ಚೆಂಡು ಹೂವಿಗೆ ಪೂರಕವಾದ ಮಳೆ

7
ಬೆಳೆಗಾರರ ಮೊಗದಲ್ಲಿ ಅರಳಿದ ಹೂನಗು

ಚೆಂಡು ಹೂವಿಗೆ ಪೂರಕವಾದ ಮಳೆ

Published:
Updated:

ದಾವಣಗೆರೆ: ಸರಿಯಾದ ಸಮಯಕ್ಕೆ ಮಳೆ ಸುರಿದಿದ್ದರಿಂದ ಚೆಂಡು ಹೂವುಗಳು ನಳನಳಿಸುತ್ತಿವೆ. ಬೆಳೆಗಾರರ ಮೊಗದಲ್ಲಿ ಹೂನಗು ಚಿಮ್ಮಿದೆ.

ಮೇ ಆರಂಭದಲ್ಲಿ ಗಿಡ ನೆಟ್ಟರೆ, ಜುಲೈಯಲ್ಲಿ ಹೂವು ಕೀಳಲು ಸಿಗುತ್ತವೆ. ಮಳೆ ಚೆನ್ನಾಗಿ ಬಂದರೆ ಬೆಳೆಯೂ ಚೆನ್ನಾಗಿ ಬರುತ್ತದೆ. ಇಲ್ಲದೇ ಇದ್ದರೆ ನೀರು ಹಾಯಿಸಿ ಬೆಳೆಸಬೇಕಾಗುತ್ತದೆ. ಆದರೂ ಮಳೆ ನೀರಿಗೆ ಬೆಳೆದ ಹಾಗೆ ಹಾಯಿಸಿದ ನೀರಿಗೆ ಹೂವುಗಳು ಬೆಳೆಯುವುದಿಲ್ಲ ಎನ್ನುತ್ತಾರೆ ಬೆಳೆಗಾರ ಹರಪನಹಳ್ಳಿ ತಾಲ್ಲೂಕಿನ ಜುಂಬನಹಳ್ಳಿ ತಿಮ್ಮಣ್ಣ.

‘ಏಳೆಂಟು ವರ್ಷಗಳಿಂದ ಚೆಂಡು ಹೂ ಬೆಳೆಯುತ್ತಿದ್ದೇನೆ. ಕಂಪನಿಯವರು ಗಿಡ, ಗೊಬ್ಬರ, ಔಷಧಗಳನ್ನು ನೀಡುತ್ತಾರೆ. ಆನಂತರ ಹೂವುಗಳನ್ನು ಕಂಪನಿಗೆ ನೀಡಿದಾಗ ಅವರು ಗಿಡ, ಗೊಬ್ಬರ, ಔಷಧ ವೆಚ್ಚವನ್ನು ಹಿಡಿದುಕೊಂಡು ಉಳಿದ ಹಣವನ್ನು ನೀಡುತ್ತಾರೆ ಎನ್ನುತ್ತಾರೆ ಅವರು.

ಎಕರೆಗೆ 4ರಿಂದ 5 ಟನ್‌ ಹೂವು ಬರುತ್ತದೆ. 8 ಟನ್‌ ಬಂದರೆ ಬಲುದೊಡ್ಡ ಸಾಧನೆ. ಅಷ್ಟು ಬಂದಾಗ ಕಂಪನಿಯವರು ಕೂಡಾ ಹೂವಿಗೆ ಕೆ.ಜಿ.ಗೆ 50 ಪೈಸೆ ಹೆಚ್ಚಿಗೆ ನೀಡಿ ಪ್ರೋತ್ಸಾಹಿಸುತ್ತಾರೆ. ಮಳೆ ಚೆನ್ನಾಗಿ ಬಂದಿಲ್ಲ ಎಂದರೆ ಇಳುವರಿ ಕೂಡಾ ಇಳಿಯುತ್ತದೆ. ಮೂರು ಟನ್‌ಗಿಂತ ಕಡಿಮೆ ಬಂದರೆ ಬೆಳೆಸಲು ಹಾಕಿದ ಬಂಡವಾಳವೂ ಗಿಟ್ಟುವುದಿಲ್ಲ ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟರು.

ಚೆನ್ನೈ ಮೂಲದ ಸಿಂಥೈಟ್‌ ಎಂಬ ಕಂಪನಿಯು ಕರ್ನಾಟಕದ ವಿವಿಧೆಡೆ ತಮ್ಮ ಶಾಖೆಗಳನ್ನು ತೆರೆದಿದೆ. ಅಲ್ಲಿ ಬೀಜ ಹಾಕಿ ಸಸಿ ಮಾಡಿದ ಬಳಿಕ ರೈತರಿಗೆ ಒದಗಿಸುತ್ತಾರೆ. ಅದಕ್ಕೆ ಬೇಕಾದ ಕೀಟನಾಟಕ, ಗೊಬ್ಬರಗಳನ್ನೂ ನೀಡುತ್ತಾರೆ. ನಂತರ ಅವರೇ ಹೂವುಗಳನ್ನು ಖರೀದಿಸುತ್ತಾರೆ. ಹರಿಹರ ಮತ್ತು ತೆಲಗಿಯಲ್ಲಿ ಅವರ ಶಾಖೆಗಳಿವೆ ಎಂದು ತೋಟಗಾರಿಕೆ ಇಲಾಖೆಯ ಟೆಕ್ನಿಕಲ್‌ ಅಸಿಸ್ಟೆಂಟ್‌ ಮಂಜುನಾಥ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜೂನ್‌ ಮತ್ತು ಜುಲೈ ಆರಂಭದಲ್ಲಿ ಚೆನ್ನಾಗಿ ಮಳೆ ಬಂದರೆ ಚೆಂಡು ಹೂವಿಗೆ ಒಳ್ಳೆಯದು. ಜುಲೈಯಲ್ಲಿ ಮೊದಲ ಕೊಯ್ಲು ಆರಂಭವಾಗುತ್ತದೆ. ಸೆಪ್ಟೆಂಬರ್‌ ವರೆಗೆ ಹೂವು ಕೊಯ್ಲಿಗೆ ಸಿಗುತ್ತದೆ. ಮೊದಲ 6–7 ಕೊಯ್ಲಲ್ಲಿ ಹೂವು ಜಾಸ್ತಿ ಸಿಗುತ್ತದೆ ಎಂದು ಲಕ್ಷ್ಮೀಪುರದ ರೈತರಾದ ಹನುಮಂತಪ್ಪ ಮತ್ತು ತಾರಾ ತಿಳಿಸಿದರು.

ಹರಪನಹಳ್ಳಿಯಲ್ಲಿ ಅಧಿಕ
ಬರಪೀಡಿತ ಪ್ರದೇಶ ಎಂದು ಗುರುತಿಸಲಾದ ಹರಪನಹಳ್ಳಿಯೇ ಚೆಂಡುಹೂವು ಬೆಳೆಗೆ ಪ್ರಸಿದ್ಧವಾಗಿದೆ. ಜಿಲ್ಲೆಯಲ್ಲಿ ಒಟ್ಟು 855.15 ಹೆಕ್ಟೇರ್‌ ಪ್ರದೇಶದಲ್ಲಿ ಚೆಂಡು ಹೂವು ಬೆಳೆಯಲಾಗುತ್ತಿದೆ. ಅದರಲ್ಲಿ ಹರಪನಹಳ್ಳಿ ತಾಲ್ಲೂಕಿನ ಪಾಲು 640 ಹೆಕ್ಟೇರ್‌ ಆಗಿದೆ. ಉಳಿದ ಐದು ತಾಲ್ಲೂಕುಗಳ ಕೊಡುಗೆ 215.15 ಹೆಕ್ಟೇರ್‌ ಮಾತ್ರ.

ಚೆಂಡುಹೂವಿನ ಉಪಯೋಗ
* ಹಬ್ಬ–ಹರಿದಿನಗಳು ಹಾಗೂ ಶುಭ ಸಮಾರಂಭಗಳ ಸಂದರ್ಭದಲ್ಲಿ ದೇವಸ್ಥಾನ, ಮನೆ, ಚಪ್ಪರ, ವಾಹನಗಳ ಸಿಂಗಾರಕ್ಕೆ ಬಳಕೆ
* ಕೀಟನಾಶಕವಾಗಿಯೂ ಹೂವಿನ ರಸ ಬಳಕೆ
* ಚರ್ಮವ್ಯಾಧಿ, ಅಲ್ಸರ್‌, ಕಣ್ಣಿನ ಸಂಬಂಧಿ ರೋಗಗಳ ಔಷಧ ತಯಾರಿಗೆ ಬಳಕೆ
* ಬಣ್ಣ ತಯಾರಿಗೆ ಬಳಕೆ

 

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !