ಸಹಜ ಕೃಷಿಯ ತೋಟದಲ್ಲಿ ಮರ ವೈವಿಧ್ಯ

7

ಸಹಜ ಕೃಷಿಯ ತೋಟದಲ್ಲಿ ಮರ ವೈವಿಧ್ಯ

Published:
Updated:
Deccan Herald

ತುಮಕೂರಿನ ಉತ್ತರಕ್ಕೆ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಗಿಡಮೂಲಿಕೆಗಳಿಗೆ ಪ್ರಸಿದ್ಧವಾದ ಸಿದ್ಧರಬೆಟ್ಟದ ದಕ್ಷಿಣ ತಪ್ಪಲಿನಲ್ಲಿ ಬೆಟ್ಟಕ್ಕೆ ಅಂಟಿಕೊಂಡತ್ತಿರುವ ಪುಟ್ಟಹಳ್ಳಿ ಜುಂಜರಾಮನಹಳ್ಳಿ. ಸಮೀಪದ ರಸ್ತೆ ಬದಿಯಲ್ಲಿ ಶಾರದಾಮಠ. ಮಠದ ಆಗ್ನೇಯ ದಿಕ್ಕಿನಲ್ಲಿ ಹಸಿರಿನಿಂದ ಕಂಗೊಳಿಸುವ ತೋಟ, ತೋಟದ ಒಡೆಯ ಜನಾರ್ದನ.

ಅಂದು ಮುಂಗಾರಿನ ತುಂತುರ ಮಳೆ. ಜುಲೈನ ಮೊದಲ ವಾರ. ಬಿತ್ತನೆ ಕಾಲ. ನನ್ನ ಜಮೀನಿನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿತ್ತನೆ ಮಾಡುತ್ತಿದ್ದೆ. ಬಿತ್ತನೆ ಕಾರ್ಯಕ್ಕೆ ಸಹಾಯಕರು ಸಕಾಲದಲ್ಲಿ ಸಿಗದೆ ಹೈರಾಣಾಗಿ ಹೋಗಿದ್ದೆ, ಬೇಸಾಯ ಇದ್ದದ್ದೇ ಎಂದು ಸ್ವಲ್ಪ ರಿಲಾಕ್ಸ್ ಆಗಲು ಸಮೀಪದ ಜನಾರ್ದನ ಅವರ ತೋಟಕ್ಕೆ ಹೋದೆ. ಅವರು ಮಾತ್ರ, ಯಾವುದೇ ಟೆನ್ಷನ್ ಇಲ್ಲದೇ ಆರಾಮಾಗಿ ಓಡಾಡಿಕೊಂಡಿದ್ದರು.ಒತ್ತಡವಿಲ್ಲದ ಸಹಜ ಕೃಷಿ

ಹತ್ತು ಎಕರೆ ಜಮೀನಿನ ಮಾಲೀಕ ಅವರು. ಯಾವುದೇ ಒತ್ತಡವಿಲ್ಲದೇ, ಇಷ್ಟು ನೆಮ್ಮದಿಯಾಗಿದ್ದಾರೆ. ಏಕೆಂದರೆ ಅವರು ಎರಡು ದಶಕಗಳಿಂದ ತೋಟದಲ್ಲಿ ಉಳುಮೆ ನಿಲ್ಲಿಸಿದ್ದಾರೆ. ಸಹಜ ಕೃಷಿ (ತೋಟಗಾರಿಕೆಗೆ) ಪದ್ಧತಿ ಅಳವಡಿಸಿಕೊಂಡಿದ್ದಾರೆ. ಉಳುಮೆ ನಿಲ್ಲಿಸಿದ ತೋಟದಲ್ಲಿ  ತಿರುಗಾಡುತ್ತಿದ್ದರೆ, ನೆಲ ಸ್ಪಂಜಿನ ಅನುಭವ ನೀಡುತ್ತದೆ. ‘ಉಳುಮೆಯೂ ಮಾಡದೇ, ನೆಲ ಇಷ್ಟು ಮಿದುವಾಗಿದೆಯಲ್ಲ. ಅದರ ಗುಟ್ಟೇನು’ ಎಂದು ಜನಾರ್ದನರನ್ನು ಕೇಳಿದರೆ, ‘ನಾನು ಉಳುಮೆ ಮಾಡಲ್ಲ. ಆದರೆ, ಸಾವಿರಾರು ಮಿತ್ರರು ನಿರಂತರವಾಗಿ ಉಳುಮೆ ಮಾಡುತ್ತಿರುತ್ತಾರೆ’ ಎಂದು ನಸುನಗುತ್ತಾ ನೆಲದ ಮಣ್ಣನ್ನು ಹಿಡಿದು ಅದರಲ್ಲಿರುವ ಎರೆಹುಳುಗಳನ್ನು ತೋರಿಸುತ್ತಾರೆ !

ತೋಟದಲ್ಲಿ ಒಂದು ಸಾವಿರ ಅಡಿಕೆ ಮರಗಳಿವೆ. ಇನ್ನೂರು ತೆಂಗಿನ ಮರಗಳಿದ್ದು, ಅಡಿಕೆ ನಡುವೆ ಬಾಳೆ ಬೆಳೆದಿದ್ದಾರೆ. 600 ಅಡಿಕೆ ಮರಗಳ ನಡುವೆ ತೆಂಗು ಇದೆ. ಸುಮಾರು ನಾಲ್ಕು ನೂರು ಬಾಳೆ ಬೆಳೆದಿದ್ದಾರೆ. ಪ್ರತಿಗಿಡದ ಬುಡಕ್ಕೂ ನಾಟಿಹಸುಗಳ ಸಗಣಿಗೊಬ್ಬರ ಹಾಕಿ ಹಿತಮಿತವಾಗಿ ನೀರುಣಿಸಿದ್ದಾರೆ. ವರ್ಷಕ್ಕೆ ಎರಡು-ಮೂರು ಸಲ ತೋಟದಲ್ಲಿ ಬೆಳೆಯುವ ಹುಲ್ಲನ್ನು ಕತ್ತರಿಸಿ ಹಸುಗಳಿಗೆ ಮೇವಾಗಿ ಬಳಸುತ್ತಾರೆ.

ವಾಣಿಜ್ಯ ಬೆಳೆಗಳ ಜತೆಗೆ, ತೋಟದ ಮತ್ತೊಂದು ಭಾಗದಲ್ಲಿ ಹುಣಸೆ, ಸಪೋಟ, ನಿಂಬೆ, ಸೀಬೆ(ಪೇರಲ), ಹೆರಳೆ, ಸೀತಾಫಲದಂತಹ ಹಣ್ಣಿನ ಗಿಡಗಳಿವೆ. ತೋಟದ ಬದುವಿನಲ್ಲಿ ಹೆಬ್ಬೇವು, ಸಿಲ್ವರ್ ಓಕ್, ತೇಗ, ಸೀಗೆ, ಬೆಟ್ಟತಂಗಡಿ(ಕರಿಮರ), ಬಿಲ್ವಾರದಂತ ಕಾಡು ಮರಗಳಿವೆ. ಈ ವೈವಿಧ್ಯಮಯ ಮರಗಳು ‘ಮರ ಆಧಾರಿತ’ ಕೃಷಿಗೆ ಚಟುವಟಿಕೆಗೆ ಪೂರಕವಾಗಿವೆ. 

ಮಿತ ನೀರು ಬಳಕೆ
‘ಅಡಿಕೆ, ತೆಂಗು, ಬಾಳೆ  ತೋಟದ ಅರ್ಧ ಭಾಗದಲ್ಲಿವೆ. ಸದಾ ನೀರು ಬೇಡುತ್ತವೆ. ಆದರೆ ನೀರನ್ನು ಮಿತವಾಗಿ ನೀಡುತ್ತೇನೆ. ತೋಟದ ಕಳೆಯನ್ನೇ ಮುಚ್ಚಿಗೆ ಮಾಡುವುದರಿಂದ ನೆಲದಲ್ಲಿ ತೇವ ನಿರಂತರವಾಗಿರುತ್ತದೆ. ಉಳುಮೆ ನಿಲ್ಲಿಸಿದರೂ ಪ್ರತಿವರ್ಷ ಗೊಬ್ಬರ ಹಾಕುತ್ತೇವೆ. ಉಳುಮೆಯನ್ನು ಎರೆಹುಳುಗಳು ಮಾಡುತ್ತವೆ. ಇದರಿಂದ ವಾರ್ಷಿಕ ರೂ 6 ಲಕ್ಷ ಉಳಿತಾಯವಾಗಿದೆ’ ಎಂದು ಸಹಜ ಕೃಷಿ ಪದ್ಧತಿ ಅಳವಡಿಕೆಯ ಪರೋಕ್ಷ ಲಾಭವನ್ನು ಲೆಕ್ಕಾಚಾರದೊಂದಿಗೆ ವಿವರಿಸುತ್ತಾರೆ ಜನಾರ್ದನ.

ಸಹಜ ಕೃಷಿಯ ಯಶಸ್ಸಿನ ಬಗ್ಗೆ ಮಾತನಾಡುವಾಗ ಜನಾರ್ದನ ಅವರು ಲಾಭ-ಆದಾಯ-ನಷ್ಟಗಳನ್ನು ಅಷ್ಟಾಗಿ ಉಲ್ಲೇಖಿಸುವುದಿಲ್ಲ. ಇಂಥವುಗಳಲ್ಲಿ ಸುಸ್ಥಿರತೆ ಕಾಣುವುದು ಅಸಾಧ್ಯ ಎಂಬುದು ಅಭಿಪ್ರಾಯ. ಆದರೆ, ಆದಾಯಕ್ಕೆ ಪೂರಕವಾಗುವ ಸುಸ್ಥಿರ ವಾತಾವರಣದ ಬಗ್ಗೆಯೇ ಪದೇ ಉಲ್ಲೇಖಿಸುತ್ತಾರೆ.

ಪ್ರತಿ ಮರಗಳಿಗೂ ನಾಟಿ ಆಕಳ ಸಗಣಿಯನ್ನು ಗೊಬ್ಬರವಾಗಿ ನೀಡುತ್ತಾರೆ. ಇದಕ್ಕಾಗಿ ನಾಟಿ ಹಸುಗಳನ್ನು ಸಾಕಿದ್ದಾರೆ. ಮರಗಳಿಗೆ ಮಾತ್ರವಲ್ಲ, ಸಂಪೂರ್ಣ ತೋಟಕ್ಕೆ ನಾಟಿ ಹಸುವಿನ ಸಗಣಿ, ಗಂಜಲ ಹಾಗೂ ಹಸುಗಳು ತಿಂದು ಬಿಡುವ ಮೇವಿನ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸುತ್ತಾರೆ.

ತೆರೆದ ಬಾವಿಗೆ ಜಲಮರುಪೂರಣ
‘ಸಹಜ ಕೃಷಿಯ ತೋಟವೇನೋ ಸರಿ. ನೀರಿನ ವ್ಯವಸ್ಥೆ ಏನು ಮಾಡಿಕೊಂಡಿದ್ದಾರೆ’ ಎಂದು ಚಿಂತಿಸುತ್ತಿರುವಾಗಲೇ, ಜನಾರ್ದನ ಅವರು, ತೋಟದ ಮೂಲೆಯಲ್ಲಿದ್ದ ಬೃಹತ್ ಬಾವಿಯ ಬಳಿ ಕರೆದೊಯ್ದುರು. ‘ಬೋರ್ವೆಲ್ ಕಾಲದಲ್ಲಿ, ಇವರು ತೆರೆದಬಾವಿ ತೋರಿಸುತ್ತಿದ್ದಾರಲ್ಲಾ’ ಎಂದು ಅಂದುಕೊಂಡೆ. ಅಷ್ಟರಲ್ಲಿ ‘ನೋಡಿ, ಇದೇ ನಮ್ಮ ತೋಟಕ್ಕೆ ನೀರು ಕೊಡುವ ಬಾವಿ. ಎಂದೂ ಬತ್ತುವುದಿಲ್ಲ. ಮೇ-ಜೂನ್ ತಿಂಗಳಲ್ಲಿ ನೀರು ಸ್ವಲ್ಪ ಕಡಿಮೆಯಾಗುತ್ತದೆ, ಅಷ್ಟೇ’ ಎಂದರು. ಅವರ ಮಾತು ಕೇಳಿ ಅಚ್ಚರಿಯಾಯಿತು.

‘ಸರಾಸರಿ ಮಳೆಯಾದರೆ ಸಾಕು ಸೆಪ್ಟೆಂಬರ್-ಅಕ್ಟೋಬರ್ ವೇಳಗೆ ಬಾವಿ ತುಂಬುತ್ತದೆ. ಒಮ್ಮೆ ತುಂಬಿದರೆ ಶಿವರಾತ್ರಿಯವರೆಗೆ ಈ ಬಾವಿಯಿಂದಲೇ ತೋಟಕ್ಕೆ ನೀರುಣಿಸುತ್ತೇವೆ. ಇದು ನಮ್ಮ ಪೂರ್ವಿಕರು ಕಟ್ಟಿಸಿದ ಬಾವಿ’ ಎಂದು ಬಾವಿ ಬಗೆಗಿನ ವಿವರಣೆ ಮುಂದುವರಿಸಿದರು.

‘ಈ ಬಾವಿಗೆ ಒರತೆ ನೀರು ಬರುತ್ತದೆ. ಮಳೆ ನೀರು ಬಾವಿಗೆ ಸೇರುವಂತೆ ಜಲಮರುಪೂರಣ ವ್ಯವಸ್ಥೆ ಮಾಡಿದ್ದೇನೆ. ಹತ್ತು ವರ್ಷಗಳ ಹಿಂದೆಯೇ ಈ ವಿಧಾನ ಅನುಸರಿಸಿದ್ದೆ’ ಎನ್ನುತ್ತಾ, ಬಾವಿಯ ಪಕ್ಕದಲ್ಲಿರುವ ಮಳೆ ನೀರು ಸಂಗ್ರಹಕ್ಕಾಗಿ ಮಾಡಿಸಿರುವ ಮತ್ತೊಂದು ಸಣ್ಣ ಬಾವಿಯನ್ನು ತೋರಿಸಿದರು ಜನಾರ್ದನ.

ತೆರೆದ ಬಾವಿ ಜತೆಗೆ ಒಂದು ಕೊಳವೆಬಾವಿ ಇದೆ. ಹತ್ತು ಎಕರೆ ತೋಟಕ್ಕಿರುವುದು ಇದೊಂದು ಕೊಳವೆಬಾವಿ. 600 ಅಡಿ ಕೊರೆಸಿದ್ದರೂ, 80 ಅಡಿಗೆ ನೀರಿರುತ್ತದೆ. ತೆರೆದ ಬಾವಿಗೆ ಜಲಮರುಪೂರಣ ಮಾಡಿರುವುದರಿಂದ ಕೊಳವೆಬಾವಿಯಲ್ಲಿ ನೀರಿನ ಇಳುವರಿ ಹೆಚ್ಚಲು ಸಾಧ್ಯವಾಗಿದೆ.  ಜತೆಗೆ, ತೋಟದಲ್ಲಿ ಉಳುಮೆ ನಿಲ್ಲಿಸಿ, ಬೆಳೆ ಮುಚ್ಚಿಗೆ ಮಾಡಿ, ಮಣ್ಣಿನಲ್ಲಿ ತೇವಾಂಶ ರಕ್ಷಣೆ ಮಾಡಿರುವುದೂ ಇದಕ್ಕೆ ಕಾರಣವಾಗಿದೆ.

‘ತೆರೆದ ಬಾವಿಗೂ - ಕೊಳವೆಬಾವಿಗೂ ಅಂತರ ಸಂಬಂಧವಿದ್ದು, ಬೋರ್‌ವೆಲ್‌ನಿಂದ ನೀರು ಎತ್ತಿದಾಗ ತೆರೆದ ಬಾವಿಯಲ್ಲಿ ನೀರು ಕಡಿಮೆಯಾಗುತ್ತದೆ’ ಎಂದು ಜನಾರ್ದನ್ ಉಲ್ಲೇಖಿಸುತ್ತಾರೆ. ಇಡೀ ತೋಟಕ್ಕೆ ಡ್ರಿಪ್ ಮೂಲಕ ನೀರು ಪೂರೈಸುತ್ತಾರೆ. ದಿನಕ್ಕೆ ನಾಲ್ಕೈದು ಗಂಟೆ ಕರೆಂಟ್ ಇರುತ್ತದೆ. ಹಾಗಾಗಿ ಅಷ್ಟು ಅವಧಿಯಲ್ಲೇ ಹತ್ತು ಎಕರೆ ತೋಟಕ್ಕೆ ನೀರು ಪೂರೈಸುತ್ತಾರೆ.

ಕೊಯ್ಲಿನ ವೇಳೆ, ಗೊಬ್ಬರ ಹಾಕುವಂಥ ಸಂದರ್ಭದಲ್ಲಿ ಕೂಲಿ ಆಳುಗಳನ್ನು ಬಳಸಿಕೊಳ್ಳುತ್ತಾರೆ. ಉಳಿದಂತೆ ಜನಾರ್ದನ ಜತೆ ಪತ್ನಿ ಜಯಂತಿ ಮತ್ತು ಪುತ್ರರಾದ ವಿನಯ- ಶರತ್ ಇವರ ಸಹಜ ಕೃಷಿಯ ತೋಟಗಾರಿಕೆಗೆ ಸಾಥ್ ನೀಡುತ್ತಾರೆ. ಸಹಜ ಕೃಷಿ - ಮರ ಆಧಾರಿತ ಕೃಷಿಯ ಮಾಹಿತಿಗಾಗಿ ಜನಾರ್ದನ ಅವರ ಸಂಪರ್ಕ ಸಂಖ್ಯೆ 9743470675, 8277276386 (ಸಮಯ ಸಂಜೆ 5 ರಿಂದ 7 ಗಂಟೆಯವರೆಗೆ) 

ತೋಟದ ರಕ್ಷಣೆಗೆ ಸೋಲಾರ್ ಬೇಲಿ

ಮೂರೂವರೆ ವರ್ಷಗಳ ಹಿಂದೆ ತೋಟದ ರಕ್ಷಣೆಗೆ ಸೋಲಾರ್ ಬೇಲಿ ಹಾಕಿಸಿದ್ದಾರೆ. ಈ ಭಾಗದಲ್ಲಿ ಕರಡಿ, ಕಾಡು ಹಂದಿ ಹಾವಳಿ ಹೆಚ್ಚು. ಬೆಳಗಳಿಗೆ ಮುಚ್ಚಿಗೆ ಮಾಡಿದ್ದ ತ್ಯಾಜ್ಯಗಳನ್ನು ತಿನ್ನಲು ಈ ಪ್ರಾಣಿಗಳು ತೋಟಕ್ಕೆ ನುಗ್ಗುತ್ತಿದ್ದವು. ಹಲಸಿನ ಹಣ್ಣಿನ ಕಾಲದಲ್ಲಿ ಹೆಚ್ಚು ಬರುತ್ತಿದ್ದವು. ಈಗ ಸೋಲಾರ್ ಬೇಲಿ ಹಾಕಿದ ನಂತರ ಪ್ರಾಣಿಗಳ ನಿಯಂತ್ರಣವಾಗಿದೆ ಎನ್ನುತ್ತಾರೆ ಜನಾರ್ದನ್.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !