ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರ ಬೆಳೆ ಉಳಿಸಲು ಸ್ವಂತ ಬೆಳೆ ನಾಶ ಮಾಡಿದ ರೈತ

ಗೊಡ್ಡು ರೋಗಕ್ಕೆ ತುತ್ತಾಗಿದ್ದ ಎರಡು ಎಕರೆ ತೊಗರಿ ಬೆಳೆ ಕಿತ್ತುಹಾಕಿದ ರೈತ ಮನ್ಮಥ
Last Updated 15 ಸೆಪ್ಟೆಂಬರ್ 2020, 8:43 IST
ಅಕ್ಷರ ಗಾತ್ರ

ಕಮಲನಗರ: ತನ್ನ ಹೊಲದಲ್ಲಿ ಬೆಳೆಗೆ ಅಂಟಿದ ಗೊಡ್ಡು ರೋಗ ಗ್ರಾಮದ ಇತರ ರೈತರ ಬೆಳೆಗಳಿಗೆ ಹರಡಿ ಹಾನಿ ಉಂಟುಮಾಡಬಾರದು ಎಂದು ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದ ರೈತ ಮನ್ಮಥ ಹರಪಳ್ಳೆ ಅವರು ತಮ್ಮ ಎರಡು ಎಕರೆ ಹೊಲದಲ್ಲಿನ ತೊಗರಿ ಬೆಳೆಯನ್ನು ಖುದ್ದಾಗಿ ಕಿತ್ತು ಹಾಕಿದ್ದಾರೆ.

ತೊಗರಿಗೆ ಹಲವೂ ವಿವಿಧ ರೀತಿಯ ಪೋಷಕಾಂಶಗಳನ್ನು ಹಾಕಿದ್ದರೂ ತೊಗರಿ ಬೆಳೆ ಕುಂಠಿತ ಕಂಡುಬಂದ ಕಾರಣ ರೈತ ಮನ್ನಥ, ಕಮಲನಗರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುನೀಲ ಪಿ.ಬಿರಾದಾರ ಅವರನ್ನು ಸಂಪರ್ಕಿಸಿದರು. ಕೃಷಿ ಅಧಿಕಾರಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ತೊಗರಿ ಬೆಳೆಗೆ ಗೊಡ್ಡು ರೋಗ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ನಂತರ ಜನವಾಡ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ.ಸುನೀಲಕುಮಾರ ಎನ್.ಎಂ ಅವರ ಗಮನಕ್ಕೆ ತಂದು ರೈತ ಮನ್ಮಥ ಅವರ ಮನವೊಲಿಸಿ ಬೆಳೆ ನಾಶ ಮಾಡಲು ಸಲಹೆ ನೀಡಿದ್ದಾರೆ.

‘ಗೊಡ್ಡು ರೋಗ ಬಾಧೆಗೆ ತುತ್ತಾದ ತೊಗರಿ ಗಿಡಗಳನ್ನು ಕಿತ್ತು ಸುಟ್ಟು ಹಾಕಬೇಕು ಅಥವಾ ಮಣ್ಣಲ್ಲಿ ಹೂತುಹಾಕಬೇಕು. ಇಲ್ಲವಾದರೆ ಸುತ್ತಮುತ್ತಲಿನ ಇಡೀ ಗ್ರಾಮದ 800 ಎಕರೆ ತೊಗರಿ ಬೆಳೆಗೆ ರೋಗ ಹರಡಿ ಎಲ್ಲಾ ರೈತರಿಗೆ ನಷ್ಟ ಉಂಟಾಗಲಿದೆ ಎಂದು ಮನವರಿಕೆ ಮಾಡಿದೆವು. ಇದಕ್ಕೆ ಸ್ಪಂದಿಸಿದ ಮನ್ನಥ ಹರಪಳ್ಳೆ ಗೊಡ್ಡು ರೋಗಕ್ಕೆ ತುತ್ತಾಗಿರುವ ತೊಗರಿಯನ್ನು ಕಿತ್ತು ಹಾಕಿದ್ದಾರೆ. ಈ ಮೂಲಕ ಡಿಗ್ಗಿ ಗ್ರಾಮ ವ್ಯಾಪ್ತಿಯಲ್ಲಿನ 800 ಎಕರೆ ತೊಗರಿ ಬೆಳೆಯನ್ನು ರೋಗದಿಂದ ಕಾಪಾಡಿದ್ದಾರೆ’ ಎಂದು ಕೃಷಿ ಅಧಿಕಾರಿ ತಿಳಿಸಿದರು.

ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಯನ್ನು ಕಾಪಾಡುವ ಮೂಲಕ ರೈತರಿಗೆ ಆಪತ್ಬಾಂಧವನಾಗಿ ಹೊರಹೊಮ್ಮಿದ ಪ್ರತಿಪರ ರೈತ ಮನ್ನಥ ಹರಪಳ್ಳೆಯವರ ಕಾರ್ಯಕ್ಕೆ ರೈತ ಸಮುದಾಯದಲ್ಲಿ ಅಷ್ಟೇ ಅಲ್ಲದೆ ಅಧಿಕಾರಿಗಳ ವಲಯದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.

‘ಕೃಷಿ ಅಧಿಕಾರಿ ಹಾಗೂ ಕೆ.ವಿ.ಕೆ ವಿಜ್ಞಾನಿಗಳು ತಿಳಿಸಿದ ಮೇಲೆ ಗ್ರಾಮದಲ್ಲಿ ಇತರ ರೈತರು ಬೆಳೆಸಿದ ತೊಗರಿ ಬೆಳೆಯನ್ನು ಉಳಿಸಬೇಕು ಎನ್ನುವ ಕಾರಣಕ್ಕೆ ರೋಗಬಾಧಿತ ತೊಗರಿಯನ್ನು ಕಿತ್ತು ಹಾಕಿದ್ದೇನೆ’ ಎಂದು ಮನ್ಮಥ ಹರಪಳ್ಳೆಯವರು ‘ಪ್ರಜಾವಾಣಿ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT