ಸೋಮವಾರ, ಆಗಸ್ಟ್ 2, 2021
28 °C
ಮಾರುಕಟ್ಟೆ ಸಂಕಷ್ಟದಲ್ಲಿ ಬೆಳಕಿಗೆ ಬಂದ ಕೃಷಿ ತಂತ್ರಗಳು

ಟೊಮೆಟೊಗೆ ‘ಮೌಲ್ಯ’ ತಂದವರು..!

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಕೊರೊನಾ–ಲಾಕ್‌ಡೌನ್ ಮೊದಲ ಹಂತದಲ್ಲಿ ಸರ್ಕಾರ ದಿಢೀರನೆ ದೇಶದಾದ್ಯಂತ ‘ದಿಗ್ಬಂಧನ’ ವಿಧಿಸಿದಾಗ,  ಮಾರುಕಟ್ಟೆಗಳೆಲ್ಲ ಬಂದ್ ಆದವು. ರೈತರು ಬೆಳೆದ ಹಣ್ಣು–ತರಕಾರಿಗಳನ್ನು ಮಾರಾಟ ಮಾಡಲಾಗದೇ ಕಂಗಾಲಾದರು. ಕೊಯ್ಲಾಗಬೇಕಾಗಿದ್ದ ಟೊಮೆಟೊದಂತಹ ತರಕಾರಿ ಬೆಳೆಗಳು ಹೊಲದಲ್ಲೇ ಉಳಿದವು.

ಇದೇ ವೇಳೆಯಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಹೊನ್ನಶೆಟ್ಟಿಹಳ್ಳಿಯ ಗ್ರಾಮದ ಕೆಲವು ಕುಟುಂಬಗಳು ತಮ್ಮೂರಿನ ಅಕ್ಕಪಕ್ಕದ ಹೊಲಗಳಲ್ಲಿ ವ್ಯರ್ಥವಾಗುತ್ತಿದ್ದ ನೂರಾರು ಕೆ.ಜಿ ಟೊಮೆಟೊ ಹಣ್ಣುಗಳನ್ನು ಬೆಳೆಗಾರರಿಂದ ಖರೀದಿಸುತ್ತಿದ್ದರು. ಕೆ.ಜಿಗೆ ₹5 ರಿಂದ ₹6ರವರೆಗೂ ಬೆಲೆ ನಿಗದಿಪಡಿಸಿ, ಹೊಲದಿಂದ ಮನೆಯ ಅಂಗಳಕ್ಕೆ ಟೊಮೆಟೊಗಳನ್ನು ಖರೀದಿಸಿ ತಂದು ರಾಶಿ ಹಾಕಿಕೊಂಡರು.

ಖರೀದಿಸಿದ ಟೊಮೆಟೊವನ್ನು ಎಲ್ಲರೂ ಹಂಚಿಕೊಂಡರು. ಸುರಕ್ಷತೆ, ಶುಚಿತ್ವ ಕಾಯ್ದುಕೊಂಡು ಒಬ್ಬರು ಹಣ್ಣನ್ನು ನೀರಿನಿಂದ ಚೆನ್ನಾಗಿ ತೊಳೆದರು.ಇನ್ನೊಬ್ಬರು ಹಣ್ಣನ್ನು ಚಾಕುವಿನಿಂದ ಸ್ಲೈಸ್ ಮಾಡಿದರು. ಮತ್ತೊಬ್ಬರು ಹೆಚ್ಚಿದ ಸ್ಲೈಸ್‌ಗಳಿಗೆ ಉಪ್ಪು, ಅರಿಸಿನ ಹಚ್ಚಿದರು. ಈ ಸ್ಲೈಸ್‌ಗಳನ್ನು ಒಂದು ಹಾಳೆಯ ಮೇಲೆ ಹರಡಿ ಮೂರು ದಿನಗಳ ಕಾಲ ಬಿಸಿಲಲ್ಲಿ ಒಣಗಿಸಿದರು. ನಂತರ, ಒಣಗಿದ ಟೊಮೆಟೊ ಸ್ಲೈಸ್‌ಗಳನ್ನು ಗಾಳಿಯಾಡದಂತಹ ಡಬ್ಬದಲ್ಲಿ ತುಂಬಿಸಿಟ್ಟರು.

ಟೊಮೆಟೊ ಫ್ಲೇಕ್ಸ್‌..

‘ಇವು ಟೊಮೆಟೊ ಫ್ಲೇಕ್ಸ್’ ಎಂದರು ಹೊನ್ನಶೆಟ್ಟಿಹಳ್ಳಿಯಲ್ಲಿರುವ ಗ್ರಾಮ ವಿಕಾಸ ಸಂಸ್ಥೆಯ ಎಂ.ಎಸ್. ಗಿರಿಜಾ. ‘ಹಣ್ಣನ್ನು ಸ್ಲೈಸ್ ಮಾಡಿ ಅರಿಸಿನ–ಉಪ್ಪು ಹಚ್ಚಿ ಬಿಸಿಲಲ್ಲಿ ಒಣಗಿಸಿದರೆ, ಆರು ತಿಂಗಳವರೆಗೆ ಕೆಡದಂತಿಡಬಹುದು. ನಂತರ ಇದನ್ನೇ ಸಾಂಬಾರು, ಉಪ್ಪಿನಕಾಯಿ, ಗೊಜ್ಜು ಸೇರಿದಂತೆ ವಿವಿಧ ಖಾದ್ಯಗಳ ತಯಾರಿಕೆಯಲ್ಲಿ ಬಳಸಬಹುದು’ ಎಂದು ಅವರು ‘ಫ್ಲೇಕ್ಸ್‌’ ಬಳಕೆಯ ವಿವರಣೆ ನೀಡಿದರು.

ಅಂದ ಹಾಗೆ ಟೊಮೆಟೊ ಮೌಲ್ಯವರ್ಧನೆ ಬಗ್ಗೆ ಈ ಕುಟುಂಬಗಳಿಗೆ ತರಬೇತಿ ನೀಡಿ, ಹಾಳಾಗುತ್ತಿದ್ದ ಟೊಮೆಟೊಗಳನ್ನು ಖರೀದಿಸುವಂತೆ ಮಾಡಿದ್ದು ಗ್ರಾಮ ವಿಕಾಸ ಸಂಸ್ಥೆಯ ಗಿರಿಜಾ ಮತ್ತು ಸಿಬ್ಬಂದಿ. ಈ ಕಾರ್ಯವನ್ನು ಉತ್ತೇಜಿಸಿದವರು ಸಂಸ್ಥೆಯ ಮುಖ್ಯಸ್ಥ ಎಂ.ವಿ.ಎನ್‌. ರಾವ್‌. ಈ ಸಂಸ್ಥೆ ಹಲವು ವರ್ಷಗಳಿಂದ ಹೊನ್ನಶೆಟ್ಟಿಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೃಷಿ, ಗ್ರಾಮೀಣ, ಪರಿಸರ ಹಾಗೂ ಸಮುದಾಯ ಅಭಿವೃದ್ಧಿ ಚಟವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.

ಲಾಕ್‌ಡೌನ್‌ನಿಂದಾಗಿ ಟೊಮೆಟೊ ಬೆಳೆದ ರೈತರು ಎದುರಿಸುತ್ತಿದ್ದ ಪರಿಸ್ಥಿತಿಯನ್ನು ಗಮನಿಸಿದ ಈ ತಂಡ, ಈ ಸಂದರ್ಭದಲ್ಲಿ ಕೆಲವು ರೈತರ ಸಂಕಷ್ಟಕ್ಕಾದರು ನೆರವಾಗಬೇಕೆಂದು ತೀರ್ಮಾನಿಸಿತು. ಆ ಸಮಯದಲ್ಲೇ ಟೊಮೆಟೊ ಮೌಲ್ಯವರ್ಧಿಸುವ ಐಡಿಯಾ ಹೊಳೆಯಿತು. ‘ಈ ವಿಷಯವನ್ನು ಗ್ರಾಮಸ್ಥರೊಂದಿಗೆ ಹಂಚಿಕೊಂಡೆವು. ಏನು ಮಾಡಬೇಕು, ಹೇಗೆ ಮಾಡಬೇಕೆಂದು ತಿಳಿಸಿದೆವು. ಹೇಗೂ ಚೆನ್ನಾಗಿ ಬಿಸಿಲಿತ್ತು. ಜತೆಗೆ ಲಾಕ್‌ಡೌನ್ ಸಮಯದಲ್ಲಿ ಊರಿನವರೆಲ್ಲರೂ ಬಿಡುವಾಗಿದ್ದರು. ಉಚಿತವಾಗಿ ಸಿಕ್ಕ ‘ಬಿಸಿಲು–ಬಿಡುವ’ನ್ನು ಸಮರ್ಪಕವಾಗಿ ಬಳಸಿಕೊಂಡು ಟೊಮೆಟೊ ಫ್ಲೇಕ್ಸ್ ತಯಾರಿಸಿದೆವು’ ಎಂದು ವಿವರಿಸಿದರು ಗಿರಿಜಾ.

ಬೆಳೆ ಕೊರತೆಯಾದಾಗ.. 

ಸಾಂಬಾರು, ರಸಂ ಸೇರಿದಂತೆ ಹಲವು ವೈವಿಧ್ಯಮಯ ಖಾದ್ಯಗಳ ತಯಾರಿಕೆಯಲ್ಲಿ ಒಣಗಿದ ಟೊಮೆಟೊ ಫ್ಲೇಕ್ಸ್‌ ಬಳಸಬಹುದು. ‘ಹೆಚ್ಚು ಟೊಮೆಟೊ ಬೆಳೆದ ವೇಳೆಯಲ್ಲಿ, ಹಣ್ಣು ಖರೀದಿಸಿ ಹೀಗೆ ಫ್ಲೇಕ್ಸ್ ಮಾಡಿ ಸಂಗ್ರಹಿಸಿಡಬಹುದು. ಮುಂದೆ ಮಾರುಕಟ್ಟೆಯಲ್ಲಿ ಟೊಮೆಟೊಗೆ ಬೆಲೆ ಹೆಚ್ಚಾದಾಗ (ಬೆಳೆ ಕೊರತೆಯಾಗಿ) ಈ ಫ್ಲೇಕ್ಸ್ ಅನ್ನು ಅಡುಗೆಗೆ ಬಳಸಬಹುದು’ ಎನ್ನುತ್ತಾರೆ ಈ ಮೌಲ್ಯವರ್ಧನೆ ಪ್ರಕ್ರಿಯೆಯ ಭಾಗವಾಗಿರುವ ಗ್ರಾಮದ ರಾಧಾ. ‘ಟೊಮೆಟೊ ಫ್ಲೇಕ್ಸ್‌ ಅನ್ನು ಗ್ರಾಮಸ್ಥರು ಉಪಯೋಗಿಸುತ್ತಿದ್ದಾರೆ. ನಾವು ಬಳಸುತ್ತಿದ್ದೇವೆ. ಟೊಮೆಟೊ ಬಳಸಿ ಮಾಡಿದ ಅಡುಗೆಯಷ್ಟೇ ರುಚಿಯಾಗಿರುತ್ತದೆ’ ಎನ್ನುತ್ತಾರೆ ಗಿರಿಜಾ. ಈ ಮೌಲ್ಯವರ್ಧನೆ ಚಟುವಟಿಕೆಯಿಂದ ಉತ್ತೇಜನಗೊಂಡಿರುವ ಗ್ರಾಮಸ್ಥರು, ಈಗ ಟೊಮೆಟೊ ಉಪ್ಪಿನಕಾಯಿ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಬೇಕಾದ ಸಿದ್ಧತೆ ಕೂಡ ನಡೆದಿದೆ.

ರೈತರಿಗೂ ಸಮಾಧಾನ..

ಮಾರುಕಟ್ಟೆ ಇಲ್ಲದ ವೇಳೆಯಲ್ಲಿ ಮಣ್ಣಾಗುತ್ತಿದ್ದ ಟೊಮೆಟೊ ಹಣ್ಣನ್ನು ಖರೀದಿಸಿದ್ದರಿಂದ ಕೆಲ ರೈತರು ತುಸು ಸಮಾಧಾನಗೊಂಡಿದ್ದಾರೆ. ‘ಸುಮಾರು ಮುಕ್ಕಾಲು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದೆ. 400 ಬಾಕ್ಸ್ ಆಗಿತ್ತು (1 ಬಾಕ್ಸ್=15 ಕೆ.ಜಿ). ಆದರೆ, ಮಾರುಕಟ್ಟೆ ಬಂದ್ ಆಯ್ತು. ಈ ಟೈಮ್‌ನಲ್ಲಿ ರಾವ್‌ ಅಣ್ಣ (ಗ್ರಾಮ ವಿಕಾಸ ಸಂಸ್ಥೆಯ ಮುಖ್ಯಸ್ಥರು) ಖರೀದಿ ಮಾಡ್ತೀವಿ ಅಂದರು. ಬಾಕ್ಸ್‌ಗೆ ₹75 ಅಂತೆ ಖರೀದಿ ಮಾಡಿದರು. ಹೇಗೂ ಗಾಡಿ ಬಾಡಿಗೆ ಇಲ್ಲ. ರೇಟ್‌ ಸಿಗದಿದ್ದರೂ, ಹಾಕಿದ ಬಂಡವಾಳ–ಮಾರಿದ ಹಣಕ್ಕೆ ಸರಿಹೋಯ್ತು. ಸಂಸ್ಥೆಯವರು 200 ಬಾಕ್ಸ್‌ ಖರೀದಿಸಿದರು. ಅಸಲು ಮೇಲೆ ಸ್ವಲ್ಪ ಲಾಭ ಸಿಕ್ಕಿತು’ ಎಂದು ಸಮಾಧಾನ ವ್ಯಕ್ತಪಡಿಸಿದರು ಮುಳುಬಾಗಿಲು ತಾಲ್ಲೂಕಿನ ರಾಮನಾಥಪುರದ ಅಜ್ಜಪ್ಪ. 

‘ಒಂದೂವರೆ ಲಕ್ಷ ಬಂಡವಾಳ ಹಾಕಿ, ಒಂದೂವರೆ ಎಕರೆ ಟೊಮೆಟೊ ಬೆಳೆದಿದ್ದೆ. 1500 ಬಾಕ್ಸ್ ಆಗಿತ್ತು. ರಾವ್ ಸಾರ್‌ 150 ಬಾಕ್ಸ್ ಕೊಂಡುಕೊಂಡರು. ಮಾರ್ಕೆಟ್‌ ಇಲ್ಲದ ಕಾಲದಲ್ಲಿ, ಒಂದು ರೂಪಾಯಿಯೂ ಸಿಗದ ಸಂದರ್ಭದಲ್ಲಿ, ಈ ಸಂಸ್ಥೆಯವರು ಖರೀದಿಸಿದ್ದು ಎಷ್ಟೋ ಅನುಕೂಲವಾಯಿತು. ಒಂದಷ್ಟು ದುಡ್ಡು ಬಂತು. ಈಗಲೂ ಅವರು ಖರೀದಿ ಮಾಡುತ್ತಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದ್ದು ಮಿಣಜೇನಹಳ್ಳಿಯ ರೈತ ಆನಂದ್. 

ಗ್ರಾಮ ವಿಕಾಸ ಸಂಸ್ಥೆಯವರು ಹೊನ್ನಶೆಟ್ಟಿಹಳ್ಳಿ ಗ್ರಾಮಸ್ಥರ ಮೂಲಕ ಕೈಗೊಂಡ ಟೊಮೆಟೊ ಮೌಲ್ಯವರ್ಧನೆ ಆ ಊರಿನ ಹಲವು ಯುವಕರನ್ನು ಉತ್ತೇಜಿಸಿದೆ. ಗ್ರಾಮಸ್ಥರ ಈ ಪ್ರಯತ್ನ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಬೇರೆ ಕಡೆಗೂ ಈ ಮೌಲ್ಯವರ್ಧನೆಯ ಪರಿಮಳ ಪಸರಿಸಿದೆ.

ಮೇಲ್ನೋಟಕ್ಕೆ ಇದೊಂದು ಸಾಂಕೇತಿಕ ಪ್ರಯತ್ನ ಎಂಬಂತೆ ಕಂಡರೂ, ಸಣ್ಣ ಹಿಡುವಳಿದಾರರು ತಾವು ಬೆಳೆದ ಟೊಮೆಟೊ ಮಾರಾಟವಾಗದೇ ಉಳಿದಾಗ, ಈ ವಿಧಾನವನ್ನು ಅನುಸರಿಸಬಹುದೇನೋ.

ಟೊಮೆಟೊ ಮೌಲ್ಯವರ್ಧನೆ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕ – 9482322434

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು