ ಬ್ರಹ್ಮಾಸ್ತ್ರವನ್ನು ರಸಹೀರುವ ಎಲ್ಲ ಕೀಟಗಳು, ಕಾಯಿ, ಕಾಂಡ ಕೊರಕ ಕೀಟಗಳ ಬಾಧೆ ನಿರ್ವಹಣೆಗೆ ಬಳಸಬಹುದು. 

ಇಷ್ಟೇ ಅಲ್ಲದೆ ನುಗ್ಗೆ ಮತ್ತು ಪರಂಗಿ ಎಲೆಗಳ ದ್ರಾವಣ, ಬೇವಿನ ಎಲೆಯ ಪೇಸ್ಟ್‌ ಕಾಕುಳ್ಳಿನ ಕಷಾಯ, ಎರೆ ಜಲ, ಪಂಚಗವ್ಯ, ಸಪ್ತ ಧಾನ್ಯ ಕಷಾಯ, ದಶಪರ್ಣಿ ಕಷಾಯವನ್ನು ತಯಾರಿಸುವ ವಿಧಾನ ಹಾಗೂ ಬಳಕೆ ವಿಧಾನಗಳನ್ನು ಅಧಿಕಾರಿಗಳು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು